Ibbani Tabbida lleyali Review: ಇಬ್ಬನಿಯಂತೆ ತಂಪಾದರೂ ದೀರ್ಘ ಎನಿಸುವ ಎಮೋಷನಲ್ ಪ್ರೇಮಕಥೆ

|

Updated on: Sep 05, 2024 | 3:45 PM

ನಿರ್ಮಾಪಕನಾಗಿ ರಕ್ಷಿತ್​ ಶೆಟ್ಟಿ ಅವರು ಸಾಕಷ್ಟು ಭರವಸೆ ಇಟ್ಟುಕೊಂಡ ಸಿನಿಮಾ ‘ಇಬ್ಬನಿ ತಬ್ಬಿದ ಇಳೆಯಲಿ’ ಈ ವಾರ (ಸೆಪ್ಟೆಂಬರ್​ 5) ಬಿಡುಗಡೆ ಆಗಿದೆ. ಟ್ರೇಲರ್​ ಮೂಲಕ ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ಹೇಗಿದೆ ಎಂಬುದು ಬಹಿರಂಗ ಆಗಿದೆ. ಅಂಕಿತಾ ಅಮರ್​, ವಿಹಾನ್​, ಮಯೂರಿ ನಟರಾಜ್​ ಮುಖ್ಯಪಾತ್ರ ಮಾಡಿದ ಈ ಸಿನಿಮಾದ ವಿಮರ್ಶೆ ಇಲ್ಲಿದೆ..

Ibbani Tabbida lleyali Review: ಇಬ್ಬನಿಯಂತೆ ತಂಪಾದರೂ ದೀರ್ಘ ಎನಿಸುವ ಎಮೋಷನಲ್ ಪ್ರೇಮಕಥೆ
ಅಂಕಿತಾ ಅಮರ್​, ಮಯೂರಿ ನಟರಾಜ್, ವಿಹಾನ್
Follow us on

ಸಿನಿಮಾ: ಇಬ್ಬನಿ ತಬ್ಬಿದ ಎಳೆಯಲಿ. ನಿರ್ಮಾಣ: ಜಿಎಸ್​. ಗುಪ್ತಾ, ರಕ್ಷಿತ್​ ಶೆಟ್ಟಿ. ನಿರ್ದೇಶನ: ಚಂದ್ರಜಿತ್ ಬೆಳ್ಳಿಯಪ್ಪ. ಪಾತ್ರವರ್ಗ: ವಿಹಾನ್, ಅಂಕಿತಾ ಅಮರ್​, ಮಯೂರಿ ನಟರಾಜ್​, ಗಿರಿಜಾ ಶೆಟ್ಟರ್​ ಮುಂತಾದವರು. ಸ್ಟಾರ್​. 3/5

ಕನ್ನಡದ ಯುವ ನಟ ವಿಹಾನ್​ ಅವರು ಲವ್​ ಸ್ಟೋರಿ ಸಿನಿಮಾಗಳಿಂದ ಗಮನ ಸೆಳೆಯುತ್ತಾರೆ. ಈ ಬಾರಿ ಅವರು ‘ಇಬ್ಬನಿ ತಬ್ಬಿದ ಇಳಿಯಲಿ’ ಸಿನಿಮಾ ಮೂಲಕ ಮತ್ತೊಂದು ಪ್ರೇಮ್​ ಕಹಾನಿಯನ್ನು ಪ್ರೇಕ್ಷಕರ ಎದುರು ತಂದಿದ್ದಾರೆ. ಮೇಲ್ನೋಟಕ್ಕೆ ಇದೊಂದು ಮಾಮೂಲಿ ಕಥೆ. ಆದರೆ ಈ ಕಥೆಯನ್ನು ತುಂಬ ಭಾವನಾತ್ಮಕವಾಗಿ ಹೆಣೆದ ಕಾರಣಕ್ಕೆ ಕೊಂಚ ಸ್ಪೆಷಲ್​ ಎನಿಸಿಕೊಳ್ಳುತ್ತದೆ.

ಕಥೆ ಬಗ್ಗೆ ಹೇಳುವುದಾದರೆ, ಕಾಲೇಜಿನಲ್ಲಿ ನಾಯಕ ಸಿದ್ದಾರ್ಥ್​ ಅಶೋಕ್​ಗೆ ಅನಾಹಿತಾ ಎಂಬ ಹುಡುಗಿ ಮೇಲೆ ಲವ್​ ಅಟ್​ ಫಸ್ಟ್​ ಸೈಟ್​ ಆಗುತ್ತದೆ. ಆಕೆ ಯಾರು? ಹಿನ್ನೆಲೆ ಏನು? ಅವಳ ಇಷ್ಟ-ಕಷ್ಟ ಏನು ಎಂಬುದನ್ನು ತಿಳಿದುಕೊಳ್ಳುವ ಹಂಬಲ ಆತನಲ್ಲಿ ಬೆಳೆಯುತ್ತದೆ. ಹೇಗೋ ಪರಿಚಯ ಮಾಡಿಕೊಂಡ ನಂತರ ಸಲುಗೆ ಬೆಳೆಯುತ್ತದೆ. ಪ್ರಪೋಸ್​ ಮಾಡುವ ಸಮಯ ಬಂದಾಗ ಹೀರೋಗೆ ಶಾಕ್​ ಎದುರಾಗುತ್ತದೆ. ಅದೇನು ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕು.

ಇಷ್ಟಪಟ್ಟವಳಿಂದ ದೂರವಾಗಿ ಒಂದಷ್ಟು ವರ್ಷಗಳು ಕಳೆದರೂ ಕೂಡ ಸಿದ್ದಾರ್ಥ್​ಗೆ ಆಕೆಯ ನೆನಪು ಮಾಸುವುದೇ ಇಲ್ಲ. ಬೇರೆ ಹುಡುಗಿ ಜೊತೆ ಮದುವೆ ಫಿಕ್ಸ್​ ಆದರೂ ಹಳೆ ಹುಡುಗಿಯ ಮೇಲಿನ ಫೀಲಿಂಗ್​ ಕಡಿಮೆ ಆಗುವುದಿಲ್ಲ. ಅನಾಹಿತಾ ಎಲ್ಲಿದ್ದಾಳೆ ಎಂಬುದು ಕೂಡ ಆತನಿಗೆ ಈಗ ತಿಳಿದಿಲ್ಲ. ಆಕೆಯನ್ನು ಹುಡುಕಿಕೊಂಡು ಹೊರಟಾಗ ಎದುರಾಗುವುದು ಅತಿ ದೊಡ್ಡ ಟ್ವಿಸ್ಟ್​. ಅದನ್ನು ನೋಡಿ ಸಿನಿಮಾದಲ್ಲಿಯೇ ನೋಡಿದರೆ ಚೆನ್ನ. ಅಂತಿಮವಾಗಿ ಸಿದ್ದಾರ್ಥ್​ ಮದುವೆ ಆಗುವುದು ಯಾರನ್ನು ಎಂಬುದು ಕ್ಲೈಮ್ಯಾಕ್ಸ್ ಕೌತುಕ.

ಒಟ್ಟಾರೆ ಕಥೆಯಲ್ಲಿ ತುಂಬಾ ಫ್ರೆಶ್​ ಎನಿಸುವಂತಹ ಹೆಚ್ಚಿನ ಅಂಶಗಳು ಕಾಣಿಸಲ್ಲ. ಆದರೆ ಮುಖ್ಯ ಪಾತ್ರಗಳ ಪ್ರತಿ ಎಮೋಷನ್​ಗಳ ಮೇಲೂ ನಿರ್ದೇಶಕರು ಹೆಚ್ಚು ಒತ್ತು ನೀಡಿದ್ದಾರೆ. ಚಿಕ್ಕ ಚಿಕ್ಕ ಅಂಶಗಳನ್ನು ಕೂಡ ಬಹಳ ಕಾಳಜಿ ವಹಿಸಿ ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ. ಆ ಕಾರಣದಿಂದಲೇ ಸಿನಿಮಾದ ಅವಧಿ ಹೆಚ್ಚಾಗಿದೆ. ಹರಿಬರಿಯಲ್ಲಿ ಇರುವ ಪ್ರೇಕ್ಷಕರಿಗೆ ಇದು ಕಿರಿಕಿರಿ ಎನಿಸಬಹುದು. ಆದರೆ ಎಲ್ಲವನ್ನೂ ತಾಳ್ಮೆಯಿಂದ ಕಣ್ತುಂಬಿಕೊಳ್ಳುವ ಪ್ರೇಕ್ಷಕರಿಗೆ ಇಬ್ಬನಿಯ ರೀತಿ ಈ ಸಿನಿಮಾ ತಂಪಾದ ಅನುಭವ ನೀಡುತ್ತದೆ.

ಇಡೀ ಸಿನಿಮಾದಲ್ಲಿ ಹೆಚ್ಚು ಹೈಲೈಟ್​ ಆಗಿರುವುದೇ ಅಂಕಿರಾ ಅಮರ್​ ಮಾಡಿರುವ ಅನಾಹಿತಾ ಎಂಬ ಪಾತ್ರ. ಈ ಪಾತ್ರಕ್ಕೆ ಎರಡು ಶೇಡ್​ ಇದೆ. ಭಾವ ಲೋಕದಲ್ಲಿಯೇ ಹೆಚ್ಚಾಗಿ ಜೀವಿಸುವ ಅನಾಹಿತಾ ಸಾಹಿತ್ಯ ಪ್ರೇಮಿ. ಸದಾ ಕವಿತೆ ಬರೆಯುತ್ತಾ ಕಾಲ ಕಳೆಯುವ ಭಾವನಾ ಜೀವಿ ಆಕೆ. ಅಂಥ ಹುಡುಗಿಯ ಸೆಳೆತಕ್ಕೆ ಸಿಕ್ಕುವ ಸಿದ್ದಾರ್ಥ್​ ರಫ್​ ಆ್ಯಂಡ್​ ಟಫ್​ ಹುಡುಗ. ಹೀಗೆ ಎರಡು ಭಿನ್ನ ಗುಣಗಳಿರುವ ವ್ಯಕ್ತಿಗಳ ಪ್ರೀತಿಯನ್ನು ನಿರ್ದೇಶಕರು ಚಂದ್ರಜಿತ್​ ಬೆಳ್ಳಿಯಪ್ಪ ಕಟ್ಟಿಕೊಟ್ಟಿದ್ದಾರೆ. ನಟನೆಯಲ್ಲಿ ಅಂಕಿತಾ ಅಮರ್​ ಅವರಿಗೆ ಫುಲ್​ ಮಾರ್ಕ್​ ಸಲ್ಲುತ್ತದೆ. ಅವರು ಮಾತ್ರವಲ್ಲದೇ ವಿಹಾನ್​, ಮಯೂರಿ ನಟರಾಜ್​, ಗಿರಿಜಾ ಶೆಟ್ಟರ್​ ಮುಂತಾದವರು ಕೂಡ ಗಮನ ಸೆಳೆಯುವಂತೆ ನಟಿಸಿದ್ದಾರೆ.

ಇದನ್ನೂ ಓದಿ: Pepe Movie Review: ಹೊಡಿ-ಬಡಿ ಅವತಾರದಲ್ಲಿ ಬಂದ ‘ಪೆಪೆ’ ವಿನಯ್ ರಾಜ್​ಕುಮಾರ್​

ಇದು ಎಮೋಷನ್ಸ್​ಗೆ ಹೆಚ್ಚು ಒತ್ತು ನೀಡಿದ ಸಿನಿಮಾ ಆದ್ದರಿಂದ ಗಗನ್​ ಬಡೇರಿಯಾ ಅವರ ಸಂಗೀತ ಇಲ್ಲಿ ಮಹತ್ವದ ಪಾತ್ರ ವಹಿಸಿದೆ. ಹಾಡುಗಳು ಹಾಗೂ ಹಿನ್ನೆಲೆ ಸಂಗೀತದಿಂದಾಗಿ ಅವರು ದೃಶ್ಯಗಳ ಮೆರುಗು ಹೆಚ್ಚಿಸಿದ್ದಾರೆ. ಶ್ರೀವತ್ಸನ್​ ಸೆಲ್ವರಾಜನ್​ ಅವರ ಛಾಯಾಗ್ರಹಣ ಕೂಡ ಗಮನ ಸೆಳೆಯುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.