
ಒಂದರ ಹಿಂದೊಂದು ಎಲಿವೇಶನ್ ಸೀನ್ಗಳು, ಕಿವಿಗಡಚಿಕ್ಕುವ ಹಿನ್ನೆಲೆ ಸಂಗೀತ, ಹೀರೋನ ಸ್ಲೋ ಮೋಷನ್ ವಾಕ್, ಕೈಯಲ್ಲಿ ಬಂದೂಕು ಅಥವಾ ಕತ್ತಿ, ಭರ್ಜರಿ ಫೈಟಿಂಗುಗಳು, ಹೆಸರಿಗೊಬ್ಬ ಹೀರೋಯಿನ್, ಅತ್ಯಂತ ಹಿಂಸಾತ್ಮಕ ಪ್ರವೃತ್ತಿಯ ಕೆಲ ವಿಲನ್ಗಳು ಇಷ್ಟಿದ್ದರೆ ಸಾಕು ಸ್ಟಾರ್ ನಟನ ಸಿನಿಮಾ ಒಂದು ಸಿದ್ಧವಾದಂತೆ. ಇಷ್ಟಿದ್ದ ಮಾತ್ರಕ್ಕೆ ಸ್ಟಾರ್ ನಟನ ಸಿನಿಮಾ ಗೆದ್ದು ಬಿಡುತ್ತದೆ ಎಂದೇನೂ ಇಲ್ಲ. ಏಕೆಂದರೆ ಈ ಸಿದ್ಧ ಸೂತ್ರವನ್ನು ಅದ್ಧೂರಿಯಾಗಿ, ಆಧುನಿಕ ತಂತ್ರಜ್ಞಾನಗಳನ್ನೆಲ್ಲ ಬಳಸಿಕೊಂಡು ಅಭಿಮಾನಿಗಳಿಗೆ ಪ್ರಿಯವಾಗುವಂತೆ, ಎಲ್ಲೂ ಬೋರು ಹೊಡೆಯದಂತೆ ಕಟ್ಟಿಕೊಡಬೇಕು. ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾನಲ್ಲಿ ನಿರ್ದೇಶಕ ಸುಜಿತ್ ಆ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಸುಜಿತ್ ನಿರ್ದೇಶಿಸಿ, ಡಿವಿವಿ ದಾನಯ್ಯ ನಿರ್ಮಾಣ ಮಾಡಿ, ಪವನ್ ಕಲ್ಯಾಣ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಓಜಿ’ ಸಿನಿಮಾ ಬಿಡುಗಡೆ ಆಗಿದೆ. ಮೇಲೆ ಹೇಳಿದಂತೆ ನಿರ್ದೇಶಕ ಸುಜಿತ್, ಪವನ್ ಅಭಿಮಾನಿಗಳಿಗೆ ಏನು ಬೇಕಿತ್ತೊ ಅದನ್ನು ನೀಡಿದ್ದಾರೆ. ಚಿತ್ರಮಂದಿರದಲ್ಲಿ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹೊಡೆಯುವಂತೆ ಪ್ರತಿ ಹತ್ತು-ಹದಿನೈದು ನಿಮಿಷಗಳಿಗೊಮ್ಮೆ ಕ್ರಮವಾಗಿ ಎಲಿವೇಶನ್ ಸೀನುಗಳನ್ನು, ಆಕ್ಷನ್ ದೃಶ್ಯಗಳನ್ನು ಪೋಣಿಸಿದ್ದಾರೆ. ಸಿನಿಮಾನಲ್ಲಿ ಪವನ್ ಪಾತ್ರ ಹಾರುವುದಿಲ್ಲ ಎಂಬುದನ್ನು ಬಿಟ್ಟರೆ ಬಹುತೇಕ ಸೂಪರ್ ಹೀರೋ ರೀತಿಯೇ ಪವನ್ ಅವರನ್ನು ತೋರಿಸಲಾಗಿದೆ. ಎದುರಾಳಿಗಳು ಹಾರಿಸುವ ಗುಂಡುಗಳನ್ನು ಕತ್ತಿ ಬೀಸಿಯೇ ತಡೆದು ಬಿಡುತ್ತಾರೆ!
‘ಓಜಿ’ ಸಿನಿಮಾನಲ್ಲಿ ಕತೆ, ನಾಲ್ಕನೇ ಆದ್ಯತೆಯ ವಿಷಯ. ಮೊದಲ ಆದ್ಯತೆ ಪವನ್ ಕಲ್ಯಾಣ್ ಲುಕ್, ಸ್ಲೋ ಮೋಷನ್ ವಾಕುಗಳಿಗೆ, ಎರಡನೇ ಆದ್ಯತೆ ಆಕ್ಷನ್ ಸೀನುಗಳಿಗೆ, ಮೂರನೇ ಆದ್ಯತೆ ಹಿನ್ನೆಲೆ ಸಂಗೀತಕ್ಕೆ ನಾಲ್ಕನೇ ಆದ್ಯತೆ ಕತೆಗೆ. ‘ಓಜಿ’ ಸಿನಿಮಾ ಕತೆಯನ್ನು ಸರಳವಾಗಿ ವಿವರಿಸುವುದಾದರೆ, ಇದೊಂದು ‘ಒಳ್ಳೆಯ ಗ್ಯಾಂಗ್ಸ್ಸ್ಟರ್’ ಒಬ್ಬನ ಕತೆ. ಸಭ್ಯ ಉದ್ಯಮಿಯೊಬ್ಬನ ಬಲಗೈ ಭಂಟ ಈತ, ಮುಂಬೈನಲ್ಲಿ ಈತನದ್ದೇ ಹವಾ. ಈತನ ಕತ್ತಿ (ಕಠಾನ)ಗೆ ಸಾವಿರಾರು ದುರುಳರು ಬಲಿ ಆಗಿದ್ದಾರೆ. ಆದರೆ ತಾನು ಮಾಡದ ತಪ್ಪನ್ನು ತಲೆ ಮೇಲೆ ಹೊತ್ತುಕೊಂಡು ಆ ಸಭ್ಯ ಉದ್ಯಮಿ ಮುಂಬೈ ಬಿಟ್ಟು ಹೋಗುತ್ತಾನೆ. ಅದರೆ ಆ ಸಭ್ಯ ಉದ್ಯಮಿಗೆ ದುರುಳರಿಂದ ಸಂಕಷ್ಟ ಎದುರಾದಾಗ ಮತ್ತೆ ಮುಂಬೈಗೆ ಬರುತ್ತಾನೆ. ಮತ್ತೆ ದುಷ್ಟರ ಸಂಹಾರ ಮಾಡುತ್ತಾನೆ. ಅಂದಹಾಗೆ ಈ ‘ಒಳ್ಳೆಯ ಗ್ಯಾಂಗ್ಸ್ಸ್ಟರ್’ ಗೆ ಜಪಾನಿನ ಲಿಂಕು ಇದೆ. ಆ ಲಿಂಕು ಏನೆಂದು ಚಿತ್ರದಲ್ಲಿಯೇ ನೋಡಿ ತಿಳಿಯಬೇಕು.
ಇದನ್ನೂ ಓದಿ:‘ಓಜಿ’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಎದುರು ಅಬ್ಬರಿಸುವ ಕನ್ನಡಿಗ ಸೌರವ್ ಲೋಕೇಶ್
ಸಿನಿಮಾನಲ್ಲಿ ಪವನ್ ಕಲ್ಯಾಣ್ ಅವರದ್ದು ಗಂಭೀರ ಪಾತ್ರ. ಹೆಚ್ಚಿನ ಶ್ರಮ ತೆಗೆದುಕೊಳ್ಳದೆ ಪಾತ್ರವನ್ನು ನಿರ್ವಹಿಸಿದ್ದಾರೆ ಪವನ್ ಕಲ್ಯಾಣ್ಸಂ. ಭಾಷಣೆಗಳಂತೂ ಬಹಳ ಕಡಿಮೆ. ಮೊದಲಾರ್ಧದಲ್ಲಂತೂ ಪವನ್ ಕಲ್ಯಾಣ್ ಎಷ್ಟು ಬಾರಿ ಡೈಲಾಗ್ ಹೇಳಿದ್ದಾರೆಂದು ಕೈಬೆರಳುಗಳಲ್ಲಿ ಎಣಿಸಬಹುದು. ಕೆಲ ವರ್ಷಗಳ ಹಿಂದಿದ್ದ ‘ಎನರ್ಜೆಟಿಕ್’ ಪವನ್ ಕಲ್ಯಾಣ್ ಈ ಸಿನಿಮಾನಲ್ಲಿ ಮಿಸ್ಸಿಂಗ್, ಆದರೆ ಗ್ಯಾಂಗ್ಸ್ಟರ್ ಪಾತ್ರಕ್ಕೆ ತಕ್ಕಂತೆ ಒಳ್ಳೆಯ ಸ್ವಾಗ್ ತೋರಿಸಿದ್ದಾರೆ. ಆಕ್ಷನ್ ಸೀನ್ಗಳಲ್ಲಿಯೂ ಸಹ ಸಖತ್ ಆಗಿ ಮಿಂಚಿದ್ದಾರೆ.
ಪವನ್ ಬಿಟ್ಟರೆ ಸಿನಿಮಾನಲ್ಲಿ ಹೆಚ್ಚು ಗಮನ ಸೆಳೆಯುವುದು ಇಮ್ರಾನ್ ಹಶ್ಮಿ. ಪವನ್ ಅವರಂತೆಯೇ ಕೆಲವು ಎಲಿವೇಶನ್ ಸೀನ್ಗಳನ್ನು, ಭರ್ಜರಿ ಆಕ್ಷನ್, ಒಳ್ಳೆಯ ಹಿನ್ನೆಲೆ ಸಂಗೀತ ಇಮ್ರಾನ್ ಅವರಿಗೂ ಇದೆ. ಖಳನ ಪಾತ್ರದಲ್ಲಿ ಇಮ್ರಾನ್ ಹಶ್ಮಿ ಸಖತ್ ಆಗಿ ಮಿಂಚಿದ್ದಾರೆ. ಪ್ರಕಾಶ್ ರೈ ಅವರೂ ಸಹ ತಮ್ಮ ಪಾತ್ರವನ್ನು ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಪವನ್ ಕಲ್ಯಾಣ್ ಹಾಗೂ ಪ್ರಕಾಶ್ ರೈ ಒಟ್ಟಿಗೆ ನಟಿಸಿರುವುದು ಶ್ಲಾಘನಾರ್ಹ. ಶ್ರೆಯಾ ರೆಡ್ಡಿ ನಟನೆಯೂ ಚೆನ್ನಾಗಿದೆ, ಅವರ ‘ಸಲಾರ್’ ಸಿನಿಮಾದ ಪಾತ್ರವನ್ನೇ ಕಟ್, ಕಾಪಿ ಪೇಸ್ಟ್ ಮಾಡಿದಂತಿದೆ. ಅಲ್ಲಿ ವಿಲನ್, ಇಲ್ಲಿ ನಾಯಕನ ಪರ, ಅಷ್ಟೆ ವ್ಯತ್ಯಾಸ. ನಾಯಕಿ ಪ್ರಿಯಾಂಕಾ ಮೋಹನ್ ಮುದ್ದಾಗಿ ಕಾಣುತ್ತಾರೆ, ಆದರೆ ಅವರಿಗೆ ಹೆಚ್ಚು ದೃಶ್ಯಗಳಿಲ್ಲ. ಅರ್ಜುನ್ ದಾಸ್, ಭಜರಂಗಿ ಲೋಕಿ ಅವರುಗಳು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಸಿನಿಮಾಕ್ಕೆ ಎಸ್ ತಮನ್ ಸಂಗೀತ ನೀಡಿದ್ದು, ಅವರ ಅಬ್ಬರದ ಹಿನ್ನೆಲೆ ಸಂಗೀತ, ಪವನ್ ಅವರ ಪಾತ್ರವನ್ನು ಸಖತ್ ಆಗಿ ಎಲಿವೇಟ್ ಮಾಡಿದೆ. ಚಿತ್ರಮಂದಿರದಲ್ಲಿ ಬೀಳುವ ಶಿಳ್ಳೆ, ಚಪ್ಪಾಳೆಯಲ್ಲಿ ಅವರಿಗೂ ಪಾಲು ಸೇರಬೇಕು. ಕೆಲ ಹಾಡುಗಳು ಚೆನ್ನಾಗಿವೆ. ಆಕ್ಷನ್ ದೃಶ್ಯಗಳು ಅದ್ಭುತವಾಗಿವೆ. ಇಂಟರ್ವೆಲ್ ಫೈಟ್ ಮೈನವಿರೇಳಿಸುವಂತಿದೆ. ಸಿನಿಮಾದ ಸೆಟ್ಟುಗಳು ಅದ್ಧೂರಿಯಾಗಿವೆ. ಸೆಟ್ಟುಗಳಲ್ಲಿ ಶ್ರೀಮಂತಿಕೆ ಎದ್ದು ಕಾಣುತ್ತದೆ. ಒಟ್ಟಾರೆಯಾಗಿ ಇದು ಪವನ್ ಕಲ್ಯಾಣ್ ಅಭಿಮಾನಿಗಳಿಗಾಗಿಯೇ ಮಾಡಿರುವ ಸಿನಿಮಾ, ಅಭಿಮಾನಿಗಳು ನೋಡು ಖುಷಿ ಪಡಬಹುದಾದಂಥಹಾ ಸಿನಿಮಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:41 am, Thu, 25 September 25