ರಿಷಿ ನಟನೆಯ ಹೊಸ ಸಿನಿಮಾಗೆ ‘ಸಂಜು ವೆಡ್ಸ್ ಗೀತಾ’ ನಿರ್ಮಾಪಕ ಪ್ರಮೋದ್ ನಾರಾಯಣ್ ಬಂಡವಾಳ
ಹೊಸ ಸಿನಿಮಾಗೆ ರಿಷಿ ಸಹಿ ಹಾಕಿದ್ದಾರೆ. ‘ಸಂಜು ವೆಡ್ಸ್ ಗೀತಾ’ ಸಿನಿಮಾದ ನಿರ್ಮಾಪಕ ಪ್ರಮೋದ್ ನಾರಾಯಣ್ ಅವರು ಈ ಹೊಸ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲೂ ಈ ಸಿನಿಮಾ ಮೂಡಿಬರಲಿದೆ. ಈ ಚಿತ್ರದ ಶೀರ್ಷಿಕೆ ಶೀಘ್ರದಲ್ಲೇ ಅನಾವರಣ ಆಗಲಿದೆ. ಕಿಶೋರ್ ಭಾರ್ಗವ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ.
ನಟ ರಿಷಿ (Rishi) ಅಭಿನಯದ ‘ರಾಮನ ಅವತಾರ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಈಗ ಅವರ ಹೊಸ ಸಿನಿಮಾ ಬಗ್ಗೆ ಒಂದು ಅಪ್ಡೇಟ್ ಕೇಳಿಬಂದಿದೆ. ಸ್ಯಾಂಡಲ್ವುಡ್ನ ಸೂಪರ್ ಹಿಟ್ ಸಿನಿಮಾವಾದ ‘ಸಂಜು ವೆಡ್ಸ್ ಗೀತಾ’ (Sanju Weds Geetha) ಮತ್ತು ‘ಹಾಗೆ ಸುಮ್ಮನೆ’ ಚಿತ್ರಗಳಿಗೆ ಬಂಡವಾಳ ಹೂಡಿದ್ದ ನಿರ್ಮಾಪಕ ಪ್ರಮೋದ್ ನಾರಾಯಣ್ (Pramod Narayan) ಅವರು ಈಗ ರಿಷಿ ನಟನೆಯ ಹೊಸ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಸೆಟ್ಟೇರಲಿದೆ. ಚಂದನವನದಲ್ಲಿ ರಿಷಿ ಅವರು ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ‘ಕವಲುದಾರಿ’, ‘ಆಪರೇಷನ್ ಅಲಮೇಲಮ್ಮ’ ರೀತಿಯ ಭಿನ್ನ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈಗ ಅವರ ಹೊಸ ಸಿನಿಮಾ ಬಗ್ಗೆ ಅನೌನ್ಸ್ ಮಾಡಲಾಗಿದೆ.
ರಿಷಿ ಅವರು ತಮ್ಮದೇ ಆದಂತಹ ಅಭಿಮಾನಿ ಬಳಗ ಹೊಂದಿದ್ದಾರೆ. ಹಾಗಾಗಿ ಅವರಿಗೆ ಬೇಡಿಕೆ ಇದೆ. ಈಗ ಅವರು ನಟಿಸಲಿರುವ ನೂತನ ಚಿತ್ರವು ‘ರಾಕಡ್ ಫಿಲಂಸ್ ಮುಂಬೈ’ ಸಂಸ್ಥೆಯ ಮೂಲಕ ನಿರ್ಮಾಣ ಆಗಲಿದೆ. ಈ ಸಿನಿಮಾದ ನಿರ್ಮಾಣದಲ್ಲಿ ಜೊಯ್ ದೀಪ್ ಬಿಸ್ವಾಸ್ ಮತ್ತು ಸೋನಾಲಿ ಬಿಸ್ವಾಸ್ ಅವರು ಕೈ ಜೋಡಿಸುತ್ತಿದ್ದಾರೆ. ವಸಂತ್ ಹಂಗೆ ಹಾಗೂ ಕೆ.ಸಿ. ಶಿವಾನಂದ್ ಕೂಡ ಸಹ-ನಿರ್ಮಾಪಕರಾಗಿದ್ದಾರೆ.
ಬಹುಭಾಷೆಯಲ್ಲಿ ಸಿನಿಮಾ ಮಾಡಿ ಸೈ ಎನಿಸಿಕೊಂಡ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ಜೊತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಹಿಂದಿರುವ ಕಿಶೋರ್ ಭಾರ್ಗವ್ ಅವರು ರಿಷಿಯ ಹೊಸ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಅವರು ಕೂಡ ಮೂಲತಃ ಕನ್ನಡಿಗರು. ಈಗಾಗಲೇ ತೆಲುಗು ಸಿನಿಮಾವೊಂದನ್ನು ನಿರ್ದೇಶನ ಮಾಡಿದ ಅನುಭವ ಅವರಿಗೆ ಇದೆ. ಇದು ಕನ್ನಡದಲ್ಲಿ ಅವರಿಗೆ ಮೊದಲ ಸಿನಿಮಾ.
ಇದನ್ನೂ ಓದಿ: ಸ್ವಿಟ್ಜರ್ಲ್ಯಾಂಡ್ನ ಚಳಿಯಲ್ಲಿ‘ಸಂಜು ವೆಡ್ಸ್ ಗೀತಾ 2‘ ಚಿತ್ರೀಕರಣ
ಈ ಸಿನಿಮಾದ ಚಿತ್ರೀಕರಣವನ್ನು ಆಗಸ್ಟ್ನಲ್ಲಿ ಆರಂಭಿಸಲು ಪ್ಲ್ಯಾನ್ ಮಾಡಲಾಗಿದೆ. ಆ ಬಗ್ಗೆ ನಿರ್ಮಾಪಕ ಪ್ರಮೋದ್ ನಾರಾಯಣ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾದ ಟೈಟಲ್ ಏನು ಎಂಬುದು ರಿವೀಲ್ ಆಗಲಿದೆ. ವಿಶೇಷ ಏನೆಂದರೆ ಈ ಸಿನಿಮಾ ಕನ್ನಡದ ಜೊತೆ ತೆಲುಗಿನಲ್ಲೂ ನಿರ್ಮಾಣ ಆಗಲಿದೆ. ಇದರಲ್ಲಿ ವಿಭಿನ್ನ ಕಥಾಹಂದರ ಎಂದು ಚಿತ್ರತಂಡದವರು ಹೇಳಿಕೊಂಡಿದ್ದಾರೆ. ‘ರಿಷಿ ಅವರು ‘ಸೈತಾನ್’ ವೆಬ್ ಸರಣಿ ಮೂಲಕ ತೆಲುಗಿನಲ್ಲಿ ಖ್ಯಾತಿ ಗಳಿಸಿದ್ದಾರೆ. ತಮಿಳುನಾಡಿನಲ್ಲೂ ಅವರಿಗೆ ಜನಪ್ರಿಯತೆ ಇದೆ. ಎಲ್ಲ ಭಾಷೆಯ ಪ್ರೇಕ್ಷಕರಿಗೂ ಇಷ್ಟ ಆಗುವಂತಹ ಕಥೆ ಈ ನಮ್ಮ ಸಿನಿಮಾದಲ್ಲಿ ಇರಲಿದೆ’ ಎಂದು ನಿರ್ಮಾಪಕ ಪ್ರಮೋದ್ ನಾರಾಯಣ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.