Kotigobba 3 Movie Review: ಕೋಟಿಗೊಬ್ಬನ ಅದ್ದೂರಿತನದಲ್ಲಿ ಒಂದಷ್ಟು ಮಿಂಚಿಂಗ್​, ಮತ್ತೊಂದಿಷ್ಟು ಮಿಸ್ಸಿಂಗ್​

|

Updated on: Oct 15, 2021 | 3:08 PM

Kotigobba 3 Movie Review: ಹಲವು ವಿಘ್ನಗಳನ್ನು ದಾಟಿ, ಒಂದು ದಿನ ತಡವಾಗಿ ‘ಕೋಟಿಗೊಬ್ಬ 3’ ತೆರೆಕಂಡಿದೆ. ಮುಂಜಾನೆಯಿಂದಲೇ ಫ್ಯಾನ್ಸ್​ ಸಂಭ್ರಮ ಮುಗಿಲುಮುಟ್ಟಿತ್ತು. ಹಾಗಾದರೆ, ಈ ಸಿನಿಮಾ ಹೇಗಿದೆ? ಕಿಚ್ಚ ಸುದೀಪ್​ ನಟನೆ, ಸಿನಿಮಾ ಕಥೆ ಹೇಗಿದೆ? ಆ ಎಲ್ಲಾ ಪ್ರಶ್ನೆಗೆ ಈ ವಿಮರ್ಶೆಯಲ್ಲಿ ಉತ್ತರವಿದೆ.

Kotigobba 3 Movie Review: ಕೋಟಿಗೊಬ್ಬನ ಅದ್ದೂರಿತನದಲ್ಲಿ ಒಂದಷ್ಟು ಮಿಂಚಿಂಗ್​, ಮತ್ತೊಂದಿಷ್ಟು ಮಿಸ್ಸಿಂಗ್​
ಸುದೀಪ್​
Follow us on

ಸಿನಿಮಾ: ಕೋಟಿಗೊಬ್ಬ 3

ಪಾತ್ರವರ್ಗ: ಸುದೀಪ್​, ಮಡೊನ್ನಾ, ರವಿ ಶಂಕರ್​ ಮುಂತಾದವರು

ನಿರ್ದೇಶನ: ಶಿವ ಕಾರ್ತಿಕ್​

ನಿರ್ಮಾಣ: ಸೂರಪ್ಪ ಬಾಬು

ಸ್ಟಾರ್​: 3 / 5

ಸತ್ಯ ಮತ್ತು ಶಿವ ಇಬ್ಬರೂ ಬೇರೆ ಅಲ್ಲ, ಇಬ್ಬರೂ ಒಬ್ಬರೇ ಅನ್ನೋದು ‘ಕೋಟಿಗೊಬ್ಬ 2’  ಸಿನಿಮಾದ ಹೈಲೈಟ್​ ಆಗಿತ್ತು. ಇದು ಸಾಕಷ್ಟು ಮನರಂಜನೆಯನ್ನೂ ನೀಡಿತ್ತು. ಆದರೆ, ‘ಕೋಟಿಗೊಬ್ಬ 3’ನಲ್ಲಿ ನಿರ್ದೇಶಕರು ಬೇರೆಯದೇ ಟ್ವಿಸ್ಟ್​ ಹಿಡಿದು ಬಂದಿದ್ದಾರೆ. ಇದು ಪ್ರೇಕ್ಷಕರ ತಲೆಗೂ ಹುಳ ಬಿಡುತ್ತದೆ.

ಸತ್ಯ (ಸುದೀಪ್​) ಅನಾಥಾಶ್ರಮ ನೋಡಿಕೊಳ್ಳುತ್ತಾ ಇರುತ್ತಾನೆ. ಅವನಿಗೆ ಅಲ್ಲಿರುವವರೆಲ್ಲರೂ ಮಕ್ಕಳೇ. ಎಲ್ಲರನ್ನೂ ನೋಡಿಕೊಳ್ಳುವ ಜವಾಬ್ದಾರಿ ಅವನದ್ದೇ. ಅನಾಥಾಶ್ರಮದ ಬಾಲಕಿಗೆಯೊಬ್ಬಳಿಗೆ ತೀವ್ರ ಅನಾರೋಗ್ಯ ಉಂಟಾಗಿರುತ್ತದೆ. ಹೀಗಾಗಿ, ಆಕೆಯನ್ನು ವಿದೇಶಕ್ಕೆ ಕರೆದುಕೊಂಡು ಹೋಗುತ್ತಾನೆ ಸತ್ಯ. ಆ ಸಿಟಿಯಲ್ಲಿ ಸಾಕಷ್ಟು ಸ್ಫೋಟಗಳು ಆಗುತ್ತವೆ. ಆ ಎಲ್ಲಾ ಆರೋಪಗಳು ಬರೋದು ಸತ್ಯನ ಮೇಲೆ. ಹಾಗಾದರೆ, ನಿಜವಾಗಲೂ ಇದನ್ನು ಸತ್ಯನೇ ಮಾಡಿರುತ್ತಾನಾ?  ಇದನ್ನು ಹುಡುಕಿ ಹೋದಾಗ ಕಥೆ ಬೇರೆ ದಿಕ್ಕಲ್ಲಿ ಸಾಗುತ್ತದೆ.

ಇಡೀ ಸಿನಿಮಾದಲ್ಲಿ ಹೈಲೈಟ್​ ಆಗುವ ಅಂಶ ಸಾಕಷ್ಟಿದೆ. ಆ್ಯಕ್ಷನ್​ ಪ್ರಿಯರಿಗೆ ಈ ಸಿನಿಮಾ ರಸದೌತಣ ಬಡಿಸಲಿದೆ. ಸಿನಿಮಾದ ಬಹುತೇಕ ಕಥೆ ಸಾಗೋದು ವಿದೇಶದಲ್ಲಿ. ಇದಕ್ಕೆ ಚಿತ್ರತಂಡ ಆಯ್ಕೆ ಮಾಡಿಕೊಂಡ ಲೊಕೇಷನ್​ಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತವೆ. ಇನ್ನು, ಚೇಸಿಂಗ್​ ದೃಶ್ಯಗಳು ಮೈ ನವಿರೇಳಿಸುತ್ತವೆ. ಬಿಗ್​ ಬಜೆಟ್​ ಚಿತ್ರವಾದ್ದರಿಂದ ಅದ್ದೂರಿತನಕ್ಕೆ ಎಲ್ಲಿಯೂ ಕೊರತೆ ಆಗಿಲ್ಲ. ಶೇಖರ್ ಚಂದ್ರು ಅವರ ಕ್ಯಾಮೆರಾ ಕೈಚಳಕ ಕಣ್ಣಿಗೆ ಹಬ್ಬದೂಟ ನೀಡುತ್ತದೆ. ಅರ್ಜುನ್ ಜನ್ಯಾ ಎಂದಿನಂತೆ ಸಂಗೀತದಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ನಿರ್ದೇಶಕ ಶಿವಕಾರ್ತಿಕ್​ ಮೊದಲ ಪ್ರಯತ್ನದಲ್ಲಿ ಒಂದು ಹಂತದವರೆಗೆ ಗೆದ್ದಿದ್ದಾರೆ.

ಇಡೀ ಸಿನಿಮಾದಲ್ಲಿ ಸುದೀಪ್​ ನಟನೆ ಹೈಲೈಟ್​ ಆಗುತ್ತದೆ. ಅವರಿಗೆ ಸಿನಿಮಾದಲ್ಲಿ ಹಲವು ಗೆಟಪ್​ಗಳಿವೆ. ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಸಿನಿಮಾದ ಆರಂಭದಲ್ಲೇ ಬರುವ ವಿಶೇಷ ಸಾಂಗ್​ನಲ್ಲಿ ಆಶಿಕಾ ಹೆಜ್ಜೆ ಹಾಕಿದ್ದು, ಹುಡುಗರ ಹಾರ್ಟ್​ಬೀಟ್​ ಹೆಚ್ಚುವಂತೆ ಮಾಡಿದ್ದಾರೆ. ಅವರು ಸೊಂಟ ಬಳುಕಿಸೋ ಶೈಲಿಗೆ ಚಿತ್ರಮಂದಿರದಲ್ಲಿ ಶಿಳ್ಳೆಗಳು ಬೀಳುತ್ತವೆ. ವಿಲನ್​ ಆಗಿ ನವಾಬ್​ ಶಾ ತಮ್ಮ ಗತ್ತನ್ನು ಮೆರೆದಿದ್ದಾರೆ. ನಟಿ ಮಡೊನ್ನಾ ಸೆಬಾಸ್ಟಿಯನ್​ ಗ್ಲಾಮರ್​ ಲುಕ್​ ವೀಕ್ಷಕರಿಗೆ ಇಷ್ಟವಾಗುತ್ತದೆ. ಬಾಲಿವುಡ್​ ಆ್ಯಕ್ಟರ್​ಗಳಾದ ಶ್ರದ್ಧಾ ದಾಸ್​, ಅಫ್ತಾಬ್​ ಶಿವದಾಸನಿ ಪಾತ್ರ ಹೆಚ್ಚು ಹೊತ್ತು ಕಾಣಿಸಿಕೊಳ್ಳುತ್ತದೆ.

ಹಾಗಾದರೆ, ಸಿನಿಮಾ ಅಚ್ಚುಕಟ್ಟಾಗಿ ಮೂಡಿ ಬಂದಿದೆಯಾ? ಎಲ್ಲವೂ ಪರ್ಫೆಕ್ಟ್​ ಆಗಿದೆಯೇ? ಎಂದು ಕೇಳಿದರೆ ಪ್ರೇಕ್ಷಕನಿಂದ ಇಲ್ಲ ಎನ್ನುವ ಉತ್ತರವೇ ಬರುತ್ತದೆ. ಸಿನಿಮಾದಲ್ಲಿ ಸಾಕಷ್ಟು ಕಡೆಗಳಲ್ಲಿ ಲಾಜಿಕ್​ಗಳನ್ನು ಮೂಟೆ ಕಟ್ಟಿ ಅಟ್ಟಕ್ಕೆ ಸೇರಿಸಲಾಗಿದೆ. ‘ಕೋಟಿಗೊಬ್ಬ 2’ ಸಿನಿಮಾಗೂ ‘ಕೋಟಿಗೊಬ್ಬ 3’ ಕಥೆಗೂ ಲಿಂಕ್​ ಕೊಡುವ ಪ್ರಯತ್ನ ನಡೆದಿದೆ. ಆದರೆ, ಕೆಲವೊಂದಷ್ಟು ಮುಖ್ಯ ಅಂಶಗಳು ಈ ಲಿಂಕ್​ನಲ್ಲಿ ಮಿಸ್​ ಆಗಿವೆ. ಸತ್ಯ ಅನ್ನೋ ಕ್ಯಾರೆಕ್ಟರ್​ ಇದರಲ್ಲೂ ಟ್ರಾವೆಲ್​ ಆಗಿದೆ. ಆದರೆ, ಸತ್ಯನ ಲವರ್​ ಶುಭಾ ( ನಿತ್ಯಾ ಮೆನನ್)​ ಸೇರಿ ಪ್ರಮುಖ ಪಾತ್ರಗಳು ಇಲ್ಲಿಗೆ ಬಂದಿಲ್ಲ.

ಕೆಲವು ಕಡೆಗಳಲ್ಲಿ ಸಿನಿಮಾ ಬೇಸರ ತರಿಸುತ್ತದೆ. ರವಿ ಶಂಕರ್ ಅದ್ಭುತ ನಟ ಎನ್ನುವುದನ್ನು ಮತ್ತೆ ಹೇಳಬೇಕಿಲ್ಲ. ಆದರೆ, ಈ ಸಿನಿಮಾದಲ್ಲಿ ಅವರ ನಟನೆ ಕೆಲವು ಕಡೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಅಚ್ಚರಿ ಎನಿಸುತ್ತದೆ. ಟ್ವಿಸ್ಟ್​ ಆ್ಯಂಡ್​ ಟರ್ನ್​ಗಳು ಹೆಚ್ಚಿದೆ ನಿಜ. ಆದರೆ, ಇದನ್ನು ಪ್ರೇಕ್ಷಕ ಸುಲಭವಾಗಿ ಊಹಿಸುತ್ತಾನೆ. ಹೀರೋನನ್ನು ಹೆಡೆಮುರಿ ಕಟ್ಟೋಕೆ ವಿರೋಧಿ ಗ್ಯಾಂಗ್​ನವರು ಅವನ ಆಪ್ತರನ್ನು ಕಿಡ್ನ್ಯಾಪ್​ ಮಾಡುವ ಹಳೆಯ ಟೆಕ್ನಿಕ್​ ಇಲ್ಲಿಯೂ ಬಳಕೆ ಆಗಿದೆ. ಕಥೆಯಲ್ಲಿ ಗಟ್ಟಿತನ ಇಲ್ಲ. ಆರಂಭದಲ್ಲಿ ಕಥೆ ಟೇಕ್​​ಆಫ್​ ಆಗುವವರೆಗೂ ಪ್ರೇಕ್ಷಕರು ಸ್ವಲ್ಪ ಸಹಿಸಿಕೊಳ್ಳಬೇಕು.

ಇದನ್ನೂ ಓದಿ: ಹೇಗಿದೆ ಕಿಚ್ಚ ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಮೊದಲಾರ್ಧ? ಇಲ್ಲಿದೆ ಫುಲ್​ ರಿಪೋರ್ಟ್​

Published On - 2:16 pm, Fri, 15 October 21