‘ಜೂನಿಯರ್’ ವಿಮರ್ಶೆ: ಹೀರೋ ಇಂದ, ಹೀರೋಗಾಗಿ, ಹೀರೋಗೋಸ್ಕರ

‘ಜೂನಿಯರ್’ ವಿಮರ್ಶೆ: ಹೀರೋ ಇಂದ, ಹೀರೋಗಾಗಿ, ಹೀರೋಗೋಸ್ಕರ
Junior
ಜೂನಿಯರ್​
U
  • Time - 147 Minutes
  • Released - 18 July 2025
  • Language - Kannada
  • Genre - Action, Drama, Family
Cast - ಕಿರೀಟಿ ರೆಡ್ಡಿ, ಶ್ರೀಲೀಲಾ, ಜೆನಿಲಿಯಾ ಡಿಸೋಜಾ, ರವಿಚಂದ್ರನ್, ಅಚ್ಯುತ್ ಕುಮಾರ್, ರಾವ್ ರಮೇಶ್
Director - ರಾಧಾಕೃಷ್ಣ ರೆಡ್ಡಿ
3
Critic's Rating
Updated By: Digi Tech Desk

Updated on: Jul 18, 2025 | 9:12 PM

ನಾಯಕ ಮತ್ತವನ ತಂಡ ಎಲ್ಲ ಆಟಗಳಲ್ಲಿ ಸೋತರು, ನಾಯಕ ಕಪ್ ಎತ್ತಿಕೊಂಡು ಬರುತ್ತಾನೆ. ಭಾರಿ ದೊಡ್ಡ ಕಾರ್ಪೊರೇಟ್ ಸಂಸ್ಥೆಯ ಸಿಇಓ ಒಬ್ಬರು ಸಿಎಸ್​ಆರ್ ಫಂಡ್ ಹಣ ಖರ್ಚು ಮಾಡಲು ಹಳ್ಳಿಗೆ ಬಂದು ನೆಲೆಸುತ್ತಾರೆ. ನಾಯಕ ಮತ್ತವನ ಗೆಳೆಯರಿಗೆ ಹಳ್ಳಿ ಮಂದಿ ಐಟಂ ಗರ್ಲ್ ಕರೆಸಿ ಪಾರ್ಟಿ ಕೊಡುತ್ತಾರೆ. ಹೀಗೆ ಪ್ರಾಕ್ಟಿಕಲ್ ಅಲ್ಲದ ಹಲವು ದೃಶ್ಯಗಳು ‘ಜೂನಿಯರ್’ ಸಿನಿಮಾನಲ್ಲಿ ನಡೆಯುತ್ತವೆ. ಆದರೆ ಆ ಎಲ್ಲ ಘಟನೆಗಳು ಘಟಿಸುವುದಕ್ಕೆ ಏಕೈಕ ಕಾರಣ ‘ಹೀರೋ’. ನಾಯಕನ ವಿವಿಧ ವ್ಯಕ್ತಿತ್ವ ಅನಾವರಣಕ್ಕೆ ಬೇಕಾದ ದೃಶ್ಯಗಳನ್ನು ಸೃಷ್ಟಿಸಿ ಅವನ್ನು ಒಂದಕ್ಕೊಂದು ಜೋಡಿಸಿ, ಅಲ್ಲಲ್ಲಿ ಸೆಂಟಿಮೆಂಟ್, ರೊಮ್ಯಾನ್ಸ್ ಮತ್ತು ಹಾಸ್ಯದ ಬೆಸುಗೆ ಹಾಕಿದ ಸಿನಿಮಾ ‘ಜೂನಿಯರ್’.

‘ಜೂನಿಯರ್’ ಕಿರೀಟಿ ರೆಡ್ಡಿಯ ಮೊದಲ ಸಿನಿಮಾ. ಜನಪ್ರಿಯ ರಾಜಕಾರಣಿಯ ಪುತ್ರನೊಬ್ಬ ಚಿತ್ರರಂಗಕ್ಕೆ ಎಂಟ್ರಿ ಕೊಡುವಾಗ ಎಷ್ಟು ಅದ್ಧೂರಿತನ ಇರಬೇಕೊ ಅಷ್ಟು ಅದ್ಧೂರಿತನ ‘ಜೂನಿಯರ್’ ಸಿನಿಮಾನಲ್ಲಿದೆ. ಗುಣಮಟ್ಟದ ಕ್ಯಾಮೆರಾ ಕೆಲಸ, ಅದ್ಧೂರಿತನವೇ ತುಂಬಿರುವ ಲೊಕೇಶನ್​ಗಳು, ಕಲರ್​ಫುಲ್ ಉಡುಗೆ-ತೊಡಗೆಗಳು, ಅದ್ಧೂರಿ ಕಾರುಗಳು. ಜೆನಿಲಿಯಾ ಡಿಸೋಜಾ, ರವಿಚಂದ್ರನ್, ರಾವ್ ರಮೇಶ್, ಶ್ರೀಲೀಲಾ, ಅಚ್ಯುತ್ ಕುಮಾರ್ ಅಂಥಹಾ ಭಾರಿ ದೊಡ್ಡ ತಾರಾಗಣ. ಪೀಟರ್ ಹೇನ್ಸ್, ಸೆಂಥಿಲ್ ಕುಮಾರ್, ದೇವಿಶ್ರೀಪ್ರಸಾದ್ ಇನ್ನೂ ಕೆಲವು ದಕ್ಷಿಣ ಭಾರತದ ಅತ್ಯುತ್ತಮ ತಂತ್ರಜ್ಞರು. ಎಲ್ಲರೂ ಒಟ್ಟು ಸೇರಿ ಕಿರೀಟಿಯ ರಂಗ ಪ್ರವೇಶಕ್ಕೆ ವೇದಿಕೆ ಸಜ್ಜು ಮಾಡಿದ್ದಾರೆ. ಈ ಎಲ್ಲರ ಕೆಲಸ ಬಿಡಿ-ಬಿಡಿಯಾಗಿ ಅತ್ಯುತ್ತಮವಾಗಿ ಆದರೆ ಒಟ್ಟಾಗಿ ಒಂದು ಸಿನಿಮಾ ಆಗಿ ಇನ್ನೂ ಉತ್ತಮ ಆಗಬಹುದಿತ್ತು.

ಹಾಗೆಂದು ಇದೊಂದು ವ್ಯರ್ಥ ಪ್ರಯತ್ನ ಎನ್ನುವಂತಿಲ್ಲ. ಸಿನಿಮಾನಲ್ಲಿ ಹಲವು ಧನಾತ್ಮಕ ಅಂಶಗಳು ಇವೆ. ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇರಿಸಿರುವ ಕಿರೀಟಿ, ಡ್ಯಾನ್ಸ್ ಮತ್ತು ಫೈಟ್ ದೃಶ್ಯಗಳಲ್ಲಿ ಅನುಭವಿಯಂತೆ ಕಾಣುತ್ತಾರೆ. ಇದಕ್ಕಾಗಿ ಸಾಕಷ್ಟು ತರಬೇತಿ ಪಡೆದಂತಿದೆ. ಸಿನಿಮಾದ ಮೊದಲ ಫೈಟ್ ಅಥವಾ ಫೈಟ್ ರೀತಿಯ ಚೇಸ್ ಚೆನ್ನಾಗಿದೆ. ಕಿರೀಟಿಯ ಡ್ಯಾನ್ಸ್ ಸಹ ಚೆನ್ನಾಗಿದೆ. ದೇವಿಶ್ರೀ ಪ್ರಸಾದ್ ಸಂಗೀತಕ್ಕೆ ತಕ್ಕಂತೆ ದೇಹವನ್ನು ಬಳುಕಿಸಿದ್ದಾರೆ. ಶ್ರೀಲೀಲಾ ಸಹ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಕಿರೀಟಿಯ ಅಭಿನಯವೂ ಚೆನ್ನಾಗಿದೆ. ಮುಂದಿನ ದಿನಗಳಲ್ಲಿ ಅವರ ನಟನೆ ಇನ್ನಷ್ಟು ಉತ್ತಮಗೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ:Ekka Movie Review: ಕಮರ್ಷಿಯಲ್ ಚೌಕಟ್ಟಿನೊಳಗೆ ಮನರಂಜನೆ ನೀಡುವ ‘ಎಕ್ಕ’

ಅಪ್ಪನೊಬ್ಬ ತನ್ನ ಇಬ್ಬರು ಮಕ್ಕಳನ್ನು ಅತಿಯಾಗಿ ಪ್ರೀತಿಸಿಯೂ ಪರಿಸ್ಥಿತಿಯ ಕಾರಣಕ್ಕೆ ಜೀವನ ಪಯಣದ ಬೇರೆ ಬೇರೆ ಹಂತದಲ್ಲಿ ಒಬ್ಬರನ್ನು ಪಡೆದುಕೊಂಡು ಮತ್ತೊಬ್ಬರನ್ನು ಕಳೆದುಕೊಳ್ಳುವ ಭಾವುಕ ಕತೆಯನ್ನು ಸಿನಿಮಾ ಒಳಗೊಂಡಿದೆ. ಅಪ್ಪನ ಅತಿಯಾದ ಪ್ರೀತಿಯಿಂದ ರೋಸಿಹೋಗಿ ಅದರಿಂದ ತಪ್ಪಿಸಿಕೊಂಡು ಹೋಗುವ ಮಗ, ಬಳಿಕ ಅಪ್ಪನ ಪ್ರೀತಿಯ ಮೌಲ್ಯವನ್ನು ಅರಿತು, ಅಪ್ಪ ಪರಿಸ್ಥಿತಿ ಕಾರಣಕ್ಕೆ ಮಾಡಿರುವ ತಪ್ಪನ್ನು ಸರಿ ಮಾಡಲು ಹೋಗುವುದು, ಈ ಪ್ರಯತ್ನದಲ್ಲಿ ಅಪ್ಪನನ್ನೇ ಕಳೆದುಕೊಳ್ಳುವುದು ಸಿನಿಮಾದ ಕತೆ. ಕತೆಯಾಗಿ ಇದು ಅದ್ಭುತವಾಗಿ. ತೆರೆಯ ಮೇಲೆಯೂ ಇದು ಪ್ರೇಕ್ಷಕನ ಮೇಲೆ ಪ್ರಭಾವ ಬೀರುತ್ತದೆ. ಕೆಲ ಸನ್ನಿವೇಶಗಳು ನೋಡುಗನನ್ನು ಭಾವುಕಗೊಳಿಸುತ್ತವೆ. ಆದರೆ ಕಾಡುವ ಗುಣ ಹೊಂದಿಲ್ಲ.

ದೊಡ್ಡ ಸಂಸ್ಥೆಯೊಂದರ ಬಲು ಶಿಸ್ತಿನ ಸಿಇಓ ಆಗಿ ಜೆನಿಲಿಯಾ ಡಿಸೋಜಾ ನಟಿಸಿದ್ದಾರೆ. ಅವರು ‘ಸತ್ಯ ಇನ್ ಲವ್’ ಸಿನಿಮಾನಲ್ಲಿ ನಟಿಸಿದಾಗ ಅವರಿಗೆ ಎಷ್ಟು ಸಂಭಾಷಣೆ ಇತ್ತೊ ಇಲ್ಲಿಯೂ ಬಹುತೇಕ ಅಷ್ಟೆ ಸಂಭಾಷಣೆ ಅವರಿಗಿದೆ. ಸಂಭಾಷಣೆ ಕಡಿಮೆ ಇದೆಯಾದರೂ ಜೆನಿಲಿಯಾ ತೆರೆಯ ಮೇಲೆ ಕಂಡಾಗಲೆಲ್ಲ ಅವರ ಸೌಂದರ್ಯ ಮತ್ತು ಗಂಭೀರ ನಟನೆ ಗಮನ ಸೆಳೆಯುತ್ತದೆ. ಇನ್ನು ರವಿಚಂದ್ರನ್ ಅವರದ್ದು ಬಹಳ ಪ್ರಮುಖ ಪಾತ್ರ. ಅವರ ಪಾತ್ರಕ್ಕೆ ಅವರು ನ್ಯಾಯ ಒದಗಿಸಿದ್ದಾರೆ. ನಾಯಕಿ ಶ್ರೀಲೀಲಾಗೆ ಹೆಚ್ಚಿನ ಕೆಲಸ ಇಲ್ಲ. ಇಂಟರ್ವೆಲ್ ಬಳಿಕವಂತೂ ಹಠಾತ್ತನೆ ಸಿನಿಮಾದಿಂದಲೇ ನಾಪತ್ತೆ ಆಗಿಬಿಡುತ್ತಾರೆ. ಮಧ್ಯಂತರದ ಬಳಿಕ ಹಾಡೊಂದರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಸಿನಿಮಾದ ಆರಂಭದಲ್ಲಿಯೇ ಕಿರಣ್ ಶ್ರೀನಿವಾಸ್ ಅವರನ್ನು ವಿಲನ್ ರೀತಿ ತೋರಿಸಲಾಗುತ್ತದೆ. ಆದರೆ ಕೊನೆಯ ವರೆಗೂ ಅವರ ವಿಲನ್​ಗಿರಿ ಮಾತ್ರ ಎಲ್ಲಿಯೂ ಕಾಣುವುದಿಲ್ಲ. ಕೊನೆಯಲ್ಲಿ ನಾಯಕನ ಭುಜದ ಮೇಲೆ ಕೈಹಾಕಿ ವಿರೋಧಿಯನ್ನು ಸಂತೈಸುವ ದೃಶ್ಯ ಚೆನ್ನಾಗಿದೆ. ಅಚ್ಯುತ್ ಕುಮಾರ್ ಕಡಿಮೆ ದೃಶ್ಯಗಳಲ್ಲಿ ಕಾಣಿಸಿದರೂ ನಟನೆಯಿಂದ ಗಮನ ಸೆಳೆದಿದ್ದಾರೆ.

ಇನ್ನು ನಾಯಕನ ಗೆಳೆಯರಾಗಿ ತೆಲುಗಿನ ನಟರಾದ ಹರ್ಷ, ಸತ್ಯ, ಸುಮನ್ ಶೆಟ್ಟಿ ಕನ್ನಡದ ಯೂಟ್ಯೂಬರ್ ಸುಧಾಕರ್ ಅವರುಗಳು ನಟಿಸಿದ್ದಾರೆ. ಹಾಸ್ಯಕಲಾವಿದರು ಹೆಚ್ಚಿಗೆ ಇದ್ದಾರಾದರೂ, ನಗು ಲಿಮಿಟೆಡ್ ಆಗಿಯೇ ಇದೆ. ನಟರು ಕಷ್ಟಪಟ್ಟು ಪ್ರಯತ್ನ ಮಾಡಿದ್ದಾರೆ ಆದರೆ ಸಂಭಾಷಣೆಯಲ್ಲಿ ಚುರುಕುತನ ಇಲ್ಲದೆ, ಆಂಗಿಕ ಅಭಿನಯದಿಂದಲೇ ಹಾಸ್ಯ ಹೊಮ್ಮಿಸುವ ಪ್ರಯತ್ನದ ಕಾರಣ ಹಲವು ಕಡೆ ಪಂಚ್​ಗಳು ವರ್ಕೌಟ್ ಆಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ‘ಜೂನಿಯರ್’ ಸಿನಿಮಾ ಕೆಲ ಕೊರತೆಗಳನ್ನು ಹೊಂದಿದ್ದರೂ ಸಹ ನೋಡಿಸಿಕೊಂಡು ಹೋಗುವ ಸಿನಿಮಾ. ಹೊಸ ನಟನೊಬ್ಬನ ಮೊದಲ ಪ್ರಯತ್ನವಾಗಿರುವ ಕಾರಣ ತುಸು ಮನ್ನಿಸಿ, ಸಹಿಸಿ ನೋಡಿದರೆ ಉತ್ತಮ ಪ್ರಯತ್ನವೇ ಎನ್ನಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Fri, 18 July 25