ನಂದಮೂರಿ ಬಾಲಕೃಷ್ಣಗೆ ಅನಾರೋಗ್ಯ, ಆತಂಕದಲ್ಲಿ ಅಭಿಮಾನಿಗಳು

Nandamuri Balakrishna: ಆಂಧ್ರ ಪ್ರದೇಶ ಸರ್ಕಾರದ ಸ್ಟಾರ್ ಶಾಸಕ ಆಗಿರುವ ಬಾಲಯ್ಯ ಅವರು ಟಾಲಿವುಡ್​​ನ ಸೂಪರ್ ಸ್ಟಾರ್​​ಗಳಲ್ಲಿ ಸಹ ಒಬ್ಬರಾಗಿದ್ದಾರೆ. ಆಂಧ್ರ ಪ್ರದೇಶ ಸರ್ಕಾರ ‘ಸೂಪರ್ ಸಿಕ್ಸ್’ ಹೆಸರಿನ ಕಾರ್ಯಕ್ರಮ ಮಾಡುತ್ತಿದ್ದು, ಆ ಕಾರ್ಯಕ್ರಮಕ್ಕೆ ಶಾಸಕ ಬಾಲಕೃಷ್ಣ ಅವರು ಗೈರಾಗಿದ್ದರು. ಈ ಬಗ್ಗೆ ಮಾತನಾಡಿದ ಸಚಿವರೊಬ್ಬರು ಬಾಲಯ್ಯ ಅವರಿಗೆ ಅನಾರೋಗ್ಯ ಉಂಟಾಗಿದೆ ಎಂದಿದ್ದಾರೆ. ಬಾಲಯ್ಯ ಅವರಿಗೆ ಆಗಿರುವುದೇನು?

ನಂದಮೂರಿ ಬಾಲಕೃಷ್ಣಗೆ ಅನಾರೋಗ್ಯ, ಆತಂಕದಲ್ಲಿ ಅಭಿಮಾನಿಗಳು
Nandamuri Balakrishna

Updated on: Sep 11, 2025 | 12:58 PM

ನಟ, ಶಾಸಕ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರಿಗೆ ಅನಾರೋಗ್ಯ ಉಂಟಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಬಾಲಕೃಷ್ಣ ಅವರಿಗೆ ಏನಾಗಿದೆ? ಯಾವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದ್ದು, ಬಾಲಯ್ಯ ಅವರ ಆರೋಗ್ಯದ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡುತ್ತಿದ್ದಾರೆ.

ಆಂಧ್ರ ಪ್ರದೇಶ ಸರ್ಕಾರದ ಸ್ಟಾರ್ ಶಾಸಕ ಆಗಿರುವ ಬಾಲಯ್ಯ ಅವರು ಟಾಲಿವುಡ್​​ನ ಸೂಪರ್ ಸ್ಟಾರ್​​ಗಳಲ್ಲಿ ಸಹ ಒಬ್ಬರಾಗಿದ್ದಾರೆ. ಆಂಧ್ರ ಪ್ರದೇಶ ಸರ್ಕಾರ ‘ಸೂಪರ್ ಸಿಕ್ಸ್’ ಹೆಸರಿನ ಕಾರ್ಯಕ್ರಮ ಮಾಡುತ್ತಿದ್ದು, ಆ ಕಾರ್ಯಕ್ರಮಕ್ಕೆ ಶಾಸಕ ಬಾಲಕೃಷ್ಣ ಅವರು ಗೈರಾಗಿದ್ದರು. ಈ ಬಗ್ಗೆ ಮಾತನಾಡಿದ ಸಚಿವ ಪಯ್ಯವುಲ ಕೇಶವ ಅವರು, ‘ಬಾಲಕೃಷ್ಣ ಅವರಿಗೆ ಆರೋಗ್ಯ ಹದಗೆಟ್ಟಿದೆ ಹಾಗಾಗಿ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ’ ಎಂದಿದ್ದಾರೆ. ಆದರೆ ಬಾಲಯ್ಯ ಅವರಿಗೆ ಏನಾಗಿದೆ? ಯಾವ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ ಎಂಬ ಬಗ್ಗೆ ಅವರು ಮಾಹಿತಿ ನೀಡಿಲ್ಲ.

ನಂದಮೂರಿ ಬಾಲಕೃಷ್ಣ ಅವರು ಕರ್ನಾಟಕಕ್ಕೆ ಹೊಂದಿಕೊಂಡಿರುವ ಆಂಧ್ರ ಪ್ರದೇಶದ ಹಿಂದೂಪುರ ಕ್ಷೇತ್ರದ ಶಾಸಕರಾಗಿದ್ದಾರೆ. ತೆಲುಗಿನ ಸ್ಟಾರ್ ನಟರಾಗಿರುವ ಅವರು ನಟಿಸಿದ ಕಳೆದ ನಾಲ್ಕು ಸಿನಿಮಾಗಳು ಸಹ ಸೂಪರ್ ಹಿಟ್ ಆಗಿವೆ. ಇದೀಗ ‘ಅಖಂಡ 2’ ಸಿನಿಮಾನಲ್ಲಿ ನಟಿಸುತ್ತಿದ್ದು, ಸಿನಿಮಾ ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ಇಂಥಹಾ ಸಮಯದಲ್ಲಿ ಬಾಲಯ್ಯ ಅವರಿಗೆ ಅನಾರೋಗ್ಯ ಉಂಟಾಗಿರುವುದು ಸಹಜವಾಗಿಯೇ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಟ್ರೆಂಡ್ ಫಾಲೋ ಮಾಡಿದ ನಂದಮೂರಿ ಬಾಲಕೃಷ್ಣ, ಕೊಟ್ಟರು ದೊಡ್ಡ ಉಡುಗೊರೆ

ಬಾಲಕೃಷ್ಣ ಅವರು ತೆರೆಯ ಮೇಲೆ ಮತ್ತು ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಎನರ್ಜಿ ಇರುವ ವ್ಯಕ್ತಿ. ಇತ್ತೀಚೆಗಷ್ಟೆ ಸರ್ಕಾರಿ ಕಾರ್ಯಕ್ರಮವೊಂದರ ವೇಳೆ ಸಿಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ ಅವರಿದ್ದ ಬಸ್ಸು ಓಡಿಸಿ ಗಮನ ಸೆಳೆದಿದ್ದರು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಹ ಸಿನಿಮಾ ರೀತಿಯಾಗಿಯೇ ಸ್ಟೈಲ್ ಮಾಡುವುದು, ಡೈಲಾಗ್ ಹೊಡೆಯುವುದು ಮಾಡುತ್ತಿರುತ್ತಾರೆ ಪ್ರೇಕ್ಷಕರನ್ನು ರಂಜಿಸುತ್ತಲೇ ಇರುತ್ತಾರೆ. ಇಷ್ಟು ಸಕ್ರಿಯವಾಗಿದ್ದ ವ್ಯಕ್ತಿಗೆ ಈಗ ಹಠಾತ್ತನೆ ಅನಾರೋಗ್ಯಕ್ಕೆ ಈಡಾಗಿರುವುದು ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ.

ಬಾಲಯ್ಯ ಗೈರಾಗಿದ್ದ ‘ಸೂಪರ್ ಸಿಕ್ಸ್’ ಕಾರ್ಯಕ್ರಮಕ್ಕೆ ಅವರ ಅಳಿಯ, ಸಿಎಂ ಪುತ್ರನೂ ಆಗಿರುವ ನಾರಾ ಲೋಕೇಶ್ ಸಹ ಗೈರಾಗಿದ್ದರು. ಬಾಲಯ್ಯ ಅನಾರೋಗ್ಯದ ಕಾರಣಕ್ಕೆ ನಾರಾ ಲೋಕೇಶ್ ಗೈರಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಸಚಿವ ಪಯ್ಯವುಲ ಕೇಶವ ಹೇಳಿರುವಂತೆ ನೇಪಾಳದ ವಿಷಮ ಸ್ಥಿತಿಯನ್ನು ಗಮನಿಸುತ್ತಿರುವ ನಾರಾ ಲೋಕೇಶ್, ಅಲ್ಲಿ ಸಿಲುಕಿರುವ ತೆಲುಗು ಜನರ ರಕ್ಷಣೆ ಪ್ರಯತ್ನದಲ್ಲಿರುವ ಕಾರಣ ಕಾರ್ಯಕ್ರಮಕ್ಕೆ ಬರಲಿಲ್ಲ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ