‘ಕಲ್ಕಿ 2898 ಎಡಿ’ ಸಿನಿಮಾದ ಕತೆಯ ಎಳೆ ಬಿಟ್ಟುಕೊಟ್ಟ ನಿರ್ದೇಶಕ

|

Updated on: May 23, 2024 | 8:35 PM

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದ ಟೀಸರ್, ಪೋಸ್ಟರ್​ಗಳು ಕೆಲವು ಬಿಡುಗಡೆ ಆಗಿದ್ದು, ಸಿನಿಮಾದ ಕತೆಯ ಬಗ್ಗೆ ಹಲವು ಅನುಮಾನಗಳನ್ನು ಮೂಡಿಸಿವೆ. ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್ ಕತೆಯ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ.

‘ಕಲ್ಕಿ 2898 ಎಡಿ’ ಸಿನಿಮಾದ ಕತೆಯ ಎಳೆ ಬಿಟ್ಟುಕೊಟ್ಟ ನಿರ್ದೇಶಕ
Follow us on

ಪ್ರಭಾಸ್ (Prabhas) ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಭಾರಿ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾದ ಎರಡು ಟೀಸರ್​ ಈ ವರೆಗೆ ಬಿಡುಗಡೆ ಆಗಿದ್ದು, ಕತೆ ಯಾವುದೋ ಬೇರೆ ಗ್ರಹದಲ್ಲಿ ನಡೆಯುತ್ತಿರುವಂತೆ ತೋರುತ್ತಿದೆ. ಅತ್ಯಾಧುನಿಕ ಕಾರುಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಮರಳುಗಾಡು, ಚಿತ್ರ ವಿಚಿತ್ರ ಬಟ್ಟೆಗಳನ್ನು ಧರಿಸಿರುವ ಮನುಷ್ಯರು, ಮಧ್ಯದಲ್ಲಿ ಆಂಜನೇಯ ಸ್ವಾಮಿಯ ಡಾಲರ್, ಗುಹೆಯಲ್ಲಿ ಕೂತಿರುವ ವಯಸ್ಸಾದ ವ್ಯಕ್ತಿ ಹೀಗೆ ಹಲವು ದೃಶ್ಯಗಳು ಈಗ ಬಿಡುಗಡೆ ಆಗಿರುವ ಟೀಸರ್​ನಲ್ಲಿ ಕಾಣುತ್ತಿವೆ. ಸಿನಿಮಾದ ಕತೆ ಏನು? ಕತೆ ನಡೆಯುವ ಕಾಲವೇನು? ಭೂತಕಾಲದ ಕತೆಯಾ? ಅಥವಾ ಭವಿಷ್ಯತ್ ಕಾಲದ ಕತೆಯಾ? ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಈ ನಡುವೆ ನಿರ್ದೇಶಕ ನಾಗ್ ಅಶ್ವಿನ್ ಕತೆಯ ಬಗ್ಗೆ ಒಂದು ಸಣ್ಣ ಎಳೆ ಬಿಟ್ಟುಕೊಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಿರ್ದೇಶಕ ನಾಗ್ ಅಶ್ವಿನ್, ಸಿನಿಮಾದಲ್ಲಿ ಕತೆ ನಡೆಯುವ ಕಾಲದ ಬಗ್ಗೆ ಮಾತನಾಡುತ್ತಾ, ‘ಸಿನಿಮಾದ ಕತೆ ಮಹಾಭಾರತದಲ್ಲಿ ಪ್ರಾರಂಭವಾಗಿ 2898ನೇ ಇಸವಿಯವರೆಗೂ ನಡೆಯುತ್ತದೆ. ಅಂದರೆ ಸುಮಾರು 6000 ಸಾವಿರ ವರ್ಷಗಳ ಅಂತರದ ಕತೆ ‘ಕಲ್ಕಿ 2898 ಎಡಿ’ಯಲ್ಲಿದೆ ಎಂದಿದ್ದಾರೆ. ಭೂತಕಾಲಕ್ಕೂ ಹಾಗೂ ಭವಿಷ್ಯಕಾಲಕ್ಕೂ ನಂಟಿರುವ ಕತೆ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿದೆ.

ಸಿನಿಮಾದಲ್ಲಿ ಆಧುನಿಕ ಯಂತ್ರಗಳು, ತಂತ್ರಜ್ಞಾನಗಳ ಬಳಕೆ ಜೋರಾಗಿದೆ. ಆದರೆ ಅದರ ಜೊತೆಗೆ ಪೌರಾಣಿಕ ಪಾತ್ರಗಳು ಸಹ ಇರಲಿವೆ. ಭೂತ ಹಾಗೂ ಭವಿಷ್ಯದ ಕೊಂಡಿಯ ರೀತಿಯಲ್ಲಿ ಅಮಿತಾಬ್ ಬಚ್ಚನ್ ಪಾತ್ರ ಕೆಲಸ ಮಾಡಲಿದೆ. ಇನ್ನು ನಟ ಕಮಲ್ ಹಾಸನ್ ಸಿನಿಮಾದ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ದೀಪಿಕಾ ಪಡುಕೋಣೆ ಹಾಗೂ ದಿಶಾ ಪಟಾನಿ ಸಿನಿಮಾದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಪ್ರಭಾಸ್ ಭೈರವ ಹೆಸರಿನ ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಯಾರಿದು ಬುಜ್ಜಿ? ಪ್ರಭಾಸ್​ರ ನಂಬಿಕಸ್ತ ಗೆಳೆಯ, ಮೇ 22ಕ್ಕೆ ರಿವೀಲ್

ಪ್ರಭಾಸ್​ ನಟಿಸಿರುವ ‘ಭೈರವ’ ಪಾತ್ರವು ಬೌಂಟಿ ಹಂಟರ್ ಎಂದರೆ ಹಣಕ್ಕಾಗಿ ಅಪರಾಧಿಗಳನ್ನು ಹಿಡಿಯುವ ಅಥವಾ ಕೊಲ್ಲುವ ಪಾತ್ರದಲ್ಲಿ ನಟಿಸಿದ್ದಾರೆ. ದುಷ್ಟರ ಕೈಯಲ್ಲಿ ಸಿಲುಕಿ ನರಳುತ್ತಿರುವ ದೀಪಿಕಾ ಪಡುಕೋಣೆ ಪಾತ್ರ, ಭೈರವನಿಗೆ ಜೊತೆಯಾದ ಬಳಿಕ ಭೈರವ ಪ್ರಪಂಚವನ್ನು ಉಳಿಸುವ ಹೋರಾಟವನ್ನು ಮಾಡಲು ಹೊರಡುತ್ತಾನೆ ಎಂಬುದು ಸಿನಿಮಾದ ಕತೆ ಎನ್ನಲಾಗುತ್ತಿದೆ. ಸಿನಿಮಾ ಬಿಡುಗಡೆ ಆದ ಬಳಿಕವಷ್ಟೆ ಕತೆಯ ಬಗ್ಗೆ ಪೂರ್ಣ ಸ್ಪಷ್ಟನೆ ಸಿಗಲಿದೆ.

ಸಿನಿಮಾದಲ್ಲಿ ಬುಜ್ಜಿ ಹೆಸರಿನ ಪಾತ್ರವೊಂದಿದ್ದು, ಇದು ಪ್ರಭಾಸ್​ ಪಾತ್ರದ ಮಷಿನ್ ಗೆಳೆಯ. ಈ ಮಷೀನ್ ಬುಜ್ಜಿಗೆ ಧ್ವನಿ ನೀಡಿರುವುದು ಕೀರ್ತಿ ಸುರೇಶ್. ಮಾತನಾಡುವ, ಸ್ವಂತವಾಗಿ ಯೋಚಿಸುವ ಈ ಬುಜ್ಜಿಗೆ ಭೈರವನ ಕಾಲು ಎಳೆಯುವುದೇ ಕೆಲಸ. ಬುಜ್ಜಿ ಹಾಗೂ ಭೈರವ ಪಾತ್ರ ಪರಿಚಯದ ಟೀಸರ್ ನಿನ್ನೆ (ಮೇ 22) ಬಿಡುಗಡೆ ಆಗಿದೆ. ಸಿನಿಮಾ ಜೂನ್ 27ಕ್ಕೆ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ