‘ರುದ್ರ ಗರುಡ ಪುರಾಣ’ ರೋಚಕ ಟೀಸರ್; ಸಿನಿಮಾ ಸಕ್ಸಸ್ ಎಂದು ಭವಿಷ್ಯ ನುಡಿದ ಪ್ರೇಕ್ಷಕ
ಪ್ರೇಕ್ಷಕರಿಗೆ ರೋಚಕ ಅನುಭವ ನೀಡುವಲ್ಲಿ ‘ರುದ್ರ ಗರುಡ ಪುರಾಣ’ ಸಿನಿಮಾದ ಟೀಸರ್ ಯಶಸ್ವಿ ಆಗಿದೆ. ಈ ಸಿನಿಮಾದಲ್ಲಿ ರಿಷಿ ಅವರು ಹೀರೋ ಆಗಿದ್ದು, ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ. ನಂದೀಶ್ ಅವರ ನಿರ್ದೇಶನ ಈ ಸಿನಿಮಾಗಿದೆ. ಶಿವರಾಜ್ಕುಮಾರ್ ಅವರು ಟೀಸರ್ ಅನಾವರಣ ಮಾಡಿದ್ದಾರೆ. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.
ಕನ್ನಡದ ಯುವ ನಟ ರಿಷಿ ಅಭಿನಯದ ಸಿನಿಮಾಗಳಲ್ಲಿ ಏನಾದರೂ ಸ್ಪೆಷಲ್ ಇದ್ದೇ ಇರುತ್ತದೆ ಎಂಬ ಭಾವನೆ ಪ್ರೇಕ್ಷಕರ ಮನದಲ್ಲಿ ಬೇರೂರಿದೆ. ಆ ಭಾವನೆಯನ್ನು ಇನ್ನಷ್ಟು ಬಲಪಡಿಸುವ ರೀತಿಯಲ್ಲಿ ಈಗ ‘ರುದ್ರ ಗರುಡ ಪುರಾಣ’ ಸಿನಿಮಾದ ಟೀಸರ್ ಮೂಡಿಬಂದಿದೆ. ಇದು ರಿಷಿ ನಟನೆಯ ಹೊಸ ಸಿನಿಮಾ. ಇತ್ತೀಚೆಗೆ ಈ ಸಿನಿಮಾದ ಟೀಸರ್ ಅನಾವರಣ ಮಾಡಲಾಯಿತು. ಹಲವು ಕಾರಣಗಳಿಂದಾಗಿ ‘ರುದ್ರ ಗರುಡ ಪುರಾಣ’ ಚಿತ್ರ ಕೌತುಕ ಹುಟ್ಟುಹಾಕಿದೆ. ಟೀಸರ್ ನೋಡಿದ ಪ್ರೇಕ್ಷಕರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿರುವುದೂ ಅಲ್ಲದೇ, ಈ ಸಿನಿಮಾ ಖಂಡಿತಾ ಸೂಪರ್ ಹಿಟ್ ಆಗಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ.
ರಿಷಿ ಅವರು ಈಗ ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ. ತೆಲುಗಿನಲ್ಲಿಯೂ ನಟಿಸಿ ಅವರು ಫೇಮಸ್ ಆಗಿದ್ದಾರೆ. ‘ಆಪರೇಷನ್ ಅಲಮೇಲಮ್ಮ’, ‘ಕವಲುದಾರಿ’ ಮುಂತಾದ ಸಿನಿಮಾಗಳ ಮೂಲಕ ಅವರು ತಮ್ಮ ಛಾಪು ಮೂಡಿಸಿದ್ದಾರೆ. ಈಗ ಅವರು ‘ರುದ್ರ ಗರುಡ ಪುರಾಣ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಪೊಲೀಸ್ ಅಧಿಕಾರಿಯ ಪಾತ್ರವಿದೆ. ಟೀಸರ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಮ್ಮ ಸುತ್ತಮುತ್ತವೇ ನಡೆಯುವ ಹಲವು ಸಮಸ್ಯೆಗಳನ್ನು ಕೇಂದ್ರವಾಗಿ ಇಟ್ಟುಕೊಂಡು ನಂದೀಶ್ ಅವರು ಈ ಸಿನಿಮಾ ಕಥೆ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರು ನಿರ್ಮಾಣ ಮಾಡಿದ್ದ ‘ಕವಲುದಾರಿ’ ಸಿನಿಮಾದ ಬಳಿಕ ನಾನು ಈಗ ಮತ್ತೊಮ್ಮೆ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದೇನೆ. ರುದ್ರ ಎಂಬುದು ನನ್ನ ಪಾತ್ರದ ಹೆಸರು’ ಎಂದು ರಿಷಿ ಹೇಳಿದ್ದಾರೆ. ಅವರಿಗೆ ಜೋಡಿಯಾಗಿ ಪ್ರಿಯಾಂಕಾ ಕುಮಾರ್ ಅವರು ಅಭಿನಯಿಸಿದ್ದಾರೆ.
ಇದನ್ನೂ ಓದಿ: ‘ಪ್ರಕರಣ ತನಿಖಾ ಹಂತದಲ್ಲಿದೆ’ ಎನ್ನುತ್ತ ಶೀರ್ಷಿಕೆ ಗೀತೆ ಬಿಡುಗಡೆ ಮಾಡಿದ ಹೊಸಬರ ತಂಡ
‘ರುದ್ರ ಗರುಡ ಪುರಾಣ’ ಸಿನಿಮಾದ ಟೀಸರ್ ಅನ್ನು ‘ಸೆಂಚುರಿ ಸ್ಟಾರ್’ ಶಿವರಾಜ್ಕುಮಾರ್ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಜೇಕಬ್ ವರ್ಗೀಸ್ ಕೂಡ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಂದೀಶ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಎರಡು ಪ್ರತ್ಯೇಕ ಕಥೆಗಳು ಈ ಸಿನಿಮಾದಲ್ಲಿ ಇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರುದ್ರ ಗರುಡ ಪುರಾಣ ಸಿನಿಮಾದ ಟೀಸರ್:
‘ಅಶ್ವಿನಿ ಆರ್ಟ್ಸ್’ ಮೂಲಕ ಅಶ್ವಿನಿ ಲೋಹಿತ್ ಅವರು ‘ರುದ್ರ ಗರುಡ ಪುರಾಣ’ ಸಿನಿಮಾವನ್ನು ನಿರ್ಮಿಸಿದ್ದಾರೆ. ರಿಷಿ, ಪ್ರಿಯಾಂಕಾ ಕುಮಾರ್ ಮಾತ್ರವಲ್ಲದೇ ವಿನೋದ್ ಆಳ್ವಾ, ಕೆ.ಎಸ್. ಶ್ರೀಧರ್, ಶಿವರಾಜ ಕೆ.ಆರ್. ಪೇಟೆ, ಗಿರೀಶ್ ಶಿವಣ್ಣ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಂಗೀತ ನಿರ್ದೇಶಕ ಕೆಪಿ, ಛಾಯಾಗ್ರಾಹಕ ಸಂದೀಪ್ ಕುಮಾರ್, ಸಂಭಾಷಣೆ ಬರೆದ ರಘು ನಿಡುವಳ್ಳಿ ಕೂಡ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.