Timepass Movie Review: ಹೊಸ ನಿರ್ದೇಶಕರ ಕಷ್ಟ-ನಷ್ಟದ ‘ಟೈಮ್ ಪಾಸ್’ ಸಿನಿಮಾ

Timepass Movie Review: ಹೊಸ ನಿರ್ದೇಶಕರ ಕಷ್ಟ-ನಷ್ಟದ ‘ಟೈಮ್ ಪಾಸ್’ ಸಿನಿಮಾ
Timepass Kannada Film Review
ಟೈಮ್ ಪಾಸ್
A
  • Time - 125 Minutes
  • Released - October 17, 2025
  • Language - Kannada
  • Genre - Comedy, Drama
Cast - ಇಮ್ರಾನ್ ಪಾಶಾ, ರತ್ಷಾ ರಾಮ್, ಸಂಪತ್, ಓಂ ಶ್ರೀ ಯಕ್ಷಶಿಫ್, ಪ್ರಭಾಕರ್ ರಾವ್, ನವೀನ್ ಮುಂತಾದವರು.
Director - ಕೆ. ಚೇತನ್ ಜೋಡಿದಾರ್.
2.5
Critic's Rating

Updated on: Oct 17, 2025 | 3:50 PM

ಚಿತ್ರರಂಗ ಎಂದರೆ ಒಂದು ಮಾಯಾ ಜಗತ್ತು. ಆ ರೀತಿ ಕಾಣುವುದು ಹೊರಗಿನವರಿಗೆ ಮಾತ್ರ. ಚಿತ್ರರಂಗದ ಒಳಗೆ ಕೆಲಸ ಮಾಡುವವರಿಗೆ ಅಲ್ಲಿನ ಅಸಲಿ ಕಷ್ಟ-ನಷ್ಟಗಳು ತಿಳಿಯುತ್ತವೆ. ಸಿನಿಮಾದಲ್ಲಿ ಸಾಧನೆ ಮಾಡಬೇಕು ಎಂಬ ಕನಸು ಕಟ್ಟಿಕೊಂಡು ಬರುವ ಹೊಸ ಕಲಾವಿದರು, ನಿರ್ದೇಶಕರು, ತಂತ್ರಜ್ಞರು ಅನುಭವಿಸುವ ಕಷ್ಟಗಳು ಒಂದೆರಡಲ್ಲ. ಅಂಥ ಹಲವು ಅಂಶಗಳನ್ನು ಇಟ್ಟುಕೊಂಡು ಕನ್ನಡದಲ್ಲಿ ‘ಟೈಮ್ ಪಾಸ್’ ಸಿನಿಮಾ (Timepass Kannada Movie) ಮಾಡಲಾಗಿದೆ. ಈ ಚಿತ್ರದಲ್ಲಿ ಬಹುತೇಕ ಹೊಸಬರು ಅಭಿನಯಿಸಿದ್ದಾರೆ. ಹೊಸ ನಿರ್ದೇಶಕ ಕೆ. ಚೇತನ್ ಜೋಡಿದಾರ್ (Chethan Jodidhar) ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಎಂ.ಹೆಚ್. ಕೃಷ್ಣಮೂರ್ತಿ, ಕಿರಣ್ ಕುಮಾರ್ ಶೆಟ್ಟಿ, ಗುಂಡೂರ್ ಶೇಖರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಇದು ಸಿನಿಮಾ ಮಂದಿಯ ಕಷ್ಟ-ನಷ್ಟದ ಕಥೆ ಎಂದ ಮಾತ್ರಕ್ಕೆ ಚಿತ್ರದುದ್ದಕ್ಕೂ ರೋದನೆ ಇದೆ ಎಂದರ್ಥವಲ್ಲ. ಎಲ್ಲವನ್ನೂ ಹಾಸ್ಯದ ದಾಟಿಯಲ್ಲಿ ತೋರಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಆ ಮೂಲಕ ಕಾಮಿಡಿಗೆ ಒತ್ತು ನೀಡಿದ್ದಾರೆ. ಚಿಕ್ಕದೊಂದು ಲೈವ್ ಸ್ಟೋರಿ, ಅಲ್ಪ ಸ್ವಲ್ಪ ಫೈಟಿಂಗ್, ಒಂಚೂರು ಸಸ್ಪೆನ್ಸ್ ಇಟ್ಟುಕೊಂಡು ‘ಟೈಮ್ ಪಾಸ್’ ಸಿನಿಮಾ ಮಾಡಲಾಗಿದೆ. ಇಮ್ರಾನ್ ಪಾಶಾ, ರತ್ಷಾ ರಾಮ್, ಸಂಪತ್, ಓಂ ಶ್ರೀ ಯಕ್ಷಶಿಫ್, ಪ್ರಭಾಕರ್ ರಾವ್, ನವೀನ್ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಮೊದಲೇ ಹೇಳಿದಂತೆ ಇದು ಸಿನಿಮಾ ಮಂದಿಯ ಕಥೆ. ಹಲವು ಸಿನಿಮಾ ಮಾಡಿ ಮನೆ-ಮಠ ಮಾರಿಕೊಂಡ ಒಬ್ಬ ನಿರ್ಮಾಪಕ ಹಾಗೂ ಈಗತಾನೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸಿನಿಮಾ ಮಾಡಬೇಕು ಎಂಬ ಆಸೆ ಇಟ್ಟುಕೊಂಡಿರುವ ಒಬ್ಬ ನಿರ್ದೇಶಕ. ಇವರಿಬ್ಬರು ಆಕಸ್ಮಿಕವಾಗಿ ಒಂದೆಡೆ ಭೇಟಿ ಆಗುತ್ತಾರೆ. ಜೊತೆಯಾಗಿ ಸಿನಿಮಾ ಮಾಡಲು ನಿರ್ಧರಿಸುತ್ತಾರೆ. ಈಗಾಗಲೇ ಸೋತು ಸುಣ್ಣ ಆಗಿರುವ ನಿರ್ಮಾಪಕ ಹೊಸ ಸಿನಿಮಾಗೆ ಹೇಗೆ ಹಣ ಹೊಂದಿಸುತ್ತಾನೆ? ಯಾವುದೇ ಅನುಭವವವೇ ಇಲ್ಲದ ಹೊಸ ನಿರ್ದೇಶಕನು ಆ ನಿರ್ಮಾಪಕನಿಗೆ ಲಾಭ ಆಗುವಂತಹ ಸಿನಿಮಾವನ್ನು ಹೇಗೆ ಮಾಡಿಕೊಡುತ್ತಾನೆ ಎಂಬುದೇ ‘ಟೈಮ್ ಪಾಸ್’ ಚಿತ್ರದ ಕಥೆ.

ಒಟ್ಟಾರೆಯಾಗಿ ನೋಡಿದರೆ ‘ಟೈಮ್ ಪಾಸ್’ ಸಿನಿಮಾದಲ್ಲಿ ಇರುವುದು ಸಿಂಪಲ್ ಆದ ಕಥೆಯ ಎಳೆ. ಅದನ್ನು 2 ಗಂಟೆ 5 ನಿಮಿಷ ಅವಧಿಯಲ್ಲಿ ತೋರಿಸಲಾಗಿದೆ. ಈ ಸಿನಿಮಾದ ಮೊದಲಾರ್ಧದಲ್ಲಿ ಹೆಚ್ಚಿನ ಮನರಂಜನೆ ನಿರೀಕ್ಷಿಸಲು ಆಗದು. 18 ಪ್ಲಸ್ ಎಂಬಂತಹ ಕಾಮಿಡಿ ಡೈಲಾಗ್​​ಗಳ ಮೂಲಕ ಪ್ರೇಕ್ಷಕರನ್ನು ನಗಿಸಲು ಪ್ರಯತ್ನಿಸಲಾಗಿದೆ. ಇವುಗಳಿಂದ ಈ ಚಿತ್ರ ‘ಎ’ ಪ್ರಮಾಣಪತ್ರ ಪಡೆದುಕೊಂಡಿದೆ. ನಿರೂಪಣೆ ನಿಧಾನಗತಿಯಲ್ಲಿದೆ. ಕಥೆ-ಚಿತ್ರಕಥೆಯನ್ನು ಇನ್ನಷ್ಟು ಗಟ್ಟಿಗೊಳಿಸಿದ್ದರೆ ಚೆನ್ನಾಗಿರುತ್ತಿತ್ತು.

ಇದನ್ನೂ ಓದಿ: ಕೊನೆವರೆಗೂ ಸಸ್ಪೆನ್ಸ್ ಕಾಪಾಡಿಕೊಳ್ಳುವ ‘ಕಮಲ್ ಶ್ರೀದೇವಿ’ ಕೊಲೆ ಕೇಸ್

‘ಟೈಮ್ ಪಾಸ್’ ಚಿತ್ರಕ್ಕೆ ದ್ವಿತೀಯಾರ್ಧದಲ್ಲಿ ಸ್ವಲ್ಪ ವೇಗ ಸಿಗುತ್ತದೆ. ಸಿನಿಮಾ ಮಾಡುವವರ ಕಷ್ಟಗಳನ್ನು ತೋರಿಸಲಾಗಿದೆ. ಸೋತ ನಿರ್ಮಾಪಕನ ಸ್ಥಿತಿಗತಿಗಳ ಬಗ್ಗೆ ವಿವರ ನೀಡಲಾಗಿದೆ. ಮುಂದೇನಾಗುತ್ತದೆ ಎಂಬ ಕೌತುಕದೊಂದಿಗೆ ಕಥೆಯನ್ನು ಮುಂದುವರಿಸಿಕೊಂಡು ಹೋಗಲಾಗಿದೆ. ಈ ಎಲ್ಲ ಅಂಶಗಳ ಜೊತೆಗೆ ಹೊಸಬರ ಪ್ರಯತ್ನ ಎಂಬ ಕಾರಣಕ್ಕೆ ಈ ಸಿನಿಮಾ ನೋಡಿಸಿಕೊಂಡು ಸಾಗುತ್ತದೆ. ಹಾಗಿದ್ದರೂ ಕೂಡ ಕಲಾವಿದರ ನಟನೆ, ಕಥೆಯ ಗಟ್ಟಿತನದಲ್ಲಿ ಇನ್ನಷ್ಟು ಸುಧಾರಣೆ ಬೇಕಿತ್ತು ಎನಿಸುತ್ತದೆ. ಪ್ರೇಕ್ಷಕರು ಬಯಸುವಂತಹ ಹೊಸತನ ಇದ್ದಿದ್ದರೆ ‘ಟೈಮ್ ಪಾಸ್’ ಎಲ್ಲರಿಗೂ ಇಷ್ಟ ಆಗುತ್ತಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.