ತೆಲುಗು ಚಿತ್ರರಂಗದಲ್ಲಿ ಮಾಸ್ ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತವೆ ಎಂಬ ಮಾತು ಇದೆ. ಆದರೆ ಈಗ ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡಿರುವ ಜನರು ಈಗ ಹೊಸತನದ ಕಥೆಗಳನ್ನು ಬಯಸುತ್ತಿದ್ದಾರೆ. ಅದೇ ಕಾರಣಕ್ಕೋ ಏನೋ ಟಾಲಿವುಡ್ನ (Tollywood) ಕೆಲವು ಸಿನಿಮಾಗಳು ಮುಗ್ಗರಿಸುತ್ತಿವೆ. ಹಳೇ ಮಾದರಿಯಲ್ಲೇ ಸಿನಿಮಾ ಮಾಡಿದ ಹೀರೋಗಳಿಗೆ ಸೋಲು ಉಂಟಾಗುತ್ತಿದೆ. ಅದರಲ್ಲೂ ಅಕ್ಕಿನೇನಿ ಕುಟುಂಬದ (Akkineni Family) ನಟರು ಬ್ಯಾಕ್ ಟು ಬ್ಯಾಕ್ ಸೋಲುತ್ತಿದ್ದಾರೆ. ಹಿರಿಯ ನಟ ನಾಗಾರ್ಜುನ ಮಾಡಿದ ಚಿತ್ರಗಳು ಜನರಿಗೆ ಮೆಚ್ಚುಗೆ ಆಗುತ್ತಿಲ್ಲ. ಅವರ ಪುತ್ರರಾದ ನಾಗ ಚೈತನ್ಯ (Naga Chaitanya) ಮತ್ತು ಅಖಿಲ್ ನಟನೆಯ ಸಿನಿಮಾಗಳನ್ನು ಕೂಡ ಪ್ರೇಕ್ಷಕರು ರಿಜೆಕ್ಟ್ ಮಾಡಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಕಸ್ಟಡಿ’ ಸಿನಿಮಾದ ಸೋಲಿನ ಬಳಿಕ ಈ ಫ್ಯಾಮಿಲಿಯ ಮೂವರು ಹೀರೋಗಳು ತಮ್ಮ ಭವಿಷ್ಯದ ಬಗ್ಗೆ ಗಂಭೀರವಾಗಿ ಆಲೋಚಿಸುವಂತಾಗಿದೆ.
ನಾಗಾರ್ಜುನ ಅವರು ಸ್ಕ್ರಿಪ್ಟ್ ಆಯ್ಕೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ ಮಾಸ್ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ನಾಗಾರ್ಜುನ ಅವರು ಕೈ ಸುಟ್ಟುಕೊಂಡಿರುವುದು ಕಣ್ಣೆದುರಲ್ಲೇ ಇದೆ. ಅವರು ನಟಿಸಿದ ‘ವೈಲ್ಡ್ ಡಾಗ್’, ‘ಆಫೀಸರ್’ ಮತ್ತು ‘ದಿ ಘೋಸ್ಟ್’ ಚಿತ್ರಗಳು ಒಂದರ ಹಿಂದೊಂದು ಸೋತಿವೆ. ಅದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಇದನ್ನೂ ಓದಿ: ಸಮಂತಾ ಬಗ್ಗೆ ನಾಗ ಚೈತನ್ಯ ಮೆಚ್ಚುಗೆ; ಮಾಜಿ ಪತ್ನಿಯನ್ನು ಬಾಯ್ತುಂಬ ಹೊಗಳಿದ ನಟ
ನಾಗ ಚೈತನ್ಯ ಅವರು ಕೂಡ ಇತ್ತೀಚಿನ ವರ್ಷಗಳಲ್ಲಿ ಗೆಲುವು ಕಂಡಿಲ್ಲ. ‘ಮಜಿಲಿ’, ‘ಲವ್ ಸ್ಟೋರಿ’ ನಂತರ ಅವರು ಸ್ಕ್ರಿಪ್ಟ್ ಆಯ್ಕೆಯಲ್ಲಿ ಎಡವಿದರು. ‘ಥ್ಯಾಂಕ್ ಯೂ’ ಸಿನಿಮಾ ಅಭಿಮಾನಿಗಳಿಗೆ ಇಷ್ಟ ಆಗಲಿಲ್ಲ. ‘ಕಸ್ಟಡಿ’ ನೋಡಿದ ಜನರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಅದ್ದೂರಿ ಬಜೆಟ್ನಲ್ಲಿ ನಿರ್ಮಾಣ ಆದ ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ನಾಗ ಚೈತನ್ಯ ಅವರು ಬೇರೆ ರೀತಿಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ ಆಗಿದೆ.
ಇದನ್ನೂ ಓದಿ: Naga Chaitanya: ಕಾರಿನಲ್ಲಿ ಕದ್ದುಮುಚ್ಚಿ ಕಿಸ್ ಮಾಡುತ್ತಾ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಸಮಂತಾ ಮಾಜಿ ಪತಿ ನಾಗ ಚೈತನ್ಯ
ಅಖಿಲ್ ಅಕ್ಕಿನೇನಿ ಅವರಿಗೆ ಟಾಲಿವುಡ್ನಲ್ಲಿ ನೆಲೆ ಕಂಡುಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ. ಮಾಡಿದ ಒಂದೆರಡು ಸಿನಿಮಾಗಳು ಕೂಡ ಗೆಲ್ಲಲಿಲ್ಲ. ಹೇಗಾದರೂ ಮಾಡಿ ಯಶಸ್ಸು ಕಾಣಲೇಬೇಕು ಎಂಬ ಉದ್ದೇಶದಿಂದ ಅವರು ‘ಏಜೆಂಟ್’ ಸಿನಿಮಾ ಮಾಡಿದರು. ಆದರೂ ಕೂಡ ಅವರಿಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಗಲಿಲ್ಲ. ಇತ್ತೀಚೆಗೆ ತೆರೆಕಂಡ ಈ ಚಿತ್ರಕ್ಕಾಗಿ ಅಖಿಲ್ ಅವರು ತುಂಬ ಶ್ರಮಪಟ್ಟಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.