ಬಹುನಿರೀಕ್ಷಿತ 3 ಕನ್ನಡ ಸಿನಿಮಾಗಳು ರಿಲೀಸ್; ಈ ಚಿತ್ರಗಳ ವಿಶೇಷತೆ ಏನು?
ರಮೇಶ್ ಅರವಿಂದ್ ನಟನೆಯ ‘100’, ಮನುರಂಜನ್ ರವಿಚಂದ್ರನ್ ಅಭಿನಯದ ‘ಮುಗಿಲ್ ಪೇಟೆ’ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ ‘ಗರುಡ ಗಮನ ವೃಷಭ ವಾಹನ’ ಚಿತ್ರಗಳು ಇಂದು (ನ.19) ಪ್ರೇಕ್ಷಕರ ಎದುರು ಬರುತ್ತಿವೆ. ಸಿನಿಪ್ರಿಯರ ಮನದಲ್ಲಿ ನಿರೀಕ್ಷೆ ಹುಟ್ಟುಹಾಕಿವೆ.
ಎರಡನೇ ಲಾಕ್ಡೌನ್ನಿಂದ ಮಂಕಾಗಿದ್ದ ಸಿನಿಮಾ ಕ್ಷೇತ್ರಕ್ಕೆ ಈಗ ಹಳೇ ಚಾರ್ಮ್ ಸಿಕ್ಕಿದೆ. ಕನ್ನಡ ಚಿತ್ರರಂಗದ ಬ್ಯುಸಿನೆಸ್ ನಿಧಾನಕ್ಕೆ ಚೇತರಿಸಿಕೊಂಡಿದೆ. ಈಗಾಗಲೇ ‘ಸಲಗ’, ‘ಕೋಟಿಗೊಬ್ಬ 3’, ‘ಭಜರಂಗಿ 2’ ಮುಂತಾದ ಸಿನಿಮಾಗಳು ತೆರೆಕಂಡು ಸ್ಯಾಂಡಲ್ವುಡ್ ವಹಿವಾಟಿಗೆ ಮರುಜೀವ ನೀಡಿವೆ. ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗುತ್ತಿರುವುದರಿಂದ ಚಿತ್ರೋದ್ಯಮಿಗಳಿಗೆ ಮತ್ತು ಪ್ರೇಕ್ಷಕರಿಗೆ ಖುಷಿ ನೀಡಿದೆ. ಈ ವಾರ ಕನ್ನಡದ ಬಹುನಿರೀಕ್ಷಿತ ಮೂರು ಸಿನಿಮಾಗಳು ರಿಲೀಸ್ ಆಗುತ್ತಿವೆ. ರಮೇಶ್ ಅರವಿಂದ್ ನಟನೆಯ ‘100’, ಮನುರಂಜನ್ ರವಿಚಂದ್ರನ್ ಅಭಿನಯದ ‘ಮುಗಿಲ್ ಪೇಟೆ’ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ ‘ಗರುಡ ಗಮನ ವೃಷಭ ವಾಹನ’ ಚಿತ್ರ ಇಂದು (ನ.19) ಪ್ರೇಕ್ಷಕರ ಎದುರು ಬರುತ್ತಿದೆ. ಬೇರೆ ಬೇರೆ ಕಾರಣಗಳಿಗಾಗಿ ಈ ಮೂರು ಸಿನಿಮಾಗಳು ಸಿನಿಪ್ರಿಯರ ಮನದಲ್ಲಿ ನಿರೀಕ್ಷೆ ಹುಟ್ಟುಹಾಕಿವೆ. ಹಾಗಾದ್ರೆ ಈ ಸಿನಿಮಾಗಳ ವಿಶೇಷತೆ ಏನು? ಇಲ್ಲಿದೆ ವಿವರ..
ಸೈಬರ್ ಕ್ರೈಂ ಕಥೆಯುಳ್ಳ ‘100’:
‘100’ ಚಿತ್ರಕ್ಕೆ ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದಾರೆ. ಜೊತೆಗೆ ಅವರು ಹೀರೋ ಆಗಿಯೂ ನಟಿಸಿದ್ದಾರೆ. ಪೂರ್ಣಾ, ರಚಿತಾ ರಾಮ್, ವಿಶ್ವ ಕರ್ಣ, ಪ್ರಕಾಶ್ ಬೆಳವಾಡಿ ಮುಂತಾದವರು ನಟಿಸಿದ್ದಾರೆ. ಸೋಶಿಯಲ್ ಮೀಡಿಯಾದ ಬಲೆಗೆ ಬಿದ್ದರೆ ಎಷ್ಟೆಲ್ಲ ಅಪಾಯ ಇದೆ ಎಂಬುದನ್ನು ಈ ಸಿನಿಮಾ ವಿವರಿಸುತ್ತದೆ. ಈಗಾಗಲೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೂಡ ಅಧಿಕಾರಿಗಳ ಜೊತೆ ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
‘ಗರುಡ ಗಮನ ವೃಷಭ ವಾಹನ’:
ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರು ‘ಗರುಡ ಗಮನ ವೃಷಭ ವಾಹನ’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅಲ್ಲದೇ ಮುಖ್ಯ ಭೂಮಿಕೆಯಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ಅವರಿಗೆ ರಿಷಬ್ ಶೆಟ್ಟಿ ಸಾಥ್ ನೀಡಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ. ‘ಒಂದು ಮೊಟ್ಟೆಯ ಕಥೆ’ ಚಿತ್ರದ ಬಳಿಕ ‘ಗರುಡ ಗಮನ ವೃಷಭ ವಾಹನ’ ಸಿನಿಮಾಗೆ ರಾಜ್ ಬಿ. ಶೆಟ್ಟಿ ನಿರ್ದೇಶನ ಮಾಡಿರುವುದರಿಂದ ಜನರಲ್ಲಿ ನಿರೀಕ್ಷೆ ಹೆಚ್ಚಿದೆ.
ರವಿಚಂದ್ರನ್ ಪುತ್ರನ ‘ಮುಗಿಲ್ ಪೇಟೆ’:
ಮನುರಂಜನ್ ರವಿಚಂದ್ರನ್ ನಟನೆಯ ‘ಮುಗಿಲ್ ಪೇಟೆ’ ಸಿನಿಮಾ ಈಗಾಗಲೇ ಟ್ರೇಲರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆದಿದೆ. ಭರತ್ ನಾವುಂದ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು, ತಾರಾ ಅನುರಾಧಾ ಮುಂತಾದ ಅನುಭವಿ ಕಲಾವಿದರ ಜೊತೆಗೆ ಮನುರಂಜನ್ ತೆರೆಹಂಚಿಕೊಂಡಿದ್ದಾರೆ. ಹಲವು ಗೆಟಪ್ಗಳಲ್ಲಿ ಸಾಧುಕೋಕಿಲ ಕಾಣಿಸಿಕೊಂಡಿದ್ದಾರೆ. ಮನುರಂಜನ್ ಅವರಿಗೆ ಜೋಡಿಯಾಗಿ ಖಯಾದು ಲೋಹರ್ ನಟಿಸಿದ್ದಾರೆ.
ಇದನ್ನೂ ಓದಿ:
ಅಧಿಕಾರಿಗಳ ಜತೆ ‘100’ ಸಿನಿಮಾ ನೋಡಿದ ಗೃಹ ಸಚಿವ ಆರಗ ಜ್ಞಾನೇಂದ್ರ; ಈ ಚಿತ್ರದಲ್ಲಿ ಏನಿದೆ ವಿಶೇಷ?
ರವಿಚಂದ್ರನ್ ಪುತ್ರರ ಬಗ್ಗೆ ಕಾಕ್ರೋಚ್ ಸುಧಿ ವಿಶೇಷ ಮಾತು; ‘ಕನಸುಗಾರ’ ನೆನಪಿಸಿದ ಮನು-ವಿಕ್ರಮ್