Kamal Sridevi Review: ಕೊನೆವರೆಗೂ ಸಸ್ಪೆನ್ಸ್ ಕಾಪಾಡಿಕೊಳ್ಳುವ ‘ಕಮಲ್ ಶ್ರೀದೇವಿ’ ಕೊಲೆ ಕೇಸ್

- Time - 122 Minutes
- Released - September 19, 2025
- Language - Kannada
- Genre - Drama, Thriller
‘ಕಮಲ್ ಶ್ರೀದೇವಿ’ (Kamal Sridevi) ಎಂಬ ಟೈಟಲ್ ಕೇಳಿದಾಗಲೇ ಸಿನಿಪ್ರಿಯರಿಗೆ ನಿರೀಕ್ಷೆ ಮೂಡಿತ್ತು. ಆದರೆ ಇದು ಕಮಲ್ ಹಾಸನ್ ಮತ್ತು ಶ್ರೀದೇವಿಗೆ ಸಂಬಂಧಿಸಿದ ಸಿನಿಮಾ ಅಲ್ಲ ಎಂಬುದನ್ನು ಚಿತ್ರತಂಡ ಮೊದಲೇ ಸ್ಪಷ್ಟಪಡಿಸಿತ್ತು. ಈ ಸಿನಿಮಾದಲ್ಲಿ ಕಮಲ್ ಮತ್ತು ಶ್ರೀದೇವಿ ಎಂಬುದು ಎರಡು ಪ್ರಮುಖ ಪಾತ್ರಗಳ ಹೆಸರು. ಒಂದು ಮರ್ಡರ್ ಮಿಸ್ಟರಿ ಕಹಾನಿಯನ್ನು ನಿರ್ದೇಶಕ ಸುನಿಲ್ ಕುಮಾರ್ ಅವರು ತೆರೆಗೆ ತಂದಿದ್ದಾರೆ. ಬಿ.ಕೆ. ಧನಲಕ್ಷ್ಮಿ ಅವರು ನಿರ್ಮಿಸಿದ ಈ ಚಿತ್ರಕ್ಕೆ ರಾಜವರ್ಧನ್ ಅವರು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿ, ಸಹ-ನಿರ್ಮಾಪಕರೂ ಆಗಿದ್ದಾರೆ. ನಟಿ ಸಂಗೀತಾ ಭಟ್ (Sangeetha Bhat) ಅವರು ವೇಶ್ಯೆಯ ಪಾತ್ರ ಮಾಡಿ ಗಮನ ಸೆಳೆಸಿದ್ದಾರೆ. ಸಚಿನ ಚೆಲುವರಾಯಸ್ವಾಮಿ ಅವರು ಈ ಚಿತ್ರದಲ್ಲಿ ಕಮಲ್ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸೆಪ್ಟೆಂಬರ್ 19ರಂದು ಬಿಡುಗಡೆ ಆದ ‘ಕಮಲ್ ಶ್ರೀದೇವಿ’ ಸಿನಿಮಾದ ವಿಮರ್ಶೆ (Kamal Sridevi Movie Review) ಇಲ್ಲಿದೆ..
ಕೊಲೆ ಕೌತುಕ ಇರುವ ಸಿನಿಮಾಗಳೆಂದರೆ ಸಸ್ಪೆನ್ಸ್ ಪ್ರಿಯರಿಗೆ ತುಂಬ ಇಷ್ಟ. ‘ಕಮಲ್ ಶ್ರೀದೇವಿ’ ಕೂಡ ಅಂಥದ್ದೇ ಒಂದು ಕಥೆಯನ್ನು ಪ್ರೇಕ್ಷಕರ ಮುಂದಿರಿಸಿದೆ. ಒಂದೇ ದಿನದಲ್ಲಿ ನಡೆದ ಒಂದು ಸಸ್ಪೆನ್ಸ್ ಕಥೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಕೆಲವು ಫ್ಲ್ಯಾಶ್ಬ್ಯಾಕ್ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ. ಕೊನೆಯವರೆಗೂ ಕೌತುಕವನ್ನು ಕಾಪಾಡಿಕೊಳ್ಳುವ ಕಾರಣದಿಂದ ಪ್ರೇಕ್ಷಕರನ್ನು ಈ ಚಿತ್ರ ಹಿಡಿದಿಟ್ಟುಕೊಳ್ಳುತ್ತದೆ.
ಹಣದ ಅನಿವಾರ್ಯತೆ ಇರುವ ಅಸಹಾಯಕ ಮಹಿಳೆಯೊಬ್ಬಳು ವೇಶ್ಯಾವಾಟಿಕೆಗೆ ಬರುತ್ತಾಳೆ. ಒಂದೇ ದಿನದಲ್ಲಿ 70 ಸಾವಿರ ರೂಪಾಯಿ ಹೊಂದಿಸಬೇಕಾದ ಅನಿವಾರ್ಯತೆ ಆಕೆಗೆ ಇರುತ್ತದೆ. ಅದಕ್ಕಾಗಿ ಅವಳು ಆ ದಿನ 6ರಿಂದ 7 ಗಿರಾಕಿಗಳನ್ನು ಭೇಟಿ ಮಾಡಬೇಕಾಗುತ್ತದೆ. ಆದರೆ ಇನ್ನೇನು ಹಣ ಸಿಕ್ಕಿತು ಎಂಬಷ್ಟರಲ್ಲಿ ಆಕೆಯ ಕೊಲೆ ಆಗಿಬಿಡುತ್ತದೆ! ಬಂದು ಹೋದ 7 ಜನರಲ್ಲಿ ಕೊಲೆ ಮಾಡಿದವರು ಯಾರು ಎಂಬುದು ಕೌತುಕದ ಪ್ರಶ್ನೆ.
ಈ ಕೊಲೆ ಪ್ರಕರಣದ ಬೆನ್ನು ಹತ್ತುವ ಪೊಲೀಸರಿಗೆ ಹಲವರ ಮೇಲೆ ಅನುಮಾನ ಬರುತ್ತದೆ. ಪ್ರತಿಯೊಬ್ಬರನ್ನೂ ತನಿಖೆಗೆ ಒಳಪಡಿಸಿದಾಗ ಹೊಸಹೊಸ ಕಥೆಗಳು ತೆರೆದುಕೊಳ್ಳುತ್ತವೆ. ಒಂದೊಂದು ಹಂತದಲ್ಲಿ ಒಬ್ಬೊಬ್ಬರ ಮೇಲೆ ಅನುಮಾನ ಮೂಡುತ್ತದೆ. ನಿಜಕ್ಕೂ ಕೊಲೆ ಮಾಡಿದವರು ಯಾರು ಎಂಬುದನ್ನು ತಿಳಿಯಲು ಕ್ಲೈಮ್ಯಾಕ್ಸ್ ತನಕ ಕಾಯಬೇಕು.
ವೇಶ್ಯಾವಾಟಿಕೆ ದಂಧೆಗೆ ಇಳಿಯುವ ಪ್ರತಿ ಮಹಿಳೆಯ ಹಿಂದೆ ಕಣ್ಣೀರಿನ ಕಥೆ ಇದ್ದೇ ಇರುತ್ತದೆ. ಅದನ್ನು ಕೂಡ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಆ ಮೂಲಕ ಎಮೋಷನಲ್ ಸ್ಪರ್ಶ ನೀಡಲಾಗಿದೆ. ನಟಿ ಸಂಗೀತಾ ಭಟ್ ಅವರು ಚಾಲೆಂಜಿಂಗ್ ಆದಂತಹ ಪಾತ್ರ ಮಾಡಿದ್ದಾರೆ. ಎಲ್ಲಿಯೂ ಅಶ್ಲೀಲ ಎನಿಸದ ರೀತಿಯಲ್ಲಿ ನಿರ್ದೇಶಕ ಸುನಿಲ್ ಕುಮಾರ್ ಅವರು ಎಲ್ಲ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಸಿನಿಮಾ ನಿರ್ದೇಶಕನ ಪಾತ್ರವನ್ನು ಸಚಿನ್ ಚೆಲುವರಾಯಸ್ವಾಮಿ ಅವರು ಮಾಡಿದ್ದಾರೆ. ಇದು ಮುಖ್ಯ ಪಾತ್ರವಾದರೂ ಕೂಡ ಅನಗತ್ಯ ಬಿಲ್ಡಪ್, ಹೀರೋಯಿಸಂಗೆ ಇಲ್ಲಿ ಅವಕಾಶ ಇಲ್ಲ. ಆ ಪಾತ್ರವನ್ನು ಅವರು ಉತ್ತಮವಾಗಿ ನಿಭಾಯಿಸಿದ್ದಾರೆ.
ಇದನ್ನೂ ಓದಿ: ಜಾಲಿ ಎಲ್ಎಲ್ಬಿ 3, ಅರಸಯ್ಯನ ಪ್ರೇಮ ಪ್ರಸಂಗ, ಕಮಲ್ ಶ್ರೀದೇವಿ ನಡುವೆ ಈ ವಾರ ಪೈಪೋಟಿ
ನಟ ಕಿಶೋರ್ ಅವರು ಐಪಿಎಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ರಾಘು ಶಿವಮೊಗ್ಗ ಅವರು ಕೂಡ ಪೊಲೀಸ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಮೇಶ್ ಇಂದಿರಾ ಅವರು ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಕೆಲವೇ ದೃಶ್ಯಗಳಲ್ಲಿ ಬರುವ ಮಿತ್ರ ಅವರು ಸಹ ನಗು ಉಕ್ಕಿಸುತ್ತಾರೆ. ‘ಕಮಲ್ ಶ್ರೀದೇವಿ’ ಸಿನಿಮಾದ ಅವಧಿ 2 ಗಂಟೆ 2 ನಿಮಿಷ ಇದೆ. ಮೊದಲಾರ್ಧ ನಿಧಾನವಾಗಿ ಸಾಗುತ್ತದೆ. ವೇಗ ಹೆಚ್ಚಿಸಿದ್ದರೆ ಸಿನಿಮಾವನ್ನು ಇನ್ನಷ್ಟು ಉತ್ತಮವಾಗಿಸಬಹುದಿತ್ತು. ಕಥೆಯಲ್ಲಿ ಇನ್ನಷ್ಟು ಹೊಸತನ ಬೇಕಿತ್ತು ಎನಿಸುತ್ತದೆ. ವೇಶ್ಯಾವಾಟಿಕೆ ರೀತಿಯೇ ಕೌಟುಂಬಿಕ ದೌರ್ಜನ್ಯ ಎಷ್ಟು ಕ್ರೂರವಾದದ್ದು ಎಂಬುದನ್ನು ಈ ಸಿನಿಮಾ ತೆರೆದಿಟ್ಟಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:41 pm, Fri, 19 September 25




