ಚಿತ್ರ: ಟೋಬಿ
ನಿರ್ಮಾಣ: ಲೈಟರ್ ಬುದ್ಧ ಫಿಲ್ಮ್ಸ್, ಅಗಸ್ತ್ಯ ಫಿಲ್ಮ್ಸ್, ಕಾಫಿ ಗ್ಯಾಂಗ್ ಸ್ಟುಡಿಯೋ, ಸ್ಮೂತ್ ಸೇಲರ್ಸ್
ನಿರ್ದೇಶನ: ಬಾಸಿಲ್
ಪಾತ್ರವರ್ಗ: ರಾಜ್ ಬಿ. ಶೆಟ್ಟಿ, ಚೈತ್ರಾ ಆಚಾರ್, ಸಂಯುಕ್ತಾ ಹೊರನಾಡು, ರಾಜ್ ದೀಪಕ್ ಶೆಟ್ಟಿ, ಗೋಪಾಲ ದೇಶಪಾಂಡೆ ಮುಂತಾದವರು.
ಸ್ಟಾರ್: 3/5
ನಟ ರಾಜ್ ಬಿ. ಶೆಟ್ಟಿ ಅವರು ಕನ್ನಡ ಚಿತ್ರರಂಗದಲ್ಲಿ ಒಂದು ಟ್ರೆಂಡ್ ಸೃಷ್ಟಿ ಮಾಡಿದ್ದಾರೆ. ತಮ್ಮದೇ ಆದಂತಹ ಒಂದು ಛಾಪು ಮೂಡಿಸಿದ್ದಾರೆ. ಅವರ ಎಲ್ಲ ಸಿನಿಮಾಗಳು ಕೂಡ ಡಿಫರೆಂಟ್ ಆಗಿ ಮೂಡಿಬರುತ್ತವೆ. ‘ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳಲ್ಲಿ ಭಿನ್ನವಾದ ಕಥೆಗಳನ್ನು ಅವರು ತೋರಿಸಿದ್ದರು. ಈಗ ‘ಟೋಬಿ’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಅವರು ನಿರ್ದೇಶನ ಮಾಡಿಲ್ಲ. ಹಾಗಿದ್ದರೂ ಕೂಡ ಈ ಸಿನಿಮಾದಲ್ಲಿ ಅವರ ಫ್ಲೇವರ್ ಕಾಣಿಸಿದೆ. ಸಾಕಷ್ಟು ಕಮರ್ಷಿಯಲ್ ಅಂಶ ಕೂಡ ಬೆರೆತಿದೆ. ನಟನೆಯ ವಿಚಾರದಲ್ಲಿ ರಾಜ್ ಬಿ. ಶೆಟ್ಟಿ ಅವರು ‘ಟೋಬಿ’ ಪಾತ್ರದ ಮೂಲಕ ಮತ್ತೊಂದು ಹಂತಕ್ಕೆ ಏರಿದ್ದಾರೆ. ಅವರಿಗೆ ಪೈಪೋಟಿ ನೀಡುವ ರೀತಿಯಲ್ಲಿ ಚೈತ್ರಾ ಆಚಾರ್, ರಾಜ್ ದೀಪಕ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಒಟ್ಟಾರೆ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..
ಬಾಲ್ಯದಲ್ಲಿಯೇ ಸಾಕಷ್ಟು ದೌರ್ಜನ್ಯಕ್ಕೆ ಒಳಗಾದ ಒಬ್ಬ ಬಾಲಕ. ಒಂದು ಹೆಸರು ಕೂಡ ಆತನಿಗೆ ಇಲ್ಲ. ಪೊಲೀಸರ ಲಾಠಿ ಏಟು, ಜನರ ಚುಚ್ಚು ಮಾತುಗಳು ಅವನಿಗೆ ನಿತ್ಯವೂ ತಪ್ಪಿದ್ದಲ್ಲ. ಬಳಿಕ ಅವನಿಗೆ ಆಶ್ರಯ ನೀಡಿದವರು ಟೋಬಿ ಅಂತ ಹೆಸರು ಇಡುತ್ತಾರೆ. ಕೋಪ ಬಂದರೆ ಆತ ಎಲ್ಲರನ್ನೂ ಚಚ್ಚಿ ಹಾಕುತ್ತಾನೆ. ದೊಡ್ಡವನಾದ ಮೇಲೂ ಅವನು ಭಯಂಕರ ಕೋಪಿಷ್ಠನಾಗಿಯೇ ಫೇಮಸ್ ಆಗುತ್ತಾನೆ. ಪ್ರೀತಿಪಾತ್ರರು ಹೇಳಿದರೆ ಮಾತ್ರ ಅವನು ಮಾತು ಕೇಳುತ್ತಾನೆ. ಇಂಥ ವ್ಯಕ್ತಿಯನ್ನು ಕೆಲವರು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ. ಮುಂದೇನಾಗುತ್ತದೆ? ಇದೆಲ್ಲವೂ ಅರಿವಾದ ಬಳಿಕ ಟೋಬಿ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ? ಈ ಪ್ರಶ್ನೆಗಳಿಗೆ ಉತ್ತರ ಬೇಕಾದರೆ ಪೂರ್ತಿ ಸಿನಿಮಾ ನೋಡಬೇಕು.
ಒಮ್ಮೆಲೆ ನೋಡಿದರೆ ‘ಟೋಬಿ’ ಚಿತ್ರಕ್ಕೂ ‘ಗರುಡ ಗಮನ ವೃಷಭ ವಾಹನ’ ಸಿನಿಮಾಗೂ ಸಾಕಷ್ಟು ಸಾಮ್ಯತೆ ಇದೆ ಎನಿಸುತ್ತದೆ. ‘ಟೋಬಿ’ ಸಿನಿಮಾದಲ್ಲಿನ ಪಾತ್ರಗಳ ಗುಣಲಕ್ಷಣವನ್ನು ಗಮನಿಸಿದರೆ ಅನೇಕ ಬಾರಿ ‘ಗರುಡ ಗಮನ ವೃಷಭ ವಾಹನ’ ಚಿತ್ರ ನೆನಪಾಗುತ್ತದೆ. ಆ ಸಾಮ್ಯತೆಯನ್ನು ಬದಿಗಿಟ್ಟು ನೋಡಿದರೆ ಇದು ಖಂಡಿತವಾಗಿಯೂ ಡಿಫರೆಂಟ್ ಆದಂತಹ ಸಿನಿಮಾ. ಈವರೆಗೂ ಪ್ರೇಕ್ಷಕರು ಹೆಚ್ಚಾಗಿ ನೋಡಿರದಂತಹ ಪಾತ್ರಗಳು ಇಲ್ಲಿವೆ. ಅವುಗಳ ಕಥೆ-ವ್ಯಥೆ ಕೂಡ ಅಪರೂಪ ಎಂಬಂತೆ ಇದೆ. ಆ ಕಾರಣಕ್ಕಾಗಿ ‘ಟೋಬಿ’ ಸಿನಿಮಾ ವಿಶೇಷ ಎನಿಸಿಕೊಳ್ಳುತ್ತದೆ.
ರಾಜ್ ಬಿ. ಶೆಟ್ಟಿ ಅವರ ಬೇರೆಲ್ಲ ಸಿನಿಮಾಗಳಿಗೆ ಹೋಲಿಸಿದರೆ ‘ಟೋಬಿ’ ಸಿನಿಮಾದಲ್ಲಿನ ಅಭಿನಯ ದಿ ಬೆಸ್ಟ್ ಎನ್ನಬಹುದು. ಇದು ಅಷ್ಟೇ ಸವಾಲಿನ ಪಾತ್ರ ಕೂಡ ಹೌದು. ಇಡೀ ಸಿನಿಮಾದಲ್ಲಿ ನಿಮಗೆ ರಾಜ್ ಬಿ. ಶೆಟ್ಟಿ ಕಾಣಿಸುವುದೇ ಇಲ್ಲ. ಪ್ರತಿ ಫ್ರೇಮ್ನಲ್ಲೂ ಟೋಬಿಯೇ ಕಾಣಿಸುತ್ತಾನೆ. ಇದು ಚಾಲೆಂಜಿಂಗ್ ಪಾತ್ರ ಯಾಕೆಂದರೆ ಟೋಬಿಗೆ ಮಾತು ಬರುವುದಿಲ್ಲ! ಆದರೆ ಅವನೊಳಗೆ ಸಾವಿರಾರು ಭಾವನೆಗಳಿವೆ. ಪ್ರೀತಿ, ದ್ವೇಷ, ಮಮತೆ, ಸಿಟ್ಟು, ಅಸಹಾಯಕತೆ ಮುಂತಾದ ಭಾವನೆಗಳನ್ನು ಆ ಪಾತ್ರ ಒಳಗೊಂಡಿದೆ. ಒಂದು ಅಕ್ಷರವನ್ನೂ ಮಾತನಾಡದೇ ಆ ಎಲ್ಲ ಭಾವನೆಗಳನ್ನು ಅಭಿವ್ಯಕ್ತಿಸುವ ಮೂಲಕ ರಾಜ್ ಬಿ. ಶೆಟ್ಟಿ ಅವರು ಗಮನ ಸೆಳೆಯುತ್ತಾರೆ.
ಇದನ್ನೂ ಓದಿ: Achar And Co Review: ಮೆಟ್ರೋ ಕಾಲಕ್ಕೂ ಅನ್ವಯ ಆಗುವ ರೆಟ್ರೋ ಕಥೆಯ ಸಿನಿಮಾ ‘ಆಚಾರ್ ಆ್ಯಂಡ್ ಕೋ’
ನಟಿ ಚೈತ್ರಾ ಆಚಾರ್ ಅವರ ಅಭಿನಯದ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಈ ಸಿನಿಮಾದಲ್ಲಿ ರಾಜ್ ಮತ್ತು ಚೈತ್ರಾ ಅವರು ತಂದೆ-ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಇಲ್ಲಿ ಅಪ್ಪ-ಮಗಳ ಸೆಂಟಿಮೆಂಟ್ ಬೇರೆಯದೇ ರೀತಿಯಲ್ಲಿದೆ. ಜೆನ್ನಿ ಎಂಬ ಪಾತ್ರವನ್ನು ಬಹಳ ಸಮರ್ಥವಾಗಿ ಚೈತ್ರಾ ನಿಭಾಯಿಸಿದ್ದಾರೆ. ಸೆಕೆಂಡ್ ಹಾಫ್ನಲ್ಲಿ ಅವರ ಪಾತ್ರಕ್ಕೆ ಹೆಚ್ಚು ಸ್ಕೋಪ್ ಸಿಕ್ಕಿದೆ. ಟೋಬಿಯ ರೀತಿಯೇ ಪ್ರೇಕ್ಷಕರನ್ನು ಕಾಡುವಂತಹ ಇನ್ನೊಂದು ಪಾತ್ರ ಈ ಜೆನ್ನಿಯದ್ದು. ಇನ್ನುಳಿದಂತೆ ರಾಜ್ ದೀಪಕ್ ಶೆಟ್ಟಿ ಅವರು ಎರಡು ಶೇಡ್ ಇರುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಗೋಪಾಲ ದೇಶಪಾಂಡೆ, ಸಂಯುಕ್ತಾ ಹೊರನಾಡು ಅವರ ನಟನೆ ಕೂಡ ಇಷ್ಟವಾಗುತ್ತದೆ.
ಒಂದು ಮನಮಿಡಿಯುವಂತಹ ಕಥೆಯನ್ನು ಸಾಧ್ಯವಾದಷ್ಟು ನೈಜವಾಗಿ ತೋರಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಆದರೆ ಅದು ಕೆಲವು ದೃಶ್ಯಗಳಲ್ಲಿ ಮಾತ್ರ. ಇನ್ನುಳಿದ ದೃಶ್ಯಗಳನ್ನು ಮಾಸ್ ಕಮರ್ಷಿಯಲ್ ಮಾದರಿಯಲ್ಲಿ ನಿರೂಪಿಸುವ ಕೆಲಸ ಆಗಿದೆ. ಅದರಿಂದ ಏನೋ ಒಂದು ಹದ ತಪ್ಪಿದ ಫೀಲ್ ಬರುತ್ತದೆ. ಆರಂಭದಲ್ಲಿ ನಮ್ಮ ನಡುವಿನ ವ್ಯಕ್ತಿಯಂತೆ ಕಾಣುವ ಟೋಬಿ ಫೈಟಿಂಗ್ ದೃಶ್ಯಗಳಲ್ಲಿ ಏಕಾಏಕಿ ಸೂಪರ್ ಹೀರೋ ರೀತಿ ವರ್ತಿಸುತ್ತಾನೆ. ಆಗಲೂ ಕೂಡ ಸಿನಿಮಾದ ಫ್ಲೇವರ್ ಬದಲಾಗಿರುವುದು ಗಮನಕ್ಕೆ ಬರುತ್ತದೆ. ಕೆಲವು ಕಡೆಗಳಲ್ಲಿ ಡೈಲಾಗ್ ಕೂಡ ಸವಕಲು ಎನಿಸಿ, ಹಳೇ ಸಿನಿಮಾಗಳನ್ನು ನೆನಪಿಸುತ್ತವೆ.
ಇದನ್ನೂ ಓದಿ: Dhoomam Review: ಸಿಗರೇಟ್ ಬಗ್ಗೆ ಸಂದೇಶ ನೀಡಲು ಎಷ್ಟೆಲ್ಲ ಸರ್ಕಸ್; ಸರಳವಾಗಿಲ್ಲ ‘ಧೂಮಂ’
‘ಟೋಬಿ’ ಮೊದಲಾರ್ಧ ಕಥೆ ಬಹಳ ನಿಧಾನ ಗತಿಯಲ್ಲಿ ಸಾಗುತ್ತದೆ. ವೇಗದ ನಿರೂಪಣೆ ಬಯಸುವ ಪ್ರೇಕ್ಷಕರಿಗೆ ಇಲ್ಲಿ ತಾಳ್ಮೆಯ ಪರೀಕ್ಷೆ ಆಗುತ್ತದೆ. ದ್ವಿತೀಯಾರ್ಧದಲ್ಲಿ ಕೆಲವು ದೃಶ್ಯಗಳು ಪಟಪಟನೆ ಸಾಗುತ್ತವೆ. ಆಗ ಒಂದಷ್ಟು ವಿವರಗಳು ಮಿಸ್ಸಿಂಗ್ ಎನಿಸುವುದೂ ಉಂಟು. ಈ ಎರಡರ ನಡುವಿನ ಲಯವನ್ನು ‘ಟೋಬಿ’ ಮಿಸ್ ಮಾಡಿಕೊಂಡಂತೆ ಎನಿಸುತ್ತದೆ. ಲಾಜಿಕ್ ಕೂಡ ಬಹಳ ಕಡೆಗಳಲ್ಲಿ ಕಣ್ಮರೆ ಆಗಿದೆ. ಆಸ್ಪತ್ರೆಯ ಬೆಡ್ ಮೇಲೆ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ವ್ಯಕ್ತಿ ಕೆಲವೇ ಗಂಟೆಗಳಲ್ಲಿ ಎದ್ದು ಬಂದು 10-20 ಜನರನ್ನು ಹೊಡೆದುಹಾಕುವ ಸನ್ನಿವೇಶ ತೀರಾ ಅಸಹಜ ಎನಿಸುತ್ತದೆ. ಇಂಥ ಒಂದಷ್ಟು ಅಂಶಗಳ ಕಾರಣಕ್ಕೆ ‘ಟೋಬಿ’ ಅಂಕ ಕಳೆದುಕೊಳ್ಳುತ್ತದೆ. ಮೇಕಿಂಗ್ ದೃಷ್ಟಿಯಿಂದ ಈ ಸಿನಿಮಾ ಚೆನ್ನಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:43 pm, Fri, 25 August 23