
ಮೋಹನ್ಲಾಲ್ ಸೇರಿದಂತೆ ಹಲವು ಖ್ಯಾತ ಕಲಾವಿದರು ಬಣ್ಣಹಚ್ಚಿರುವ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರ ‘ಮರಕ್ಕರ್: ಲಯನ್ ಆಫ್ ದಿ ಅರೇಬಿಯನ್ ಸೀ’ ಚಿತ್ರದ ನೂತನ ಟೀಸರ್ ಬಿಡುಗಡೆಯಾಗಿದೆ. ಮೋಹನ್ ಲಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಹೊಸ ಟೀಸರ್ಅನ್ನು ಹಂಚಿಕೊಂಡಿದ್ದು, ಅದರ ಅದ್ದೂರಿ ದೃಶ್ಯ ವೈಭವಕ್ಕೆ ಅಭಿಮಾನಿಗಳು ಮಾರುಹೋಗಿದ್ದಾರೆ. ಖ್ಯಾತ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶಿಸಿರುವ ಈ ಚಿತ್ರ ಡಿಸೆಂಬರ್ 2ರಂದು ದೇಶದೆಲ್ಲೆಡೆ ಬಿಡುಗಡೆಯಾಗಲಿದೆ. ಟೀಸರ್ನಲ್ಲಿ ಬ್ರಿಟೀಷರ ವಿರುದ್ಧದ ಹೋರಾಟದ ಅದ್ದೂರಿ ದೃಶ್ಯಗಳಿವೆ. ಈ ಚಿತ್ರ ಕಳೆದ ಮಾರ್ಚ್ನಲ್ಲಿಯೇ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿತ್ತು. ನಂತರ ನೇರವಾಗಿ ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಯಿತು. ಈ ಕುರಿತು ಕೇರಳ ಸರ್ಕಾರದ ಸಚಿವರು ಚಿತ್ರತಂಡದೊಂದಿಗೆ ಮಾತುಕತೆ ನಡೆಸಿದರು. ಅಂತಿಮವಾಗಿ ಚಿತ್ರತಂಡ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಒಪ್ಪಿಕೊಂಡಿತು. ಇದೀಗ ಡಿಸೆಂಬರ್ 2ಕ್ಕೆ ಚಿತ್ರ ತೆರೆಕಾಣಲಿದೆ.
ಮೋಹನ್ಲಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ ‘ಮರಕ್ಕರ್’ ಚಿತ್ರದ ಒಂದನೇ ಟೀಸರ್ ಎಂದು ಚಿತ್ರದ ಟೀಸರ್ ಲಿಂಕ್ ಹಂಚಿಕೊಂಡಿದ್ದಾರೆ. ‘ನೀವೆಲ್ಲರೂ ಯಾವುದಕ್ಕೆ ಕಾಯುತ್ತಿದ್ದಿರೋ ಅದು ಇಲ್ಲಿದೆ’ ಎಂದು ಬರೆದು, ಮೋಹನ್ಲಾಲ್ ಲಿಂಕ್ ಹಂಚಿಕೊಂಡಿದ್ದಾರೆ.
ಮೋಹನ್ಲಾಲ್ ಹಂಚಿಕೊಂಡ ಟ್ವೀಟ್:
ಈಗಾಗಲೇ ಕೇರಳ ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿಗಳು ‘ಮರಕ್ಕರ್’ ಚಿತ್ರದ ಪಾಲಾಗಿವೆ. ಅದರಲ್ಲೂ 2021ರ ಸಾಲಿನಲ್ಲಿ ‘ಅತ್ಯುತ್ತಮ ಚಿತ್ರ’ ಸೇರಿದಂತೆ ಈ ಚಿತ್ರ ಮೂರು ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕಳೆದ ವರ್ಷವೇ ಚಿತ್ರತಂಡ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿತ್ತು. ಅದು ಚಿತ್ರದ ಕುರಿತ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿತ್ತು.
ಆಂಟೋನಿ ಪೆರುಂಬವೂರ್ ನಿರ್ಮಾಣದ ‘ಮರಕ್ಕರ್’ ಚಿತ್ರದಲ್ಲಿ ಅರ್ಜುನ್ ಸರ್ಜಾ, ಸುನೀಲ್ ಶೆಟ್ಟಿ, ಕೀರ್ತಿ ಸುರೇಶ್, ಮಂಜು ವಾರಿಯರ್ ಮತ್ತು ಸಿದ್ದಿಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲೂ ಈ ಚಿತ್ರ ಬಿಡುಗಡೆಯಾಗಲಿದೆ.
ಇದನ್ನೂ ಓದಿ:
ಪುನೀತ್ ಕನಸು ನನಸು ಮಾಡಲು ಮುಂದಾದ ಅಶ್ವಿನಿ; ಮಹತ್ವದ ಘೋಷಣೆ ಮಾಡಿದ ಅಪ್ಪು ಪತ್ನಿ
Published On - 9:16 am, Thu, 25 November 21