Badava Rascal Movie Review: ‘ಬಡವ ರಾಸ್ಕಲ್’ನ ಫ್ರೆಂಡ್​ಶಿಪ್​ ಗಟ್ಟಿ ಮಾಡಿದ ಪಂಚಿಂಗ್​ ಡೈಲಾಗ್

|

Updated on: Dec 24, 2021 | 3:51 PM

‘ಬಡವ ರಾಸ್ಕಲ್’​ ಎಮೋಷನಲ್​ ಆಗಿ ಹೆಚ್ಚು ಕನೆಕ್ಟ್​ ಆಗುತ್ತಾನೆ. ತಂದೆ, ತಾಯಿ ಹಾಗೂ ಮಗನ ನಡುವಿನ ಎಮೋಷನಲ್​ ದೃಶ್ಯಗಳನ್ನು ತುಂಬಾನೇ ಬಿಗಿಯಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

Badava Rascal Movie Review: ‘ಬಡವ ರಾಸ್ಕಲ್’ನ ಫ್ರೆಂಡ್​ಶಿಪ್​ ಗಟ್ಟಿ ಮಾಡಿದ ಪಂಚಿಂಗ್​ ಡೈಲಾಗ್
ಬಡವ ರಾಸ್ಕಲ್​ ತಂಡ
Follow us on

ಸಿನಿಮಾ: ಬಡವ ರಾಸ್ಕಲ್​

ಪಾತ್ರವರ್ಗ: ಧನಂಜಯ, ಅಮೃತಾ ಅಯ್ಯಂಗಾರ್​, ರಂಗಾಯಣ ರಘು, ತಾರಾ, ನಾಗಭೂಷಣ ಇತರರು

ನಿರ್ದೇಶನ: ಶಂಕರ್​ ಗುರು

ನಿರ್ಮಾಣ: ಡಾಲಿ ಪಿಕ್ಚರ್

ಸ್ಟಾರ್​: 3/5

ಶಂಕರ್​ (ಧನಂಜಯ) ಪಕ್ಕಾ ಮಧ್ಯಮ ವರ್ಗದ ಹುಡುಗ. ಆತನಿಗೆ ಮನೆಯ ಕಷ್ಟ ಏನು ಎಂಬುದು ಗೊತ್ತು. ಓದಿದ್ದು ಎಂಬಿಎ ಆದರೂ ಯಾರಿಗೋ ಸಲಾಂ ಹೊಡೆದುಕೊಂಡು ಕೆಲಸ ಮಾಡೋದು ಆತನಿಗೆ ಕಿಂಚಿತ್ತೂ ಇಷ್ಟವಿಲ್ಲ. ಈ ಕಾರಣಕ್ಕೆ ಅಪ್ಪನ ಆಟೋವನ್ನು ಓಡಿಸಿ ಜೀವನ ನಡೆಸುತ್ತಿರುತ್ತಾನೆ. ಗೆಳೆಯರಿಗೋಸ್ಕರ ಆತ ಪ್ರಾಣ ಕೊಡೋಕೂ ರೆಡಿ. ಇದು ಶಂಕರ್​ ಅಲಿಯಾಸ್​ ಬಡವ ರಾಸ್ಕಲ್​​ನ ಪ್ಲಸ್​ ಆ್ಯಂಡ್​ ವೀಕ್​ನೆಸ್​ ಎರಡೂ ಹೌದು. ಈ ಶಂಕರ್​ ಪ್ರಭಾವಿ ರಾಜಕಾರಣಿ ಮಗಳು ಸಂಗೀತಾಳನ್ನು (ಅಮೃತಾ ಅಯ್ಯಂಗರ್​) ಪ್ರೀತಿಸುತ್ತಿರುತ್ತಾನೆ. ಇಬ್ಬರ ಮಧ್ಯೆ ವಿಲನ್​ ಆಗಿ ಬರೋದು ಯಾರು? ಶಂಕರ್​ ಆ ಪ್ರೀತಿಯನ್ನು ಹೇಗೆ ಪಡೆದುಕೊಳ್ಳುತ್ತಾನೆ? ಪ್ರೀತಿ ಹಾಗೂ ಕುಟುಂಬವನ್ನು ಹೇಗೆ ಸರಿದೂಗಿಸಿಕೊಂಡು ಹೋಗುತ್ತಾನೆ ಎಂಬುದನ್ನು ಸಿನಿಮಾದಲ್ಲಿ ನೋಡಬೇಕು.

‘ಬಡವ ರಾಸ್ಕಲ್’​ ಸಿನಿಮಾದಲ್ಲಿ ಮಧ್ಯಮ ವರ್ಗದವರ ಜೀವನವನ್ನು ಅದ್ಭುತವಾಗಿ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕ ಶಂಕರ್ ಗುರು ಮಾಡಿದ್ದಾರೆ. ಈ ಸಿನಿಮಾದಲ್ಲಿ ಹೀರೋಯಿಸಂಗೆ ಬೇಕಾಗುವ ಅಂಶ​ ಇದೆ. ಪಂಚಿಂಗ್​ ಡೈಲಾಗ್, ಎಮೋಷನ್​, ಫ್ರೆಂಡ್​ಶಿಪ್​, ಪ್ರೀತಿ-ಪ್ರೇಮ ಹೀಗೆ ಹಲವು ವಿಚಾರಗಳಿವೆ. ಈ ಸಿನಿಮಾ ಮಧ್ಯಮ ವರ್ಗದವರಿಗೆ ಹೆಚ್ಚು ಕನೆಕ್ಟ್​ ಆಗುತ್ತದೆ. ಮಿಡಲ್​ ಕ್ಲಾಸ್​ ಮಂದಿಯ ಕಷ್ಟಗಳನ್ನು ಮನಸ್ಸಿಗೆ ಮುಟ್ಟುವಂತೆ ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ.

ಚಿತ್ರಕ್ಕೆ ಗಟ್ಟಿ ಕಥೆ ಇಲ್ಲ. ಆದರೆ, ಸಿನಿಮಾ ಉದ್ದಕ್ಕೂ ಬರುವ ಪಂಚಿಂಗ್​ ಡೈಲಾಗ್​ಗಳು ಸಿನಿಮಾಗೆ ಬೆನ್ನೆಲುಬಾಗಿ ನಿಂತಿವೆ. ಕಥೆಯಲ್ಲಿ ಗಟ್ಟಿತನ ಇಲ್ಲ ಎಂಬ ಕೊರಗನ್ನು ಕೊಂಚ ಮಟ್ಟಿಗೆ ನೀಗಿಸುವ ಪ್ರಯತ್ನ ಮಾಡುತ್ತೆ. ಸಿನಿಮಾದ ಉದ್ದಕ್ಕೂ ಫ್ರೆಂಡ್​ಶಿಪ್​ ವಿಚಾರವನ್ನು ಹೈಲೈಟ್​ ಮಾಡುತ್ತಾ ಹೋಗಲಾಗಿದೆ. ಫ್ರೆಂಡ್​ಶಿಪ್​​ನಲ್ಲಿದ್ದ​ ಗಟ್ಟಿತನವನ್ನು, ಕಥೆಯಲ್ಲೂ ತೋರಿಸಿದ್ದರೆ ಸಿನಿಮಾ ಮತ್ತಷ್ಟು ಇಷ್ಟವಾಗುತ್ತಿತ್ತು.

‘ಬಡವ ರಾಸ್ಕಲ್’​ ಎಮೋಷನಲ್​ ಆಗಿ ಹೆಚ್ಚು ಕನೆಕ್ಟ್​ ಆಗುತ್ತಾನೆ. ತಂದೆ, ತಾಯಿ ಹಾಗೂ ಮಗನ ನಡುವಿನ ಎಮೋಷನಲ್​ ದೃಶ್ಯಗಳನ್ನು ತುಂಬಾನೇ ಬಿಗಿಯಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಸಿನಿಮಾದ ಉದ್ದಕ್ಕೂ ಬರುವ ಪಂಚಿಂಗ್​ ಡೈಲಾಗ್​ಗಳು ಪ್ರೇಕ್ಷಕರಿಗೆ ನಗು ತರಿಸುತ್ತವೆ. ಧನಂಜಯ ಅವರು ಈ ಸಿನಿಮಾದಲ್ಲಿ ಆಟೋ ಡ್ರೈವರ್​ ಆಗಿ, ಮಧ್ಯಮ ವರ್ಗದ ಹುಡುಗನಾಗಿ, ಇವೆಲ್ಲವೂ ತಾವು ಅನುಭವಿಸದ ಕಷ್ಟಗಳೇ ಎಂಬಷ್ಟು ನೈಜವಾಗಿ ನಟಿಸಿ ತೋರಿಸಿದ್ದಾರೆ. ಅವರ ನಟನೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಧನಂಜಯ ಗೆಳೆಯನ ಪಾತ್ರದಲ್ಲಿ ನಾಗಭೂಷಣ ಅವರು ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಈ ಸಿನಿಮಾದಲ್ಲಿ ಅವರ ಪಾತ್ರವೂ ಹೈಲೈಟ್​ ಆಗಿದೆ.

ಧನಂಜಯ ಅವರ ತಂದೆ-ತಾಯಿ ಪಾತ್ರದಲ್ಲಿ ರಂಗಾಯಣ ರಘು ಹಾಗೂ ತಾರಾ ಅವರದ್ದು ಪ್ರಬುದ್ಧ ನಟನೆ. ಕೆಲ ದೃಶ್ಯಗಳಲ್ಲಿ ಮನಸ್ಸಿಗೆ ನಾಟುವಂತೆ ಅವರು ನಟಿಸಿ ತೋರಿಸಿದ್ದಾರೆ. ಅಮೃತಾ ಅಯ್ಯಂಗಾರ್​ ಅವರು ಹೆಚ್ಚು ಹೊತ್ತು ತೆರೆಮೇಲೆ ಕಾಣಿಸಿಕೊಳ್ಳದಿದ್ದರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪೂರ್ಣಚಂದ್ರ ಮೈಸೂರು ಅವರೂ ನಟನೆಯಲ್ಲಿ ಗಮನ ಸೆಳೆಯುತ್ತಾರೆ.

ಶಂಕರ್ ಗುರು ​ಅವರ ನಿರ್ದೇಶನ ಮೆಚ್ಚಿಕೊಳ್ಳುವಂತದ್ದು. ಕಥೆ ಗಟ್ಟಿ ಇಲ್ಲದಿದ್ದರೂ ನಿರೂಪಣೆಯಲ್ಲಿ, ಸಂಭಾಷಣೆಯಲ್ಲಿ ಗಟ್ಟಿತನ ಮೆರೆದಿದ್ದಾರೆ. ಕೆ.ಆರ್​. ಮಾರುಕಟ್ಟೆ ಸೇರಿ ಅನೇಕ ಸ್ಥಳಗಳನ್ನು ತುಂಬಾನೇ ನೈಜವಾಗಿ ಶೂಟ್​ ಮಾಡಿ ಭೇಷ್​ ಎನಿಸಿಕೊಂಡಿದ್ದಾರೆ ಛಾಯಾಗ್ರಾಹಕಿ ಪ್ರೀತಾ ಜಯರಾಮನ್​​. ವಾಸುಕಿ ವೈಭವ್​ ಸಂಗೀತ ಸಂಯೋಜನೆಯ ಹಾಡುಗಳು ಇಷ್ಟವಾಗುತ್ತವೆ.

ಇದನ್ನೂ ಓದಿ: ‘ರೈಡರ್​’, ‘ಬಡವ ರಾಸ್ಕಲ್​’ ಚಿತ್ರಗಳ ಬಗ್ಗೆ ರಮ್ಯಾ ನಿರೀಕ್ಷೆ; ಡಾಲಿ ಧನಂಜಯಗೆ ಮತ್ತೆ ಮತ್ತೆ ಪ್ರೀತಿ-ಪ್ರೋತ್ಸಾಹ

Badava Rascal: ಧನಂಜಯ​ ನಟನೆಯ ‘ಬಡವ ರಾಸ್ಕಲ್​’ ಮೊದಲಾರ್ಧ ಹೇಗಿದೆ? ಇಲ್ಲಿದೆ ರಿಪೋರ್ಟ್​

 

 

Published On - 3:10 pm, Fri, 24 December 21