ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇರುವ ‘ಅನರ್ಥ’ ಸಿನಿಮಾದ ಹಾಡು, ಟೀಸರ್ ರಿಲೀಸ್
‘ಅನರ್ಥ’ ಸಿನಿಮಾದ ಟೀಸರ್ ಮತ್ತು ಸಾಂಗ್ ಬಿಡುಗಡೆ ಆಗಿದೆ. ಕಿರುತೆರೆ ಸೀರಿಯಲ್ಗಳ ನಿರ್ದೇಶನದಲ್ಲಿ ಅನುಭವ ಹೊಂದಿರುವ ರಮೇಶ್ ಕೃಷ್ಣ ಅವರು ಈ ಸಿನಿಮಾಗೆ ಡೈರೆಕ್ಷನ್ ಮಾಡಿದ್ದಾರೆ. ಶ್ರೀಧರ್ ಎನ್.ಸಿ. ಅವರು ಬಂಡವಾಳ ಹೂಡಿದ್ದಾರೆ. ವಿಶಾಲ್ ಮತ್ತು ವಿಹಾನಿ ಅವರು ‘ಅನರ್ಥ’ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
ಕ್ರೂರತನ ಮತ್ತು ಬಲಹೀನತೆಗೆ ಸಂಬಂಧಿಸಿದ ಫಿಲಾಸಫಿಯನ್ನು ಪ್ರಧಾನವಾಗಿ ಇಟ್ಟುಕೊಂಡು ‘ಅನರ್ಥ’ ಸಿನಿಮಾ (Anartha Movie) ಮಾಡಲಾಗಿದೆ. ಈ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ಈಗ ಪ್ರಚಾರ ಕಾರ್ಯ ಆರಂಭಿಸಲಾಗಿದೆ. ಟೀಸರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಹಿರಿಯ ಪತ್ರಕರ್ತರಿಂದ ಟೀಸರ್ ಬಿಡುಗಡೆ ಮಾಡಿಸಲಾಯಿತು. ಸಹ ನಿರ್ಮಾಪಕಿ ಜೆ. ಅಂಜಲಿ ಅವರ ಪುತ್ರಿಯರಾದ ಜಯಕೀರ್ತಿ ಮತ್ತು ಜಯಕನ್ನಿಕಾ ಅವರು ಹಾಡನ್ನು ರಿಲೀಸ್ ಮಾಡಿದರು. ರಮೇಶ್ ಕೃಷ್ಣ ಅವರು ‘ಅನರ್ಥ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಕಿರುತೆರೆಯಲ್ಲಿ ರಮೇಶ್ ಕೃಷ್ಣ ಅವರು ಅನುಭವ ಹೊಂದಿದ್ದಾರೆ. ‘ಅರ್ಧ ಸತ್ಯ’ ಸೀರಿಯಲ್ ನಿರ್ದೇಶನಕ್ಕೆ ಅವರು ಪ್ರಶಸ್ತಿ ಪಡೆದಿದ್ದರು. ಬಳಿಕ ‘ಗುಪ್ತಗಾಮಿನಿ’, ‘ಪ್ರೀತಿ ಇಲ್ಲದ ಮೇಲೆ’, ‘ಶಿವ’, ‘ಲಕುಮಿ’, ‘ಕದನ’, ‘ಚುಕ್ಕಿ’, ‘ಗೋಕುಲದಲ್ಲಿ ಸೀತೆ’ ಧಾರಾವಾಹಿಗಳ ತೆರೆಹಿಂದೆ ಕೆಲಸ ಮಾಡಿದ್ದಾರೆ. ‘ಮೆಲ್ಲುಸಿರೇ ಸವಿಗಾನ’ ಸಿನಿಮಾದ ನಿರ್ದೇಶನ ಮಾಡಿದ ಅವರು ಈಗ ‘ಅನರ್ಥ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
‘ಅನರ್ಥ’ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಕೂಡ ರಮೇಶ್ ಕೃಷ್ಣ ಬರೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಸಿನಿಮಾ ಬಗ್ಗೆ ಮಾತನಾಡಿದರು. ‘ಅವಕಾಶ್ ಮತ್ತು ಆಕೃತಿ ಎನ್ನುವ 2 ಪಾತ್ರಗಳ ಸುತ್ತ ಈ ಸಿನಿಮಾ ಸಾಗುತ್ತದೆ. ಇದರಲ್ಲಿ ಊಹಿಸಲಾಗದ ಟ್ವಿಸ್ಟ್ಗಳು ಇವೆ. ಕ್ಲೈಮಾಕ್ಸ್‌ನಲ್ಲಿ ಹೀಗೂ ಆಗಬಹುದು ಎಂಬ ದೃಶ್ಯ ಇದೆ. ಎಲ್ಲ ಕಮರ್ಷಿಯಲ್ ಅಂಶಗಳು ಈ ಸಿನಿಮಾದಲ್ಲಿವೆ. ಅದರ ಜೊತೆಗೆ ಒಂದು ಅಂಶ ಭಿನ್ನವಾಗಿದೆ. ಅದೇನು ಎಂಬುದನ್ನು ತಿಳಿಯಲು ನೀವು ಸಿನಿಮಾ ನೋಡಬೇಕು’ ಎಂದು ಅವರು ಹೇಳಿದರು.
ಇದನ್ನೂ ಓದಿ: ಅಕ್ಷತಾ ಪಾಂಡವಪುರ ನಟನೆಯ ಹೊಸ ಸಿನಿಮಾ ‘ಕೌಮುದಿ’; ಸರಳವಾಗಿ ನಡೆಯಿತು ಮುಹೂರ್ತ
ನಿರ್ಮಾಪಕ ಶ್ರೀಧರ್ ಎನ್.ಸಿ. ಹೊಸಮನೆ ಅವರು ಅವರು ಈ ಮೊದಲು ಹೀರೋ ಆಗುವ ಕನಸು ಕಂಡಿದ್ದರು. ಬಳಿಕ ಉದ್ಯಮದಲ್ಲಿ ಯಶಸ್ಸು ಕಂಡರು. ಈಗ ಅವರು ‘ತೇಜಸ್ ಸಿನಿ ಕ್ರಿಯೇಶನ್ಸ್’ ಸಂಸ್ಥೆಯ ಮೂಲಕ ನಿರ್ಮಾಪಕರಾಗಿದ್ದಾರೆ. ಮಂಡ್ಯ ರಮೇಶ್ ಅವರ ಬಳಿ ತರಬೇತಿ ಪಡೆದುಕೊಂಡು ಬಂದಿರುವ ವಿಶಾಲ್ ಮಣ್ಣೂರು ಅವರು ಈ ಸಿನಿಮಾಗೆ ಹೀರೋ ಆಗಿದ್ದಾರೆ. ಮೆಡಿಕಲ್ ವಿದ್ಯಾರ್ಥಿನಿ ವಿಹಾನಿ ಅವರು ‘ಅನರ್ಥ’ ಚಿತ್ರಕ್ಕೆ ನಾಯಕಿ. ಈ ಮೊದಲು ಕಿರುಚಿತ್ರಗಳಲ್ಲಿ ನಟಿಸಿದ ಅನುಭವ ಅವರಿಗೆ ಇದೆ.
‘ಅನರ್ಥ’ ಸಿನಿಮಾ ಟೀಸರ್:
‘ಅನರ್ಥ’ ಸಿನಿಮಾಗೆ ವಿ. ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ, ಸಂಗೀತ ನೀಡಿದ್ದಾರೆ. ಕುಮಾರ್ ಗೌಡ ಅವರು ಛಾಯಾಗ್ರಹಣ ಮಾಡಿದ್ದಾರೆ. ನಿಷಿತ್ ಪೂಜಾರಿ ಹಾಗೂ ವಿನಯ್ ಅವರು ಸಂಕಲನ ಮಾಡಿದ್ದಾರೆ. ಕುಂಗ್ ಫೂ ಚಂದ್ರು ಅವರ ಸಾಹಸ ನಿರ್ದೇಶನ ಈ ಸಿನಿಮಾಗಿದೆ. ವಿತರಕ ಎಂ. ರಮೇಶ್ ಅವರ ‘ಅಕ್ಷರ ಫಿಲ್ಮ್ಸ್’ ಮೂಲಕ ಈ ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆಯಿದೆ. ವಿಶಾಲ್, ವಿಹಾನಿ ಜೊತೆ ಸಿ. ವಿಜಯ್ ಕುಮಾರ್, ಗಣೇಶ್, ರಕ್ಷಿತ್, ಪ್ರಸನ್ನ ಬಾಗೀನ, ಅರ್ಪಿತಾ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.