ಚಿತ್ರ: ವೀರ ಸಿಂಹ ರೆಡ್ಡಿ
ನಿರ್ಮಾಣ: ಮೈತ್ರಿ ಮೂವೀ ಮೇಕರ್ಸ್
ನಿರ್ದೇಶನ: ಗೋಪಿಚಂದ್ ಮಲಿನೇನಿ
ಪಾತ್ರವರ್ಗ: ನಂದಮೂರಿ ಬಾಲಕೃಷ್ಣ, ದುನಿಯಾ ವಿಜಯ್, ವರಲಕ್ಷ್ಮೀ ಶರತ್ ಕುಮಾರ್, ಶ್ರುತಿ ಹಾಸನ್ ಮುಂತಾದವರು.
ಸ್ಟಾರ್: 3/5
ಸಂಕ್ರಾಂತಿ ಹಬ್ಬದ ಪ್ರಯುಕ್ತ ಅನೇಕ ಸಿನಿಮಾಗಳು ಬಿಡುಗಡೆ ಆಗಿವೆ. ಸ್ಟಾರ್ ನಟರ ಚಿತ್ರಗಳ ನಡುವೆ ಗಲ್ಲಾಪೆಟ್ಟಿಗೆಯಲ್ಲಿ ಪೈಪೋಟಿ ಏರ್ಪಟ್ಟಿದೆ. ಟಾಲಿವುಡ್ನಲ್ಲಿ ನಂದಮೂರಿ ಬಾಲಕೃಷ್ಣ ಅವರ ಅಭಿಮಾನಿಗಳು ‘ವೀರ ಸಿಂಹ ರೆಡ್ಡಿ’ ಚಿತ್ರಕ್ಕಾಗಿ ಕಾದಿದ್ದರು. ಅವರಿಗೆ ಸಂಕ್ರಾಂತಿಯ ಗಿಫ್ಟ್ ರೀತಿಯಲ್ಲಿ ಈ ಸಿನಿಮಾ ತೆರೆಕಂಡಿದೆ. ಬಾಲಯ್ಯ ಅವರ ಸಿನಿಮಾಗಳಿಗೆ ಪ್ರತ್ಯೇಕವಾದ ಅಭಿಮಾನಿ ಬಳಗ ಇದೆ. ಅಂಥವರಿಗಾಗಿ ಹೇಳಿ ಮಾಡಿಸಿದಂತೆ ‘ವೀರ ಸಿಂಹ ರೆಡ್ಡಿ’ ಸಿನಿಮಾ. ನಂದಮೂರಿ ಬಾಲಕೃಷ್ಣ ನಟನೆಯ ಸಿನಿಮಾದಲ್ಲಿ ಇರಬಹುದಾದ ಎಲ್ಲ ಕಮರ್ಷಿಯಲ್ ಅಂಶಗಳು ಕೂಡ ಈ ಚಿತ್ರದಲ್ಲಿ ಇವೆ. ಕನ್ನಡದ ನಟ ದುನಿಯಾ ವಿಜಯ್ ಅವರು ಈ ಸಿನಿಮಾದಲ್ಲಿ ವಿಲನ್ ಆಗಿ ನಟಿಸುವ ಮೂಲಕ ಟಾಲಿವುಡ್ಗೆ ಕಾಲಿಟ್ಟಿದ್ದಾರೆ. ಒಟ್ಟಾರೆ ಸಿನಿಮಾ ಹೇಗಿದೆ ಅಂತ ತಿಳಿಯಲು ಈ ವಿಮರ್ಶೆ ಓದಿ..
ನಂದಮೂರಿ ಬಾಲಕೃಷ್ಣ ಅವರ ಸಿನಿಮಾದಲ್ಲಿ ವೈಭವೀಕರಣಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಅದರಲ್ಲೂ ಫೈಟಿಂಗ್ ದೃಶ್ಯಗಳು ಕೊಂಚ ಅತಿರೇಕ ಎಂಬಂತೆ ಇರುತ್ತವೆ. ಮಾಸ್ ಡೈಲಾಗ್ ಕೂಡ ಜೋರಾಗಿ ಇರುತ್ತದೆ. ಇದನ್ನೆಲ್ಲ ಅವರ ಅಪ್ಪಟ ಅಭಿಮಾನಿಗಳು ಇಷ್ಟಪಡುತ್ತಾರೆ. ಅಂತಹ ಎಲ್ಲ ಮಾಸ್ ಅಂಶಗಳು ‘ವೀರ ಸಿಂಹ ರೆಡ್ಡಿ’ ಚಿತ್ರದಲ್ಲಿ ರಿಪೀಟ್ ಆಗಿವೆ. ಹಾಗಾಗಿ ಬಾಲಯ್ಯ ಶೈಲಿಯ ಸಿನಿಮಾಗಳನ್ನು ಇಷ್ಟಪಡುವ ಮಂದಿಗೆ ಈ ಚಿತ್ರ ಹಿಡಿಸುತ್ತದೆ.
ಇದನ್ನೂ ಓದಿ: Vedha Review: ಉಪದೇಶ ಮಾಡೋದರ ಜೊತೆಗೆ ಹೆಣ್ಮಕ್ಕಳ ಕೈಗೆ ಆಯುಧ ನೀಡಿದ ‘ವೇದ’
ಹತ್ತಾರು ಊರಿಗೆ, ಸಾವಿರಾರು ಕುಟುಂಬಗಳಿಗೆ ಯಜಮಾನನ ರೀತಿ ಬದುಕುತ್ತಿರುವ ವೀರ ಸಿಂಹ ರೆಡ್ಡಿ (ನಂದಮೂರಿ ಬಾಲಕೃಷ್ಣ) ತನ್ನ ಮಗ ಮತ್ತು ಪತ್ನಿಯಿಂದ ದೂರ ಇದ್ದಾನೆ. ತಂಗಿ ಕೂಡ ಈತನನ್ನು ಬಿಟ್ಟು ಖಳನಾಯಕರ ಬಳಗ ಸೇರಿಕೊಂಡಿದ್ದಾಳೆ. ಈತನ ಸಂಸಾರ ಹೀಗೆ ಛಿದ್ರವಾಗಲು ಕಾರಣ ಏನು ಎಂಬುದು ಫ್ಲ್ಯಾಶ್ಬ್ಯಾಕ್ನಲ್ಲಿ ತಿಳಿಯಲಿದೆ. ವೀರ ಸಿಂಹ ರೆಡ್ಡಿ ವಿರುದ್ಧ ಖಳನಾಯಕ ಪ್ರತಾಪ್ ರೆಡ್ಡಿ (ದುನಿಯಾ ವಿಜಯ್) ಸದಾ ಕಾಲ ಕತ್ತಿ ಮಸೆಯುತ್ತಾನೆ. ಆತನ ದ್ವೇಷಕ್ಕೂ ಕಾರಣ ಇದೆ. ಅಂತಿಮವಾಗಿ ವೀರ ಸಿಂಹ ರೆಡ್ಡಿಯ ಸಂಸಾರದ ಒಡಕು ಸರಿ ಆಗುತ್ತಾ? ದುಷ್ಟಬುದ್ಧಿ ತೋರುವ ಪ್ರತಾಪ್ ರೆಡ್ಡಿಯ ಅಂತ್ಯ ಹೇಗಾಗುತ್ತದೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.
ವೀರ ಸಿಂಹ ರೆಡ್ಡಿ ಮತ್ತು ಜಯ ಸಿಂಹ ರೆಡ್ಡಿ ಎಂಬ ಎರಡು ಪಾತ್ರಗಳಲ್ಲಿ ಬಾಲಯ್ಯ ನಟಿಸಿದ್ದಾರೆ. ತಂದೆ ವೀರ ಸಿಂಹ ರೆಡ್ಡಿಯ ಕಥೆ ಆಂಧ್ರದಲ್ಲಿ ಶುರುವಾಗುತ್ತದೆ. ಮಗ ಜಯ ಸಿಂಹ ರೆಡ್ಡಿಯ ಕಥೆ ಇಸ್ತಾಂಬೂಲ್ನಲ್ಲಿ ನಡೆಯುತ್ತದೆ. ಈ ಎರಡೂ ಪಾತ್ರಗಳು ಅವರ ಅಭಿಮಾನಿಗಳಿಗೆ ಇಷ್ಟವಾಗುವಂತೆ ಇವೆ. ಎರಡರ ನಡುವೆ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.
ಇದನ್ನೂ ಓದಿ: Varisu Movie Review: ಇವ ಎಂಟರ್ಟೇನರ್ ವಾರಸುದಾರ; ಎಳೆದಾಟವೇ ಪ್ರೇಕ್ಷಕನಿಗೆ ಭಾರ
‘ವೀರ ಸಿಂಹ ರೆಡ್ಡಿ’ ಸಿನಿಮಾಗೆ ಶ್ರುತಿ ಹಾಸನ್ ನಾಯಕಿ. ಆದರೆ ಅವರ ಪಾತ್ರಕ್ಕೆ ಹೆಚ್ಚಿನ ಮಹತ್ವ ಇಲ್ಲ. ಎರಡು ಹಾಡು, ಒಂದೆರಡು ದೃಶ್ಯಗಳಿಗೆ ಮಾತ್ರ ಅವರು ಸೀಮಿತವಾಗಿದ್ದಾರೆ. ನಾಯಕನ ತಂಗಿ ಮತ್ತು ವಿಲನ್ ಪತ್ನಿಯಾಗಿ ವರಲಕ್ಷ್ಮೀ ಶರತ್ ಕುಮಾರ್ ನಟಿಸಿದ್ದಾರೆ. ಅವರ ಪಾತ್ರಕ್ಕೆ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಸಿಕ್ಕಿರುವ ಅವಕಾಶವನ್ನು ಅವರು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅವರ ನಟನೆ ಮೆಚ್ಚುವಂತಿದೆ. ಕಥೆಗೆ ಟ್ವಿಸ್ಟ್ ನೀಡುವಂತಹ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ.
ನಟ ದುನಿಯಾ ವಿಜಯ್ ಅವರು ಟಾಲಿವುಡ್ನಲ್ಲಿ ನಟಿಸಿದ ಮೊದಲ ಸಿನಿಮಾ ಇದು. ಆ ಕಾರಣಕ್ಕಾಗಿ ಅವರ ಅಭಿಮಾನಿಗಳಿಗೆ ‘ವೀರ ಸಿಂಹ ರೆಡ್ಡಿ’ ಚಿತ್ರ ವಿಶೇಷ ಎನಿಸಿಕೊಂಡಿದೆ. ಬಾಲಯ್ಯ ಅವರಂತಹ ಮಾಸ್ ಹೀರೋ ಎದುರು ತೊಡೆತಟ್ಟಿ ನಿಂತು ನಟಿಸುವ ಅವಕಾಶ ದುನಿಯಾ ವಿಜಯ್ ಅವರಿಗೆ ಸಿಕ್ಕಿದೆ. ಆ್ಯಕ್ಷನ್ ದೃಶ್ಯಗಳಲ್ಲಿ ಅವರು ಅಬ್ಬರಿಸಿದ್ದಾರೆ. ಅವರ ಪ್ರತಿಭೆಯನ್ನು ನಿರ್ದೇಶಕರು ಇನ್ನಷ್ಟು ಸಮರ್ಥವಾಗಿ ಬಳಸಿಕೊಳ್ಳುವ ಸಾಧ್ಯತೆ ಇತ್ತು. ಆದರೆ ಅಬ್ಬರಕ್ಕಷ್ಟೇ ಆ ಪಾತ್ರ ಸೀಮಿತವಾಗಿದೆ.
ಇದನ್ನೂ ಓದಿ: Jamaligudda Review: ಜಮಾಲಿಗುಡ್ಡ ಸಹಜ-ಸುಂದರ; ಪ್ರೇಕ್ಷಕ ನಿರೀಕ್ಷಿಸೋದು ಅದಕ್ಕಿಂತಲೂ ಎತ್ತರ
‘ವೀರ ಸಿಂಹ ರೆಡ್ಡಿ’ ಸಿನಿಮಾದಲ್ಲಿ 7-8 ಫೈಟಿಂಗ್ ದೃಶ್ಯಗಳಿವೆ. ಎಲ್ಲಾ ಲಾಜಿಕ್ಗಳನ್ನು ಬದಿಗೊತ್ತಿದಂತಹ ಈ ಸಾಹಸ ದೃಶ್ಯಗಳನ್ನು ಯಾವುದೇ ಪ್ರಶ್ನೆ ಇಲ್ಲದೆ ಎಂಜಾಯ್ ಮಾಡಬೇಕಷ್ಟೇ. ಹೊಡಿಬಡಿ ದೃಶ್ಯಗಳಿಗೆ ನಿರ್ದೇಶಕರು ಹೆಚ್ಚು ಮಹತ್ವ ನೀಡಿದ್ದಾರೆ. ಮೊದಲಾರ್ಧ ಪೂರ್ತಿ ಫೈಟಿಂಗ್ಗೆ ಮೀಸಲಾಗಿದೆ. ದ್ವಿತೀಯಾರ್ಧದಲ್ಲಿ ಆ್ಯಕ್ಷನ್ ಜೊತೆಗೆ ಎಮೋಷನ್ ಬೆರೆಸುವ ಕಾಯಕ ಆಗಿದೆ. ಅಣ್ಣ-ತಂಗಿ ಸಂಬಂಧದ ಭಾವನಾತ್ಮಕ ದೃಶ್ಯಗಳಿಂದಾಗಿ ಫ್ಯಾಮಿಲಿ ಪ್ರೇಕ್ಷಕರಿಗೆ ಈ ಚಿತ್ರ ಹಿಡಿಸಬಹುದು.
ಮೇಕಿಂಗ್ ವಿಚಾರದಲ್ಲಿ ನಿರ್ದೇಶಕ ಗೋಪಿಚಂದ್ ಮಲಿನೇನಿ ಅವರು ಎಲ್ಲಿಯೂ ರಾಜಿ ಆಗಿಲ್ಲ. ಆ್ಯಕ್ಷನ್ ದೃಶ್ಯಗಳನ್ನು ಅವರು ತುಂಬ ಗ್ರ್ಯಾಂಡ್ ಆಗಿ ಚಿತ್ರಿಸಿದ್ದಾರೆ. ಹಾಡುಗಳ ವಿಚಾರಕ್ಕೂ ಈ ಮಾತು ಅನ್ವಯ. ಆದರೆ ಮೂಗಿಗಿಂತಲೂ ಮೂಗುತಿ ಭಾರ ಎಂಬಂತೆ ಕಥೆಯೊಳಗೆ ಕಂಡಕಂಡಲ್ಲಿ ಫೈಟಿಂಗ್ ದೃಶ್ಯಗಳು ನುಸುಳಿವೆ. ಹಾಡುಗಳು ಕೂಡ ಹೆಚ್ಚುವರಿ ಎನಿಸುವ ರೀತಿಯಲ್ಲಿ ತುರುಕಲ್ಪಟ್ಟಿವೆ. ಎಸ್. ಥಮನ್ ಅವರು ಹಾಡುಗಳು ಹಾಗೂ ಹಿನ್ನೆಲೆ ಸಂಗೀತದ ಮೂಲಕ ಅಬ್ಬರಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:28 am, Thu, 12 January 23