Triple Riding Movie Review: ‘ತ್ರಿಬಲ್ ರೈಡಿಂಗ್’ ರೇಸ್ನಲ್ಲಿ ಓವರ್ಟೇಕ್ ಮಾಡಿದ ಸಾಧುಕೋಕಿಲ, ರಂಗಾಯಣ ರಘು
Sadhu Kokila | Golden Star Ganesh: ‘ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ಲವ್ ಸ್ಟೋರಿ ಮತ್ತು ಕಾಮಿಡಿ ನಡುವೆ ರೇಸ್ ಏರ್ಪಟ್ಟಂತಿದೆ. ಒಟ್ಟಾರೆ ಸಿನಿಮಾ ಹೇಗಿದೆ ಅಂತ ತಿಳಿಯಲು ಈ ವಿಮರ್ಶೆ ಓದಿ..
ಸಿನಿಮಾ: ತ್ರಿಬಲ್ ರೈಡಿಂಗ್
ನಿರ್ಮಾಣ: ರಾಮ್ಗೋಪಾಲ್ ವೈ.ಎಂ.
ನಿರ್ದೇಶನ: ಮಹೇಶ್ ಗೌಡ
ಪಾತ್ರವರ್ಗ: ಗಣೇಶ್, ಅದಿತಿ ಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್, ಸಾಧುಕೋಕಿಲ, ರಂಗಾಯಣ ರಘು ಮುಂತಾದವರು.
ಸ್ಟಾರ್: 3/5
‘ಗೋಲ್ಡನ್ ಸ್ಟಾರ್’ ಗಣೇಶ್ ಅವರು ಲವ್ ಸ್ಟೋರಿ ಸಿನಿಮಾಗಳಿಂದಲೇ ಫೇಮಸ್. ಪ್ರೀತಿ ಪಡೆಯಲು ಒದ್ದಾಡುವ ಪ್ರೇಮಿಯಾಗಿ ಅವರು ಈಗಾಗಲೇ ಅನೇಕ ಚಿತ್ರಗಳಲ್ಲಿ ಜನರನ್ನು ರಂಜಿಸಿದ್ದಾರೆ. ‘ತ್ರಿಬಲ್ ರೈಡಿಂಗ್’ ಸಿನಿಮಾದಲ್ಲೂ ಅದು ಮುಂದುವರಿದಿದೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಚಿತ್ರದ ಶೀರ್ಷಿಕೆಯೇ ಸೂಚಿಸುವಂತೆ ಇದು ಮೂರು ಪ್ರೇಮ್ ಕಹಾನಿ ಇರುವ ಸಿನಿಮಾ. ಈ ಚಿತ್ರದಲ್ಲಿ ಮೂವರು ಸುಂದರಿಯರ ಪ್ರೀತಿಯಲ್ಲಿ ಸಿಕ್ಕಿಕೊಂಡು ಹೀರೋ ಸಂಕಷ್ಟ ಅನುಭವಿಸುತ್ತಾನೆ. ಆ ಸಂಕಷ್ಟಗಳು ನೋಡುಗರಿಗೆ ನಗು ತರಿಸುತ್ತವೆ. ಜೊತೆಗೆ ಸಾಕಷ್ಟು ಟ್ವಿಸ್ಟ್ ಕೂಡ ಎದುರಾಗುತ್ತವೆ.
ಈ ಚಿತ್ರದ ಕಥೆಯ ಎಳೆ ಏನು ಎಂದು ಹೇಳಿಬಿಟ್ಟರೆ ಅಸಲಿ ಮಜಾ ಮಾಯವಾಗುತ್ತದೆ. ಅದನ್ನು ಚಿತ್ರಮಂದಿರದಲ್ಲಿ ನೋಡಿ ತಿಳಿಯುವುದೇ ಸೂಕ್ತ. ಇಡೀ ಸಿನಿಮಾವನ್ನು ಹಾಸ್ಯದ ಶೈಲಿಯಲ್ಲಿ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಹಾಗಾಗಿ ಲವ್ ಸ್ಟೋರಿಯ ತೀವ್ರತೆ ಕಮ್ಮಿ ಆಗಿದೆ. ಲವ್ ಸ್ಟೋರಿಗಿಂತಲೂ ಕಾಮಿಡಿಯನ್ನೇ ಹೆಚ್ಚಾಗಿ ಬಯಸುವ ಪ್ರೇಕ್ಷಕರಿಗೆ ಈ ಸಿನಿಮಾ ಹಿಡಿಸುತ್ತದೆ.
ಕಾಮಿಡಿ ವಿಚಾರದಲ್ಲಿ ಗಣೇಶ್ ಕೂಡ ಪರಿಣಿತರು. ಸಾಧು ಕೋಕಿಲ, ರಂಗಾಯಣ ರಘು, ಕುರಿ ಪ್ರತಾಪ್, ರಚನಾ ಇಂದರ್, ರವಿಶಂಕರ್ ಗೌಡ ಜೊತೆ ಸೇರಿ ಅವರು ಭರಪೂರ ನಗಿಸುತ್ತಾರೆ. ‘ತ್ರಿಬಲ್ ರೈಡಿಂಗ್’ ಚಿತ್ರದ ಲವ್ ಸ್ಟೋರಿ ಮತ್ತು ಕಾಮಿಡಿ ನಡುವೆ ಒಂದು ರೇಸ್ ಏರ್ಪಟ್ಟಂತಿದೆ. ಈ ಓಟದಲ್ಲಿ ಸಾಧುಕೋಕಿಲ ಮತ್ತು ರಂಗಾಯಣ ರಘು ಅವರು ಓವರ್ ಟೇಕ್ ಮಾಡುತ್ತಾರೆ. ಬೇರೆಲ್ಲ ಕಲಾವಿದರನ್ನೂ ಹಿಂದಿಕ್ಕಿ ಇವರಿಬ್ಬರು ನಗುಸುವ ರೇಸ್ನಲ್ಲಿ ಮುಂದೆ ಸಾಗುತ್ತಾರೆ. ಆರಂಭದಿಂದ ಕ್ಲೈಮ್ಯಾಕ್ಸ್ ತನಕ ಸಾಧುಕೋಕಿಲ ಹೆಚ್ಚು ಸ್ಕೋರ್ ಮಾಡುತ್ತಾರೆ. ಅವರ ಅಭಿನಯದಿಂದ ಈ ಚಿತ್ರದ ಕಾಮಿಡಿ ತೂಕ ಹೆಚ್ಚಿದೆ.
ಹೀರೋ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಚ್ಯುತ್ ಕುಮಾರ್ ಅವರಿಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ. ರವಿಶಂಕರ್, ಶೋಭರಾಜ್, ಶರತ್ ಲೋಹಿತಾಶ್ವ ಅವರು ಆಗಾಗ ಕಾಣಿಸಿಕೊಂಡು ಅಬ್ಬರಿಸಿದ್ದಾರೆ. ಆರಂಭದಿಂದಲೂ ಖಡಕ್ ಆಗಿ ಕಾಣಿಸುವ ರವಿಶಂಕರ್ ಅವರು ಕೊನೆಯಲ್ಲಿ ಕಾಮಿಡಿ ಕಿಕ್ ನೀಡಿ ಚಪ್ಪಾಳೆ ಗಿಟ್ಟಿಸುತ್ತಾರೆ.
ಮೇಕಿಂಗ್ ವಿಚಾರದ ಬಗ್ಗೆ ನಿರ್ದೇಶಕರು ಹೆಚ್ಚು ಗಮನ ಹರಿಸುವ ಅವಶ್ಯಕತೆ ಇತ್ತು ಎನಿಸುತ್ತದೆ. ಫೈಟಿಂಗ್ ದೃಶ್ಯಗಳು ಅನವಶ್ಯಕ ತುರುಕಿದಂತಿವೆ. ಅದರಲ್ಲೂ ಹೊಸತನ ಕಾಣಿಸದು. ಗಣೇಶ್ ಚಿತ್ರದಲ್ಲಿ ಅಭಿಮಾನಿಗಳು ಹಾಡುಗಳನ್ನು ವಿಶೇಷವಾಗಿ ನಿರೀಕ್ಷಿಸುತ್ತಾರೆ. ಆ ನಿರೀಕ್ಷೆಯ ಮಟ್ಟ ತಲುಪಲು ‘ತ್ರಿಬಲ್ ರೈಡಿಂಗ್’ ಹಾಡುಗಳಿಗೆ ಇನ್ನಷ್ಟು ತೂಕ ಇರಬೇಕಿತ್ತು. ಚಿತ್ರದ ಮೊದಲಾರ್ಧ ನೀರಸವಾಗಿ ಸಾಗುತ್ತದೆ. ಆ ಬಗ್ಗೆ ನಿರ್ದೇಶಕರು ಗಮನ ಹರಿಸಿದ್ದರೆ ಚಿತ್ರದ ಮೆರುಗು ಹೆಚ್ಚುತ್ತಿತ್ತು. ದ್ವಿತೀಯಾರ್ಧದಲ್ಲಿ ನಿರೂಪಣೆ ಕೊಂಚು ಚುರುಕು ಪಡೆದುಕೊಂಡಿದೆ.
ಅದಿತಿ ಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್ ಅವರು ರಮ್ಯಾ, ರಕ್ಷಿತಾ, ರಾಧಿಕಾ ಎಂಬ ಪಾತ್ರಗಳಲ್ಲಿ ಸ್ಕ್ರೀನ್ ಸ್ಪೇಸ್ ಸಮನಾಗಿ ಹಂಚಿಕೊಂಡಿದ್ದಾರೆ. ಈ ಮಧ್ಯದಲ್ಲಿ ರಶ್ಮಿಕಾ ಎಂಬ ಪಾತ್ರ ಕೂಡ ಎಂಟ್ರಿ ಆಗುತ್ತದೆ! ಅದು ಸಸ್ಪೆನ್ಸ್ ಅಂಶ ಆದ್ದರಿಂದ ಚಿತ್ರಮಂದಿರದಲ್ಲಿ ನೋಡುವುದೇ ಸೂಕ್ತ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:05 am, Fri, 25 November 22