ತೆಲುಗು ಚಿತ್ರರಂಗದಲ್ಲಿ ದೊಡ್ಡ ಸಂಖ್ಯೆಯ ಸ್ಟಾರ್ ನಟರಿದ್ದಾರೆ. ಪರಭಾಷೆಯ ಚಿತ್ರರಂಗಗಳಿಗೆ ಹೋಲಿಸಿದರೆ ತೆಲುಗು ಚಿತ್ರರಂಗ ಹೊಂದಿರುವ ಸ್ಟಾರ್ ನಟರ ಸಂಖ್ಯೆ ತುಸು ಹೆಚ್ಚು, ಅದಕ್ಕೆ ತಕ್ಕಂತೆ ಭಾರಿ ಬಜೆಟ್ನ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿಯಮಿತವಾಗಿ ನೀಡುತ್ತಲೇ ಬಂದಿದೆ ತೆಲುಗು ಚಿತ್ರರಂಗ. ಇದೀಗ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಿದ್ದು ಭಾರಿ ದೊಡ್ಡ ಹಿಟ್ ಎನಿಸಿಕೊಂಡಿದೆ. ಸತತ ಸೋಲು ಕಂಡಿದ್ದ ಪ್ರಭಾಸ್ಗೆ ಭಾರಿ ಗೆಲುವನ್ನು ‘ಕಲ್ಕಿ’ ನೀಡಲಿದೆ ಎನ್ನಲಾಗುತ್ತಿದೆ. ಕಲ್ಕಿ ಸಿನಿಮಾದ ಪಾತ್ರಕ್ಕೆ ಪ್ರಭಾಸ್ ಅದ್ಭುತವಾಗಿ ಸೂಟ್ ಸಹ ಆಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಅಷ್ಟೋಂದು ಸೂಪರ್ ಸ್ಟಾರ್ಗಳಿರುವಾಗ ‘ಕಲ್ಕಿ’ ಸಿನಿಮಾಕ್ಕೆ ಪ್ರಭಾಸ್ ಅವರನ್ನೇ ಆರಿಸಿಕೊಂಡಿದ್ದೇಕೆ? ನಿರ್ದೇಶಕ ನಾಗ್ ಅಶ್ವಿನ್ ಉತ್ತರ ನೀಡಿದ್ದಾರೆ.
ಈ ಹಿಂದಿನ ಸಂದರ್ಶನವೊಂದರಲ್ಲಿ ನಾಗ್ ಅಶ್ವಿನ್ಗೆ ಈ ಪ್ರಶ್ನೆ ಎದುರಾಗಿತ್ತು, ‘ಇಷ್ಟು ದೊಡ್ಡ ಬಜೆಟ್ ಭಿನ್ನ ಕತೆಯುಳ್ಳ ಸಿನಿಮಾ, ಈ ಸಿನಿಮಾಕ್ಕೆ ಪ್ರಭಾಸ್ ಅವರನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ? ಎಂದು ಸಂದರ್ಶಕಿ ಪ್ರಶ್ನೆ ಕೇಳಿದ್ದರು. ‘ಕತೆಗೆ ಸೂಕ್ತವಾಗುತ್ತಾರೆ ಎಂಬುದು ಮಾತ್ರವೇ ಕಾರಣವಲ್ಲ, ಈ ಕತೆಯನ್ನು ಅವರು ಬಿಟ್ಟು ಇನ್ಯಾರೂ ಸಹ ಮಾಡಲು ಸಾಧ್ಯವಿಲ್ಲ. ಇದು ಬಹಳ ದೊಡ್ಡ ಕತೆ, ಭಾರವಾದ ಕತೆ, ಈ ಕತೆಯನ್ನು ಹೆಗಲ ಮೇಲೆ ಹೊರುವ ಛಾತಿ ಈಗಿರುವ ನಟರಲ್ಲಿ ಪ್ರಭಾಸ್ ಅವರನ್ನು ಬಿಟ್ಟು ಇನ್ಯಾರಿಗೂ ಇಲ್ಲ’ ಎಂದಿದ್ದರು ನಾಗ್ ಅಶ್ವಿನ್.
ಇದನ್ನೂ ಓದಿ:‘ಕಲ್ಕಿ 2898 ಎಡಿ’ ಮುರಿದ ದಾಖಲೆಗಳೆಷ್ಟು? ನಿರ್ಮಾಪಕರು ಕೊಟ್ಟರು ಉತ್ತರ
ನಾಗ್ ಅಶ್ವಿನ್ ಅವರು ಆ ಸಂದರ್ಶನದಲ್ಲಿ ಆಡಿದ ಮಾತುಗಳ ವಿಡಿಯೋ ಇಂದು ವೈರಲ್ ಆಗುತ್ತಿವೆ. ಜೂ ಎನ್ಟಿಆರ್, ಅಲ್ಲು ಅರ್ಜುನ್, ರಾಮ್ ಚರಣ್, ಮಹೇಶ್ ಬಾಬು, ಚಿರಂಜೀವಿ, ಪವನ್ ಕಲ್ಯಾಣ್, ವಿಜಯ್ ದೇವರಕೊಂಡ ಇನ್ನೂ ಹಲವಾರು ಸ್ಟಾರ್ ನಟರನ್ನು ಹೊಂದಿರುವ ಚಿತ್ರರಂಗದಲ್ಲಿ ದೊಡ್ಡ ಕತೆಯನ್ನು ಹೊರುವ ಛಾತಿ, ಕತೆಗೆ ಪಾತ್ರಕ್ಕೆ ನ್ಯಾಯ ಒದಗಿಸುವ ಛಾತಿ ಪ್ರಭಾಸ್ಗೆ ಮಾತ್ರವೇ ಇದೆ ಎಂದು ನಾಗ್ ಅಶ್ವಿನ್ ಸ್ಪಷ್ಟವಾಗಿ ಹೇಳಿದ್ದರು. ನಾಗ್ ಅಶ್ವಿನ್ರ ವಿಡಿಯೋವನ್ನು ಪ್ರಭಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿ ಪಡುತ್ತಿದ್ದಾರೆ.
ನಾಗ್ ಅಶ್ವಿನ್ ಹೇಳಿರುವುದು ನಿಜ ಸಹ. ಬಾಹುಬಲಿ ಬಳಿಕ ಪ್ರಭಾಸ್ಗೆ ಎಲ್ಲವೂ ಲಾರ್ಜರ್ ದ್ಯಾನ್ ಲೈಫ್ ಪಾತ್ರಗಳೇ ದೊರೆತಿವೆ. ಅಂಥಹಾ ಪಾತ್ರಗಳನ್ನು ಅವರನ್ನು ಬಿಟ್ಟು ಇನ್ಯಾರೂ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆಯಿಂದಲೇ ಪಾತ್ರಗಳು ಪ್ರಭಾಸ್ ಅನ್ನು ಅರಸಿ ಬಂದಿವೆ. ‘ರಾಧೆ-ಶ್ಯಾಮ್’, ‘ಆದಿಪುರುಷ್’ ಸಿನಿಮಾಗಳು ಸಹ ಸಾಮಾನ್ಯ ಕತೆಗಳಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ