Salaar Movie Review: ಸಿಂಹಾಸನಕ್ಕೆ ನಡೆಯುವ ಕಿತ್ತಾಟದಲ್ಲಿ ಆ್ಯಕ್ಷನ್​ ವೈಭವ; ಹಳೆಯ ಕಥೆಗೆ ಹೊಸ ಮಸಾಲ

|

Updated on: Dec 22, 2023 | 10:36 AM

ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ ಎಂಬ ಕಾರಣಕ್ಕೆ ‘ಸಲಾರ್’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಹೊಂಬಾಳೆ ಫಿಲ್ಮ್ಸ್ ಅದ್ದೂರಿ ಬಜೆಟ್​​ನಲ್ಲಿ ನಿರ್ಮಾಣ ಮಾಡಿದ ಈ ಸಿನಿಮಾ ಇಂದು (ಡಿಸೆಂಬರ್​ 22) ರಿಲೀಸ್ ಆಗಿದೆ. ಸಿನಿಮಾ ಹೇಗಿದೆ ಎನ್ನುವ ವಿಮರ್ಶೆ ಇಲ್ಲಿದೆ.

Salaar Movie Review: ಸಿಂಹಾಸನಕ್ಕೆ ನಡೆಯುವ ಕಿತ್ತಾಟದಲ್ಲಿ ಆ್ಯಕ್ಷನ್​ ವೈಭವ; ಹಳೆಯ ಕಥೆಗೆ ಹೊಸ ಮಸಾಲ
ಪ್ರಭಾಸ್
Follow us on

ಚಿತ್ರ: ಸಲಾರ್
ನಿರ್ಮಾಣ: ಹೊಂಬಾಳೆ ಫಿಲ್ಮ್ಸ್​​
ನಿರ್ದೇಶನ: ಪ್ರಶಾಂತ್ ನೀಲ್
ಪಾತ್ರವರ್ಗ: ಪ್ರಭಾಸ್, ಶ್ರುತಿ ಹಾಸನ್,  ಪೃಥ್ವಿರಾಜ್​ ಸುಕುಮಾರನ್, ಜಗಪತಿ ಬಾಬು ಮೊದಲಾದವರು.
ರೇಟಿಂಗ್: 3/5

ಪ್ರಶಾಂತ್ ನೀಲ್ ಅವರು ‘ಕೆಜಿಎಫ್​’, ‘ಕೆಜಿಎಫ್ 2’ ಅಂತಹ ಸೂಪರ್ ಹಿಟ್​ ಚಿತ್ರಗಳನ್ನು ನಿರ್ದೇಶನ ಮಾಡಿದವರು. ಈ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು ‘ಹೊಂಬಾಳೆ ಫಿಲ್ಮ್ಸ್​’. ಟಾಲಿವುಡ್​ನಲ್ಲಿ ಹೆಸರು ಮಾಡಿದವರು ಪ್ರಭಾಸ್. ಈ ಮೂವರು ‘ಸಲಾರ್’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಚಿತ್ರ ಐದು ಭಾಷೆಗಳಲ್ಲಿ ಇಂದು (ಡಿಸೆಂಬರ್ 22) ರಿಲೀಸ್ ಆಗಿದೆ. ಟ್ರೇಲರ್ ಮೂಲಕ ನಿರೀಕ್ಷೆ ಸೃಷ್ಟಿ ಮಾಡಿರುವ ಈ ಸಿನಿಮಾ ಹೇಗಿದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

‘ಉಗ್ರಂ’ ಹೆಚ್ಚು ಜನರಿಗೆ ರೀಚ್ ಆಗಿರಲಿಲ್ಲ ಎನ್ನುವ ಕೊರಗು ಪ್ರಶಾಂತ್ ನೀಲ್ ಅವರಿಗೆ ಇತ್ತು. ಈ ವಿಚಾರವನ್ನು ಅವರು ಇತ್ತೀಚೆಗೆ ರಿವೀಲ್ ಮಾಡಿದ್ದರು. ಈ ಕೊರಗನ್ನು ‘ಸಲಾರ್’ ಮೂಲಕ ನೀಗಿಸಿಕೊಂಡಿದ್ದಾರೆ. ಸಿನಿಮಾದ ಮೊದಲಾರ್ಧ ನೋಡಿದರೆ ಹಾಗೆಯೇ ಅನಿಸುತ್ತದೆ. ದ್ವಿತೀಯಾರ್ಧವನ್ನು ಇದೇ ರೀತಿ ನಿರೀಕ್ಷಿಸಿದವರಿಗೆ ಸರ್​ಪ್ರೈಸ್ ಸಿಗುತ್ತದೆ.

ದೇವ (ಪ್ರಭಾಸ್) ಒಂದು ಮೈನಿಂಗ್​ನಲ್ಲಿ ಕೆಲಸ ಮಾಡುವ ಮೆಕಾನಿಕ್. ಆತನಿಗೆ ತಾನಾಯಿತು ತನ್ನ ತಾಯಿ ಆಯಿತು ಎಂಬುದಷ್ಟೇ. ಇಬ್ಬರು ಮಾಡುವ ಕೆಲಸವನ್ನು ಒಬ್ಬನೇ ಮಾಡುವಷ್ಟು ತಾಕತ್ತಿರುವ ವ್ಯಕ್ತಿ. ಆದರೂ, ತಲೆಬಗ್ಗಿಸಿ ನಡೆಯುತ್ತಾನೆ. ತಡವಾಗಿ ಬಂದರೆ ಬಯ್ಯುವ ಅಮ್ಮನ ಮಾತಿಗೆ ಚಿಕ್ಕ ಮಗುವಿನಂತೆ ಭಯ ಬೀಳುತ್ತಾನೆ. ಆತ ಯಾರ ಮೇಲೂ ಕೈ ಮಾಡುವವನಲ್ಲ. ಆದರೆ, ಆತ ಎಲ್ಲರೂ ಅಂದುಕೊಂಡಂತಲ್ಲ. ಆತನಿಗೆ ಒಂದು ಕರಾಳ ಇತಿಹಾಸ ಇದೆ. ಒಳ್ಳೆಯ ಗೆಳೆಯನಿದ್ದಾನೆ. ದೇವನಿಗೆ ಇರೋ ಇತಿಹಾಸ ಏನು? ಅವನು ಸೈಲೆಂಟ್ ಆಗಿದ್ದೇಕೆ ಎಂಬ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಒಂದಷ್ಟು ಪ್ರಶ್ನೆಗೆ ಮೊದಲ ಭಾಗದಲ್ಲಿ ಉತ್ತರ ಸಿಕ್ಕರೆ, ಮತ್ತೊಂದಷ್ಟು ಪ್ರಶ್ನೆಗೆ ಎರಡನೇ ಪಾರ್ಟ್​ಗಾಗಿ ಕಾಯಬೇಕು.

ಪ್ರಭಾಸ್ ಅವರಿಂದ ಅಭಿಮಾನಿಗಳು ಮಾಸ್​​ನ ಹೆಚ್ಚು ಇಷ್ಟಪಡುತ್ತಾರೆ. ಈ ಬಾರಿ ಮಾಸ್ ದ್ವಿಗುಣವಾಗಿದೆ. ಎರಡು ಶೇಡ್​ನಲ್ಲಿ ಪ್ರಭಾಸ್ ಗಮನ ಸೆಳೆದಿದ್ದಾರೆ. ಸೈಲೆಂಟ್ ಆಗಿರುವಾಗ ಪ್ರಭಾಸ್ ಕಣ್ಣುಗಳು ಮಾತನಾಡುತ್ತವೆ. ವೈಲೆಂಟ್ ಆದಾಗ ಅವರ ಕೈಯಲ್ಲಿರುವ ಕತ್ತಿ ಶಬ್ದ ಮಾಡುತ್ತದೆ. ಸಿನಿಮಾ ಉದ್ದಕ್ಕೂ ಪ್ರಭಾಸ್ ಪಾತ್ರ ಹೈಲೈಟ್ ಆಗಿದೆ. ಕಾಟೇರ ದೇವರ ಎದುರಿನ ಫೈಟ್​ನಲ್ಲಿ ಅಭಿಮಾನಿಗಳಿಗೆ ಅಕ್ಷರಶಃ ಮೈ ರೋಮ ಎದ್ದು ನಿಲ್ಲುವಂತೆ ಮಾಡುತ್ತಾರೆ ಪ್ರಭಾಸ್.

ಪ್ರಭಾಸ್ ರೀತಿಯೇ ಹಲವು ಪಾತ್ರಗಳು ಹೈಲೈಟ್ ಆಗಿವೆ. ಪೃಥ್ವಿರಾಜ್​ ಸುಕುಮಾರನ್ ಅವರು ವರದ ಆಗಿ, ದೇವನ ಗೆಳೆಯನಾಗಿ ಮಿಂಚಿದ್ದಾರೆ. ಅವರ ಪಾತ್ರ ಕೂಡ ಸಾಕಷ್ಟು ತೂಕ ಹೊಂದಿದೆ. ಅವರು ಪಾತ್ರವನ್ನು ಜೀವಿಸಿದ್ದಾರೆ. ಶ್ರುತಿ ಹಾಸನ್ ಅಲ್ಲಲ್ಲಿ ಕಾಣಿಸಿಕೊಂಡು ಮರೆಯಾಗುತ್ತಾರೆ. ಜಗಪತಿ ಬಾಬು, ಟಿನು ಆನಂದ್, ಈಶ್ವರಿ ರಾವ್, ಶ್ರೀ ರೆಡ್ಡಿ, ರಾಮಚಂದ್ರ ರಾಜು, ಮಧು ಗುರುಸ್ವಾಮಿ, ನವೀನ್ ಶಂಕರ್, ಪ್ರಮೋದ್ ಮೊದಲಾದವರ ಪಾತ್ರಗಳು ತಮ್ಮದೇ ಆದ ತೂಕ ಹೊಂದಿವೆ.

ನಿರ್ದೇಶಕ ಪ್ರಶಾಂತ್ ನೀಲ್ ಅವರ ಕಸುಬುದಾರಿಕೆ ಮೆಚ್ಚುವಂಥದ್ದು. ಮಾಸ್ ಮಂದಿ ಯಾವ ರೀತಿಯಲ್ಲಿ ಇಷ್ಟಪಡುತ್ತಾರೋ ಆ ರೀತಿಯ ಅಂಶಗಳನ್ನು ಭರ್ಜರಿಯಾಗಿಯೇ ನೀಡಿದ್ದಾರೆ. ಸಣ್ಣ ಸಣ್ಣ ವಿಚಾರಕ್ಕೂ ಹೆಚ್ಚು ತೂಕ ನೀಡಿದ್ದಾರೆ. ಈ ರೀತಿಯ ವಿಚಾರಗಳು ಪ್ರೇಕ್ಷಕರನ್ನು ಹೆಚ್ಚು ಸೆಳೆದಿವೆ. ಹೀರೋ ಪಾತ್ರಗಳ ತೂಕ ಹೆಚ್ಚಿಸಲು ಏನೆಲ್ಲ ಬೇಕೋ ಅದನ್ನು ಅವರು ಮಾಡಿದ್ದಾರೆ. ಕೆಲವು ದೃಶ್ಯಗಳು, ಸೆಟ್​ಗಳು ‘ಕೆಜಿಎಫ್ 2’, ‘ಉಗ್ರಂ’ ಚಿತ್ರವನ್ನು ನೆನಪಿಸಿದರೂ ಉಳಿದ ವಿಚಾರಗಳ ಮುಂದೆ ಇವು ಗೌಣ ಎನಿಸುತ್ತದೆ. ತೆರೆಮೇಲೆ ಅಬ್ಬರಿಸುವ ಪ್ರತಿ ಪಾತ್ರದ ಹಿಂದೆ ಪ್ರಶಾಂತ್ ನೀಲ್ ಶ್ರಮ ಇದೆ ಎಂಬುದನ್ನು ಒಪ್ಪಲೇ ಬೇಕು. ಖಾನ್ಸಾರ್ ನಗರದ ಕಲ್ಪನೆಗೆ ಮೆಚ್ಚಲೇಬೇಕು. ಆರ್ಟ್​ವರ್ಕ್ ವಿಚಾರದಲ್ಲಿ ಶಿವಕುಮಾರ್ ಅವರು ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಒಂದೊಳ್ಳೆಯ ಟ್ವಿಸ್ಟ್ ಕೊಟ್ಟು ಒಂದನೇ ಭಾಗ ಪೂರ್ಣಗೊಳಿಸುತ್ತಾರೆ ಪ್ರಶಾಂತ್ ನೀಲ್. ಎರಡನೇ ಭಾಗಕ್ಕಾಗಿ ಫ್ಯಾನ್ಸ್ ಕಾಯುವಂತೆ ಮಾಡಿದ್ದಾರೆ.

ಇದನ್ನೂ ಓದಿ: ಹೇಗಿದೆ ಪ್ರಭಾಸ್-ಪ್ರಶಾಂತ್ ನೀಲ್ ಕಾಂಬಿನೇಷನ್​ ‘ಸಲಾರ್’ ಚಿತ್ರದ ಮೊದಲಾರ್ಧ?

ಈ ಸಿನಿಮಾದಲ್ಲಿ ನೆಗೆಟಿವ್ ಅಂಶಗಳೂ ಇವೆ. ವೇಗವಾಗಿ ಸಾಗುವ ಮೊದಲಾರ್ಧ ದ್ವೀತಿಯಾರ್ಧದಲ್ಲಿ ಸ್ಪೀಡ್ ಕಳೆದುಕೊಳ್ಳುತ್ತದೆ. ಕನ್ನಡ ಸಿನಿಪ್ರಿಯರಿಗೆ ‘ಉಗ್ರಂ’ ಸಿನಿಮಾ ನೆನಪಾಗುತ್ತದೆ. ಕೆಲವು ಕಡೆಗಳಲ್ಲಿ ಬಿಜಿಎಂ ಅಬ್ಬರವೇ ಹೆಚ್ಚಿದೆ. ರಕ್ತವನ್ನು ನೀರಿನಂತೆ ಹರಿಸಿರುವುದರಿಂದ ಕೆಲವರಿಗೆ ಅದನ್ನು ಅರಗಿಸಿಕೊಳ್ಳುವುದು ಕಷ್ಟ ಎನಿಸಬಹುದು. ಲಾಜಿಕ್​ಗಳನ್ನು ಮೂಟೆಕಟ್ಟಿ ಇಡಲಾಗಿರುವುದರಿಂದ ಯಾರೂ ಆ ಬಗ್ಗೆ ಪ್ರಶ್ನೆ ಮಾಡುವಂತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:28 am, Fri, 22 December 23