ಜನಪ್ರಿಯ ಸಂಗೀತ ನಿರ್ದೇಶಕ ರಾಜ್ ನಿಧನ, ಕನ್ನಡಕ್ಕೂ ಪರಿಚಿತ

|

Updated on: May 21, 2023 | 8:02 PM

Music Director Raj: ಜನಪ್ರಿಯ ಸಂಗೀತ ನಿರ್ದೇಶಕ ಜೋಡಿಯಾಗಿದ್ದ ರಾಜ್-ಕೋಟಿ ದ್ವಯರಲ್ಲಿ ರಾಜ್ ನಿಧನ ಹೊಂದಿದ್ದಾರೆ. 180 ಕ್ಕೂ ಹೆಚ್ಚು ಸಿನಿಮಾಗಳಿಗೆ ಇವರು ಸಂಗೀತ ನೀಡಿದ್ದರು. ಅದರಲ್ಲಿ ಕನ್ನಡ ಸಿನಿಮಾಗಳೂ ಸೇರಿವೆ.

ಜನಪ್ರಿಯ ಸಂಗೀತ ನಿರ್ದೇಶಕ ರಾಜ್ ನಿಧನ, ಕನ್ನಡಕ್ಕೂ ಪರಿಚಿತ
ರಾಜ್
Follow us on

ಜನಪ್ರಿಯ ಸಂಗೀತ ನಿರ್ದೇಶಕರ (Music Director) ಜೋಡಿಯಾದ ರಾಜ್-ಕೋಟಿ (Raj-Koti) ದ್ವಯರಲ್ಲಿ ಒಬ್ಬರಾದ ರಾಜ್ (Raj) ಇಂದು (ಮೇ 21) ನಿಧನ ಹೊಂದಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಮೂಲ ಹೆಸರು ತೋಟಕೂರ ಸೋಮರಾಜು ಎಂದಾಗಿದ್ದ ಇವರು ಸಲೂರಿ ಕೋಟೆಶ್ವರ ರಾವ್ ಜೊತೆ ಸೇರಿ 150 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅದರಲ್ಲಿ ಕೆಲವು ಕನ್ನಡ ಸಿನಿಮಾಗಳು ಸಹ ಇವೆ. ಹೃದಯಾಘಾತದಿಂದ ರಾಜ್ ನಿಧನ ಹೊಂದಿದ್ದಾರೆ.

ರಾಜ್ ಹಾಗೂ ಕೋಟಿ 1982ರಿಂದ 1994 ರವರೆಗೆ ಒಟ್ಟಿಗೆ ಕೆಲಸ ಮಾಡುತ್ತಾ ಸುಮಾರು 180 ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಈ ಜೋಡಿ ಸುಮಾರು 3000 ಸಾವಿರ ಹಾಡುಗಳಿಗೆ ಸಂಗೀತ ನಿರ್ದೇಶನ ನೀಡಿದ್ದು ಆ ಮೂರು ಸಾವಿರ ಹಾಡುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಹಾಡುಗಳನ್ನು ಎಸ್​ಪಿ ಬಾಲಸುಬ್ರಹ್ಮಣ್ಯಂ ಹಾಗೂ ಚಿತ್ರಾ ಹಾಡಿದ್ದಾರೆಂಬುದು ವಿಶೇಷ. 1994 ರ ಬಳಿಕ ಇಬ್ಬರೂ ಸಂಗೀತ ನಿರ್ದೇಶಕರು ಬೇರಾಗಿ ಏಕಾಂಗಿಯಾಗಿ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಲು ಆರಂಭಿಸಿದರು.

ರಾಜ್ ಹಾಗೂ ಕೋಟಿ ಕನ್ನಡದ ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡದ ಸ್ನೇಹದ ಕಡಲಲ್ಲಿ, ಎದುರು ಮನೇಲಿ ಗಂಡ, ಪಕ್ಕದ ಮನೇಲಿ ಹೆಂಡ್ತಿ, ನಗರದಲ್ಲಿ ನಾಯಕರು, ರಾಯರು ಬಂದರು ಮಾವನ ಮನೆಗೆ ಹಾಗೂ ಕಿಲಾಡಿಗಳು ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜ್ ಸ್ವತಂತ್ರ್ಯ ಸಂಗೀತ ನಿರ್ದೇಶಕರಾದ ಮೇಲೆ ಕನ್ನಡ ಸಿನಿಮಾಗಳಿಗೆ ಸಂಗೀತ ನೀಡಲಿಲ್ಲ.

ರಾಜ್ ಕೋಟಿ ಬೇರಾದ ಬಳಿಕ ರಾಜ್​ಗೆ ಹೆಚ್ಚು ಸಿನಿಮಾ ಅವಕಾಶಗಳು ದೊರೆಯಲಿಲ್ಲ. ಸಿಸಿಂದ್ರಿ, ಪ್ರೇಮಂಟೆ ಇದೇರಾ ಇನ್ನು ಕೆಲವು ಸಿನಿಮಾಗಳಿಗಷ್ಟೆ ಅವರು ಏಕಾಂಗಿಯಾಗಿ ಸಂಗೀತ ನೀಡಿದರು. 2002 ರಲ್ಲಿ ಅವರು ಕೊನೆಯದಾಗಿ ಸಂಗೀತ ನೀಡಿದ ಲಗ್ನ ಪತ್ರಿಕಾ ಸಿನಿಮಾ ಬಿಡುಗಡೆ ಆಗಿತ್ತು. ಅದಾದ ಬಳಿಕ ಅವರು ಚಿತ್ರರಂಗದಿಂದ ದೂರವೇ ಉಳಿದರು. ಆದರೆ ಕೋಟಿ ಸ್ವತಂತ್ರ್ಯ ನಿರ್ದೇಶಕರಾದ ಮೇಲೂ ಬೇಡಿಕೆ ಉಳಿಸಿಕೊಂಡು ಹಲವಾರು ಸಿನಿಮಾಗಳಿಗೆ ಸಂಗೀತ ನೀಡಿ ಹಿಟ್ ನಿರ್ದೇಶಕ ಎನಿಸಿಕೊಂಡರು. ಕೋಟಿ ಬಳಿ 90ರ ದಶಕದ ಹಿಟ್ ನಿರ್ದೇಶಕರಾದ ಎ.ಆರ್.ರೆಹಮಾನ್, ಮಣಿಶರ್ಮಾ, ಹ್ಯಾರಿಸ್ ಜಯರಾಜ್, ಎಸ್ ತಮನ್, ದೇವಿಶ್ರೀ ಪ್ರಸಾದ್ ಅವರುಗಳು ಸಹಾಯಕರಾಗಿ, ಕೀ ಬೋರ್ಡ್ ಆಪರೇಟರ್​ಗಳಾಗಿ ಕೆಲಸ ಮಾಡಿದ್ದಾರೆ. ರಾಜ್ ಕೋಟಿ ಒಟ್ಟಿಗಿದ್ದಾಗ ಹಲ್ಲೊ ಬ್ರದರ್​ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ