Salaga Movie Review: ‘ಸಲಗ’ ತುಂಬಾ ರಗಡ್ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್ಗೆ ಮಾಸ್ ಪ್ರೇಕ್ಷಕರೇ ಟಾರ್ಗೆಟ್
ಸಲಗ ಚಿತ್ರ ವಿಮರ್ಶೆ: ಈ ಚಿತ್ರಕ್ಕೆ ದುನಿಯಾ ವಿಜಯ್ ಹೀರೋ ಆಗಿದ್ದರೂ ಕೂಡ, ಅವರು ಬೇರೆ ಎಲ್ಲ ಕಲಾವಿದರಿಗೂ ಸೂಕ್ತ ಮನ್ನಣೆ ನೀಡಿದ್ದಾರೆ. ಪ್ರಮುಖವಾದ ಎಲ್ಲ ಪಾತ್ರಗಳಿಗೆ ಅಗತ್ಯ ಸ್ಕ್ರೀನ್ ಸ್ಪೇಸ್ ನೀಡಿದ್ದಾರೆ. ಒಟ್ಟಾರೆ ಸಿನಿಮಾ ಮಾಸ್ ಆಗಿ ಮೂಡಿಬಂದಿದೆ.
ಚಿತ್ರ: ಸಲಗ ನಿರ್ಮಾಣ: ಕೆಪಿ ಶ್ರೀಕಾಂತ್ ನಿರ್ದೇಶನ: ದುನಿಯಾ ವಿಜಯ್ ಪಾತ್ರವರ್ಗ: ದುನಿಯಾ ವಿಜಯ್, ಸಂಜನಾ ಆನಂದ್, ಡಾಲಿ ಧನಂಜಯ, ಶ್ರೀಧರ್ ಮುಂತಾದವರು. ಸ್ಟಾರ್: 3.5 / 5
‘ಸಲಗ’ ಸಿನಿಮಾ ಮೇಲೆ ದುನಿಯಾ ವಿಜಯ್ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯನ್ನು ವಿಜಯ್ ಹುಸಿಯಾಗಿಸಿಲ್ಲ. ತಮ್ಮ ಅಭಿಮಾನಿಗಳು ಏನು ಬಯಸುತ್ತಾರೋ ಅದನ್ನು ಅವರು ಅಚ್ಚುಕಟ್ಟಾಗಿ ತೆರೆಮೇಲೆ ತಂದಿದ್ದಾರೆ. ಇಷ್ಟು ದಿನ ಕೇವಲ ಹೀರೋ ಆಗಿ ಜನಮೆಚ್ಚುಗೆ ಗಳಿಸಿದ್ದ ಅವರು ‘ಸಲಗ’ ಸಿನಿಮಾದಿಂದ ತಾವೊಬ್ಬ ಉತ್ತಮ ನಿರ್ದೇಶಕ ಎಂಬುದನ್ನು ಕೂಡ ಸಾಬೀತುಪಡಿಸಿದ್ದಾರೆ.
ಅಂಡರ್ವರ್ಲ್ಡ್ ಲೋಕದ ಕಥೆ
ಇದು ಪಕ್ಕಾ ಭೂಗತಲೋಕದ ಕಥೆಯುಳ್ಳ ಸಿನಿಮಾ. ಇದರಲ್ಲೊಂದು ಸೇಡಿನ ಕಥೆ ಇದೆ. ಇಂಥ ಎಳೆ ಇಟ್ಟುಕೊಂಡು ಈಗಾಗಲೇ ಅನೇಕ ಸಿನಿಮಾಗಳು ಬಂದಿದ್ದರೂ ಕೂಡ ಅದ್ದೂರಿ ಮೇಕಿಂಗ್ನಿಂದಾಗಿ ದುನಿಯಾ ವಿಜಯ್ ಗಮನ ಸೆಳೆಯುತ್ತಾರೆ. ಚಿತ್ರದ ಒನ್ ಲೈನ್ ಕಥೆ ಬಗ್ಗೆ ಹೇಳೋದಾದರೆ; ವಿಜಯ್ ಅಲಿಯಾಸ್ ಸಲಗ ಎಂಬುವವನು ನಟೋರಿಸ್ ರೌಡಿ. ಯಾರನ್ನು ಕೊಲೆ ಮಾಡಲೂ ಆತ ಹೇಸುವುದಿಲ್ಲ. ಅಷ್ಟಕ್ಕೂ ಅವನು ಯಾಕೆ ಅಂಥ ರೌಡಿ ಆದ? ಊರ ತುಂಬೆಲ್ಲ ಅವನಿಗೆ ಯಾಕೆ ದುಶ್ಮನ್ಗಳು ಇದ್ದಾರೆ? ಅವರನ್ನೆಲ್ಲ ಆತ ಹೇಗೆ ಮಟ್ಟ ಹಾಕುತ್ತಾನೆ? ಸಲಗನ ಎದೆಯೊಳಗೆ ಹೊತ್ತಿಕೊಂಡಿರುವ ಸೇಡಿನ ಬೆಂಕಿಗೆ ಕಾರಣ ಏನು? ಇದನ್ನೆಲ್ಲ ತಿಳಿಯಲು ಪೂರ್ತಿ ಚಿತ್ರ ನೋಡಬೇಕು.
ಮಾಸ್ ಪ್ರೇಕ್ಷಕರಿಗೆ ಹಬ್ಬ
ಮಾಸ್ ಸಿನಿಮಾವನ್ನು ಎಂಜಾಯ್ ಮಾಡುವ ಪ್ರೇಕ್ಷಕರಿಗೆ ಈ ಚಿತ್ರದಿಂದ ಭರ್ಜರಿ ಮನರಂಜನೆ ಸಿಗಲಿದೆ. ಮೈನವಿರೇಳಿಸುವ ಸಾಹಸ ದೃಶ್ಯಗಳು, ಕಣ್ಣೀರು ತರಿಸುವ ಫ್ಯಾಮಿಲಿ ಸೆಂಟಿಮೆಂಟ್, ಅಪರೂಪಕ್ಕೊಮ್ಮೆ ಕಚಗುಳಿ ಇಟ್ಟು ರಿಲ್ಯಾಕ್ಸ್ ಮಾಡಿಸುವ ಕಾಮಿಡಿ ದೃಶ್ಯಗಳನ್ನು ಪಕ್ಕಾ ಕಮರ್ಷಿಯಲ್ ಹದದಲ್ಲಿ ವಿಜಯ್ ಹೆಣೆದಿದ್ದಾರೆ. ಯಾವ ಸನ್ನಿವೇಶವನ್ನೂ ಎಳೆದಾಡದೇ 2 ಗಂಟೆ 8 ನಿಮಿಷದಲ್ಲಿ ಅವರು ಸಿನಿಮಾ ಪೂರ್ಣಗೊಳಿಸಿದ್ದಾರೆ.
ಖಾರದ ಡೈಲಾಗ್ಗಳಿವೆ ಹುಷಾರ್!
ಮಾಸ್ತಿ ಬರೆದಿರುವ ಡೈಲಾಗ್ಗಳು ಈ ಸಿನಿಮಾದಲ್ಲಿ ಮಹತ್ವದ ಪಾತ್ರ ವಹಿಸಿವೆ. ಈ ಸಂಭಾಷಣೆಗಳು ಪ್ಲಸ್ ಮತ್ತು ಮೈನಸ್ ಎರಡೂ ಆಗಬಹುದು. ಪಂಚಿಂಗ್ ಡೈಲಾಗ್ಗಳು ಖುಷಿ ಕೊಡುತ್ತವೆ. ಆದರೆ ಅದರ ನಡುವೆ ಬರುವ ಬೈಗುಳಗಳು ಒಂದು ವರ್ಗದ ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡಬಹುದು. ಸೂ*ಮಗ, ಬೋ*ಮಗ, ಗಾಂ*, ಶಾ* ಇತ್ಯಾದಿ ಬೈಗಳುಗಳು ಆಗಾಗ ಕೇಳಿಸುತ್ತಲೇ ಇರುತ್ತವೆ. ಪ್ರೇಕ್ಷಕರು ಇದನ್ನೆಲ್ಲ ಸಹಿಸಿಕೊಂಡರೆ ಚಿತ್ರ ರುಚಿಸಬಹುದು.
ಮುಲಾಜಿಲ್ಲದ ರಕ್ತಪಾತ
ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪ್ರತ ಸಿಕ್ಕಿದೆ. ಅಂದರೆ ವಯಸ್ಕರು ಮಾತ್ರ ನೋಡಬಹುದು. ಹಿಂಸೆಯ ದೃಶ್ಯಗಳು ಕಟ್ಟಿಗೆ ರಾಚುತ್ತವೆ. ಹಲವು ಸನ್ನಿವೇಶಗಳಲ್ಲಿ ರಕ್ತಪಾತ ರಾರಾಜಿಸಿದೆ. ಹಾಗಾಗಿ ಕೌಟುಂಬಿಕ ಪ್ರೇಕ್ಷಕರು ಇದನ್ನು ಇಷ್ಟಪಡದೆಯೂ ಇರಬಹುದು. ತುಂಬ ರಾ, ರಗಡ್ ಮೇಕಿಂಗ್ ನೋಡಿ ಎಂಜಾಯ್ ಮಾಡುವವರಿಗೆ ‘ಸಲಗ’ ಚಿತ್ರ ಹೇಳಿ ಮಾಡಿಸಿದಂತಿದೆ.
‘ಸಲಗ’ಕ್ಕೆ ಬಲ ತಂದ ಕಲಾವಿದರು
ಈ ಚಿತ್ರಕ್ಕೆ ವಿಜಯ್ ಹೀರೋ ಆಗಿದ್ದರೂ ಕೂಡ, ಅವರು ಬೇರೆ ಎಲ್ಲ ಕಲಾವಿದರಿಗೂ ಸೂಕ್ತ ಮನ್ನಣೆ ನೀಡಿದ್ದಾರೆ. ಪ್ರಮುಖವಾದ ಎಲ್ಲ ಪಾತ್ರಗಳಿಗೆ ಅಗತ್ಯ ಸ್ಕ್ರೀನ್ ಸ್ಪೇಸ್ ನೀಡಿದ್ದಾರೆ. ಸಾವಿತ್ರಿ (ಕಾಕ್ರೋಚ್ ಸುಧಿ), ಎಸಿಪಿ ಸಾಮ್ರಾಟ್ (ಡಾಲಿ ಧನಂಜಯ), ಕೆಂಡ (ಶ್ರೇಷ್ಠ) ಮುಂತಾದ ಪಾತ್ರಗಳು ಪರದೆ ಮೇಲೆ ಮಿಂಚಿವೆ. ಸಲಗನ ಬಾಲ್ಯದ ಪಾತ್ರ ಮಾಡಿರುವ ಹೊಸ ಕಲಾವಿದ ಶ್ರೀಧರ್ ಅವರು ಸೆಕೆಂಡ್ ಹೀರೋ ಎಂಬಷ್ಟು ಮಿಂಚಿದ್ದಾರೆ. ಕಥಾನಾಯಕನ ತಂದೆ-ತಾಯಿ ಪಾತ್ರದಲ್ಲಿ ಸಂಪತ್ ಮತ್ತು ಉಷಾ ಗಮನಾರ್ಹ ಅಭಿನಯ ನೀಡಿದ್ದಾರೆ. ನೀನಾಸಂ ಅಶ್ವಥ್, ಯಶ್ ಶೆಟ್ಟಿ, ಚೆನ್ನಕೇಶವ ಮುಂತಾದವರು ವಿಲನ್ ಆಗಿ ಅಚ್ಚರಿಸಿ ಮೂಡಿಸಿದ್ದಾರೆ. ದುನಿಯಾ ವಿಜಯ್ ಅವರು ತಮ್ಮ ಹಳೇ ಟ್ರ್ಯಾಕ್ಗೆ ಮರಳಿದ್ದು, ಅಭಿಮಾನಿಗಳಿದ್ದ ಭರ್ಜರಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ನಾಯಕಿ ಸಂಜನಾ ಆನಂದ್ ಪಾತ್ರಕ್ಕೆ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ. ಸಿಕ್ಕಷ್ಟು ಸಮಯದಲ್ಲೇ ಅವರು ಗಮನ ಸೆಳೆಯುತ್ತಾರೆ.
ಚರಣ್ ರಾಜ್ ಕೂಡ ಹೀರೋ
ಸಲಗ ಚಿತ್ರಕ್ಕೆ ಸಂಗೀತ ನಿರ್ದೇಶಕ ಚರಣ್ ರಾಜ್ ಅವರು ಇನ್ನೊಬ್ಬ ಹೀರೋ ಇದ್ದಂತೆ. ಅವರು ಸಂಗೀತ ನೀಡಿರುವ ಹಾಡುಗಳಿಂದಾಗಿ ಸಿನಿಮಾದ ಕ್ರೇಜ್ ಹೆಚ್ಚಿದೆ. ಅದಕ್ಕಿಂತಲೂ ಮುಖ್ಯವಾಗಿ ಅವರು ಹಿನ್ನಲೆ ಸಂಗೀತದ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದಾರೆ. ಒಂದು ಮಾಸ್ ಚಿತ್ರಕ್ಕೆ ಬೇಕಾದಂತಹ ಕಸುಬುದಾರಿಕೆಯನ್ನು ಅವರು ತೋರಿದ್ದಾರೆ. ಛಾಯಾಗ್ರಹಣ (ಶಿವ ಸೇನಾ), ಸಂಕಲನ (ದೀಪು ಎಸ್. ಕುಮಾರ್) ಸೇರಿ ಎಲ್ಲ ವಿಭಾಗದಲೂ ‘ಸಲಗ’ ತಾಂತ್ರಿಕ ಶ್ರೀಮಂತಿಕೆ ಮೆರೆದಿದೆ.
ಇದನ್ನೂ ಓದಿ:
‘ಚರಂಡಿ ಕ್ಲೀನ್ ಮಾಡುವವನ ಪಾತ್ರ ಮಾಡ್ತೀನಿ’: ದುನಿಯಾ ವಿಜಯ್ ನಿರ್ದೇಶನದಲ್ಲಿ ಶಿವಣ್ಣನಿಗೆ ನಟಿಸುವ ಆಸೆ
‘ಯಾರಿಂದ ತೊಂದರೆ ಆಗಿದೆ ಅನ್ನೋದು ಗೊತ್ತು’; ‘ಕೋಟಿಗೊಬ್ಬ 3’ ರದ್ದಾಗಿದ್ದಕ್ಕೆ ಸುದೀಪ್ ವಿಡಿಯೋ ಸಂದೇಶ
Published On - 3:18 pm, Thu, 14 October 21