Actress Vidya: ಪತಿಯಿಂದಲೇ ಕೊಲೆಯಾದ ‘ಭಜರಂಗಿ’ ನಟಿ ವಿದ್ಯಾ ನಂದೀಶ್, ಗಂಡ ಪರಾರಿ
‘ಭಜರಂಗಿ’, ‘ವೇದ’, ‘ಅಜಿತ್’, ‘ಜೈ ಮಾರುತಿ 800’ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿರುವ ನಟಿ ವಿದ್ಯಾರನ್ನು ಆಕೆಯ ಪತಿಯೇ ಕೊಲೆ ಮಾಡಿ ಪರಾರಿಯಾಗಿದ್ದಾನೆ. ವಿದ್ಯಾ, ಮೈಸೂರು ಕಾಂಗ್ರೆಸ್ನ ಕಾರ್ಯದರ್ಶಿಯೂ ಆಗಿದ್ದರು.
‘ಭಜರಂಗಿ’ (Bhajarangi), ‘ವೇದ’, ‘ಜೈ ಮಾರುತಿ 800’, ‘ಅಜಿತ್’ ಇನ್ನೂ ಕೆಲವು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ನಟಿಸಿದ್ದ ನಟಿ ವಿದ್ಯಾ ಕೊಲೆಯಾಗಿದ್ದಾರೆ. ಪತಿಯೇ ವಿದ್ಯಾರನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ಪತಿ ನಂದೀಶ್ ನಾಪತ್ತೆಯಾಗಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ವಿದ್ಯಾ, ನಟಿಯಷ್ಟೆ ಅಲ್ಲದೆ, ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದರು. ಮೈಸೂರು ನಗರ ಕಾಂಗ್ರೆಸ್ನ ಕಾರ್ಯದರ್ಶಿಯಾಗಿ ವಿದ್ಯಾ ಕೆಲಸ ಮಾಡುತ್ತಿದ್ದರು.
ನಟಿ ವಿದ್ಯಾ, 2018ರಲ್ಲಿ ನಂದೀಶ್ ಎಂಬುವರೊಟ್ಟಿಗೆ ವಿವಾಹವಾಗಿದ್ದರು. ಆರಂಭದ ಕೆಲ ದಿನಗಳ ಬಳಿಕ ಇಬ್ಬರ ನಡುವೆ ಮನಸ್ತಾಪ ಏರ್ಪಟ್ಟಿತ್ತು. ಇಬ್ಬರ ನಡುವೆ ಸಲಹ ಸಾಮಾನ್ಯವಾಗಿತ್ತು. ಆಗಾಗ್ಗೆ ಈ ದಂಪತಿಗಳು ಜಗಳ ಮಾಡುತ್ತಲೇ ಇದ್ದರು. ವಿಚ್ಛೇದನಕ್ಕೂ ಸಹ ಇವರು ಪ್ರಯತ್ನಿಸಿದ್ದರು ಆದರೆ ಪೋಷಕರು ಬುದ್ಧಿವಾದ ಹೇಳಿ ಇಬ್ಬರನ್ನೂ ಒಂದು ಮಾಡಿದ್ದರು. ಆದರೆ ಜಗಳ ಹಾಗೆಯೇ ಮುಂದುವರೆದಿತ್ತು. ಇತ್ತೀಚೆಗೆ ಮತ್ತೊಮ್ಮೆ ಇಬ್ಬರ ನಡುವೆ ಜಗಳ ನಡೆದಿತ್ತು. ಆಗ ವಿದ್ಯಾ, ಗಂಡನ ಮನೆಯಿರುವ ಮೈಸೂರಿನ ತುರಗನೂರಿನಿಂದ, ತಮ್ಮ ತವರು ಮನೆಯಾದ ಬೆಂಗಳೂರಿನ ಶ್ರೀರಾಮಪುರಕ್ಕೆ ಬಂದಿದ್ದರು.
ಇದನ್ನೂ ಓದಿ:ದುಬೈನಲ್ಲಿ ಜಗಳ ಆದ ಬಳಿಕ ನಟಿ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ? ಅಸಲಿ ವಿಷಯ ಏನು?
ಮೇ 20 ರಂದು ಸಹ ನಂದೀಶ್ ಹಾಗೂ ವಿದ್ಯಾ ನಡುವೆ ಫೋನ್ನಲ್ಲಿ ಜಗಳ ನಡೆದಿತ್ತು. ಜಗಳ ತಾರಕಕ್ಕೆ ಹೋಗಿ ವಿದ್ಯಾ ರಾತ್ರೋರಾತ್ರಿ ಶ್ರೀರಾಮಪುರದಿಂದ ಹೊರಟು ಮೈಸೂರಿನ ತುರುಗನೂರಿಗೆ ತಲುಪಿ ಗಂಡನೊಟ್ಟಿಗೆ ಮುಖಾ-ಮುಖಿ ಜಗಳಕ್ಕೆ ನಿಂತಿದ್ದರು. ಅಲ್ಲಿಯೂ ಸಹ ಜಗಳ ತಾರಕಕ್ಕೆ ಹೋದಾಗ ಪತಿ ನಂದೀಶ್, ಸುತ್ತಿಗೆಯಿಂದ ವಿದ್ಯಾ ಮೇಲೆ ಹಲ್ಲೆ ಮಾಡಿದ್ದಾರೆ. ಹೊಡೆತದ ರಭಸಕ್ಕೆ ವಿದ್ಯಾ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಬಳಿಕ ನಂದೀಶ್ ಅಲ್ಲಿಂದ ಪರಾರಿಯಾಗಿದ್ದಾನೆ.
ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ. ಬನ್ನೂರು ಠಾಣೆ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದು ಮಹಜರು ನಡೆಸಿದ್ದಾರೆ. ಸ್ಥಳೀಯರಿಂದ, ಸಂಬಂಧಿಗಳಿಂದ ಮಾಹಿತಿಗಳನ್ನು ಪಡೆದಿದ್ದಾರೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಹೆಚ್ಚುವರಿ ಎಸ್‌ಪಿ ಡಾ ನಂದಿನಿ, ನಂಜನಗೂಡು ಡಿವೈಎಸ್ಪಿ ಗೋವಿಂದರಾಜು ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಆರೋಪಿ ನಂದೀಶ್ಗಾಗಿ ಹುಡುಕಾಟ ಜಾರಿಯಲ್ಲಿದೆ.
ನಟಿಯಾಗಿದ್ದ ವಿದ್ಯಾ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದ ವಿದ್ಯಾ, ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಸಕ್ರಿಯವಾಗಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:51 pm, Tue, 21 May 24