‘ಕಲ್ಕಿ 2898 ಎಡಿ’ ಮುರಿದ ದಾಖಲೆಗಳೆಷ್ಟು? ನಿರ್ಮಾಪಕರು ಕೊಟ್ಟರು ಉತ್ತರ
ಪ್ರಭಾಸ್ ಸೇರಿದಂತೆ ಹಲವು ತಾರೆಯರು ನಟಸಿರುವ ‘ಕಲ್ಕಿ 2898 ಎಡಿ’ ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಹಿಂದಿನ ಕೆಲವು ದಾಖಲೆಗಳನ್ನು ಈ ಸಿನಿಮಾ ಮುರಿದಿದೆ ಎನ್ನಲಾಗುತ್ತಿದೆ. ‘ಕಲ್ಕಿ’ ದಾಖಲೆಗಳನ್ನು ಮುರಿಯುತ್ತಿರುವ ಕುರಿತಾಗಿ ನಿರ್ಮಾಪಕರು ಹೇಳಿಕೆಯೊಂದನ್ನು ಹಂಚಿಕೊಂಡಿದ್ದಾರೆ.
ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಸೇರಿದಂತೆ ಇನ್ನೂ ಹಲವಾರು ಮಂದಿ ಸ್ಟಾರ್ ನಟ-ನಟಿಯರು ನಟಿಸಿರುವ ಭಾರಿ ಬಜೆಟ್ ಸಿನಿಮಾ ‘ಕಲ್ಕಿ 2898 ಎಡಿ’ ನಿನ್ನೆ (ಜೂನ್ 28) ಬಿಡುಗಡೆ ಆಗಿದ್ದು ಮೊದಲ ದಿನವೇ ಭಾರಿ ದೊಡ್ಡ ಮೊತ್ತವನ್ನು ಕಲೆಕ್ಷನ್ ಮಾಡಿದೆ. ಸಿನಿಮಾ ಬಿಡುಗಡೆ ಆದ ದಿನವೇ ಈ ಹಿಂದಿನ ಕೆಲ ದಾಖಲೆಗಳನ್ನು ಪುಡಿಗಟ್ಟಿದೆ. ಮೊದಲ ದಿನದ ಕಲೆಕ್ಷನ್, ಓವರ್ಸೀಸ್ ಫಸ್ಟ್ ಡೇ ಕಲೆಕ್ಷನ್, ಮುಂಗಡ ಬುಕಿಂಗ್ ಇನ್ನೂ ಕೆಲವು ವಿಭಾಗಗಳಲ್ಲಿ ಹೊಸ ದಾಖಲೆ ಬರೆದಿದೆ. ‘ಕಲ್ಕಿ’ ಯಾವ ಯಾವ ದಾಖಲೆಗಳನ್ನು ಮುರಿದಿದೆ ಎಂಬ ಅಭಿಮಾನಿಗಳ ಪ್ರಶ್ನೆಗೆ ನಿರ್ಮಾಪಕರು ಉತ್ತರಿಸಿದ್ದಾರೆ.
‘ಕಲ್ಕಿ 2898 ಎಡಿ’ ಸಿನಿಮಾವನ್ನು ಹಿರಿಯ ನಿರ್ಮಾಪಕ ಅಶ್ವಿನಿ ದತ್ ನಿರ್ಮಾಣ ಮಾಡಿದ್ದರು. ಅವರ ಪುತ್ರಿಯರಾದ ಪ್ರಿಯಾಂಕಾ ದತ್ ಮತ್ತು ಸ್ವಪ್ನಾ ದತ್ ಅವರುಗಳು ಈ ಸಿನಿಮಾದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಇದೀಗ ಪ್ರಭಾಸ್ ಅಭಿಮಾನಿಗಳು ಹಾಗೂ ಇತರರು ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಬಳಿಕ ವೈಜಯಂತಿ ಕಚೇರಿಗೆ ಕರೆ ಮಾಡಿ, ‘ಕಲ್ಕಿ’ ಸಿನಿಮಾ ಪುಡಿಗಟ್ಟಿದ ದಾಖಲೆಗಳ ಬಗ್ಗೆ ವಿಚಾರಿಸುತ್ತಿದ್ದಾರಂತೆ. ಸಾಮಾಜಿಕ ಜಾಲತಾಣದಲ್ಲಿಯೂ ಸಹ ಸ್ವಪ್ನಾ ಅವರನ್ನು ದಾಖಲೆಗಳ ಪಟ್ಟಿ ಬಿಡುಗಡೆ ಮಾಡುವಂತೆ ಪದೇ ಪದೇ ಕೇಳುತ್ತಿದ್ದಾರಂತೆ. ಇದೇ ಕಾರಣಕ್ಕೆ ನಿರ್ಮಾಪಕಿ ಸ್ವಪ್ನಾ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಸಂಭಾವನೆ ಪಡೆಯದೇ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿದ ಮೃಣಾಲ್, ಕಾರಣ?
‘ಜನ ಕರೆ ಮಾಡಿ ರೆಕಾರ್ಡ್ ಬ್ರೇಕ್ ಮಾಡಿದೆವಾ? ಎಂದು ಕೇಳುತ್ತಿದ್ದಾರೆ. ಇದು ವಿಚಿತ್ರ ಅನಿಸುತ್ತದೆ. ಯಾರು ಆ ದಾಖಲೆಗಳನ್ನು ನಿರ್ಮಾಣ ಮಾಡಿದ್ದಾರೋ ಅವರು ದಾಖಲೆ ಮಾಡಬೇಕೆಂಬ ಗುರಿ ಇಟ್ಟುಕೊಂಡು ಸಿನಿಮಾ ಮಾಡಿರಲಿಲ್ಲ. ಅವರಿಗೆ ಜನರಿಗೆ ಇಷ್ಟವಾಗುವ ಸಿನಿಮಾ ಮಾಡಬೇಕು ಎಂಬ ಗುರಿಯಷ್ಟೆ ಇತ್ತು. ದಾಖಲೆ ಮಾಡಿರುವ ಯಾರೊಬ್ಬರೂ ಸಹ ದಾಖಲೆಗಾಗಿ ಈ ವರೆಗೆ ಸಿನಿಮಾ ಮಾಡಿಲ್ಲ. ನಾವೂ ಸಹ ಜನಗಳಿಗಾಗಿ ಸಿನಿಮಾ ಮಾಡಿದ್ದೇವೆ. ಸಿನಿಮಾ ಮೇಲಿರುವ ಪ್ರೀತಿಯಿಂದಾಗಿ ನಾವು ಸಿನಿಮಾ ಮಾಡಿದ್ದೇವೆ. ನಾವೂ ಸಹ ಅದನ್ನೇ ಮಾಡಿದ್ದೇವೆ’ ಎಂದಿದ್ದಾರೆ ‘ಕಲ್ಕಿ 2898 ಎಡಿ’ಯ ಕಾರ್ಯಕಾರಿ ನಿರ್ಮಾಪಕಿ ಸ್ವಪ್ನಾ.
#Kalki2898AD pic.twitter.com/85X4CYqNij
— Swapnadutt Chalasani (@SwapnaDuttCh) June 28, 2024
ಸ್ವಪ್ನಾ ಹಾಗೂ ಪ್ರಿಯಾಂಕಾ ಅಶ್ವಿನಿ ದತ್ ಅವರ ಪುತ್ರಿಯರಾಗಿದ್ದು, ‘ಕಲ್ಕಿ 2898 ಎಡಿ’ ಸಿನಿಮಾದ ಸಂಪೂರ್ಣ ಚಿತ್ರೀಕರಣವನ್ನು ಮೇಲ್ವಿಚಾರಣೆ ಮಾಡಿರುವುದು ಅವರೇ. ಅಂದಹಾಗೆ ‘ಕಲ್ಕಿ 2898 ಎಡಿ’ ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್ರ ಪತ್ನಿ ಪ್ರಿಯಾಂಕಾ ದತ್. ನಿರ್ಮಾಪಕ ಅಶ್ವಿನಿ ದತ್ ಅವರ ಕೊನೆಯ ಪುತ್ರಿ ಇವರು. ಪ್ರಿಯಾಂಕಾ ಸಹ ‘ಕಲ್ಕಿ 2898 ಎಡಿ’ ಸಿನಿಮಾದ ಕೆಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:53 pm, Fri, 28 June 24