ರಾಜ್ಯದಲ್ಲಿ ಚಿತ್ರಮಂದಿರಗಳ ಬಂದ್ ಬಗ್ಗೆ ನಿರ್ಧಾರ ಪ್ರಕಟಿಸಿದ ಫಿಲಂ ಚೇಂಬರ್
ನೆರೆಯ ತೆಲಂಗಾಣದ ರೀತಿ ಕರ್ನಾಟಕದಲ್ಲಿಯೂ ಚಿತ್ರಮಂದಿರಗಳನ್ನು ಬಂದ್ ಮಾಡಬೇಕೆ ಎಂಬ ಬಗ್ಗೆ ಚಿತ್ರರಂಗದ ನಿರ್ಮಾಪಕರು, ಪ್ರದರ್ಶಕರ ಸಂಘ ಫಿಲಂ ಚೇಂಬರ್ ನೇತೃತ್ವದಲ್ಲಿ ಇಂದು (ಮೇ 23) ಸುದೀರ್ಘ ಚರ್ಚೆ ನಡೆಸಿ ನಿರ್ಧಾರ ಪ್ರಕಟಿಸಿದೆ.
ಐಪಿಎಲ್, ಲೋಕಸಭೆ ಚುನಾವಣೆ, ಸ್ಟಾರ್ ಸಿನಿಮಾಗಳ ಕೊರತೆ ಇನ್ನಿತರೆ ಕಾರಣಗಳಿಂದ ಚಿತ್ರಮಂದಿರಗಳಿಗೆ (Theater) ಜನ ಬರುವುದು ತೀವ್ರವಾಗಿ ತಗ್ಗಿದ್ದು ಇದರಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಜನರಿಲ್ಲದೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ನಡೆಸುವುದು ಕಷ್ಟವಾಗುತ್ತಿರುವ ಕಾರಣದಿಂದ ನೆರೆಯ ತೆಲಂಗಾಣದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಕೆಲ ದಿನಗಳ ಕಾಲ ಬಂದ್ ಮಾಡುವ ನಿರ್ಧಾರ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಚಿತ್ರಮಂದಿರಗಳು ಅನುಭವಿಸುತ್ತಿರುವ ನಷ್ಟದಿಂದ ಪಾರಾಗಲು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಬಂದ್ ಮಾಡಬೇಕು ಎಂಬ ಚರ್ಚೆ ಜೋರಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಇಂದು ಚಿತ್ರರಂಗದ ಪ್ರಮುಖರ ಸಭೆ ನಡೆದಿದ್ದು, ತೀರ್ಮಾನ ಪ್ರಕಟವಾಗಿದೆ.
ಫಿಲಂ ಚೇಂಬರ್ ಕರೆದಿದ್ದ ಸಭೆಯಲ್ಲಿ ಚಿತ್ರರಂಗದ ಸಕ್ರಿಯ ನಿರ್ಮಾಪಕರು, ಹಿರಿಯ ನಿರ್ಮಾಪಕರನ್ನು ಸಭೆಗೆ ಕರೆಯಲಾಗಿತ್ತು. ಸಭೆಯಲ್ಲಿ ನಿರ್ಮಾಪಕ, ವಿತರಕ ಜಯಣ್ಣ, ನಿರ್ಮಾಪಕ, ನಿರ್ದೇಶಕ ಆರ್ ಚಂದ್ರು, ಕೆ ಮಂಜು, ಹೊಂಬಾಳೆ ನಿರ್ಮಾಣ ಸಂಸ್ಥೆಯ ಪ್ರತಿನಿಧಿ ಚಿದಾನಂದ್, ನಿರ್ಮಾಪಕ ತರುಣ್ ಶಿವಪ್ಪ, ಲಹರಿ ವೇಲು, ಕೆಪಿ ಶ್ರೀಕಾಂತ್ ಇನ್ನೂ ಕೆಲವರು ಭಾಗಿಯಾಗಿದ್ದರು. ಫಿಲಂ ಚೇಂಬರ್ನ ಅಧ್ಯಕ್ಷ ಎನ್.ಎಮ್.ಸುರೇಶ್ ಸೇರಿದಂತೆ ಇನ್ನೂ ಕೆಲವರು ಭಾಗಿಯಾಗಿದ್ದರು.
ಸಭೆಯ ಬಳಿಕ ನಿರ್ಧಾರ ಪ್ರಕಟಿಸಿದ ಫಿಲಂ ಚೇಂಬರ್ ಅಧ್ಯಕ್ಷ ಎನ್ಎಂ ಸುರೇಶ್, ‘ಕನ್ನಡ ಚಿತ್ರರಂಗ ಹಾಗೂ ಚಿತ್ರಮಂದಿರಗಳ ಬಂದ್ ಮಾಡುವುದಿಲ್ಲ’ ಎಂದರು. ಮುಂದುವರೆದು ಮಾತನಾಡಿ, ‘ಚಿತ್ರಮಂದಿರಗಳ ಸಮಸ್ಯೆ ಹಾಗೂ ಚಿತ್ರರಂಗದ ಸಮಸ್ಯೆ ಬಗ್ಗೆ ಕುಲಂಕುಶವಾಗಿ ಚರ್ಚೆ ನಡೆಯಿತು. ಹಲವು ನಿರ್ಮಾಪಕರು ಸಭೆಯಲ್ಲಿ ಭಾಗಿಯಾಗಿದ್ದರು. ಚಿತ್ರಮಂದಿರಗಳನ್ನು ಬಂದ್ ಮಾಡುತ್ತೀವಿ ಎಂದು ಈ ಹಿಂದೆಯೂ ನಾವು ಹೇಳಿರಲಿಲ್ಲ. ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದೆವು, ಪ್ರದರ್ಶಕರನ್ನು ಹೇಗೆ ಉಳಿಸಿಕೊಳ್ಳಬೇಕು ಅನ್ನುವ ಬಗ್ಗೆ ಚರ್ಚೆಯಾಯಿತು. ಈ ಸೂಕ್ಷ್ಮ ವಿಚಾರದ ಬಗ್ಗೆ ಬಗ್ಗೆ ಸರ್ಕಾರದ ಜೊತೆ ಚರ್ಚೆ ಮಾಡ್ತಿವಿ’ ಎಂದರು.
ಇದನ್ನೂ ಓದಿ:ಟಾಲಿವುಡ್ ರೀತಿ ಕರ್ನಾಟಕದಲ್ಲಿಯೂ ಚಿತ್ರಮಂದಿರಗಳ ಬಂದ್ಗೆ ಚಿಂತನೆ
‘ಬಂದ್ ಮಾಡುತ್ತೀವಿ ಅಂತ ಘೋಷಣೆ ಮಾಡಿಲ್ಲ, ಆದರೂ ಆ ಸುದ್ದಿ ಹರಿದಾಡಿ ಚಿತ್ರರಂಗದ ವ್ಯವಹಾರಕ್ಕೆ ತೊಂದರೆ ಆಗಿದೆ. ಓಟಿಟಿ ರೈಟ್ಸ್ ಗೆ ಜೊತೆಗೆ ಬೇರೆ ಭಾಷೆಗಳಲ್ಲಿ ಸಿನಿಮಾಗಳ ಮಾರ್ಕೆಟ್ ಗೆ ಸಮಸ್ಯೆ ಆಗಿದೆ, ಮಲ್ಟಿಪ್ಲೇಕ್ಸ್ ಗಳಲ್ಲಿ ರೇಟ್ ಆಫ್ ಅಡ್ಮಿಷನ್ ಬಗ್ಗೆ ಭಿನ್ನಾಭಿಪ್ರಾಯವಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುತ್ತೆ, ಚಿತ್ರರಂಗದ ಪುನಶ್ಚೇತನಕ್ಕೆ ಸರ್ಕಾರದ ಬೆಂಬಲ ಬೇಕಿದೆ’ ಎಂದರು.
ಸ್ಟಾರ್ ನಟರ ಸಿನಿಮಾಗಳು ತಡವಾಗುತ್ತಿರುವುದರ ಬಗ್ಗೆ ಮಾತನಾಡಿ, ‘ಸಿಜಿ ವರ್ಕ್, ಪೋಸ್ಟ್ ಪ್ರೋಡಕ್ಷನ್ ವರ್ಕ್ಗಳು ತಡವಾಗುತ್ತಿರುವ ಕಾರಣಕ್ಕೆ ಸ್ಟಾರ್ ನಟರ ಸಿನಿಮಾಗಳು ತಡವಾಗುತ್ತಿವೆ. ಹೀಗಾಗಿ ಸಿನಿಮಾಗಳ ರಿಲೀಸ್ ಲೇಟ್ ಆಗ್ತಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಕೇರಳ ಸರ್ಕಾರ ಅವರದ್ದೇ ಓಟಿಟಿ ಮಾಡಿದೆ, ಯುಎಫ್ ಓ, ಕ್ಯೂಬ್ ಅವರದ್ದೇ ಇದೇ ಕಡಿಮೆ ದರಕ್ಕೆ ಅವರು ಸಿನಿಮಾಗಳನ್ನು ಪ್ರೊಸೆಸ್ ಮಾಡುತ್ತಿದ್ದಾರೆ. ಇದೇ ಮಾದರಿ ಕರ್ನಾಟಕದಲ್ಲಿಯೂ ಬರಬೇಕು. ಇದನ್ನು ಸರ್ಕಾರದ ಗಮನಕ್ಕೆ ತರಲಿದ್ದೇವೆ’ ಎಂದರು ಸುರೇಶ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ