Review: ಸಿನಿಮಾ ಕನಸು ಕಂಡವರಿಗೆ ಕನ್ನಡ ಮೀಡಿಯಂ ಕುಮಾರನ ಸಕ್ಸಸ್ ಕಹಾನಿ

Review: ಸಿನಿಮಾ ಕನಸು ಕಂಡವರಿಗೆ ಕನ್ನಡ ಮೀಡಿಯಂ ಕುಮಾರನ ಸಕ್ಸಸ್ ಕಹಾನಿ
Andondittu Kaala Movie Review
ಅಂದೊಂದಿತ್ತು ಕಾಲ
UA
  • Time - 115 Minutes
  • Released - 29 August
  • Language - Kannada
  • Genre - Drama, Family, Romantic
Cast - ವಿನಯ್ ರಾಜ್​​ಕುಮಾರ್, ಅದಿತಿ ಪ್ರಭುದೇವ, ನಿಶಾ ರವಿಕೃಷ್ಣನ್, ಅರುಣಾ ಬಾಲರಾಜ್, ಕಡ್ಡಿಪುಡಿ ಚಂದ್ರು, ಜಗ್ಗಪ್ಪ, ದೊಡ್ಡರಂಗೇಗೌಡ ಮುಂತಾದವರು.
Director - ಕೀರ್ತಿ
3
Critic's Rating

Updated on: Aug 29, 2025 | 3:35 PM

ನಟ ವಿನಯ್ ರಾಜ್​​ಕುಮಾರ್ (Vinay Rajkumar) ಅವರು ಪ್ರತಿ ಬಾರಿಯೂ ಬೇರೆ ಬೇರೆ ರೀತಿಯ ಕಥೆ ಮತ್ತು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಾಧ್ಯವಾದಷ್ಟು ಕ್ಲಾಸ್ ಆಗಿಯೇ ಅವರು ಜನರನ್ನು ರಂಜಿಸಲು ಪ್ರಯತ್ನಿಸುತ್ತಾರೆ. ಈಗ ಅವರು ನಟಿಸಿರುವ ‘ಅಂದೊಂದಿತ್ತು ಕಾಲ’ ಸಿನಿಮಾ (Andondittu Kaala Movie) ಬಿಡುಗಡೆ ಆಗಿದೆ. ಕೀರ್ತಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಭುವನ್ ಸುರೇಶ್ ಅವರು ನಿರ್ಮಾಣ ಮಾಡಿದ್ದಾರೆ. ರಾಘವೇಂದ್ರ ವಿ. ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ರಿಲೀಸ್​​ಗಿಂತ ಮುನ್ನ ಈ ಸಿನಿಮಾದ ಹಾಡುಗಳು ಸದ್ದು ಮಾಡಿದ್ದವು. ಆ ಕಾರಣದಿಂದಲೂ ಈ ಚಿತ್ರದ ಮೇಲೆ ಜನರಿಗೆ ನಿರೀಕ್ಷೆ ಮೂಡಿತ್ತು. ಹಾಗಾದರೆ ಸಿನಿಮಾ ಹೇಗಿದೆ? ಈ ಚಿತ್ರದಲ್ಲಿನ ಕಥೆ ಏನು? ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಅಂಶಗಳು ಏನೆಲ್ಲ ಇವೆ ಅಂತ ತಿಳಿಯಲು ಈ ವಿಮರ್ಶೆ (Andondittu Kaala Review) ಓದಿ..

ಡಾ. ರಾಜ್​​ಕುಮಾರ್ ಅವರದ್ದು ಸಿನಿಮಾ ಕುಟುಂಬ. ಅವರ ಫ್ಯಾಮಿಲಿಯ ಬಹುತೇಕರು ಚಿತ್ರರಂಗದಲ್ಲೇ ಆ್ಯಕ್ಟೀವ್ ಆಗಿದ್ದಾರೆ. ವಿನಯ್ ರಾಜ್​​ಕುಮಾರ್ ಕೂಡ ಚಿಕ್ಕ ವಯಸ್ಸಿನಿಂದಲೇ ಶೂಟಿಂಗ್ ನೋಡುತ್ತಾ ಬೆಳೆದವರು. ಹಾಗಾಗಿ ಸಿನಿಮಾ ಲೋಕದ ಕಷ್ಟ-ನಷ್ಟಗಳ ಬಗ್ಗೆ ಅವರಿಗೆ ಚೆನ್ನಾಗಿಯೇ ತಿಳಿದಿದೆ. ಅವಕಾಶ ಹುಡುಕಿಕೊಂಡು ಬರುವ ಹೊಸಬರ ಹೋರಾಟ ಹೇಗಿರುತ್ತದೆ ಎಂಬುದನ್ನು ಕೂಡ ಅವರು ಕಂಡಿರುತ್ತಾರೆ. ಅಂತಹ ಒಬ್ಬ ನಿರ್ದೇಶಕನ ಕಷ್ಟದ ಕಹಾನಿಯೇ ‘ಅಂದೊಂದಿತ್ತು’ ಕಾಲ ಸಿನಿಮಾದಲ್ಲಿ ಇದೆ.

ಈ ಚಿತ್ರದಲ್ಲಿ ಕನ್ನಡ ಮೀಡಿಯಂ ಕುಮಾರ್ ಎಂಬ ಪಾತ್ರವನ್ನು ವಿನಯ್ ರಾಜ್​​ಕುಮಾರ್ ಮಾಡಿದ್ದಾರೆ. ಹಳ್ಳಿಯಲ್ಲಿರುವ ಬಡಕುಟುಂಬದ ಕುಮಾರನಿಗೆ ಸಿನಿಮಾ ಡೈರೆಕ್ಟರ್ ಆಗಬೇಕು ಎಂಬ ಕನಸು. ಬಾಲ್ಯದಲ್ಲಿ ‘ನಾಗರಹಾವು’ ಸಿನಿಮಾ ನೋಡಿದ ಬಳಿಕ ಆತನಿಗೆ ಈ ಕನಸು ಚಿಗುರುತ್ತದೆ. ಪುಟ್ಟಣ್ಣ ಕಣಗಾಲ್ ಅವರನ್ನು ದೇವರ ರೀತಿ ಆರಾಧಿಸುವ ಕುಮಾರನಿಗೆ ತಾನೂ ಕೂಡ ಅವರಂತೆಯೇ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಆಸೆ. ಆದರೆ ದೊಡ್ಡವನಾದ ಬಳಿಕ ಅವಕಾಶ ಅಷ್ಟು ಸುಲಭವಾಗಿ ಸಿಗಲ್ಲ. ಒಂದೆಡೆ ಮನೆಯ ಜವಾಬ್ದಾರಿ, ಇನ್ನೊಂದೆಡೆ ಸಿನಿಮಾ ಕನಸು. ಹೀಗೆ ಎರಡು ದೋಣಿಯ ಮೇಲೆ ಕಾಲಿಟ್ಟು ಸಾಗುವ ಕುಮಾರನ ಜೀವನ ಅಂತಿಮವಾಗಿ ಏನಾಗುತ್ತದೆ ಎಂಬುದನ್ನು ‘ಅಂದೊಂದಿತ್ತು ಕಾಲ’ ಚಿತ್ರದಲ್ಲಿ ನೋಡಿ ತಿಳಿಯಬೇಕು.

ಚಿತ್ರರಂಗದಲ್ಲಿ ಗೆದ್ದವರ ಹೆಸರು ಮಾತ್ರ ರಾಜಾಜಿಸುತ್ತದೆ. ಆದರೆ ಹಲವು ವರ್ಷ ಪ್ರಯತ್ನಪಟ್ಟರೂ ಯಶಸ್ಸು ಸಿಗದೇ ಇರುವವರ ಕಥೆ ಕೇಳಲು ಯಾರೂ ತಯಾರಿಲ್ಲ. ಬಣ್ಣದ ಲೋಕದಲ್ಲಿ, ಅದರಲ್ಲೂ ಪರದೆ ಹಿಂದೆ ಸಾಧನೆ ಮಾಡಿದ ಪ್ರತಿಯೊಬ್ಬರ ಕಹಾನಿ ಕೂಡ ಕಷ್ಟಕರವಾಗಿಯೇ ಇರುತ್ತದೆ. ಅಂತಹ ಒಂದು ಕಥೆಯನ್ನು ನಿರ್ದೇಶಕ ಕೀರ್ತಿ ಅವರು ತೆರೆಗೆ ತಂದಿದ್ದಾರೆ.

ದೂರದಿಂದ ನೋಡುವವರಿಗೆ ಚಿತ್ರರಂಗ ತುಂಬ ಕಲರ್​ಫುಲ್ ಆಗಿ ಕಾಣಿಸುತ್ತದೆ. ಆದರೆ ಅದರ ಒಳಗೆ ಇರುವ ಕಷ್ಟಗಳು ಹಲವು. ನಿರ್ದೇಶಕನಾಗಬೇಕು ಅಥವಾ ಚಿತ್ರರಂಗದ ಬೇರೆ ಬೇರೆ ವಿಭಾಗಗಳಲ್ಲಿ ಹೆಸರು ಮಾಡಬೇಕು ಎಂಬ ಕನಸು ಕಂಡಿರುವ ಎಲ್ಲರಿಗೂ ‘ಅಂದೊಂದಿತ್ತು ಕಾಲ’ ಸಿನಿಮಾದ ಕಥೆ ಕನೆಕ್ಟ್ ಆಗುತ್ತದೆ. ಚಿತ್ರರಂಗಕ್ಕೆ ಬರುವ ಹೊಸಬರ ಕಷ್ಟಗಳನ್ನು ಈ ಸಿನಿಮಾ ಎಳೆಎಳೆಯಾಗಿ ವಿವರಿಸುತ್ತದೆ.

ಎರಡು ಶೇಡ್ ಇರುವ ಪಾತ್ರದಲ್ಲಿ ನಟ ವಿನಯ್ ರಾಜ್​​ಕುಮಾರ್ ಅವರು ನಟಿಸಿದ್ದಾರೆ. ಕಾಲೇಜು ಹುಡುಗನಾಗಿ, ಸಹಾಯಕ ನಿರ್ದೇಶಕನಾಗಿ ಅವರು ಕಾಣಿಸಿಕೊಂಡಿದ್ದಾರೆ. ಫ್ಲ್ಯಾಶ್​ ಬ್ಯಾಕ್ ದೃಶ್ಯಗಳ ಮೂಲಕ ವೀಕ್ಷಕರ ಬಾಲ್ಯದ ನೆನಪುಗಳು ಮರುಕಳಿಸುವಂತೆ ಮಾಡಲಾಗಿದೆ. ಅಲ್ಲದೇ ಸಿನಿಮಾದ ಕ್ಲೈಮ್ಯಾಕ್ಸ್​​ ಕೊಂಚ ಎಮೋಷನಲ್ ಆಗಿದೆ. ಹಳೇ ಸ್ನೇಹಿತರನ್ನು ನೆನಪಿಸುತ್ತದೆ ಈ ಸಿನಿಮಾ.

ಇದನ್ನೂ ಓದಿ: ಜೊತೆಯಾಗಿ ಫೋಟೋಶೂಟ್ ಮಾಡಿಸಿದ ರಮ್ಯಾ-ವಿನಯ್ ರಾಜ್​ಕುಮಾರ್; ಏನಿದು ಹೊಸ ಅಪ್​ಡೇಟ್

ಹಾಡುಗಳು ಕಥೆಗೆ ಪೂರಕವಾಗಿವೆ. ಕಾಮಿಡಿ ದೃಶ್ಯಗಳಿಂದಾಗಿ ಸಿನಿಮಾಗೆ ಒಂದು ಬಗೆಯ ಲವಲವಿಕೆ ಬಂದಿದೆ. ಆದರೆ ಮೊದಲಾರ್ಧ ಕೊಂಚ ಎಳೆದಂತಾಗಿದೆ. ಊಹಿಸಬಹುದಾದ ಕಥೆ ಈ ಚಿತ್ರದಲ್ಲಿದೆ. ಆ ಬಗ್ಗೆ ನಿರ್ದೇಶಕರು ಗಮನ ಹರಿಸಿದ್ದರೆ ಚೆನ್ನಾಗಿರುತ್ತಿತ್ತು. ದ್ವಿತೀಯಾರ್ಧ ಪಟಪಟನೆ ಸಾಗುತ್ತದೆ. ಸಿನಿಮಾದ ಒಟ್ಟಾರೆ ನಿರೂಪಣೆ ಹಳೇ ಶೈಲಿಯಲ್ಲಿದೆ.

ಇದೆಲ್ಲದರ ಜೊತೆ ಪ್ರೇಮ್ ಕಹಾನಿ ಕೂಡ ‘ಅಂದೊಂದಿತ್ತು ಕಾಲ’ ಸಿನಿಮಾದಲ್ಲಿದೆ. ಬಾಲ್ಯದ ದಿನಗಳಲ್ಲಿ ಆಗುವ ಕ್ರಶ್ ಮತ್ತು ಜವಾಬ್ದಾರಿ ಬಂದ ಮೇಲೆ ಮೂಡುವ ಪ್ರೀತಿಯ ಎಳೆಯನ್ನು ತೋರಿಸಲಾಗಿದೆ. ನಿಶಾ ರವಿಕೃಷ್ಣನ್ ಮತ್ತು ಅದಿತಿ ಪ್ರಭುದೇವ ಅವರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ತಾಯಿ ಪಾತ್ರದಲ್ಲಿ ಅರುಣಾ ಬಾಲರಾಜ್ ಅವರು ಗಮನ ಸೆಳೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.