‘ಪ್ರಕರಣ ತನಿಖಾ ಹಂತದಲ್ಲಿದೆ’ ಎನ್ನುತ್ತ ಶೀರ್ಷಿಕೆ ಗೀತೆ ಬಿಡುಗಡೆ ಮಾಡಿದ ಹೊಸಬರ ತಂಡ
ರಂಗಭೂಮಿಯಿಂದ ಬಂದಿರುವ ಹೊಸ ಪ್ರತಿಭೆಗಳು ಸಿದ್ಧಸೂತ್ರಗಳ ಹೊರತಾಗಿ ಸಿನಿಮಾ ಮಾಡುವ ಹಂಬಲದೊಂದಿಗೆ ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಮಹೀನ್ ಕುಬೇರ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಚಿಂತನ್ ಕಂಬಣ್ಣ ಅವರ ನಿರ್ಮಾಣ, ಸುಂದರ್ ಎಸ್. ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ.
ಕನ್ನಡ ಚಿತ್ರರಂಗ ಕೊಂಚ ಚೇತರಿಕೆ ಕಂಡಿದೆ. ಜನರು ಮತ್ತೆ ಚಿತ್ರಮಂದಿರದ ಕಡೆಗೆ ಹೆಜ್ಜೆ ಹಾಕಲು ಆರಂಭಿಸಿದ್ದಾರೆ. ಇದು ಮುಂಬರುವ ಸಿನಿಮಾ ತಂಡಗಳಿಗೆ ಹೊಸ ಹುಮ್ಮಸ್ಸನ್ನು ನೀಡಿದೆ. ಬಿಡುಗಡೆಗೆ ತಯಾರಾಗುತ್ತಿರುವ ಸಿನಿಮಾಗಳು ಪ್ರಚಾರ ಕಾರ್ಯಕ್ಕೆ ಒತ್ತು ನೀಡುತ್ತಿವೆ. ಗಟ್ಟಿ ಕಥಾಹಂದರ ಇರುವ ಸಿನಿಮಾಗಳ ಮೇಲೆ ಜನರು ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ. ಈ ಸಂದರ್ಭದಲ್ಲಿ ಹೊಸಬರ ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ ಕೂಡ ನಿರೀಕ್ಷೆ ಮೂಡಿಸಿದೆ. ಟೈಟಲ್ನಿಂದಲೇ ಈ ಚಿತ್ರ ಗಮನ ಸೆಳೆದಿದೆ. ಈಗ ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಲಾಗಿದೆ.
‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರತಂಡದ ಬಹುತೇಕರು ರಂಗಭೂಮಿಯ ಹಿನ್ನೆಲೆಯಿಂದ ಬಂದವರು. ರಂಗಭೂಮಿಯಲ್ಲಿ ಹಲವು ವರ್ಷಗಳಿಂದ ತೊಡಗಿಕೊಂಡಿರುವ ಅವರೆಲ್ಲರೂ ಈಗ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ‘ಕರದಾಯಾಮ ಸ್ಟುಡಿಯೋಸ್’ ಸಂಸ್ಥೆಯ ಮೂಲಕ ಚಿಂತನ್ ಕಂಬಣ್ಣ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಮಹೀನ್ ಕುಬೇರ್ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ಮಾಡಿದ್ದಾರೆ.
ಕೆಲವೇ ದಿನಗಳ ಹಿಂದೆ ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿ ಗಮನ ಸೆಳೆದಿತ್ತು. ಈಗ ಶೀರ್ಷಿಕೆ ಗೀತೆ ಮೂಲಕ ಕೌತುಕ ಹೆಚ್ಚಿಸಲು ಚಿತ್ರತಂಡ ಪ್ರಯತ್ನಿಸಿದೆ. ಆ್ಯನಿಮೇಷನ್ ರೀತಿ ಮೂಡಿಬಂದಿರುವ ಈ ಹಾಡನ್ನು ‘ಕರದಾಯಾಮ ಸ್ಟುಡಿಯೋಸ್’ ಯೂಟ್ಯೂಬ್ ಚಾನೆಲ್ ಮೂಲಕ ರಿಲೀಸ್ ಮಾಡಲಾಗಿದೆ. ಶೀಘ್ರದಲ್ಲೇ ಟ್ರೇಲರ್ ಬಿಡುಗಡೆ ಮಾಡಿ, ರಿಲೀಸ್ ದಿನಾಂಕ ತಿಳಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸಿದೆ. ಈಗ ಟೈಟಲ್ ಟ್ರ್ಯಾಕ್ ಮೂಲಕ ಕಥೆಯ ಬಗ್ಗೆ ಒಂದಷ್ಟು ಸುಳಿವುಗಳನ್ನು ಈ ಸಿನಿಮಾ ಬಿಟ್ಟುಕೊಟ್ಟಿದೆ. ಈ ಸಿನಿಮಾವನ್ನು ಸುಂದರ್ ಎಸ್. ಅವರು ನಿರ್ದೇಶಿಸಿದ್ದಾರೆ. ಇತ್ತೀಚೆಗೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶೀರ್ಷಿಕೆ ಗೀತೆಯನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಪ್ರಚಾರಕಾರ್ಯದಲ್ಲಿ ತೊಡಗಿಕೊಂಡಿದೆ.
ಇದನ್ನೂ ಓದಿ: ‘ವೈಕುಂಠ ಸಮಾರಾಧನೆ’: ಇದು ಹೊಸ ಕನ್ನಡ ಸಿನಿಮಾದ ಶೀರ್ಷಿಕೆ, ಪೋಸ್ಟರ್!
ಈ ಸಿನಿಮಾದ ಶೀರ್ಷಿಕೆಯೇ ಹೇಳುವಂತೆ ಇದು ಕ್ರೈಂ ಕಹಾನಿ ಇರುವ ಸಿನಿಮಾ. ಪ್ರಕರಣವೊಂದರ ತನಿಖೆಯ ಸುತ್ತಾ ನಡೆಯುವ ರೋಚಕ ಕಥನವನ್ನು ಈ ಸಿನಿಮಾ ತೆರೆದಿಡಲಿದೆ. ಸ್ಯಾಂಡಲ್ವುಡ್ನಲ್ಲಿ ಕ್ರೈಂ ಕಥೆ ಇರುವ ಸಿನಿಮಾಗಳು ಆಗಾಗ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತವೆ. ಆ ಭರವಸೆಯಲ್ಲೇ ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.
ಬೆಂಗಳೂರು, ಕನಕಪುರ ಮುಂತಾದ ಕಡೆಗಳಲ್ಲಿ ಈ ಚಿತ್ರಕ್ಕೆ ಶೂಟಿಂಗ್ ಮಾಡಲಾಗಿದೆ. ರಾಜ್ ಗಗನ್, ಮುತ್ತುರಾಜ್ ಟಿ., ಚಿಂತನ್ ಕಂಬಣ್ಣ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಮೋಹನ್ ಎಂ.ಎಸ್ ಮತ್ತು ಜಗದೀಶ್ ಆರ್.ಜೆ. ಅವರು ಛಾಯಾಗ್ರಹಣ ಮಾಡಿದ್ದಾರೆ. ಶಿವೋಂ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ. ನಾನಿ ಕೃಷ್ಣ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಲಕ್ಷ್ಮೀಪತಿ ಎಂ.ಕೆ. ಅವರು ವಿಎಫ್ಎಕ್ಸ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.