ಕೇರಳದಲ್ಲಿ ‘ಲಿಯೋ’ ಚಿತ್ರಕ್ಕೆ ಬಹಿಷ್ಕಾರ; ಫ್ಯಾನ್ಸ್​ ಮಾಡಿದ ತಪ್ಪಿನಿಂದ ನಿರ್ಮಾಪಕರಿಗೆ ತೊಂದರೆ

ಈ ಕಿರಿಕ್​ ಶುರುವಾಗಲು ಕಾರಣ ಆಗಿರುವುದೇ ಅಭಿಮಾನಿಗಳು. ದಳಪತಿ ವಿಜಯ್​ ಫ್ಯಾನ್ಸ್​ ಮತ್ತು ಮೋಹನ್​ಲಾಲ್​ ಫ್ಯಾನ್ಸ್​ ಚಿಕ್ಕ ವಿಚಾರಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಜಗಳ ಮಾಡಿಕೊಂಡಿದ್ದಾರೆ. ಕೇರಳದಲ್ಲಿ ‘ಲಿಯೋ’ ಚಿತ್ರವನ್ನು ಬಹಿಷ್ಕಾರ ಮಾಡಬೇಕು ಎಂಬ ಮಟ್ಟಕ್ಕೆ ಆ ಜಗಳ ತಲುಪಿದೆ. ಆ ಬಗ್ಗೆ ಇಲ್ಲಿದೆ ವಿವರ..

ಕೇರಳದಲ್ಲಿ ‘ಲಿಯೋ’ ಚಿತ್ರಕ್ಕೆ ಬಹಿಷ್ಕಾರ; ಫ್ಯಾನ್ಸ್​ ಮಾಡಿದ ತಪ್ಪಿನಿಂದ ನಿರ್ಮಾಪಕರಿಗೆ ತೊಂದರೆ
ಲಿಯೋ ಸಿನಿಮಾ ಪೋಸ್ಟರ್​

Updated on: Sep 23, 2023 | 2:40 PM

ನಟ ದಳಪತಿ ವಿಜಯ್​ (Thalapathy Vijay) ಅವರು ‘ವಾರಿಸು’ ಸಿನಿಮಾದ ಬಳಿಕ ‘ಲಿಯೋ’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆದರು. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಅದಕ್ಕೆ ಕಾರಣಗಳು ಹಲವು. ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಸಂಜಯ್​ ದತ್​, ತ್ರಿಶಾ ಮುಂತಾದ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇಷ್ಟೆಲ್ಲ ಹೈಪ್​ ಸೃಷ್ಟಿ ಮಾಡಿರುವ ‘ಲಿಯೋ’ (Leo Movie) ಸಿನಿಮಾಗೆ ಕೇರಳದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾದ ಬಗ್ಗೆ ಕೇರಳದ ಮಂದಿ ಕಿಡಿಕಾರುತ್ತಿದ್ದಾರೆ. ಅದರಲ್ಲೂ ಮೋಹನ್​ಲಾಲ್​ ಅಭಿಮಾನಿಗಳು ಹೆಚ್ಚು ಗರಂ ಆಗಿದ್ದಾರೆ. ‘ಲಿಯೋ’ ಸಿನಿಮಾವನ್ನು ಬಹಿಷ್ಕರಿಸುವಂತೆ ಮೋಹನ್​ಲಾಲ್​ (Mohanlal) ಫ್ಯಾನ್ಸ್​ ಕರೆನೀಡಿದ್ದಾರೆ. ಹಾಗಾಗಿ ಸೋಶಿಯಲ್​ ಮೀಡಿಯಾದಲ್ಲಿ #KeralaBoycottLEO ಹ್ಯಾಶ್​ಟ್ಯಾಗ್​ ಟ್ರೆಂಡ್​ ಆಗುತ್ತಿದೆ.

ಒಟ್ಟಾರೆ ಈ ಕಿರಿಕ್​ ಶುರುವಾಗಲು ಕಾರಣ ಆಗಿರುವುದು ಅಭಿಮಾನಿಗಳು. ದಳಪತಿ ವಿಜಯ್​ ಫ್ಯಾನ್ಸ್​ ಮತ್ತು ಮೋಹನ್​ಲಾಲ್​ ಫ್ಯಾನ್ಸ್​ ಚಿಕ್ಕ ವಿಚಾರಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಜಗಳ ಮಾಡಿಕೊಂಡಿದ್ದಾರೆ. 2014ರಲ್ಲಿ ತೆರೆಕಂಡ ‘ಜಿಲ್ಲಾ’ ಸಿನಿಮಾದಲ್ಲಿ ದಳಪತಿ ವಿಜಯ್​ ಮತ್ತು ಮೋಹನ್​ಲಾಲ್​ ನಟಿಸಿದ್ದರು. ಮೋಹನ್​ಲಾಲ್​ ಅವರ ನಟನೆ ಬಗ್ಗೆ ವಿಜಯ್​ ಅವರ ಅಭಿಮಾನಿಯೊಬ್ಬ ಕೆಟ್ಟದಾಗಿ ಕಮೆಂಟ್ ಮಾಡಿದ ಬಳಿಕ ಈ ವಾರ್​ ಶುರುವಾಗಿದೆ. ಹಾಗಾಗಿ ದಳಪತಿ ವಿಜಯ್​ ನಟನೆಯ ‘ಲಿಯೋ’ ಸಿನಿಮಾವನ್ನು ಕೇರಳದಲ್ಲಿ ರಿಲೀಸ್​ ಮಾಡಲು ಬಿಡುವುದಿಲ್ಲ ಎಂದು ಮೋಹನ್​ಲಾಲ್​ ಫ್ಯಾನ್ಸ್​ ಪಟ್ಟುಹಿಡಿದಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್​ ಹೆಸರಲ್ಲಿ ಪ್ರಿಯಾಮಣಿಗೆ ಮೋಸ ಮಾಡಿದ ‘ಜವಾನ್​’ ನಿರ್ದೇಶಕ ಅಟ್ಲಿ

ದಳಪತಿ ವಿಜಯ್​ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಲಿಯೋ’ ಸಿನಿಮಾ ಬಿಡುಗಡೆ ಆಗಲಿದೆ. ತಮಿಳಿನ ಈ ಸಿನಿಮಾ ಕನ್ನಡ, ಮಲಯಾಳಂ, ಹಿಂದಿ ಮತ್ತು ತೆಲುಗಿಗೆ ಡಬ್​ ಆಗಿ ತೆರೆ ಕಾಣಲಿದೆ. ಬಹುಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಒಂದು ವೇಳೆ ಬಹಿಷ್ಕಾರದ ಬಿಸಿ ತಟ್ಟಿದರೆ ನಿರ್ಮಾಪಕರಿಗೆ ತೊಂದರೆ ಆಗಲಿದೆ. ಅಭಿಮಾನಿಗಳು ಶುರುಮಾಡಿದ ಕಿರಿಕ್​ ಬಗ್ಗೆ ಮೋಹನ್​ಲಾಲ್​ ಮತ್ತು ದಳಪತಿ ವಿಜಯ್​ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: ದಳಪತಿ ವಿಜಯ್​ ಮಗ ಜೇಸನ್​ ಸಂಜಯ್​ ಈಗ ಡೈರೆಕ್ಟರ್​; ‘ಲೈಕಾ ಪ್ರೊಡಕ್ಷನ್ಸ್’ ಜೊತೆ ಕೈ ಜೋಡಿಸಿದ ಸ್ಟಾರ್​ ಕಿಡ್​

ಅಕ್ಟೋಬರ್​ 19ರಂದು ‘ಲಿಯೋ’ ರಿಲೀಸ್​ ಆಗಲಿದೆ. ಲೋಕೇಶ್​ ಕನಗರಾಜ್​ ಅವರು ಈ ಮೊದಲು ನಿರ್ದೇಶನ ಮಾಡಿದ್ದ ‘ಕೈದಿ’, ‘ವಿಕ್ರಮ್​’ ಸಿನಿಮಾಗಳ ಕಥೆಗೂ ‘ಲಿಯೋ’ ಸಿನಿಮಾದ ಕಥೆಗೂ ಲಿಂಕ್​ ಇದೆ ಎಂದು ಬಹುತೇಕರು ಊಹಿಸುತ್ತಿದ್ದಾರೆ. ಆ ಕಾರಣದಿಂದಲೂ ಈ ಸಿನಿಮಾ ಮೇಲೆ ಕುತೂಹಲ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಈ ಸಿನಿಮಾತಂಡದಿಂದ ಸಂಜಯ್​ ದತ್​ ಅವರ ಪೋಸ್ಟರ್​ ಬಿಡುಗಡೆ ಆಗಿದ್ದು, ಅದು ವೈರಲ್​ ಆಗಿದೆ. ‘ಜವಾನ್​’, ‘ಜೈಲರ್​’ ಸಿನಿಮಾಗಳ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಅನಿರುದ್ಧ್​ ರವಿಚಂದರ್​ ಅವರು ‘ಲಿಯೋ’ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us