
ಸಿನಿಮಾ: ಭಾವ ತೀರ ಯಾನ. ನಿರ್ಮಾಣ: ಶೈಲೇಶ್ ಅಂಬೆಕಲ್ಲು, ಲಕ್ಷ್ಮಣ್ ಬಿ.ಕೆ. ನಿರ್ದೇಶನ: ತೇಜಸ್ ಕಿರಣ್, ಮಯೂರ್ ಅಂಬೆಕಲ್ಲು. ಪಾತ್ರವರ್ಗ: ರಮೇಶ್ ಭಟ್, ವಿದ್ಯಾ ಮೂರ್ತಿ, ತೇಜಸ್ ಕಿರಣ್, ಅನುಷಾ ಕೃಷ್ಣ, ಆರೋಹಿ ನೈನಾ ಮುಂತಾದವರು. ಸ್ಟಾರ್: 3/5
ಪ್ರೀತಿಯ ಆಳ-ಅಗಲ ಎಷ್ಟು ಎಂಬುದು ಅಷ್ಟು ಸುಲಭಕ್ಕೆ ತಿಳಿಯುವಂಥದ್ದಲ್ಲ. ನಾವು ಅಂದುಕೊಳ್ಳುವುದಕ್ಕಿಂತಲೂ ಭಿನ್ನವಾಗಿರುತ್ತದೆ ಪ್ರೀತಿಯ ಸ್ವರೂಪ. ನಾವು ಪ್ರೀತಿಸಿದವರೇ ನಮಗೆ ಸಿಗಬೇಕು ಎಂದು ಮನಸ್ಸು ಬಯಸುತ್ತದೆ. ಆದರೆ ನಮ್ಮ ಪಾಲಿಗೆ ಸಿಕ್ಕವರನ್ನೇ ಪ್ರೀತಿಸಬೇಕು ಎಂದು ಜೀವನ ಪಾಠ ಕಲಿಸುತ್ತದೆ. ಬಹುತೇಕ ಎಲ್ಲರ ಬದುಕಿನಲ್ಲೂ ಇಂಥ ಅನುಭವಗಳು ಆಗಿರುತ್ತವೆ. ಆ ರೀತಿಯ ಅನುಭವಗಳೇ ತುಂಬಿರುವ ಕಥೆಯನ್ನು ‘ಭಾವ ತೀರ ಯಾನ’ ಸಿನಿಮಾದಲ್ಲಿ ತೋರಿಸಲಾಗಿದೆ. ಹೆಸರಿಗೆ ತಕ್ಕಂತೆ ಈ ಸಿನಿಮಾದಲ್ಲಿ ಎಮೋಷನ್ ತುಂಬಿದೆ.
ಪ್ರೀತಿ-ಪ್ರೇಮದ ಸಹವಾಸವೇ ಬೇಡ ಎಂದುಕೊಂಡಿದ್ದ ಕಥಾನಾಯಕನಿಗೆ ಏಕಾಏಕಿಯಾಗಿ ಪ್ರೇಮಾಂಕುರ ಆಗುತ್ತದೆ. ಆ ಪ್ರೀತಿಯನ್ನು ಹೇಳಿಕೊಳ್ಳಬೇಕು ಎಂದಾಗ ಒಂದು ಆಘಾತ ಎದುರಾಗುತ್ತದೆ. ಅದರಿಂದ ಹೊರಬರಬೇಕು ಎಂದುಕೊಳ್ಳುವಾಗ ಆತನ ಮೇಲೆ ಬೇರೊಬ್ಬ ಹುಡುಗಿಗೆ ಲವ್ ಆಗುತ್ತದೆ. ಅಂತೂ ಇಂತೂ ಆತನ ಲವ್ ಲೈಫ್ ಸರಿದಾರಿಗೆ ಬಂದು ಎಂದುಕೊಳ್ಳುವಷ್ಟರಲ್ಲಿ ಹಳೇ ಹುಡುಗಿಯ ರೀ-ಎಂಟ್ರಿ ಆಗುತ್ತದೆ. ಮೇಲ್ನೋಟಕ್ಕೆ ಇದೊಂದು ಸರಳವಾದ ತ್ರಿಕೋನ ಪ್ರೇಮಕಥೆ ಎನಿಸಿದರೂ ಅದನ್ನು ನವಿರಾಗಿ ತೆರೆಗೆ ತರಲಾಗಿದೆ.
‘ಭಾವ ತೀರ ಯಾನ’ದಲ್ಲಿ ಸಾಕಷ್ಟು ತಿರುವುಗಳು ಇವೆ. ಪ್ರತಿ ತಿರುವಿನಲ್ಲೂ ಪ್ರೀತಿಯ ಸ್ವರೂಪ ಬದಲಾಗುತ್ತದೆ. ಯೌವನದಲ್ಲಿ ಶುರುವಾದ ಪ್ರೇಮ ನಡುವೆ ಎಲ್ಲೋ ಕಳೆದುಹೋಗಿ, ಮತ್ತೆ ವೃದ್ಧಾಪ್ಯದಲ್ಲಿ ಮರಳಿ ಬರುತ್ತದೆ. ಆಗಲೂ ಆ ಪ್ರೀತಿಯಲ್ಲಿ ತೀವ್ರತೆ ಕಡಿಮೆ ಆಗಿರುವುದಿಲ್ಲ. ಈ ರೀತಿಯ ಕಥೆಯನ್ನು ಅಚ್ಚುಕಟ್ಟಾಗಿ ಪ್ರೇಕ್ಷಕರ ಮುಂದೆ ಇಡಲಾಗಿದೆ. ಮುಂದೇನಾಗುತ್ತದೆ ಎಂಬ ಕೌತುಕವನ್ನು ಕೊನೇ ತನಕ ಕಾಯ್ದುಕೊಂಡು ಈ ಸಿನಿಮಾದ ಕಥೆ ಸಾಗುತ್ತದೆ.
ಎಲ್ಲ ವರ್ಗದ ಪ್ರೇಕ್ಷಕರಿಗೂ ‘ಭಾವ ತೀರ ಯಾನ’ ಸಿನಿಮಾ ಹತ್ತಿರ ಆಗುತ್ತದೆ. ಈಗತಾನೇ ಪ್ರೀತಿಯಲ್ಲಿ ಬೀಳಬೇಕು ಎಂದು ಹಂಬಲಿಸುತ್ತಿರುವ ಯುವ ಮನಸ್ಸುಗಳಿಗೆ ಮುದ ನೀಡುವಂತಹ ದೃಶ್ಯಗಳು ಈ ಸಿನಿಮಾದಲ್ಲಿ ಇವೆ. ಹಾಗೆಯೇ, ಪ್ರೀತಿಯನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವವರಿಗೆ ಕನೆಕ್ಟ್ ಆಗುವಂತಹ ದೃಶ್ಯಗಳು ಸಹ ಇವೆ. ಇನ್ನು, ಇಳಿವಯಸ್ಸಿನಲ್ಲಿ ತಮ್ಮ ಬದುಕಿನ ನೆನಪನ್ನು ಮೆಲುಕು ಹಾಕುವ ಹಿರಿಯ ಜೀವಗಳಿಗೂ ಆಪ್ತ ಎನಿಸುವಂತಹ ಸನ್ನಿವೇಶಗಳ ಕೂಡ ಈ ಚಿತ್ರದಲ್ಲಿವೆ.
ಇದು ಪಕ್ಕಾ ಕ್ಲಾಸ್ ಸಿನಿಮಾ. ಹೊಡಿಬಡಿ ದೃಶ್ಯಗಳಾಗಲೀ, ಅಬ್ಬರದ ಸಂಭಾಷಣೆಗಳಾಗಲಿ ಈ ಸಿನಿಮಾದಲ್ಲಿ ಇಲ್ಲ. ಎಲ್ಲವನ್ನೂ ಸರಳವಾಗಿ, ಸುಂದರವಾಗಿ ನಿರೂಪಿಸಲಾಗಿದೆ. ಕಲಾವಿದರಾದ ತೇಜಸ್ ಕಿರಣ್, ಅನುಷಾ ಕೃಷ್ಣ, ಆರೋಹಿ ನೈನಾ ಮುಂತಾದವರು ಚೆನ್ನಾಗಿ ಅಭಿನಯಿಸಿದ್ದಾರೆ. ಹಿರಿಯರಾದ ರಮೇಶ್ ಭಟ್, ವಿದ್ಯಾ ಮೂರ್ತಿ ಅವರು ಈ ಚಿತ್ರಕ್ಕೆ ಮೆರುಗು ತಂದುಕೊಟ್ಟಿದ್ದಾರೆ. ಮಯೂರ್ ಅಂಬೆಕಲ್ಲು ಅವರ ಸಂಗೀತದಿಂದಾಗಿ ಸಿನಿಮಾದಲ್ಲಿನ ‘ಭಾವ’ತೀವ್ರತೆ ಹೆಚ್ಚಿದೆ.
ಇದನ್ನೂ ಓದಿ: Sidlingu 2 Review: ‘ಸಿದ್ಲಿಂಗು 2’ ಚಿತ್ರದಲ್ಲೂ ಮುಂದುವರಿದ ಯೋಗಿ-ವಿಜಯ್ ಪ್ರಸಾದ್ ‘ಕಾರು’ಬಾರು
ರಾಧಾ-ಕೃಷ್ಣನ ಪ್ರೇಮಕಥೆಯ ಎಳೆಯನ್ನೇ ಸ್ಪೂರ್ತಿಯಾಗಿ ಇಟ್ಟುಕೊಂಡು ‘ಭಾವ ತೀರ ಯಾನ’ ಸಿನಿಮಾ ಸಾಗುತ್ತದೆ. ಕಥೆಯ ಅಂತ್ಯವೂ ಹಾಗೆಯೇ ಕಾಡುತ್ತದೆ. ಕೃಷ್ಣನ ಕೊಳಲಿನ ನಾದ ಕೇಳುತ್ತಾ ರಾಧೆ ಮಡಿದ ಸನ್ನಿವೇಶವನ್ನು ನೆನಪಿಸುತ್ತದೆ ಈ ಸಿನಿಮಾದ ಕ್ಲೈಮ್ಯಾಕ್ಸ್. ಸಿಗುವ ಪ್ರೀತಿಯನ್ನು ಕಳೆದುಕೊಳ್ಳಬಾರದು ಎಂಬುದನ್ನು ಮನವರಿಕೆ ಮಾಡಿಕೊಡುವ ರೀತಿಯಲ್ಲಿ ಈ ಸಿನಿಮಾ ಆವರಿಸಿಕೊಳ್ಳುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.