Adhipatra Review: ಮರ್ಡರ್ ಮಿಸ್ಟರಿ ಜತೆ ತುಳುನಾಡಿನ ಕಥೆ ಹೇಳುವ ‘ಅಧಿಪತ್ರ’ ಸಿನಿಮಾ

ಬಹುತೇಕ ತುಳುನಾಡಿನ ಕಲಾವಿದರೇ ಸೇರಿಕೊಂಡು ‘ಅಧಿಪತ್ರ’ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಕಥೆ ಕೂಡ ಆ ಭಾಗದ ಸೊಗಡನ್ನು ಹೊಂದಿದೆ. ನಟ ರೂಪೇಶ್ ಶೆಟ್ಟಿ ಅವರು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಮರ್ಡರ್​ ಮಿಸ್ಟರಿ ಕಥಾಹಂದರ ಇರುವ ಈ ಸಿನಿಮಾದಲ್ಲಿ ಹಾಸ್ಯಕ್ಕೂ ಪ್ರಾಮುಖ್ಯತೆ ನೀಡಲಾಗಿದೆ.

Adhipatra Review: ಮರ್ಡರ್ ಮಿಸ್ಟರಿ ಜತೆ ತುಳುನಾಡಿನ ಕಥೆ ಹೇಳುವ ‘ಅಧಿಪತ್ರ’ ಸಿನಿಮಾ
Adhipatra Movie Poster

Updated on: Feb 07, 2025 | 4:24 PM

ಸಿನಿಮಾ: ಅಧಿಪತ್ರ. ನಿರ್ಮಾಣ: ಕೆ.ಆರ್​. ಸಿನಿ ಕಂಬೈನ್ಸ್. ನಿರ್ದೇಶನ: ಚಯನ್ ಶೆಟ್ಟಿ. ಪಾತ್ರವರ್ಗ: ರೂಪೇಶ್ ಶೆಟ್ಟಿ, ಜಾಹ್ನವಿ, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಾಜೆ, ರಘು ಪಾಂಡೇಶ್ವರ್, ಎಂ.ಕೆ. ಮಠ ಮುಂತಾದವರು.

‘ಕಾಂತರ’ ಸಿನಿಮಾ ಸೂಪರ್​ ಹಿಟ್ ಆದ ಬಳಿಕ ಅದೇ ರೀತಿ ತುಳುನಾಡಿನ ಕಥೆ ಇರುವಂತಹ ಸಿನಿಮಾಗಳು ಹೆಚ್ಚಾಗಿವೆ. ಅವುಗಳ ಸಾಲಿಗೆ ಸೇರುವಂತಹ ಸಿನಿಮಾ ‘ಅಧಿಪತ್ರ’. ಈ ಸಿನಿಮಾದಲ್ಲಿ ರೂಪೇಶ್ ಶೆಟ್ಟಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್​ 9’ ವಿನ್ನರ್ ಆಗಿರುವ ಅವರು ತುಂಬ ಖ್ಯಾತಿ ಹೊಂದಿದ್ದಾರೆ. ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಅವರು ಈಗ ‘ಅಧಿಪತ್ರ’ ಸಿನಿಮಾ ಮೂಲಕ ಪೊಲೀಸ್ ಪಾತ್ರದಲ್ಲಿ ಪ್ರೇಕ್ಷಕರ ಎದುರು ಬಂದಿದ್ದಾರೆ. ಈ ಸಿನಿಮಾದ ವಿಮರ್ಶೆ ಇಲ್ಲಿದೆ..

ಅನಾಥಾಶ್ರಮದಲ್ಲಿ ಬೆಳೆದ ಹುಡುಗನೊಬ್ಬ ಪೊಲೀಸ್ ಅಧಿಕಾರಿ ಆಗುತ್ತಾನೆ. ತನ್ನ ತಂದೆ-ತಾಯಿ ಯಾರು ಎಂಬುದನ್ನು ಹುಡುಕುವುದೇ ಅವನ ಜೀವನದ ಮುಖ್ಯ ಗುರಿ ಆಗಿರುತ್ತದೆ. ರಹಸ್ಯಗಳು ತುಂಬಿರುವ ಹಳ್ಳಿಯೊಂದಕ್ಕೆ ಆತನ ವರ್ಗವಾಗುತ್ತದೆ. ಅಲ್ಲಿ ನಡೆಯುವ ಕೆಲವು ಅಸಹಜ ಸಾವುಗಳಿಗೆ ಕಾರಣ ಏನು ಎಂಬುದನ್ನು ಭೇದಿಸಲು ಹೊರಟಾಗ ಬೇರೆ ಬೇರೆ ಸತ್ಯಗಳು ಹೊರಬರುತ್ತವೆ. ಈ ಹುಡುಕಾಟದಲ್ಲಿ ಕಥಾನಾಯಕನಿಗೆ ತನ್ನ ತಂದೆ-ತಾಯಿ ಯಾರು ಎಂಬುದು ತಿಳಿಯುತ್ತಾ? ಊರಿನಲ್ಲಿ ಆದ ಸಾವುಗಳಿಗೂ ಕಥಾನಾಯಕನ ಜನ್ಮ ರಹಸ್ಯಕ್ಕೂ ಏನಾದರೂ ಸಂಬಂಧ ಇದೆಯಾ? ಇಂಥ ಒಂದಷ್ಟು ಕೌತುಕದ ಪ್ರಶ್ನೆಗಳನ್ನು ಮೂಡಿಸುತ್ತಾ ಸಾಗುತ್ತದೆ ‘ಅಧಿಪತ್ರ’ ಸಿನಿಮಾ. ಎಲ್ಲದಕ್ಕೂ ಕ್ಲೈಮ್ಯಾಕ್ಸ್​ನಲ್ಲಿ ಉತ್ತರ ಸಿಗುತ್ತದೆ.

ನಟ ರೂಪೇಶ್ ಶೆಟ್ಟಿ ಅವರು ನಿಷ್ಠಾವಂತ ಪೊಲೀಸ್ ಆಧಿಕಾರಿಯಾಗಿ ‘ಅಧಿಪತ್ರ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ನೋಡಲು ಲವರ್​ಬಾಯ್ ರೀತಿ ಇದ್ದರೂ ಕೂಡ ಅವರಿಗೆ ಈ ಸಿನಿಮಾದಲ್ಲಿ ಯಾವುದೇ ಲವ್​ ಸ್ಟೋರಿ ಇಲ್ಲ. ಇಡೀ ಸಿನಿಮಾ ಇರುವುದೇ ಕೊಲೆ ಕೌತುಕದ ಮೇಲೆ ಮಾತ್ರ. ಅದರ ಜೊತೆಗೆ ಹಾಸ್ಯಕ್ಕೆ ನಿರ್ದೇಶಕರು ಒತ್ತು ನೀಡಿದ್ದಾರೆ. ಅಲ್ಲಲ್ಲಿ ನಗಿಸುತ್ತಾ, ಕೊನೆವರೆಗೂ ಕುತೂಹಲ ಕಾಯ್ದುಕೊಳ್ಳುತ್ತದೆ ಈ ಸಿನಿಮಾ.

‘ಅಧಿಪತ್ರ’ ಸಿನಿಮಾದಲ್ಲಿ ‘ಕಾಂತಾರ’, ‘ವಿಕ್ರಾಂತ್ ರೋಣ’ ರೀತಿಯ ಚಿತ್ರಗಳ ಛಾಯೆ ಕಾಣಿಸುತ್ತದೆ. ಇದು ಈ ಸಿನಿಮಾದ ಪ್ಲಸ್ ಮತ್ತು ಮೈನಸ್ ಎರಡೂ ಹೌದೆನಿಸುತ್ತದೆ. ಯಾಕೆಂದರೆ, ಭೂತಕೋಲದ ಹಿನ್ನೆಲೆಯಲ್ಲಿ ಹಾಗೂ ಊರಿನಲ್ಲಿರುವ ರಹಸ್ಯಗಳ ಕುರಿತು ಸಾಗುವ ಕಥೆ ಆದ್ದರಿಂದ ಪ್ರೇಕ್ಷಕರ ಮನಸ್ಸಿನಲ್ಲಿ ತಿಳಿದೂ ತಿಳಿಯದೇ ‘ಕಾಂತಾರ’, ‘ವಿಕ್ರಾಂತ್ ರೋಣ’ ಮುಂತಾದ ಸಿನಿಮಾಗಳ ಜೊತೆಗೆ ಹೋಲಿಕೆ ಶುರು ಆಗುತ್ತದೆ.

ಈ ಸಿನಿಮಾದ ಅವಧಿ ಎರಡೂವರೆ ಗಂಟೆ ಇದೆ. ನಿರ್ದೇಶಕ ಚಯನ್ ಶೆಟ್ಟಿ ಅವರು ಬಹಳ ನಿಧಾನಗತಿಯಲ್ಲಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಕ್ಲೈಮ್ಯಾಕ್ಸ್ ಹೊರತುಪಡಿಸಿ ಇನ್ನುಳಿದ ಎಲ್ಲ ದೃಶ್ಯಗಳು ತುಂಬ ನಿಧಾನವಾಗಿ ಸಾಗುತ್ತವೆ. ಹಾಗಾಗಿ ಪ್ರೇಕ್ಷಕರ ಗಮನ ಬೇರೆಡೆಗೆ ಸಾಗುವ ಸಾಧ್ಯತೆ ಇರುತ್ತದೆ. ಸಿನಿಮಾದ ಕಥೆಯಲ್ಲಿ ಒಂದಷ್ಟು ಟ್ವಿಸ್ಟ್​ಗಳನ್ನು ಇರಿಸಲಾಗಿದೆ. ಅವೆಲ್ಲವೂ ತೆರೆದುಕೊಳ್ಳುವುದು ಬಹುತೇಕ ಕ್ಲೈಮ್ಯಾಕ್ಸ್​ನಲ್ಲಿ. ಅಲ್ಲಿಯವರೆಗೂ ಪ್ರೇಕ್ಷಕರು ತಾಳ್ಮೆಯಿಂದ ನೋಡಬೇಕಷ್ಟೇ.

ಇದನ್ನೂ ಓದಿ: ‘ಆಸೆ ಈಡೇರಿತು’; ರೂಪೇಶ್ ಶೆಟ್ಟಿ ಜೊತೆ ತುಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಸುನೀಲ್ ಶೆಟ್ಟಿ

ಅಂದಹಾಗೆ, ‘ಅಧಿಪತ್ರ’ ಸಿನಿಮಾದ ಕಥೆ ನಡೆಯುವುದು ರೆಟ್ರೋ ಕಾಲಘಟ್ಟದಲ್ಲಿ. ಮೊಬೈಲ್, ಸೋಶಿಯಲ್ ಮೀಡಿಯಾ, ಸಿಸಿಟಿವಿ ಮುಂತಾದವು ಇಲ್ಲದ ಕಾಲಘಟ್ಟದ ಕಹಾನಿಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಅದಕ್ಕೆ ತಕ್ಕಂತೆಯೇ ಮೇಕಿಂಗ್ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ಇಡೀ ಕಥೆ ಒಂದೇ ಊರಿನಲ್ಲಿ ಸಾಗುತ್ತದೆ. ನಟಿ ಜಾಹ್ನವಿ ಅವರು ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ರಘು ಪಾಂಡೇಶ್ವರ್, ದೀಪಕ್ ರೈ ಪಾಣಾಜೆ ಮುಂತಾದವರು ನೆಗೆಟಿವ್ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.