‘ಕಮಲ್ ಶ್ರೀದೇವಿ’ ಟ್ರೇಲರ್: ಸಚಿನ್, ಸಂಗೀತಾ ಭಟ್ ಸಿನಿಮಾದಲ್ಲಿ ಸಖತ್ ಸಸ್ಪೆನ್ಸ್
ಕುತೂಹಲ ಮೂಡಿಸಿರುವ ‘ಕಮಲ್ ಶ್ರೀದೇವಿ’ ಸಿನಿಮಾ ಸೆಪ್ಟೆಂಬರ್ 19ರಂದು ತೆರೆಕಾಣಲಿದೆ. ಟ್ರೇಲರ್ ಬಿಡುಗಡೆ ಆಗಿದ್ದು, ಇದನ್ನು ನೋಡಿದ ಬಳಿಕ ಸಿನಿಮಾದ ಮೇಲೆ ನಿರೀಕ್ಷೆ ಜಾಸ್ತಿ ಆಗಿದೆ. ಸಂಗೀತಾ ಭಟ್ ಅವರು ಈ ಸಿನಿಮಾದಲ್ಲಿ ಬಹಳ ಬೋಲ್ಡ್ ಆದಂತಹ ಪಾತ್ರ ಮಾಡಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ..

ಸಂಗೀತಾ ಭಟ್, ಸಚಿನ್ ಚಲುವರಾಯಸ್ವಾಮಿ (Sachin Cheluvarayaswamy) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಕಮಲ್ ಶ್ರೀದೇವಿ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಸೆಪ್ಟೆಂಬರ್ 19ರಿಂದ ಈ ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಈಗ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಈ ಮೊದಲು ಪೋಸ್ಟರ್ ಮತ್ತು ಟೀಸರ್ ಮೂಲಕ ಈ ಚಿತ್ರ ಗಮನ ಸೆಳೆದಿತ್ತು. ಈಗ ‘ಕಮಲ್ ಶ್ರೀದೇವಿ’ ಟ್ರೇಲರ್ (Kamal Sridevi Trailer) ಬಿಡುಗಡೆಯಾಗಿ ಕೌತುಕ ಹೆಚ್ಚಿಸಿದೆ. ಸಿನಿಮಾದ ಕಥಾಹಂದರ ಏನು ಎಂಬುದರ ಬಗ್ಗೆ ಟ್ರೇಲರ್ ಮೂಲಕ ಸುಳಿವು ಬಿಟ್ಟುಕೊಡಲಾಗಿದೆ. ‘ಕಮಲ್ ಶ್ರೀದೇವಿ’ (Kamal Sridevi) ಸಿನಿಮಾದಲ್ಲಿ ಸಿಕ್ಕಾಪಟ್ಟೆ ಸಸ್ಪೆನ್ಸ್ ಇರಲಿದೆ.
ಎನ್. ಚೆಲುವರಾಯ ಸ್ವಾಮಿ ಅವರು ‘ಕಮಲ್ ಶ್ರೀದೇವಿ’ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ. ‘ಸ್ವರ್ಣಾಂಬಿಕ ಪಿಚ್ಚರ್ಸ್’ ಮೂಲಕ ಬಿ.ಕೆ. ಧನಲಕ್ಷ್ಮೀ ಅವರು ನಿರ್ಮಿಸಿದ್ದಾರೆ. ‘Barnswallow Company’ ಮೂಲಕ ರಾಜವರ್ಧನ್ ಅವರು ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಸಚಿನ್ ಚೆಲುವರಾಯ ಸ್ವಾಮಿ ಅವರು ಹೀರೋ ಆಗಿ ನಟಿಸಿದ್ದಾರೆ. ಟ್ರೇಲರ್ನಲ್ಲಿ ಸಂಗೀತಾ ಭಟ್ ಅವರ ಪಾತ್ರ ಹೈಲೈಟ್ ಆಗಿದೆ.
ಸಂಗೀತಾ ಭಟ್, ಸಚಿನ್ ಚಲುವರಾಯಸ್ವಾಮಿ ಜೊತೆ ಕಿಶೋರ್, ರಮೇಶ್ ಇಂದಿರಾ ಮುಂತಾದ ಪ್ರತಿಭಾವಂತ ಕಲಾವಿದರು ‘ಕಮಲ್ ಶ್ರೀದೇವಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ವಿ.ಎ. ಸುನೀಲ್ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಕ್ರಿಯೇಟಿವ್ ಹೆಡ್ ಆಗಿ ರಾಜವರ್ಧನ್ ಅವರು ಕೆಲಸ ಮಾಡಿದ್ದಾರೆ. ಎಲ್ಲರ ಶ್ರಮದಿಂದಾಗಿ ಟ್ರೇಲರ್ ಉತ್ತಮವಾಗಿ ಮೂಡಿಬಂದಿದೆ.
‘ಕಮಲ್ ಶ್ರೀದೇವಿ’ ಟ್ರೇಲರ್:
‘ಕಮಲ್ ಶ್ರೀದೇವಿ’ ಚಿತ್ರದಲ್ಲಿ ಸಂಗೀತಾ ಭಟ್ ಅವರು ವೇಶ್ಯೆಯ ಪಾತ್ರ ಮಾಡಿದ್ದಾರೆ. ‘ಇಂಥ ಪಾತ್ರ ಮಾಡುವುದು ಕಷ್ಟ. ಅದಕ್ಕೆ ಧೈರ್ಯ ಬೇಕು. ತುಂಬ ಚೆನ್ನಾಗಿ ಅವರು ಅಭಿನಯಿಸಿದ್ದಾರೆ. ಅವರಿಗೆ ಎಲ್ಲ ಪ್ರಶಸ್ತಿ ಸಲ್ಲಬೇಕು’ ಎಂದು ರಾಜವರ್ಧನ್ ಅವರು ಹೇಳಿದರು. ಅದೇ ರೀತಿ, ಸಚಿನ್ ಅವರ ಕೆಲವನ್ನು ಕೂಡ ರಾಜವರ್ಧನ್ ಅವರು ಹೊಗಳಿದರು.
ಇದನ್ನೂ ಓದಿ: ‘ಕಮಲ್ ಶ್ರೀದೇವಿ’ ಸಿನಿಮಾಗೆ ಚಿತ್ರೀಕರಣ ಮುಕ್ತಾಯ; ಶೀರ್ಷಿಕೆಯಿಂದಲೇ ಗಮನ ಸೆಳೆದ ಚಿತ್ರ
ಸಚಿನ್ ಚಲುವರಾಯಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಪ್ರೇಕ್ಷಕರಿಗೆ ತಕ್ಕಂತೆ ನಾವು ಅಪ್‌ಡೇಟ್ ಆಗಿ ನಾವು ಸಿನಿಮಾ ಮಾಡಿದ್ದೇವೆ. ಎಲ್ಲ ಕಲಾವಿದರು ಈ ಸಿನಿಮಾಗೆ ತಮ್ಮ ಕೊಡುಗೆ ನೀಡಿದ್ದಾರೆ. ಎಲ್ಲರಿಂದಾಗಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಎಲ್ಲರ ಪಾತ್ರ ಭಿನ್ನವಾಗಿದೆ’ ಎಂದು ಅವರು ಹೇಳಿದರು. ಸಂಗೀತಾ ಭಟ್ ಮಾತನಾಡಿ, ‘ಟ್ರೇಲರ್ನಲ್ಲಿ ಹಲವಾರು ವಿಷಯ ಕಾಣಿಸಿದೆ. ಕಮಲ್ ಮತ್ತು ಶ್ರೀದೇವಿ ಎಂಬ ಎರಡು ಪಾತ್ರಗಳು ಈ ಸಿನಿಮಾದಲ್ಲಿ ಇವೆ. ನನ್ನನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿದಕ್ಕೆ ಧನ್ಯವಾದಗಳು’ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




