ಜಾಲಿ ಎಲ್ಎಲ್ಬಿ 3, ಅರಸಯ್ಯನ ಪ್ರೇಮ ಪ್ರಸಂಗ, ಕಮಲ್ ಶ್ರೀದೇವಿ ನಡುವೆ ಈ ವಾರ ಪೈಪೋಟಿ
ಪ್ರತಿ ಶುಕ್ರವಾರದಂತೆ ಈ ಶುಕ್ರವಾರ (ಸೆಪ್ಟೆಂಬರ್ 19) ಕೂಡ ಬಾಕ್ಸ್ ಆಫೀಸ್ನಲ್ಲಿ ಪೈಪೋಟಿ ಏರ್ಪಡುತ್ತಿದೆ. ಪ್ರೇಕ್ಷಕರಿಗೆ ಸಿನಿಮಾ ನೋಡಿ ಆನಂದಿಸಲು ಬೇರೆ ಬೇರೆ ಆಯ್ಕೆಗಳಿವೆ. ಕಾಮಿಡಿ, ಸಸ್ಪನ್ಸ್, ಥ್ರಿಲ್ಲರ್ ಬಯಸುವ ಪ್ರೇಕ್ಷಕರಿಗೆ ‘ಜಾಲಿ ಎಲ್ಎಲ್ಬಿ 3’, ‘ಅರಸಯ್ಯನ ಪ್ರೇಮ ಪ್ರಸಂಗ’, ‘ಕಮಲ್ ಶ್ರೀದೇವಿ’ ಮುಂತಾದ ಸಿನಿಮಾಗಳು ಬಿಡುಗಡೆ ಆಗುತ್ತಿವೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅವರು ಬಿಡುವಿಲ್ಲದಂತೆ ಕೆಲಸ ಮಾಡುತ್ತಾರೆ. ದಣಿವರಿಯದ ಅವರು ಸಮಯ ಪಾಲನೆ ವಿಚಾರದಲ್ಲಿ ಬಹಳ ಕಟ್ಟುನಿಟ್ಟು. ಹಾಗಾಗಿ ಸರಿಯಾಗಿ ಅಂದುಕೊಂಡ ಸಮಯಕ್ಕೆ ಅವರ ಸಿನಿಮಾಗಳ ಕೆಲಸಗಳು ಮುಕ್ತಾಯವಾಗಿ ಚಿತ್ರಮಂದಿರಕ್ಕೆ ಬರುತ್ತವೆ. 2025ರಲ್ಲಿ ಅಕ್ಷಯ್ ಕುಮಾರ್ ನಟಿಸಿರುವ ‘ಸ್ಕೈ ಫೋರ್ಸ್’, ‘ಹೌಸ್ಫುಲ್ 5’, ‘ಕೇಸರಿ: ಚಾಪ್ಟರ್ 2’ ಚಿತ್ರಗಳು ಈಗಾಗಲೇ ಬಿಡುಗಡೆ ಆಗಿವೆ. ಈ ವಾರ (ಸೆಪ್ಟೆಂಬರ್ 19) ಅವರ ‘ಜಾಲಿ ಎಲ್ಎಲ್ಬಿ 3’ (Jolly LLB 3) ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ.
‘ಜಾಲಿ ಎಲ್ಎಲ್ಬಿ 3’ ಸಿನಿಮಾದಲ್ಲಿ ಕೋರ್ಟ್ ರೂಮ್ ಡ್ರಾಮಾ ಇದೆ. ಅಕ್ಷಯ್ ಕುಮಾರ್ ಅವರು ಜೊತೆಗೆ ಅರ್ಷದ್ ವಾರ್ಸಿ ಕೂಡ ಅಭಿನಯಿಸಿದ್ದಾರೆ. ಅವರಿಬ್ಬರದ್ದೂ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವಿದೆ. ಇಬ್ಬರೂ ಕೂಡ ಲಾಯರ್ ಪಾತ್ರವನ್ನು ನಿಭಾಯಿಸಿದ್ದಾರೆ. ಚಿತ್ರದಲ್ಲಿ ಭರ್ಜರಿ ಕಾಮಿಡಿ ಇರಲಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷಿ ಸಿಕ್ಕಿದೆ. ಸುಭಾಷ್ ಕಪೂರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಈ ವಾರ ಬಿಡುಗಡೆ ಆಗುತ್ತಿರುವ ಸಿನಿಮಾಗಳಲ್ಲಿ ‘ಅರಸಯ್ಯನ ಪ್ರೇಮಪ್ರಸಂಗ’ ಚಿತ್ರ ಕೂಡ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಮಹಂತೇಶ್ ಹಿರೇಮಠ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಚಿತ್ರದ ಮೂಲಕ ಅವರು ಹೀರೋ ಆಗಿದ್ದಾರೆ. ಹಾಸ್ಯ ಪ್ರಧಾನ ಕಥೆಯನ್ನು ಈ ಸಿನಿಮಾ ಹೊಂದಿದೆ. ಟ್ರೇಲರ್ ನೋಡಿದ ಎಲ್ಲರಿಗೂ ಸಿನಿಮಾ ಮೇಲೆ ನಿರೀಕ್ಷೆ ಹುಟ್ಟಿದೆ. ಪ್ರೀಮಿಯರ್ ಶೋಗಳಲ್ಲಿ ಸಿನಿಮಾ ನೋಡಿದವರಿಂದ ಮೆಚ್ಚುಗೆ ಸಿಕ್ಕಿದೆ.
ಸಚಿನ್ ಚೆಲುವರಾಯಸ್ವಾಮಿ, ಸಂಗೀತಾ ಭಟ್, ಕಿಶೋರ್ ಮುಂತಾದವರು ನಟಿಸಿರುವ ‘ಕಮಲ್ ಶ್ರೀದೇವಿ’ ಸಿನಿಮಾ ತನ್ನ ಶೀರ್ಷಿಕೆಯಿಂದಲೇ ಕೌತುಕ ಮೂಡಿಸಿತ್ತು. ಟ್ರೇಲರ್ ಬಿಡುಗಡೆ ಆದ ಬಳಿಕ ಸಿನಿಮಾದ ಕಥೆಯ ಬಗ್ಗೆ ಸುಳಿವು ಸಿಕ್ಕಿತು. ಈ ಚಿತ್ರ ಕೂಡ ಸೆ.19ರಂದು ರಿಲೀಸ್ ಆಗುತ್ತಿದೆ. ಸುನಿಲ್ ಕುಮಾರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಾಜವರ್ಧನ್ ಅವರು ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ‘ಗುಟ್ಕಾ ತಿನ್ನೋದು ಕೆಟ್ಟದ್ದು’: ಜನರಿಗೆ ಸಂದೇಶ ನೀಡಿದ ನಟ ಅಕ್ಷಯ್ ಕುಮಾರ್
‘ಅಜೇಯ್: ದಿ ಅನ್ಟೋಲ್ಡ್ ಸ್ಟೋರಿ ಆಫ್ ಎ ಯೋಗಿ’, ‘ಸೋಲ್ ಮೇಟ್ಸ್’, ‘ಖಾಲಿಡಬ್ಬ’, ‘ಜೊತೆಯಾಗಿ ಹಿತವಾಗಿ’ ಮುಂತಾದ ಸಿನಿಮಾಗಳು ಕೂಡ ಸೆಪ್ಟೆಂಬರ್ 19ರಂದು ತೆರೆಕಾಣುತ್ತಿದೆ. ಯಾವ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂಬುದು ಶುಕ್ರವಾರ ಮೊದಲ ಶೋ ನಂತರ ತಿಳಿಯುತ್ತದೆ. ಎಲ್ಲ ಸಿನಿಮಾಗಳು ಒಂದಲ್ಲಾ ಒಂದು ರೀತಿಯಿಂದ ಪ್ರೇಕ್ಷಕರನ್ನು ಸೆಳೆಯಲು ಪ್ರಯತ್ನಿಸುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




