‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಕಿಟ್ಟಿ, ರಚಿತಾ ಜೊತೆ ರಾಗಿಣಿ ದ್ವಿವೇದಿ ಡ್ಯಾನ್ಸ್
‘ಸಂಜು ವೆಡ್ಸ್ ಗೀತಾ 2’ ಚಿತ್ರದ ನಿರ್ಮಾಪಕ ಛಲವಾದಿ ಕುಮಾರ್ ಅವರು ಒಂದು ಸಿನಿಮಾಗೆ ಆಗುವಷ್ಟು ಬಜೆಟ್ ಅನ್ನು ಹಾಡುಗಳಿಗೇ ಸುರಿದಿದ್ದಾರೆ. ಆ ಮೂಲಕ ಅದ್ದೂರಿತನ ಹೆಚ್ಚುತ್ತಿದೆ. ಈ ಹಾಡುಗಳನ್ನು ಹಾಸನ ಹಾಗೂ ಹಾವೇರಿಯಲ್ಲಿ ಅದ್ದೂರಿ ಸಮಾರಂಭದ ಮೂಲಕ ಬಿಡುಗಡೆ ಮಾಡಲು ಆಲೋಚಿಸಲಾಗಿದೆ. ರಾಗಿಣಿ ದ್ವಿವೇದಿ, ರಚಿತಾ ರಾಮ್, ಶ್ರೀನಗರ ಕಿಟ್ಟಿ ಅವರು ಡ್ಯಾನ್ಸ್ ಮಾಡಿರುವ ಹಾಡಿನ ಶೂಟಿಂಗ್ ಇತ್ತೀಚೆಗೆ ನಡೆದಿದೆ.
ಖ್ಯಾತ ನಿರ್ದೇಶಕ ನಾಗಶೇಖರ್ ಅವರು ಹೊಸ ಪ್ರೇಮಕಥೆಯನ್ನು ಪ್ರೇಕ್ಷಕರ ಎದುರು ತರುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಅವರ ನಿರ್ದೇಶನದಲ್ಲಿ ಬಂದಿದ್ದ ‘ಸಂಜು ವೆಡ್ಸ್ ಗೀತಾ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಹೊಸದೊಂದು ಲವ್ ಸ್ಟೋರಿ ಇಟ್ಟುಕೊಂಡು ‘ಸಂಜು ವೆಡ್ಸ್ ಗೀತಾ 2’ (Sanju weds Geetha 2) ಸಿನಿಮಾವನ್ನು ಅವರು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ (Rachita Ram) ಅವರು ಪ್ರಮುಖ ಪಾತ್ರಗಳನ್ನು ಮಾಡುತ್ತಿರುವುದು ಗೊತ್ತೇ ಇದೆ. ಈ ಸಿನಿಮಾದ ಹಾಡಿನ ಶೂಟಿಂಗ್ ಇತ್ತೀಚೆಗೆ ನಡೆಯಿತು. ಈ ಹಾಡನ್ನು ಖ್ಯಾತ ಗಾಯಕಿ ಮಂಗ್ಲಿ ಹಾಡಿದ್ದಾರೆ. ಕಥಾನಾಯಕ ಸಂಜು ಮತ್ತು ಕಥಾನಾಯಕಿ ಗೀತಾ ಅವರ ವೆಡ್ಡಿಂಗ್ ಆ್ಯನಿವರ್ಸರಿ ಸಂದರ್ಭದಲ್ಲಿ ಬರುವ ಪಾರ್ಟಿ ಹಾಡು ಇದು. ವಿಶೇಷ ಏನಂದರೆ, ಈ ಸಾಂಗ್ನಲ್ಲಿ ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ.
‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಈ ಹಾಡನ್ನು ಬೆಂಗಳೂರಿನ ಕುಂಬಳಗೋಡಿನ ಬಿಜಿಎಸ್ ಹೈಸ್ಕೂಲ್ನ ಗ್ಲಾಸ್ ಹೌಸ್ನಲ್ಲಿ ಚಿತ್ರೀಕರಿಸಲಾಯಿತು. ಅಂದಾಜು 250 ಡಾನ್ಸರ್ಸ್ ಈ ಹಾಡಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಮಂಗ್ಲಿ ಅವರ ಕಂಠದಲ್ಲಿ ಮೂಡಿಬಂದ ಈ ಹಾಡಿಗೆ ಭಜರಂಗಿ ಮೋಹನ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡು ಸೂಪರ್ ಹಿಟ್ ಆಗಲಿದೆ ಎಂದು ಚಿತ್ರತಂಡ ಭರವಸೆ ವ್ಯಕ್ತಪಡಿಸಿದೆ. ಈಗಾಗಲೇ ಸಿನಿಮಾ ಬಹುತೇಕ ಶೂಟಿಂಗ್ ಮುಗಿದಿದೆ. 2 ಸಾಹಸ ದೃಶ್ಯಗಳು ಮತ್ತು ಒಂದು ಹಾಡಿನ ಪ್ಯಾಚ್ ವರ್ಕ್ ಮಾತ್ರ ಬಾಕಿ ಉಳಿಸಿಕೊಂಡಿದೆ.
ರೇಷ್ಮೆ ನೂಲಿಗೆ ಉತ್ತಮ ದರ ಸಿಗಬೇಕು ಎಂದು ಹೋರಾಟ ಮಾಡುವ ಪ್ರೇಮಿಗಳ ಕಥೆಯನ್ನು ಈ ಸಿನಿಮಾ ಮೂಲಕ ನಾಗಶೇಖರ್ ಅವರು ಹೇಳಲಿದ್ದಾರೆ. ಸಿನಿಮಾದ ಎಡಿಟಿಂಗ್ ಮುಗಿದಿದೆ ಡಬ್ಬಿಂಗ್ ಕೆಲಸ ಸಹ ಕೊನೆಯ ಹಂತದಲ್ಲಿದೆ. ಸ್ವಿಟ್ಜರ್ಲ್ಯಾಂಡ್ನಲ್ಲಿ 15 ದಿನ ಶೂಟಿಂಗ್ ಮಾಡಲಾಗಿದೆ. 50 ಲಕ್ಷ ರೂಪಾಯಿ ವೆಚ್ಚದಲ್ಲಿ ಕುಣಿಗಲ್ನ ಯುಬಿ ಸ್ಟೆಡ್ ಫಾರ್ಮ್ನಲ್ಲಿ ಸುಮಾರು 5 ದಿನಗಳ ಕಾಲ ಅದ್ದೂರಿಯಾದ ಹಾಡೊಂದರ ಶೂಟಿಂಗ್ ಮಾಡಲಾಗಿದೆ. ಸಿನಿಮಾದ ಕಥೆಗೆ ನೀಡಿದಷ್ಟೇ ಪ್ರಾಮುಖ್ಯತೆಯನ್ನು ಹಾಡುಗಳು ನೀಡುತ್ತಿದ್ದಾರೆ ನಿರ್ದೇಶಕರು.
ಇದನ್ನೂ ಓದಿ: ನಟಿ ರಾಗಿಣಿ ದ್ವಿವೇದಿ ಡಿಫರೆಂಟ್ ಫ್ಯಾಷನ್ ಕಂಡು ವಾವ್ ಎಂದ ಫ್ಯಾನ್ಸ್
ಕಥೆ, ಚಿತ್ರಕಥೆ ಬರೆದು ನಾಗಶೇಖರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀಧರ ವಿ. ಸಂಭ್ರಮ್ ಅವರು 5 ಹಾಡುಗಳಿಗೆ ಸಂಗಿತ ನೀಡಿದ್ದಾರೆ. ಶ್ರೇಯಾ ಘೋಷಾಲ್, ಸೋನು ನಿಗಂ, ಮಂಗ್ಲಿ ಅವರು ಹಾಡುಗಳಿಗೆ ದನಿಯಾಗಿದ್ದಾರೆ. ರಾಗಿಣಿ ದ್ವಿವೇದಿ, ರಂಗಾಯಣ ರಘು, ಚೇತನ್ ಚಂದ್ರ, ತಬಲಾ ನಾಣಿ, ಸಾಧು ಕೋಕಿಲ, ಗಿಚ್ಚಿ ಗಿಲಿಗಿಲಿ ವಿನೋದ್, ಸಂಪತ್ ಕುಮಾರ್ ಮುಂತಾದ ಕಲಾವಿದರು ‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.