‘ಡಾಕು ಮಹಾರಾಜ್’ ಸಿನಿಮಾ ಪ್ರೀ ರಿಲೀಸ್ ಇವೆಂಟ್ ರದ್ದು ಮಾಡಿದ ಬಾಲಕೃಷ್ಣ

|

Updated on: Jan 09, 2025 | 11:29 AM

Nandamuri Balakrishna: ನಂದಮೂರಿ ಬಾಲಕೃಷ್ಣ ನಟನೆಯ ‘ಡಾಕೂ ಮಹಾರಾಜ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಇಂದು (ಜನವರಿ 09) ಆಯೋಜನೆಗೊಂಡಿತ್ತು. ಆದರೆ ಇದೀಗ ಬಾಲಕೃಷ್ಣ ಅವರು ‘ಡಾಕೂ ಮಹಾರಾಜ್’ ಸಿನಿಮಾ ಪ್ರೀ ರಿಲೀಸ್ ಇವೆಂಟ್ ಅನ್ನು ರದ್ದು ಮಾಡಿದ್ದಾರೆ.

‘ಡಾಕು ಮಹಾರಾಜ್’ ಸಿನಿಮಾ ಪ್ರೀ ರಿಲೀಸ್ ಇವೆಂಟ್ ರದ್ದು ಮಾಡಿದ ಬಾಲಕೃಷ್ಣ
Nandamuri Balakrishna
Follow us on

ಸಂಕ್ರಾಂತಿಗೆ ಹಲವು ತೆಲುಗು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಅದರಲ್ಲೂ ಈ ಬಾರಿ ಮೂರು ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರುತ್ತಿವೆ. ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ವೆಂಕಟೇಶ್ ನಟನೆಯ ‘ಸಂಕ್ರಾಂತಿಕಿ ವಸ್ತುನ್ನಾಮ್’ ಹಾಗೂ ನಂದಮೂರಿ ಬಾಲಕೃಷ್ಣ ನಟನೆಯ ‘ಡಾಕೂ ಮಹರಾಜ್’. ಮೂರು ಸಿನಿಮಾಗಳು ಸಂಕ್ರಾಂತಿ ರೇಸ್​ನಲ್ಲಿದ್ದು ಪರಸ್ಪರ ಸ್ಪರ್ಧೆಗೆ ಇಳಿದಿವೆ. ‘ಗೇಮ್ ಚೇಂಜರ್’ ಹಾಗೂ ‘ಸಂಕ್ರಾಂತಿಕಿ ವಸ್ತುನ್ನಾಮ್’ ಸಿನಿಮಾಗಳು ಪ್ರೀ ರಿಲೀಸ್ ಇವೆಂಟ್​ಗಳನ್ನು ಅದ್ಧೂರಿಯಾಗಿ ಮಾಡಿ ಭರ್ಜರಿ ಪ್ರಚಾರ ಮಾಡಿವೆ. ಆದರೆ ‘ಡಾಕೂ ಮಹಾರಾಜ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅನ್ನು ರದ್ದು ಮಾಡಲಾಗಿದೆ.

‘ಡಾಕೂ ಮಹಾರಾಜ್’ ಸಿನಿಮಾದ ನಾಯಕ ನಟ ನಂದಮೂರಿ ಬಾಲಕೃಷ್ಣ ಅವರು ‘ಡಾಕೂ ಮಹಾರಾಜ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅನ್ನು ರದ್ದು ಮಾಡಿದ್ದಾರೆ. ಇದಕ್ಕೆ ಕಾರಣವೂ ಇದೆ. ಅಸಲಿಗೆ ‘ಡಾಕೂ ಮಹಾರಾಜ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಇಂದು (ಜನವರಿ 09) ರಂದು ನಡೆಯಬೇಕಿತ್ತು. ಇದಕ್ಕಾಗಿ ಅನಂತಪುರದಲ್ಲಿ ಸಕಲ ತಯಾರಿಯನ್ನು ನಡೆಸಲಾಗಿತ್ತು. ಆದರೆ ಇದೀಗ ಹಠಾತ್ತನೆ ಪ್ರೀ ರಿಲೀಸ್ ಇವೆಂಟ್ ಅನ್ನು ರದ್ದು ಮಾಡಲಾಗಿದೆ.

ಇದನ್ನೂ ಓದಿ:ನಂದಮೂರಿ ಬಾಲಕೃಷ್ಣಗೆ ಇಲ್ಲ ಸಚಿವ ಸ್ಥಾನ, ಅಭಿಮಾನಿಗಳ ಬೇಸರ

ನಿನ್ನೆ ತಿರುಪತಿಯಲ್ಲಿ ನಡೆದಿರುವ ಕಾಲ್ತುಳಿತ ಘಟನೆಯಲ್ಲಿ ಆರು ಮಂದಿ ನಿಧನ ಹೊಂದಿರುವ ಕಾರಣಕ್ಕೆ ಬಾಲಕೃಷ್ಣ ಅವರು ಇಂದು ನಡೆಯಬೇಕಿದ್ದ ‘ಡಾಕೂ ಮಹಾರಾಜ್’ ಪ್ರೀ ರಿಲೀಸ್ ಇವೆಂಟ್ ಅನ್ನು ರದ್ದು ಮಾಡಿದ್ದಾರೆ. ತಿರುಪತಿಯಲ್ಲಿ ನಿನ್ನೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಆರು ಮಂದಿ ನಿಧನ ಹೊಂದಿದ್ದು, ಹಲವರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳ ಆಗುವ ಆತಂಕ ವ್ಯಕ್ತಪಡಿಸಲಾಗಿದೆ. ಘಟನೆಗೆ ವಿಷಾಧ ಸೂಚಿಸಿರುವ ಬಾಲಕೃಷ್ಣ, ಪ್ರೀ ರಿಲೀಸ್ ಇವೆಂಟ್ ಅನ್ನು ರದ್ದು ಮಾಡಿ ಸೂಕ್ಷ್ಮತೆ ಮೆರೆದಿದ್ದಾರೆ. ಬಾಲಕೃಷ್ಣ ಅವರ ನಿರ್ಣಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಡಳಿತ ಪಕ್ಷದ ಶಾಸಕರೂ ಆಗಿರುವ ಬಾಲಕೃಷ್ಣ ನಟನೆಯ ‘ಡಾಕೂ ಮಹಾರಾಜ್’ ಸಿನಿಮಾ ಜನವರಿ 12 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಊರ್ವಶಿ ರೌಟೆಲಾ, ಕನ್ನಡತಿ ಶ್ರದ್ಧಾ ಶ್ರೀನಾಥ್ ಅವರುಗಳು ನಟಿಸಿದ್ದಾರೆ. ಸಿನಿಮಾದಲ್ಲಿ ವಿಲನ್ ಆಗಿ ಬಾಬಿ ಡಿಯೋಲ್ ನಟಿಸಿದ್ದಾರೆ. ಸಿನಿಮಾಕ್ಕೆ ಎಸ್ ತಮನ್ ಸಂಗೀತ ನೀಡಿದ್ದು, ‘ದಬಿಡಿ ದಿಬಿಡಿ’ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. ಸಿನಿಮಾ ಅನ್ನು ಬಾಬಿ ನಿರ್ದೇಶನ ಮಾಡಿದ್ದು, ನಾಗ ವಂಶಿ ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:53 am, Thu, 9 January 25