ಇತ್ತೀಚೆಗೆ ಸಿನಿಮಾ ಟ್ರೆಂಡ್ ಖಂಡಿತಾ ಬದಲಾಗಿದೆ. ಜನ ಹೇ…. ಅದು ಸಿನಿಮಾ ಬಿಡು, ಅನ್ನೋ ಕಾಲಘಟ್ಟದಿಂದ ವಾವ್….. ಸಿನಿಮಾ ಅನ್ನೋ ಹಂತಕ್ಕೆ ತಲುಪಿದ್ದೇವೆ. ಅಂತಹದ್ದೆ ಒಂದು ಅದ್ಬುತ ಅಲ್ಲ, ಅತ್ಯದ್ಭುತ ಹಿಂದಿ ಚಿತ್ರ ದ ವ್ಯಾಕ್ಸಿನ್ ವಾರ್ ಸಿನಿಮಾ (The Vaccine War). ದುರಂತ ಅಂದ್ರೆ ಯಾವುದನ್ನು ನಾನು ಅದ್ಬುತ ಅಲ್ಲ ಅತ್ಯದ್ಭುತ ಅಂತಾ ಬರೆಯಲು ಹೊರಟಿದ್ದೆನೆಯೋ…….! ನನಗೆ ಗೊತ್ತು ಶೇಕಡ 90ರಷ್ಟು ಜನರಿಗೆ ಇಂತಹ ಹೆಸರಿನ ಸಿನಿಮಾ ಇದೆ ಅನ್ನೋದು ಗೊತ್ತಿರಲಿಕ್ಕಿಲ್ಲ……! ಹೌದು ಇದು ವಾಸ್ತವ ಕಾರಣ ಈ ಚಿತ್ರ ನಾನು ನೋಡುವವರೆಗೂ ನನಗೂ ಗೊತ್ತಿರಲಿಲ್ಲ. ಆದ್ದರಿಂದ ನಾನು ಮೊದಲು ಸಿನಿಮಾದ ಪರಿಚಯವನ್ನು ( cinema review) ಮಾಡಿಕೊಡುತ್ತೇನೆ.
ಈ ಸಿನಿಮಾ ಥಿಯೇಟರ್, ಮಲ್ಟಿಪ್ಲೆಕ್ಸ್‌ಗಳಲ್ಲಿ ತೆರೆ ಕಾಣ್ತೋ ಇಲ್ವೋ ? ಖಂಡಿತಾ ನನಗೆ ಗೊತ್ತಿಲ್ಲ. ಆದ್ರೆ ಹಾಟ್‌ಸ್ಟಾರ್ ಓಟಿಟಿಯಲ್ಲಂತೂ ಇದೆ. ಅಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಇದು 2023ರಲ್ಲಿ ತೆರೆ ಕಂಡಿರುವ ಚಿತ್ರ. ಸದ್ಯ ಹಾಟ್‌ಸ್ಟಾರ್‌ನಲ್ಲಿ ನಂಬರ್ 1 ಸ್ಥಾನದಲ್ಲಿರುವ ಚಿತ್ರ. ನಮ್ಮ ಭಾರತೀಯ ವಿಜ್ಞಾನಿಗಳು ಮಾರಣಾಂತಿಕ ಕೊರೊನಾ ವೈರಸ್‌ಗೆ ನಮ್ಮದೆ ಆತ್ಮನಿರ್ಭರ ವ್ಯಾಕ್ಸಿನ್‌ನ್ನು ಹೇಗೆ ಕಂಡು ಹಿಡಿದರು ಎಂಬುದರ ಯಶಸ್ಸಿನ ಯಶೋಗಾಥೆಯ ಚಿತ್ರ. ನಾನಾ ಪಾಟೇಕರ್, ಅನುಪಮ್ ಖೇರ್, ಪಲ್ಲವಿ ಜೋಶಿ, ನಮ್ಮ ಕನ್ನಡತಿ ಸಪ್ತಮಿ ಗೌಡ ಮುಖ್ಯ ಪಾತ್ರದಲ್ಲಿರುವ 2 ಗಂಟೆ 40 ನಿಮಿಷದ ಅವಧಿಯ ಚಿತ್ರ. ಚಿತ್ರವನ್ನು ನಟಿ ಪಲ್ಲವಿ ಜೋಶಿ ನಿರ್ಮಾಣ ಮಾಡಿದ್ದಾರೆ. ವಿವೇಕ್ ರಂಜನ್ ಅಗ್ನಿಹೋತ್ರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರ ಐಸಿಎಂಆರ್ ( ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ) ಡೈರೆಕ್ಟರ್ ಜನರಲ್ ಡಾ ಬಲರಾಮ್ ಭಾರ್ಗವ ಅವರು ಬರೆದ Going Viral ಪುಸ್ತಕ ಆಧಾರಿಸಿ ಮಾಡಿರುವ ಸಿನಿಮಾ. ಸಿನಿಮಾದ ಬಹುತೇಕ ಎಲ್ಲವೂ ನೈಜವಾಗಿ ನಡೆದ ಘಟನೆಗಳೇ ಆಗಿವೆ ಎಂಬುದನ್ನು ಚಿತ್ರ ತಂಡ ಸ್ಪಷ್ಟಪಡಿಸಿದೆ.
ಸಿನಿಮಾ ಆರಂಭವಾಗುವುದು ಕೊರೊನಾ ಬಂದೋಬಸ್ತ್‌ನಲ್ಲಿರುವ ಪೊಲೀಸರ ಕರ್ತವ್ಯದೊಂದಿಗೆ. ಆ್ಯಂಬುಲೆನ್ಸ್‌ಗೆ ಜಾಗ ಮಾಡಿಕೊಡುವ ಪೊಲೀಸ್ ಸಿಬ್ಬಂದಿಗಳು, ದ್ವಿ ಚಕ್ರ ವಾಹನದಲ್ಲಿ ಬರುವವರನ್ನು ತಡೆದು ಗದರಿಸಿ ಓಡಿಸುತ್ತಾರೆ. ಈ ಮಧ್ಯೆ ವ್ಯಕ್ತಿಯೊಬ್ಬ ನನಗೆ ತುರ್ತು ಕೆಲಸವಿದೆ ಅಂದರೂ, ಎಷ್ಟೇ ಪರಿ ಪರಿಯಾಗಿ ಬೇಡಿಕೊಂಡರು ತನ್ನ ಗುರುತಿನ ಚೀಟಿ ತೋರಿಸಿದರು ಆತನನ್ನು ಬಿಡದ ಪೊಲೀಸ್, ಆತನ ಗುರುತಿನ ಚೀಟಿ ಬಿಸಾಕಿ ರಸ್ತೆ ಮಧ್ಯೆ ಕೋಳಿಯಂತೆ ಕೂರಿಸಿ ಶಿಕ್ಷೆ ಕೊಡುತ್ತಾನೆ. ದುರಂತ ಅಂದ್ರೆ ಶಿಕ್ಷಿಗೆ ಒಳಗಾಗುವವನು ಕೊರೊನಾಗೆ ವೈರಸ್ ಕಂಡು ಹಿಡಿಯುವ ಕೆಲಸದಲ್ಲಿ ತೊಡಗಿದ್ದ ನಮ್ಮ ಭಾರತದ ಹೆಮ್ಮೆಯ ವಿಜ್ಞಾನಿಯಾಗಿರುತ್ತಾನೆ. ಈ ದೃಶ್ಯ ನಮ್ಮ ಹೆಮ್ಮೆಯ ವಿಜ್ಞಾನಿಗಳ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ಕೊರೊನಾ ಮಹಾಮಾರಿ ಇಡೀ ವಿಶ್ವವನ್ನೇ ಆವರಿಸಿದ ಕಾಲಘಟ್ಟ. ಜನ ಸಾಮಾನ್ಯರಿಗೆ ಇದು ಕಿಂಚಿತ್ತು ಅರಿವಿಲ್ಲದ ಸಮಯದಲ್ಲಿ ನಮ್ಮ ಭಾರತೀಯ ವಿಜ್ಞಾನಿಗಳು ಜನರ ಹಾಗೂ ದೇಶದ ಹಿತದೃಷ್ಟಿಯಿಂದ ಇದಕ್ಕೆ ಹೇಗೆ ತಯಾರಿ ನಡೆಸಿದರು ಎಂಬುದನ್ನು ಸಿನಿಮಾದಲ್ಲಿ ಅತ್ಯದ್ಬುತವಾಗಿ ಕಟ್ಟಿಕೊಡಲಾಗಿದೆ. ನಮ್ಮಲ್ಲಿ ಬಹುತೇಕರಿಗೆ ಗೊತ್ತಿಲ್ಲದ ವಿಷಯ ಅಂದ್ರೆ ಕೊರೊನಾಗೆ ಕಂಡು ಹಿಡಿದ ಕೋ ವ್ಯಾಕ್ಸಿನ್ ನಮ್ಮ ದೇಶ ಕಂಡು ಹಿಡಿದ ಮೊಟ್ಟ ಮೊದಲ ವ್ಯಾಕ್ಸಿನ್. ಈ ಹಿಂದೆ ಯಾವುದೇ ಈ ರೀತಿಯ ಆರೋಗ್ಯ ಸಮಸ್ಯೆ ಎದುರಾದಾಗ ವಿದೇಶದವರು ಕಂಡು ಹಿಡಿದ ವ್ಯಾಕ್ಸಿನ್ ಬಳಸಲಾಗುತಿತ್ತು. ಅದು ಸಹಾ ಅವರು ಕಂಡು ಹಿಡಿದ ಎಷ್ಟೋ ವರ್ಷಗಳ ನಂತರ ನಮಗೆ ಲಭ್ಯವಾಗುತಿತ್ತು. ಅದರಲ್ಲೂ ಕಾಡಿ, ಬೇಡಿ, ಕೋಟ್ಯಾಂತರ ಹಣ ನೀಡಿ ಅವರ ಎಲ್ಲಾ ಷರತ್ತುಗಳಿಗೆ ಒಪ್ಪಿ ವ್ಯಾಕ್ಸಿನ್ ತರುವ ಪರಿಸ್ಥಿತಿ ಇತ್ತು. ಇದೆಲ್ಲವು ಸಿನಿಮಾದಲ್ಲಿ ಸುಲಭವಾಗಿ ಮನದಟ್ಟು ಮಾಡಲಾಗಿದೆ. ಸಿನಿಮಾದಲ್ಲಿ ಸಂಪೂರ್ಣವಾಗಿ ಆವರಿಸಿಕೊಂಡಿರುವವರು ನಾನಾ ಪಾಟೇಕರ್. ಅವರು ಐಸಿಎಂಆರ್ ( ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ) ಡೈರೆಕ್ಟರ್ ಜನರಲ್ ಡಾ ಬಲರಾಮ್ ಭಾರ್ಗವ ಅವರ ಪಾತ್ರವನ್ನು ನಿಭಾಯಿಸಿದ್ದಾರೆ. ಒಬ್ಬ ಮುಖ್ಯಸ್ಥ ಹೇಗಿರಬೇಕು ಎಂಬುದನ್ನು ಇವರಿಂದ ಕಲಿಯಬೇಕು. ಉಳಿದಂತೆ ಪಲ್ಲವಿ ಜೋಶಿ, ಸಪ್ತಮಿ ಗೌಡ ಹಾಗೂ ಇತರ ವಿಜ್ಞಾನಿಗಳು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಮಸ್ಯೆ ಅಲ್ಲ ಪರಿಹಾರ ಕೊಡಿ. ಕಾರಣಗಳನ್ನು ಕೊಡಬೇಡಿ, ಟೈಂ ಟಾರ್ಗೆಟ್ ಅನ್ನೋ ಬಾಸ್. ಅವರ ವೇಗಕ್ಕೆ ಕೆಲಸ ಮಾಡಿ ಯಶಸ್ವಿಯಾದರು ಖುಷಿ ಪಡದ ಮೆಚ್ಚುಗೆ ವ್ಯಕ್ಯಪಡಿಸದ ಬಾಸ್, ಇದು ದೇಶ ಸೇವೆ ಅಷ್ಟೇ ಅನ್ನೋ ಮನಸ್ಥಿತಿ. ಖಡಕ್ ಆದ್ರೂ ಕಹಿ ಆದ್ರೂ ಬೆಸ್ಟ್ ಅನ್ನೋ ಫೀಲ್ ಬರಿಸುವ ಬಾಸ್ ಪಾತ್ರದಲ್ಲಿ ನಾನಾ ಪಾಟೇಕರ್ ಸೈ ಎನಿಸಿಕೊಳ್ಳುತ್ತಾರೆ.
ಸಿನಿಮಾದ ಮತ್ತೊಂದು ಆಕರ್ಷಣೆ ಹಾಗೂ ಭಾವನಾತ್ಮಕವಾಗಿ ಸೆಳೆಯುವ ಅಷ್ಟೇ ಅಲ್ಲ ಕಣ್ಣೀರು ತರಿಸುವುದು ಸಿನಿಮಾದಲ್ಲಿರುವ ಮಹಿಳಾ ವಿಜ್ಞಾನಿಗಳು. ಕೊರೊನಾ ವ್ಯಾಕ್ಸಿನ್ ಕಂಡುಹಿಡಿದ ವಿಜ್ಞಾನಿಗಳ ತಂಡದಲ್ಲಿ ಇದ್ದವರು ಶೇಕಡ 70ರಷ್ಟು ಮಹಿಳಾ ವಿಜ್ಞಾನಿಗಳೇ. ಕೊರೊನಾ ಕಾಲಘಟ್ಟದಲ್ಲಿ ಇವರೆಲ್ಲಾ ತಿಂಗಳುಗಟ್ಟಲೆ ತಮ್ಮ ಮನೆಗಳಿಗೆ ಹೋಗದೆ, ದಿನದ 24 ಗಂಟೆಯೂ ಲ್ಯಾಬ್‌ಗಳಲ್ಲಿ ಜೀವದ ಹಂಗು ತೊರೆದು, ಪಿಪಿ ಕಿಟ್, ಮಾಸ್ಕ್‌ಗಳನ್ನು ಹಾಕಿಕೊಂಡು ಕೆಲಸ ಮಾಡಿದ್ದಾರೆ. ಈ ವೇಳೆ ಮನೆಯವರ ಪರಿಸ್ಥಿತಿ ನಿಜ ಕಣ್ಣೀರು ತರಿಸುತ್ತದೆ. ಆ ಎಲ್ಲಾ ಪರಿಸ್ಥಿತಿಗಳನ್ನು ಮಣಿಸಿ ಆ ಮಹಿಳಾ ವಿಜ್ಞಾನಿಗಳು ತಮ್ಮ ಕರ್ತವ್ಯಪರತೆ ಮೆರೆದು, ಮಹಿಳೆಯರು ತಾವು ಯಾರಿಗೂ ಕಮ್ಮಿಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಇನ್ನು ಇತ್ತೀಚಿಗೆ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಕೆಲ ವೆಬ್ ಮೀಡಿಯಾಗಳ ಕಾರ್ಯ ವೈಖರಿ ಬಗ್ಗೆ ಸಿನಿಮಾದಲ್ಲಿ ಸವಿವರವಾಗಿ ತೋರಿಸಲಾಗಿದೆ. ಸದಾ ಸರ್ಕಾರದ ಕಾಲೆಳೆಯಲು ಕಾಯುವ ವೆಬ್ ಮೀಡಿಯಾದ ಜರ್ನಲಿಸ್ಟ್. ಅದಕ್ಕಾಗಿ ವಿದೇಶದಿಂದ ಬರುವ ಫಂಡ್. ಟೂಲ್ ಕಿಟ್. ಅವರ ಅಣತಿಗೆ ತಕ್ಕಂತೆ ಸುಳ್ಳು ಸುದ್ದಿಗಳ ಪ್ರಚಾರ. ದೇಶದ ಹಿತಾಸಕ್ತಿಯನ್ನು ಗಮನಿಸದೆ ಸ್ವಹಿತಾಸಕ್ತಿಗೆ ನೀಡುವ ಮಹತ್ವ. ವಿದೇಶದ ವ್ಯಾಕ್ಸಿನ್ ನಮ್ಮ ಮಾರುಕಟ್ಟೆಗೆ ತರಲು ನಮ್ಮ ವ್ಯಾಕ್ಸಿನ್ ವಿರುದ್ದ ಷಡ್ಯಂತ್ರ, ಸುಳ್ಳು ವದಂತಿಗಳು ಹೀಗೆ ಎಲ್ಲವನ್ನೂ ಎಳೆ ಎಳೆಯಾಗಿ ತೋರಿಸಲಾಗಿದೆ. ಆದ್ರೆ ಯಾರು ಏನೇ ಮಾಡಿದರೂ ಸತ್ಯವನ್ನು ಯಾರು ಮುಚ್ಚಿಡಲು ಸಾಧ್ಯವಿಲ್ಲವೆಂಬುದನ್ನು ಸ್ವತಃ ಸುಳ್ಳು ಟೂಲ್‌ಕಿಟ್ ವರದಿ ಮಾಡಿದ ಜರ್ನಲಿಸ್ಟ್ ಒಪ್ಪಿಕೊಳ್ಳುವುದರ ಮೂಲಕ ಸಿನಿಮಾ ಮಾಧ್ಯಮ ಜಗತ್ತಿಗೆ ಉತ್ತಮ ಸಂದೇಶ ರವಾನಿಸಿದೆ.
ಸಿನಿಮಾ ಜೀವನಕ್ಕೆ ಬೇಕಾಗುವ ಸಾಕಷ್ಟು ಸಂದೇಶಗಳನ್ನು ಒಳಗೊಂಡಿದೆ. ಅದರಲ್ಲಿ ನನಗೆ ಅತ್ಯಂತ ಪ್ರಿಯವಾಗಿದ್ದು. ಜಗತ್ತು ನಮ್ಮನ್ನು ಜಾತಿ ಧರ್ಮದಿಂದ ಗುರುತಿಸುವುದಿಲ್ಲ. ಭಾರತೀಯರು ಅಂತಾ ಗುರುತಿಸುತ್ತದೆ. ಯಾರೇ ವಿದೇಶಿಗಳರು ನಮ್ಮನ್ನು ಯಾವ ಧರ್ಮ, ಜಾತಿಯಿಂದ ಬಂದಿದ್ದೀರಾ ಅಂತಾ ಕೇಳುವುದಿಲ್ಲ. ಬದಲಿಗೆ ಎಲ್ಲಿಂದ ಬಂದಿದ್ದೀರಾ ಎಂದು ಕೇಳುತ್ತಾರೆ. ನಾವು ಜಾತಿ ಧರ್ಮ ಮೀರಿ ನಾನು ಭಾರತೀಯ ಎಂಬುದು ಹೆಮ್ಮೆ ಎಂಬುದನ್ನು ಸಿನಿಮಾ ಸಾಬೀತುಪಡಿಸಿದೆ. ಇಂಡಿಯಾ ಕಾಂಟ್ ಡೂ ಇಟ್ಟು ಅನ್ನೋ ಟೀಕೆಯನ್ನು ಇಂಡಿಯಾ ಕ್ಯಾನ್ ಡೂ ಇಟ್ ಅಂತಾ ಬದಲಾಯಿಸಿಕೊಳ್ಳುವ ಮನಸ್ಥಿತಿ. ಕೊನೆಯದಾಗಿ ಸಿನಿಮಾದಲ್ಲಿ ಸರ್ಕಾರ ಬೇರೆ ಅಲ್ಲ ಭಾರತ ಬೇರೆ ಅಲ್ಲ. ರಾಜಕೀಯ ಕಾರಣಗಳಿಂದ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹೊರಟರೆ ಅದರ ಪರಿಣಾಮ ಭಾರತಕ್ಕೆ, ಭಾರತೀಯ ಜನರಿಗೆ ಆಗುತ್ತದೆ ಅನ್ನುವ ಸಂದೇಶ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕಾದ ಕಟುಸತ್ಯ.
ಸಿನಿಮಾದಲ್ಲಿ ಕಲರ್‌ಪುಲ್ ಸೀನ್‌ಗಳಿಲ್ಲ. ರೋಚಕ ಹೊಡೆದಾಟಗಳಿಲ್ಲ. ಹೀರೋಯಿಸಂ ಇತ್ಯಾದಿ ಇತ್ಯಾದಿ ಮಸಾಲಗಳಿಲ್ಲ. ಆದ್ರೆ ಪ್ರತಿಯೊಬ್ಬ ಭಾರತೀಯರ ಎದೆಯಿಬ್ಬಿಸುವಂತೆ ಮಾಡುವ ಸಿನಿಮಾ ಇದಾಗಿದೆ. ಭಾರತೀಯರ ಶಕ್ತಿಯನ್ನು ಎತ್ತಿ ತೋರಿಸುವ ಸಿನಿಮಾವಾಗಿದೆ. ಭಾರತೀಯರ ಮನಸು ಮಾಡಿದರೆ ಅಸಾಧ್ಯವಾದದ್ದು ಏನು ಇಲ್ಲ ಎಂಬುದನ್ನು ಚಿತ್ರ ಸಾಬೀತುಪಡಿಸಿದೆ. ಸಿನಿಮಾದಲ್ಲಿ ಪ್ರತಿಯೊಬ್ಬರು ನೋಡಿ ಅರ್ಥ ಮಾಡಿಕೊಳ್ಳಬೇಕಾದ ಸಾಕಷ್ಟು ವಿಷಯಗಳಿವೆ. ಆದ್ದರಿಂದ ಈ ಸಿನಿಮಾವನ್ನು ನೋಡಿ. ಮಕ್ಕಳಿಗಂತೂ ಕಡ್ಡಾಯವಾಗಿ ತೋರಿಸಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:18 pm, Thu, 30 November 23