Raghavendra Stores Review: ‘ರಾಘವೇಂದ್ರ ಸ್ಟೋರ್ಸ್​’ನಲ್ಲಿ ಸಂದೇಶಗಳ ರೀಸೈಕಲ್​; ಜಗ್ಗೇಶ್ ಅಭಿಮಾನಿಗಳಿಗೆ ನಗುವಿನ ರಸದೌತಣ

| Updated By: Digi Tech Desk

Updated on: Apr 27, 2023 | 12:38 PM

Raghavendra Stores Movie Review: ಜಗ್ಗೇಶ್​ ಸಿನಿಮಾ ಎಂದರೆ ಪ್ರೇಕ್ಷಕರು ಭರಪೂರ ಕಾಮಿಡಿ ಬಯಸುತ್ತಾರೆ. ಅದು ಈ ಚಿತ್ರದಲ್ಲಿದೆ. ಅದರ ಜೊತೆಗೆ ಸಂತೋಷ್​ ಆನಂದ್​ ರಾಮ್​ ಅವರು ಒಂದಷ್ಟು ಸಂದೇಶ ನೀಡಿದ್ದಾರೆ.

Raghavendra Stores Review: ‘ರಾಘವೇಂದ್ರ ಸ್ಟೋರ್ಸ್​’ನಲ್ಲಿ ಸಂದೇಶಗಳ ರೀಸೈಕಲ್​; ಜಗ್ಗೇಶ್ ಅಭಿಮಾನಿಗಳಿಗೆ ನಗುವಿನ ರಸದೌತಣ
ಜಗ್ಗೇಶ್
Follow us on

ಚಿತ್ರ: ರಾಘವೇಂದ್ರ ಸ್ಟೋರ್ಸ್

ನಿರ್ಮಾಣ: ಹೊಂಬಾಳೆ ಫಿಲ್ಮ್ಸ್​

ನಿರ್ದೇಶನ: ಸಂತೋಷ್​ ಆನಂದ್​ರಾಮ್​

ಪಾತ್ರವರ್ಗ: ಜಗ್ಗೇಶ್​, ಶ್ವೇತಾ ಶ್ರೀವಾತ್ಸವ್​, ದತ್ತಣ್ಣ, ಅಚ್ಯುತ್​ ಕುಮಾರ್​, ರವಿಶಂಕರ್​ ಗೌಡ, ಮಿತ್ರ ಮುಂತಾದವರು.

ಸ್ಟಾರ್: 3/5

ಭಾರತೀಯ ಚಿತ್ರರಂಗದಲ್ಲಿ ‘ಹೊಂಬಾಳೆ ಫಿಲ್ಮ್ಸ್​’ ಒಂದು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ಬೆಳೆದಿದೆ. ‘ಕೆಜಿಎಫ್​ 2’, ‘ಕಾಂತಾರ’ ರೀತಿಯ ಚಿತ್ರಗಳನ್ನು ನೀಡಿದ ಖ್ಯಾತಿ ಈ ಸಂಸ್ಥೆಗಿದೆ. ಅಂಥ ಸಿನಿಮಾಗಳ ನಡುವೆ ಸಿಂಪಲ್​ ಕಥಾಹಂದರದ ಚಿತ್ರಗಳು ಕೂಡ ಈ ಬ್ಯಾನರ್​ನಿಂದ ಮೂಡಿಬರುತ್ತವೆ ಎಂಬುದಕ್ಕೆ ‘ರಾಘವೇಂದ್ರ ಸ್ಟೋರ್ಸ್​’ ಚಿತ್ರವೇ ಸಾಕ್ಷಿ. ಈ ಸಿನಿಮಾಗೆ ಸಂತೋಷ್​ ಆನಂದ್​ರಾಮ್​ ನಿರ್ದೇಶನ ಮಾಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಜಗ್ಗೇಶ್​ ನಟಿಸಿದ್ದಾರೆ. ಸಾಮಾನ್ಯವಾಗಿ ಜಗ್ಗೇಶ್​ ಸಿನಿಮಾ ಎಂದರೆ ಪ್ರೇಕ್ಷಕರು ಭರಪೂರ ಕಾಮಿಡಿ ಬಯಸುತ್ತಾರೆ. ಅದು ‘ರಾಘವೇಂದ್ರ ಸ್ಟೋರ್ಸ್​’ ಮುಂದುವರಿದಿದೆ. ಅದರ ಜೊತೆಗೆ ಸಂತೋಷ್​ ಆನಂದ್​ ರಾಮ್​ ಅವರು ಒಂದಷ್ಟು ಸಂದೇಶಗಳನ್ನು ನೀಡುವ ಪ್ರಯತ್ನವನ್ನು ಕೂಡ ಈ ಸಿನಿಮಾದಲ್ಲಿ ಮಾಡಿದ್ದಾರೆ. ಒಟ್ಟಾರೆ ಚಿತ್ರ ಹೇಗಿದೆ ಎಂದು ತಿಳಿಯಲು ಈ ವಿಮರ್ಶೆ ಓದಿ.

ಕಥೆಯಲ್ಲ.. ಇದು ಹಯವದನನ ವ್ಯಥೆ:

ತಂದೆಯ ‘ರಾಘವೇಂದ್ರ ಸ್ಟೋರ್ಸ್​’ ಎಂಬ ಹೋಟೆಲ್​ ಅನ್ನು ನಡೆಸಿಕೊಂಡು ಹೋಗುತ್ತಿರುವ ಹಯವದನ ಎಂಬ ಪಾತ್ರದಲ್ಲಿ ಜಗ್ಗೇಶ್​ ಕಾಣಿಸಿಕೊಂಡಿದ್ದಾರೆ. ಹಯವದನನ ವಯಸ್ಸು 40 ದಾಟಿದರೂ ಮದುವೆ ಆಗಿಲ್ಲ. ಹೆಚ್ಚೂ-ಕಡಿಮೆ ಮದುವೆಯ ಚಿಂತೆಯನ್ನೇ ಬಿಟ್ಟಿರುವ ಅವನ ಮನದಲ್ಲಿ ಈಗ ಏಕಾಏಕಿ ಸಂಗಾತಿಯ ಬಯಕೆ ಮೂಡುತ್ತದೆ. ಮದುವೆಯಾಗಲು ಅವನು ಪಡುವ ಕಷ್ಟ ಅಷ್ಟಿಷ್ಟಲ್ಲ. ಹಾಗಾಗಿ ಇದನ್ನು ಅವರ ಕಥೆ ಅನ್ನೋದಕ್ಕಿಂತ ವ್ಯಥೆ ಎನ್ನುವುದೇ ಸರಿ. ಕಡೆಗೂ ಹಯವದನನಿಗೆ ಹುಡುಗಿ ಸಿಕ್ತಾಳಾ? ಸಿಕ್ಕರೂ ಮುಂದಿನ ಬಾಳು ಸರಾಗವಾಗಿ ಇರುತ್ತಾ? ಇದೆಲ್ಲ ಗೊತ್ತಾಗಬೇಕಿದ್ದರೆ ಪೂರ್ತಿ ಸಿನಿಮಾ ನೋಡಬೇಕು.

ನಗುಸುವ ಪ್ರಯತ್ನದಲ್ಲಿ ಸಂತೋಷ್​ ಆನಂದ್​ರಾಮ್​:

ಮಾಸ್​ ಅಂಶಗಳಿರುವ ಸಿನಿಮಾ ಮಾಡುವಲ್ಲಿ ಸಂತೋಷ್​ ಆನಂದ್​ರಾಮ್​ ಫೇಮಸ್​. ಆದರೆ ಈ ಬಾರಿ ‘ರಾಘವೇಂದ್ರ ಸ್ಟೋರ್ಸ್​’ ಮೂಲಕ ಅವರು ಕಾಮಿಡಿ ಪ್ರಯತ್ನಿಸಿದ್ದಾರೆ. ಆದರೆ ಇಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿರುವುದು ಜಗ್ಗೇಶ್​ ಅವರ ಮ್ಯಾನರಿಸಂ. ಈ ಚಿತ್ರದ ಒಟ್ಟಾರೆ ಕಥೆಗೆ ನಗು ಉಕ್ಕಿಸುವ ಗುಣ ಕಮ್ಮಿ ಇದೆ. ಆದರೆ ಆ ಕೊರತೆಯನ್ನು ಜಗ್ಗೇಶ್​ ಅವರು ತಮ್ಮ ಮ್ಯಾನರಿಸಂ ಮೂಲಕ ಸರಿದೂಗಿಸಿದ್ದಾರೆ. ಇಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಆ ಕಾರಣಕ್ಕಾಗಿ ಅಪ್ಪಟ ಜಗ್ಗೇಶ್​ ಅಭಿಮಾನಿಗಳಿಗೆ ಈ ಚಿತ್ರ ಇಷ್ಟ ಆಗಲಿದೆ.

ಸವಕಲು ಎನಿಸುವ ಪ್ರಸ್ತದ ಪ್ರಸಂಗ:

ಮದುವೆಯಾದ ನವ ದಂಪತಿಯನ್ನು ಒಟ್ಟಿಗೆ ಸೇರಲು ಬಿಡದಿದ್ದರೆ ಏನೆಲ್ಲ ತಮಾಷೆ ಪ್ರಸಂಗಗಳು ನಡೆಯಬಹುದು ಎಂಬುದನ್ನು ಈಗಾಗಲೇ ಅನೇಕ ಸಿನಿಮಾಗಳಲ್ಲಿ ಪ್ರೇಕ್ಷಕರು ನೋಡಿದ್ದಾಗಿದೆ. ಅದೇ ಎಳೆಯನ್ನು ಇಟ್ಟುಕೊಂಡು ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾದ ಮೊದಲಾರ್ಧವನ್ನು ಕಟ್ಟಿಕೊಡಲಾಗಿದೆ. ದ್ವಿತೀಯಾರ್ಧದ ಕೆಲವು ದೃಶ್ಯಗಳಲ್ಲೂ ಅದು ಮುಂದುವರಿಯುತ್ತದೆ. ಹಾಗಾಗಿ ಸಂಪೂರ್ಣ ಹೊಸತನವೇನೂ ಈ ಚಿತ್ರದಲ್ಲಿ ಸಿಕ್ಕುವುದಿಲ್ಲ. ಪ್ರಸ್ತಕ್ಕಾಗಿ ಆಸ್ಪತ್ರೆಯ ಖಾಲಿ ವಾರ್ಡ್​ ಸಿಕ್ಕರೂ ಪರವಾಗಿಲ್ಲ ಎನ್ನುವ ಹಯವದನನ ವರ್ತನೆಗಳು ಕೆಲವೊಮ್ಮೆ ಮಿತಿ ಮೀರಿತೇನೋ ಎನಿಸುತ್ತದೆ. ಆದರೆ ಕ್ಲೈಮ್ಯಾಕ್ಸ್​ ವೇಳೆಗೆ ಸಿನಿಮಾದ ಕಥೆ ಬೇರೆ ತಿರುವು ಪಡೆದುಕೊಳ್ಳುತ್ತದೆ.

ಕ್ಲೈಮ್ಯಾಕ್ಸ್​ನಲ್ಲಿ ಎಮೋಷನ್ಸ್​:

ಇಡೀ ಸಿನಿಮಾವನ್ನು ಜಗ್ಗೇಶ್​ ಆವರಿಸಿಕೊಂಡಿದ್ದಾರೆ. ಇನ್ನುಳಿದ ಪಾತ್ರಗಳಿಗೆ ಹಿತ-ಮಿತವಾಗಿ ಸ್ಕೋಪ್​ ಸಿಕ್ಕಿದೆ. ನಟಿ ಶ್ವೇತಾ ಶ್ರೀವಾತ್ಸವ್ ಅವರು ಸಿಕ್ಕ ಅವಕಾಶದಲ್ಲಿ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಆಗೊಮ್ಮೆ ಈಗೊಮ್ಮೆ ಬಂದುಹೋಗುವ ಪಾತ್ರ ಅಚ್ಯುತ್​ ಕುಮಾರ್​ ಅವರದ್ದು. ಕ್ಲೈಮ್ಯಾಕ್ಸ್​ನಲ್ಲಿ ಎಮೋಷನ್ಸ್​ ಬೆರೆಸುವ ಸೂತ್ರವನ್ನು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಅನಾಥಾಶ್ರಮಕ್ಕೆ ಸಂಬಂಧಿಸಿದ ಕೆಲವು ಹಳೇ ಸಂದೇಶಗಳನ್ನೇ ರೀಸೈಕಲ್​ ಮಾಡಿ ಮತ್ತೊಮ್ಮೆ ಪ್ರೇಕ್ಷಕರಿಗೆ ಪರಿಚಯಿಸಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:12 pm, Thu, 27 April 23