ಟಾಲಿವುಡ್ ರೀತಿ ಕರ್ನಾಟಕದಲ್ಲಿಯೂ ಚಿತ್ರಮಂದಿರಗಳ ಬಂದ್ಗೆ ಚಿಂತನೆ
ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗದ ಕಾರಣ ನೆರೆಯ ತೆಲಂಗಾಣದಲ್ಲಿ ಎಲ್ಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಹತ್ತು ದಿನಗಳ ಕಾಲ ಬಂದ್ ಮಾಡುವ ನಿರ್ಧಾರ ಮಾಡಲಾಗಿದೆ. ಅದರಂತೆ ಕರ್ನಾಟಕದಲ್ಲಿಯೂ ಚಿತ್ರಮಂದಿರಗಳನ್ನು ಬಂದ್ ಮಾಡುವ ಬಗ್ಗೆ ಚರ್ಚೆ ಜಾರಿಯಲ್ಲಿದೆ.
ಐಪಿಎಲ್ (IPL), ಲೋಕಸಭೆ ಚುನಾವಣೆ, ಸ್ಟಾರ್ ನಟರ ಸಿನಿಮಾಗಳ ಕೊರತೆಯಿಂದಾಗಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು (Theater) ತೀವ್ರ ಸಂಕಷ್ಟದಲ್ಲಿವೆ. ಕರ್ನಾಟಕದಲ್ಲಿ ಮಾತ್ರವಲ್ಲ, ನೆರೆಯ ಆಂಧ್ರ-ತೆಲಂಗಾಣದಲ್ಲಿಯೂ ಇದೇ ಸ್ಥಿತಿ ಇದೆ. ಇದೇ ಕಾರಣಕ್ಕೆ ಕೆಲವು ದಿನಗಳ ಹಿಂದೆ ಟಾಲಿವುಡ್ನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡು, ಹೊಸ ಸಿನಿಮಾ ಬಿಡುಗಡೆ ಆಗುವವರೆಗೆ ಎಲ್ಲ ತೆಲಂಗಾಣದ ಎಲ್ಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿತ್ತು. ಇದೀಗ ಕರ್ನಾಟಕದಲ್ಲಿಯೂ ಇದೇ ರೀತಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಬಂದ್ ಮಾಡುವ ಆಲೋಚನೆ ಚಾಲ್ತಿಯಲ್ಲಿದೆ.
ನಿನ್ನೆ (ಮೇ 20) ಫಿಲಂ ಚೇಂಬರ್ ಹಾಗೂ ಅದರ ಅಂಗ ಸಂಸ್ಥೆಗಳ ಪ್ರಮುಖ ಸದಸ್ಯರು ಒಟ್ಟಾಗಿ ಸಭೆ ನಡೆಸಿದ್ದಾರೆ. ಚಿತ್ರೋದ್ಯಮದ ಚೇತರಿಕೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ. ಫಿಲಂ ಚೇಂಬರ್ ವತಿಯಿಂದ ಸ್ಯಾಂಡಲ್ವುಡ್ನ ದೊಡ್ಡ-ದೊಡ್ಡ ನಿರ್ಮಾಣ ಸಂಸ್ಥೆಗಳಿಗೆ, ವಿತರಕರಿಗೆ ಹಾಗೂ ಕಲಾವಿದರಿಗೆ ಪತ್ರ ಬರೆಯಲಾಗುತ್ತಿದೆ. ಒಂದು ತಿಂಗಳ ಒಳಗೆ ಹಂತ ಹಂತವಾಗಿ ಚಿತ್ರರಂಗದ ಪ್ರಮುಖರೊಟ್ಟಿಗೆ ಸಭೆ ನಡೆಸುವ ನಿರ್ಧಾರ ಮಾಡಲಾಗಿದೆ. ಜೂನ್ ಅಥವಾ ಜುಲೈ ತಿಂಗಳ ತನಕ ಚಿತ್ರೋದ್ಯಮದ ಚೇತರಿಕೆಗಾಗಿ ಸಭೆಗಳನ್ನು ನಡೆಸಿ ಸಂಬಂಧಪಟ್ಟವರ ಜೊತೆ ಮಾತುಕತೆ ಮಾಡಲಾಗುತ್ತದೆ. ಜೊತೆಗೆ ಮಲ್ಟಿಪ್ಲೆಕ್ಸ್, ಸಿಂಗ್ ಸ್ಕ್ರೀನ್ ಥಿಯೇಟರ್ನಲ್ಲಿ ಸಿನಿಮಾ ಪ್ರದರ್ಶನದ ಪರಿಸ್ಥಿತಿ ಬಗ್ಗೆ ಚರ್ಚೆ, ಚಿತ್ರೋದ್ಯಮದ ಚೇತರಿಕೆಗೆ ಉಪಾಯ ಫಲ ನೀಡದಿದ್ದಲ್ಲಿ ಕರ್ನಾಟಕದಲ್ಲಿಯೂ ಸಹ ಕೆಲ ದಿನ ಚಿತ್ರಮಂದಿರಗಳನ್ನು ಬಂದ್ ಮಾಡುವ ಬಗ್ಗೆ ಚರ್ಚೆ ಮಾಡಲಾಗಿದೆ.
ಇದನ್ನೂ ಓದಿ:ಟಾಲಿವುಡ್ಗೂ ಬಂತು ಬರಗಾಲ, 400 ಚಿತ್ರಮಂದಿರಗಳು ಏಕಾ-ಏಕಿ ಬಂದ್
ಕೆಲ ದಿನಗಳ ಹಿಂದೆ ಟಿವಿ9 ಕನ್ನಡ ಜೊತೆ ಮಾತನಾಡಿದ್ದ ರಾಜ್ಯ ಪ್ರದರ್ಶಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ‘ಈ ವರ್ಷದಲ್ಲಿ ಐದು ತಿಂಗಳು ಪೂರ್ಣಗೊಳ್ಳುತ್ತಾ ಬಂದಿದೆ. ಈವರೆಗೆ ಒಂದೇ ಒಂದು ಸ್ಟಾರ್ ಸಿನಿಮಾ ರಿಲೀಸ್ ಆಗಿಲ್ಲ. ಜನರು ಥಿಯೇಟರ್ಗೆ ಬರದೆ ಇರಲು ಇದೇ ಕಾರಣವೇ ಎನ್ನುವ ಪ್ರಶ್ನೆ ಮೂಡೋದು ನಿಜ. ಆದರೆ, ಇದನ್ನು ಚಂದ್ರಶೇಖರ್ ಅವರು ಅಲ್ಲಗಳೆಯುತ್ತಾರೆ. ‘ಉದ್ಯಮ ನಡೆಯುತ್ತಿಲ್ಲ ಅನ್ನೋ ಕಾರಣಕ್ಕೆ ಥಿಯೇಟರ್ಗಳು ಮುಚ್ಚುತ್ತಿವೆ. ಸ್ಟಾರ್ ಹೀರೋಗಳ ಸಿನಿಮಾ ಬರುತ್ತಿಲ್ಲ ಅನ್ನೋ ಕಾರಣಕ್ಕೆ ಜನರು ಥಿಯೇಟರ್ಗೆ ಬರುತ್ತಿಲ್ಲ ಅನ್ನೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಬರುತ್ತಿವೆ. ಆದಾಗ್ಯೂ ಪ್ರೇಕ್ಷಕ ಕೈ ಹಿಡಿಯುತ್ತಿಲ್ಲ’ ಎಂದು ಬೇಸರ ಹೊರಹಾಕಿದ್ದರು. ಅವರೂ ಸಹ ಚಿತ್ರಮಂದಿರಗಳನ್ನು ಬಂದ್ ಮಾಡಿ ಮಾಲೀಕರಿಗೆ ಆಗುತ್ತಿರುವ ನಷ್ಟವನ್ನು ಕಡಿಮೆಗೊಳಿಸುವ ಬಗ್ಗೆ ಮಾತನಾಡಿದ್ದರು.
ಐಪಿಎಲ್, ಲೋಕಸಭೆ ಚುನಾವಣೆ ಒಟ್ಟಿಗೆ ಬಂದಿದ್ದರಿಂದ ಯಾವುದೇ ದೊಡ್ಡ ನಿರ್ಮಾಣ ಸಂಸ್ಥೆಗಳು ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿಲ್ಲ. ಐಪಿಎಲ್ ಹಾಗೂ ಚುನಾವಣೆ ಮುಗಿದ ಬಳಿಕ ಕೆಲವು ಸಿನಿಮಾಗಳು ಬಿಡುಗಡೆ ಆಗಬಹುದು. ದುನಿಯಾ ವಿಜಯ್ ನಟನೆಯ ‘ಭೀಮ’, ಶಿವಣ್ಣ ನಟನೆಯ ‘ಭೈರತಿ ರಣಗಲ್’, ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಇನ್ನೂ ಕೆಲವು ದೊಡ್ಡ ಬಜೆಟ್ನ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಚುನಾವಣೆ ಮುಗಿದ ಬಳಿಕ ಕೆಲವು ಸಿನಿಮಾಗಳ ಬಿಡುಗಡೆಯ ಘೋಷಣೆ ಆಗಬಹು ಎಂಬ ನಿರೀಕ್ಷೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ