GGVV Review: ಹೀಗೂ ಇರಬಹುದಾ ಕ್ರೈಮ್​ ಲೋಕ? ಇದು ರಾಜ್​ ಬಿ. ಶೆಟ್ಟಿ ಇನ್ನೊಂದು ಮುಖ

|

Updated on: Nov 19, 2021 | 12:36 PM

Garuda Gamana Vrishabha Vahana: ಎಲ್ಲ ಸಿದ್ಧ ಮಾದರಿಗಳನ್ನು ಮುರಿದು, ಹೊಸದೇನನ್ನೋ ಕಟ್ಟಿಕೊಡಲು ಬಯಸುತ್ತಾರೆ ನಿರ್ದೇಶಕ ರಾಜ್​ ಬಿ. ಶೆಟ್ಟಿ. ಕಥೆಯನ್ನು ಸಾಧ್ಯವಾದಷ್ಟು ನೈಜವಾಗಿ ನಿರೂಪಿಸಲು ಪ್ರಯತ್ನಿಸಿರುವ ಕಾರಣಕ್ಕಾಗಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ವಿಶೇಷ ಎನಿಸುತ್ತದೆ.

GGVV Review: ಹೀಗೂ ಇರಬಹುದಾ ಕ್ರೈಮ್​ ಲೋಕ? ಇದು ರಾಜ್​ ಬಿ. ಶೆಟ್ಟಿ ಇನ್ನೊಂದು ಮುಖ
ಗರುಡ ಗಮನ ವೃಷಭ ವಾಹನ
Follow us on

ಚಿತ್ರ: ಗರುಡ ಗಮನ ವೃಷಭ ವಾಹನ
ನಿರ್ಮಾಣ: ಕಾಫಿ ಗ್ಯಾಂಗ್​ ಸ್ಡುಡಿಯೋ, ಲೈಟರ್​ ಬುದ್ಧ ಫಿಲ್ಮ್ಸ್​
ನಿರ್ದೇಶನ: ರಾಜ್​ ಬಿ. ಶೆಟ್ಟಿ
ಪಾತ್ರವರ್ಗ: ರಾಜ್​ ಬಿ. ಶೆಟ್ಟಿ, ರಿಷಬ್​ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು.
ಸ್ಟಾರ್​: 3/5

ಕನ್ನಡ ಚಿತ್ರರಂಗದಲ್ಲಿ ರಾಜ್​ ಬಿ. ಶೆಟ್ಟಿ (Raj B Shetty) ಅವರು ಭರವಸೆಯ ನಟ ಮತ್ತು ನಿರ್ದೇಶಕ ಎನಿಸಿಕೊಂಡಿದ್ದಾರೆ. ಮೊದಲಿಗೆ ‘ಒಂದು ಮೊಟ್ಟೆಯ ಕಥೆ’ ಸಿನಿಮಾ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಅವರು ಈಗ ಬೇರೊಂದು ಲೋಕವನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ. ರಾಜ್​ ಬಿ. ಶೆಟ್ಟಿ ನಿರ್ದೇಶನ ಮಾಡಿರುವ ಎರಡನೇ ಸಿನಿಮಾ ‘ಗರುಡ ಗಮನ ವೃಷಭ ವಾಹನ’ (Garuda Gamana Vrishabha Vahana) ಎಲ್ಲೆಡೆ ಬಿಡುಗಡೆ ಆಗಿದೆ. ರಿಷಬ್​ ಶೆಟ್ಟಿ (Rishab Shetty) ಕೂಡ ಇದರಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಟ್ರೇಲರ್​ ಮೂಲಕವೇ ಈ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿತ್ತು. ‘ಡೀಮನ್​ ಇನ್​ ಮೀ’ (Demon in Me) ಹಾಡು ಕೂಡ ಈ ಚಿತ್ರದ ಹೈಪ್​ ಹೆಚ್ಚಲು ಕಾರಣ ಆಗಿತ್ತು. ಹಾಗಾದರೆ ಒಟ್ಟಾರೆಯಾಗಿ ‘ಗರುಡ ಗಮನ ವೃಷಭ ವಾಹನ’ ಹೇಗಿದೆ ಎಂಬ ವಿಮರ್ಶೆ (GGVV Movie Review) ಇಲ್ಲಿದೆ..

ಚಿತ್ರರಂಗದಲ್ಲಿ ಕೆಲವೊಂದು ಸಿದ್ಧ ಮಾದರಿಗಳು ಬೇರೂರಿವೆ. ಹೀರೋ, ಹೀರೋಯಿನ್​ ಅಥವಾ ವಿಲನ್​ ಅಂದ್ರೆ ಹೀಗೆಯೇ ಇರಬೇಕು, ರೌಡಿಸಂ ಸಿನಿಮಾದಲ್ಲಿ ನಟಿಸುವ ಕಲಾವಿದರು ಹೀಗೆಯೇ ಇರಬೇಕು, ಕ್ರೈಮ್​ ಲೋಕದಲ್ಲಿ ಕಾದಾಟಗಳು ಹೀಗೆಯೇ ನಡೆಯುತ್ತವೆ ಎಂಬಿತ್ಯಾದಿ ಅಂಶಗಳನ್ನು ಎಷ್ಟೋ ದಶಕಗಳಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡಲಾಗಿದೆ. ಆದರೆ ಆ ಎಲ್ಲ ಸಿದ್ಧ ಮಾದರಿಗಳನ್ನು ಮುರಿದು, ಹೊಸದೇನನ್ನೋ ಕಟ್ಟಿಕೊಡಲು ಬಯಸುತ್ತಾರೆ ನಿರ್ದೇಶಕ ರಾಜ್​ ಬಿ. ಶೆಟ್ಟಿ. ಕಥೆಯನ್ನು ಸಾಧ್ಯವಾದಷ್ಟು ನೈಜವಾಗಿ ನಿರೂಪಿಸಲು ಪ್ರಯತ್ನಿಸಿರುವ ಕಾರಣಕ್ಕಾಗಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ವಿಶೇಷ ಎನಿಸುತ್ತದೆ. ಒಬ್ಬ ರೌಡಿ ಹೀಗೂ ಇರಬಹುದಾ ಎಂಬ ಅಚ್ಚರಿಯ ಪ್ರಶ್ನೆಯನ್ನು ಮೂಡಿಸಿ, ‘ಹೌದು.. ಇರಬಹುದು’ ಎಂಬ ಉತ್ತರವನ್ನೂ ನೀಡುತ್ತದೆ ಈ ಸಿನಿಮಾ.

ಇದೊಂದು ಪಕ್ಕಾ ಅಂಡರ್​ವರ್ಲ್ಡ್​ ಕಥಾಹಂದರ ಇರುವ ಸಿನಿಮಾ. ಇಲ್ಲಿ ರಾಜ್​ ಬಿ. ಶೆಟ್ಟಿ ಓರ್ವ ಹಂತಕನಾಗಿ ಕಾಣಿಸಿಕೊಂಡಿದ್ದಾರೆ. ಶಿವ ಎಂಬ ಪಾತ್ರದಲ್ಲಿ ಅವರು ಪರಕಾಯ ಪ್ರವೇಶ ಮಾಡಿದ್ದಾರೆ. ಶಿವ ಆ ರೀತಿಯ ಕ್ರೂರ ವ್ಯಕ್ತಿ ಆಗಲು ಅವನ ಬಾಲ್ಯದಲ್ಲಿ ನಡೆದಿರುವ ಘಟನೆಗಳೇ ಕಾರಣ. ಅದೇನು ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕು. ಶಿವನಿಗೆ ಹರಿ (ರಿಷಬ್​ ಶೆಟ್ಟಿ) ಜೊತೆಯಾಗಿ ನಿಲ್ಲುತ್ತಾನೆ. ಒಂದರಮೇಲೊಂದು ಕೊಲೆ ಮಾಡುವ ಈ ಶಿವ-ಹರಿಗೆ ಅಂತ್ಯ ಇಲ್ಲವೇ? ಇದ್ದರೆ ಅದು ಹೇಗಿರುತ್ತದೇ? ಇದು ಈ ಸಿನಿಮಾದ ಒನ್​ಲೈನ್​ ಕಥೆ.

ಇಡೀ ಚಿತ್ರವನ್ನು ಮಂಗಳೂರಿನ ಹಿನ್ನೆಲೆಯಲ್ಲಿ ಕಟ್ಟಿಕೊಡಲಾಗಿದೆ. ಅದಕ್ಕೆ ತಕ್ಕಂತೆಯೇ ತುಳು ಮಿಶ್ರಿತ ಕನ್ನಡದ ಸಂಭಾಷಣೆಗಳಿವೆ. ನಟನೆಯಲ್ಲಿ ರಾಜ್​ ಬಿ. ಶೆಟ್ಟಿ ಇನ್ನೊಂದು ಮುಖವನ್ನೇ ತೋರಿಸಿದ್ದಾರೆ. ಎಷ್ಟೋ ವರ್ಷಗಳ ಕೋಪವನ್ನು ಒಮ್ಮೆಲೇ ಸ್ಫೋಟಿಸುವ ವ್ಯಕ್ತಿಯಾಗಿ ಅವರು ಗಮನ ಸೆಳೆಯುತ್ತಾರೆ. ಎಂಥಾ ಪಾತ್ರಕ್ಕೂ ತಾವು ಸೈ ಎಂಬುದನ್ನು ಅವರು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಅವರ ನಟನೆಗೆ ಫುಲ್​ ಮಾರ್ಕ್ಸ್​ ಸಿಗಲೇಬೇಕು. ಅದೇ ರೀತಿ ರಿಷಬ್​ ಶೆಟ್ಟಿ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಕೂಡ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ.

ತಾಂತ್ರಿಕವಾಗಿಯೂ ‘ಗರುಡ ಗಮನ ವೃಷಭ ವಾಹನ’ ಚಿತ್ರ ಗುಣಮಟ್ಟ ಕಾಪಾಡಿಕೊಂಡಿದೆ. ಪ್ರವೀಣ್​ ಶ್ರಿಯಾನ್ ಅವರ ಛಾಯಾಗ್ರಹಣ, ಮಿಥುನ್​ ಮುಕುಂದನ್​ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಈ ಸಿನಿಮಾದಲ್ಲಿ ವಿಶೇಷವಾಗಿ ಆಕರ್ಷಿಸುತ್ತದೆ. ಅಂದಹಾಗೆ, ಇದು ಸೆನ್ಸಾರ್​ ಮಂಡಳಿಯಿಂದ ‘ಎ’ ಪ್ರಮಾಣಪತ್ರ ಪಡೆದಿರುವ ಸಿನಿಮಾ. ಹಾಗಾಗಿ 18 ವರ್ಷಕ್ಕಿಂತ ಕಿರಿಯ ವಯಸ್ಸಿನ ಪ್ರೇಕ್ಷಕರಿಗೆ ಇದನ್ನು ವೀಕ್ಷಿಸಲು ಅವಕಾಶ ಇಲ್ಲ. ಅಷ್ಟರಮಟ್ಟಿಗೆ ಕ್ರೌರ್ಯ ಮತ್ತು ರಕ್ತವನ್ನು ಹಸಿ ಹಸಿಯಾಗಿ ಕಟ್ಟಿಕೊಡಲಾಗಿದೆ. ಕೆಲವು ಕಡೆಗಳಲ್ಲಿ ಅನಗತ್ಯವಾಗಿ ಕಥೆಯನ್ನು ಎಳೆದಾಡಲಾಗಿದೆ ಎನಿಸುತ್ತದೆ. ಅದನ್ನು ತಪ್ಪಿಸಿದ್ದರೆ ಸಿನಿಮಾದ ಅವಧಿಯನ್ನು ಇನ್ನಷ್ಟು ತಗ್ಗಿಸಬಹುದಿತ್ತು. ಚಿಕ್ಕ ಮಕ್ಕಳನ್ನು ಹಿಂಸೆಗೆ ಪ್ರಚೋದಿಸುವಂತಹ ದೃಶ್ಯವನ್ನೂ ಸೇರಿದಂತೆ ಕೆಲವು ಅಂಶಗಳ ಬಗ್ಗೆ ನಿರ್ದೇಶಕರು ಎಚ್ಚರಿಕೆ ವಹಿಸಿದ್ದರೆ ಸಿನಿಮಾದ ತೂಕ ಮತ್ತಷ್ಟು ಹೆಚ್ಚುತ್ತಿತ್ತು.

ಇದನ್ನೂ ಓದಿ:

ಬಹುನಿರೀಕ್ಷಿತ 3 ಕನ್ನಡ ಸಿನಿಮಾಗಳು ರಿಲೀಸ್​; ಈ ಚಿತ್ರಗಳ ವಿಶೇಷತೆ ಏನು?

Salaga Movie Review: ‘ಸಲಗ’ ತುಂಬಾ ರಗಡ್​ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್​ಗೆ ಮಾಸ್​ ಪ್ರೇಕ್ಷಕರೇ ಟಾರ್ಗೆಟ್​

Published On - 12:19 pm, Fri, 19 November 21