Jamaligudda Review: ಜಮಾಲಿಗುಡ್ಡ ಸಹಜ-ಸುಂದರ; ಪ್ರೇಕ್ಷಕ ನಿರೀಕ್ಷಿಸೋದು ಅದಕ್ಕಿಂತಲೂ ಎತ್ತರ
Once Upon A Time In Jamaligudda: ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರ ಇಂದು (ಡಿ.30) ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಡಾಲಿ ಧನಂಜಯ್ ಹಾಗೂ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿದ್ದಾರೆ.
ಚಿತ್ರ: ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ
ನಿರ್ಮಾಣ: ಶ್ರೀ ಹರಿ
ನಿರ್ದೇಶನ: ಕುಶಾಲ್ ಗೌಡ
ಪಾತ್ರವರ್ಗ: ಡಾಲಿ ಧನಂಜಯ್, ಅದಿತಿ ಪ್ರಭುದೇವ, ಯಶ್ ಶೆಟ್ಟಿ, ಪ್ರಾಣ್ಯ ಪಿ. ರಾವ್ ಮುಂತಾದವರು.
ಸ್ಟಾರ್: 2.5/5
ನಟ ಧನಂಜಯ್ ಒಂದು ಸಿನಿಮಾ ಒಪ್ಪಿಕೊಳ್ಳುತ್ತಾರೆ ಎಂದರೆ ಅದರಲ್ಲಿ ಏನೋ ಒಂದು ವಿಶೇಷತೆ ಇದ್ದೇ ಇರುತ್ತದೆ ಎಂಬ ನಂಬಿಕೆ ಅವರ ಅಭಿಮಾನಿಗಳದ್ದು. ಅದು ಮಾಸ್ ಆಗಿರಬಹುದು ಅಥವಾ ಕ್ಲಾಸ್ ಆಗಿರಬಹುದು. ಯಾವುದೋ ಒಂದು ರೀತಿಯಲ್ಲಿ ಧನಂಜಯ್ ಅಚ್ಚರಿ ನೀಡುತ್ತಾರೆ ಎಂಬ ನಂಬಿಕೆಯಲ್ಲಿ ಫ್ಯಾನ್ಸ್ ಸಿನಿಮಾ ನೋಡುತ್ತಾರೆ. ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರದಲ್ಲಿ ಧನಂಜಯ್ ಅವರು ಕ್ಲಾಸ್ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಒಳ್ಳೆಯತನವನ್ನು ಮೈತುಂಬ ಆವಾಹಿಸಿಕೊಂಡಿರುವ ಮುಗ್ಧ ಯುವಕನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಹೀಗೆ ಅವರನ್ನು ಡಿಫರೆಂಟ್ ಆಗಿ ನೋಡಲು ಬಯಸುವ ಅಭಿಮಾನಿಗಳಿಗೆ ‘ಜಮಾಲಿಗುಡ್ಡ’ ರುಚಿಸುತ್ತದೆ. ಒಟ್ಟಾರೆ ಈ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..
‘ಜಮಾಲಿಗುಡ್ಡ’ ಚಿತ್ರದ ಒನ್ಲೈನ್ ಕಥೆ:
ಈ ಚಿತ್ರದ ಕಥಾನಾಯಕ ಕೃಷ್ಣ ಅಲಿಯಾಸ್ ಹಿರೋಶಿಮಾ ಸಿಕ್ಕಾಪಟ್ಟೆ ಮುಗ್ಧ ಯುವಕ. ಆದರೆ, ಅವರ ಹಿಂದೆ ಪೊಲೀಸರು ಬೆನ್ನು ಬಿದ್ದಿದ್ದಾರೆ. ಚುಕ್ಕಿ ಎಂಬ ಪುಟ್ಟ ಹುಡುಗಿ ಆತನನ್ನು ಪ್ರೀತಿಯಿಂದ ಮಾಮ ಅಂತ ಕರೆಯುತ್ತಾಳೆ. ಇಬ್ಬರೂ ಒಂದು ಕಾರಿನಲ್ಲಿ ಪ್ರವಾಸಕ್ಕೆ ಹೊರಟಿದ್ದಾರೆ. ಆದರೆ ಆ ಹುಡುಗಿಯನ್ನೇ ಕಿಡ್ನಾಪ್ ಮಾಡಿದ ಆರೋಪ ಕೃಷ್ಣನ ಮೇಲಿದೆ! ಅದರ ಹಿಂದೆ ಒಂದು ಫ್ಲ್ಯಾಶ್ ಬ್ಯಾಕ್ ಇದೆ. ಅದೇನು ಅಂತ ತಿಳಿಯಲು ಸಿನಿಮಾ ನೋಡಬೇಕು.
ಇದು ಆ ಕಾಲದ ‘ಜಮಾಲಿಗುಡ್ಡ’:
‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಎಂದು ಶೀರ್ಷಿಕೆಯೇ ಹೇಳುವಂತೆ ಇದು ಹಳೇ ಕಾಲದ ಕಥೆ. 90ರ ದಶಕದ ರೆಟ್ರೋ ಅನುಭವವನ್ನು ಪ್ರೇಕ್ಷಕರಿಗೆ ನೀಡಲಾಗಿದೆ. ಅದಕ್ಕಾಗಿ ಇಡೀ ತಂಡ ಸಾಕಷ್ಟು ಶ್ರಮಪಟ್ಟಿದೆ. ಮೊಬೈಲ್ ಫೋನ್ಗಳು ಇಲ್ಲದ ದಿನಗಳನ್ನು ನೋಡುಗರ ಮುಂದೆ ತೆರೆದಿಡಲಾಗಿದೆ. ಅದೇ ರೀತಿ, ಈ ಕಾಲಕ್ಕೆ ಒಗ್ಗಿಕೊಳ್ಳಲು ಕೊಂಚ ಕಷ್ಟಪಟ್ಟಿದೆ. ಆದರೆ ಹೊಸತಾಗಿ ಏನನ್ನಾದರೂ ಬಯಸುವ ಪ್ರೇಕ್ಷಕರಿಗೆ ಈ ಚಿತ್ರದಲ್ಲಿ ಕೊರತೆ ಕಾಣಿಸುತ್ತದೆ.
ಧನಂಜಯ್-ಯಶ್ ಶೆಟ್ಟಿ ಕಾಂಬಿನೇಷನ್:
ನಟ ಯಶ್ ಶೆಟ್ಟಿ ಅವರು ಎಂದಿನಂತೆ ಈ ಸಿನಿಮಾದಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರ ಮಾಡಿದ್ದಾರೆ. ಕ್ರೂರವಾದ ಆ ಪಾತ್ರಕ್ಕೆ ಅವರ ಗೆಟಪ್ ಕೂಡ ಸಾಥ್ ನೀಡಿದೆ. ನಾಗಸಾಕಿ ಎಂಬ ಖೈದಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಹಿರೋಶಿಮಾ ಮತ್ತು ನಾಗಸಾಕಿ ನಡುವಿನ ಗೆಳೆತನ ಹಾಗೂ ಜಗಳ ಗಮನ ಸೆಳೆಯುತ್ತದೆ. ಸಾಹಸ ದೃಶ್ಯಗಳಲ್ಲಿ ಇಬ್ಬರೂ ಚೆನ್ನಾಗಿ ಸ್ಕೋರ್ ಮಾಡಿದ್ದಾರೆ.
ಕರುಣೆ ಉಕ್ಕಿಸುವ ಪಾತ್ರಗಳ ಕಹಾನಿ:
ನಟಿ ಅದಿತಿ ಪ್ರಭುದೇವ ಅವರು ಈ ಸಿನಿಮಾದಲ್ಲಿ ರುಕ್ಕು ಎಂಬ ಹಳ್ಳಿ ಹುಡುಗಿಯ ಪಾತ್ರ ನಿಭಾಯಿಸಿದ್ದಾರೆ. ಕಡು ಬಡತನದಲ್ಲಿ ನೊಂದು-ಬೆಂದ ಆ ಹುಡುಗಿಯ ಕಥೆ ಕೇಳಿದರೆ ಅಯ್ಯೋ ಪಾಪ ಎನಿಸುವಂಥದ್ದು. ಅಂಥ ಹುಡುಗಿಯನ್ನು ಪ್ರೀತಿಸುವ ಕಥಾನಾಯಕ ಕೃಷ್ಣ ಕೂಡ ಸಿಕ್ಕಾಪಟ್ಟೆ ಮುಗ್ಧ ಹುಡುಗ. ಇನ್ನು, ತಂದೆ-ತಾಯಿಯ ಜಗಳದ ಮಧ್ಯದಲ್ಲಿ ನಲುಗಿದ ಬಾಲಕಿಯ ಪಾತ್ರದಲ್ಲಿ ಪ್ರಾಣ್ಯ ಪಿ. ರಾವ್ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಎಲ್ಲ ಪಾತ್ರಗಳು ಕರುಣೆ ಉಕ್ಕಿಸುವಲ್ಲಿ ಸಫಲವಾಗಿವೆ. ಆದರೆ ಮನರಂಜನೆ ನೀಡುವಲ್ಲಿ ಹಿಂದೇಟು ಹಾಕಿವೆ.
ಕಲಾವಿದರ ಅಭಿನಯಕ್ಕೆ ಚಪ್ಪಾಳೆ:
ನಟನೆ ವಿಚಾರದಲ್ಲಿ ಈ ಸಿನಿಮಾದ ಎಲ್ಲ ಕಲಾವಿದರು ಮೆಚ್ಚುಗೆಗೆ ಅರ್ಹರು. ಡಾಲಿ ಧನಂಜಯ್ ಅವರು ಎಂದಿನಂತೆ ತಮ್ಮ ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ. ಅದಿತಿ ಪ್ರಭುದೇವ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮೊದಲೇ ಹೇಳಿದಂತೆ ಯಶ್ ಶೆಟ್ಟಿ ಅವರಿಗೂ ಚಪ್ಪಾಳೆ ಸಲ್ಲಲೇಬೇಕು. ಬಾಲ ನಟಿ ಪ್ರಾಣ್ಯ ಪಿ. ರಾವ್ ಸಹ ಇಷ್ಟವಾಗುತ್ತಾರೆ. ಕೆಲವೇ ಪಾತ್ರಗಳಲ್ಲಿ ಬಂದರೂ ನಟಿ ಭಾವನಾ ಅಬ್ಬರಿಸುತ್ತಾರೆ.
90ರ ದಶಕದ ಫೀಲ್ ನೀಡುವಂತೆ ತಾಂತ್ರಿಕವಾಗಿ ಸಿನಿಮಾ ಅಚ್ಚುಕಟ್ಟಾಗಿ ಮೂಡಿಬಂದಿದೆ. ಹಿನ್ನೆಲೆ ಸಂಗೀತ ಹಾಗೂ ಹಾಡುಗಳಲ್ಲಿ ಅನುಕ್ರಮವಾಗಿ ಅನೂಪ್ ಸೀಳಿನ್ ಮತ್ತು ಅರ್ಜುನ್ ಜನ್ಯ ಕೈ ಜೋಡಿಸಿದ್ದಾರೆ. ಹಾಗಾಗಿ ಪ್ರೇಕ್ಷಕರ ನಿರೀಕ್ಷೆಯ ಮಟ್ಟ ಹೆಚ್ಚುವುದು ಸಹಜ. ಆದರೆ ಸಂಗೀತದ ದೃಷ್ಟಿಯಿಂದ ‘ಜಮಾಲಿಗುಡ್ಡ’ ಆ ಎತ್ತರವನ್ನು ತಲುಪಲು ಇನ್ನಷ್ಟು ಪ್ರಯತ್ನ ಬೇಕಿತ್ತು ಎನಿಸುತ್ತದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:56 am, Fri, 30 December 22