ಪವನ್ ಕಲ್ಯಾಣ್ ಹಲವು ವರ್ಷಗಳ ನಂತರ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಅವರ ನಟನೆಯ ‘ವಕೀಲ್ ಸಾಬ್’ ಸಿನಿಮಾ ಇದೇ ಏಪ್ರಿಲ್ 9ಕ್ಕೆ ರಿಲೀಸ್ ಆಗಲಿದ್ದು, ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಿರುವಾಗ ಚಿತ್ರತಂಡಕ್ಕೆ ಶಾಕ್ ಮೇಲೆ ಶಾಕ್ ಎದುರಾಗಿದೆ. ಯಾವುದೂ ಅಂದುಕೊಂಡಂತೆ ನಡೆಯುತ್ತಿಲ್ಲ ಎನ್ನುವ ಕೊರಗು ಚಿತ್ರತಂಡಕ್ಕೆ ಅತೀವವಾಗಿ ಕಾಡಿದೆ.
ಟಾಲಿವುಡ್ನಲ್ಲಿ ಪ್ರತಿ ಸಿನಿಮಾ ತೆರೆಕಾಣುವಾಗ ಪ್ರಿ-ರಿಲೀಸ್ ಕಾರ್ಯಕ್ರಮ ಮಾಡಲಾಗುತ್ತದೆ. ಅದ್ದೂರಿಯಾಗಿ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ವಕೀಲ್ ಸಾಬ್ ಸಿನಿಮಾ ತಂಡ ಕೂಡ ಇದೇ ಆಲೋಚನೆ ಹಾಕಿಕೊಂಡಿತ್ತು. ಹೈದರಾಬಾದ್ನಲ್ಲಿ ಪ್ರೀ-ರಿಲೀಸ್ ಇವೆಂಟ್ ನಡೆಸಬೇಕು ಎಂಬುದು ವಕೀಲ್ ಸಾಬ್ ತಂಡದ ನಿರ್ಧಾರವಾಗಿತ್ತು. ಆದರೆ, ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸರ್ಕಾರ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.
ಇತ್ತೀಚೆಗೆ ಚಿತ್ರತಂಡ ವಕೀಲ್ ಸಾಬ್ ಚಿತ್ರದ ಟ್ರೇಲರ್ ರಿಲೀಸ್ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಸಾಕಷ್ಟು ಜನರು ಸೇರಿದ್ದರು ಎನ್ನುವ ವಿಚಾರ ಚರ್ಚೆಗೆ ಕಾರಣವಾಗಿತ್ತು. ಟ್ರೇಲರ್ ರಿಲೀಸ್ ವೇಳೆ ಕೊರೊನಾ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಲಾಗಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು.
ಇನ್ನು, ಆಂಧ್ರ ಪ್ರದೇಶದಲ್ಲಿ ಮುಂಜಾನೆ 6 ಗಂಟೆಯಿಂದಲೇ ಸಿನಿಮಾ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡಕ್ಕೆ ಇತ್ತು. ಒಂದು ದಿನಕ್ಕೆ ಐದು ಆಟಗಳನ್ನು ಪ್ರದರ್ಶನ ಮಾಡಲು ನಿರ್ಧಾರ ಮಾಡಲಾಗಿದೆ. ಆದರೆ, ಕೊರೊನಾ ಪ್ರಕರಣ ಹೆಚ್ಚುತ್ತಿವೆ. ಒಂದೊಮ್ಮೆ ಮುಂಜಾನೆ ಶೋಗೆ ಅವಕಾಶ ನೀಡಿದರೆ, ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾನ್ಸ್ ಸೇರುತ್ತಾರೆ. ಇದರಿಂದ ಕೊರೊನಾ ಹೆಚ್ಚುವ ಸಾಧ್ಯತೆ ಇದೆ ಎಂದು ತಜ್ಞರು ಆತಂಕ ಹೊರ ಹಾಕಿದ್ದಾರೆ. ಹೀಗಾಗಿ ಸ್ಪೆಷಲ್ ಶೋಗಳಿಗೆ ಬ್ರೇಕ್ ಹಾಕಲಾಗಿದೆ.
ಹಿಂದಿಯಲ್ಲಿ ತೆರೆಕಂಡಿದ್ದ ಪಿಂಕ್ ಸಿನಿಮಾದ ರಿಮೇಕ್ ವಕೀಲ್ ಸಾಬ್ ಚಿತ್ರ. ಮೂಲ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮಾಡಿದ ಪಾತ್ರವನ್ನು ಈಗ ಪವನ್ ಕಲ್ಯಾಣ್ ನಿಭಾಯಿಸಿದ್ದಾರೆ. ವೇಣು ಶ್ರೀರಾಮ್ ತೆಲುಗಿಗೆ ರಿಮೇಕ್ ಮಾಡಿದ್ದಾರೆ. ಪವನ್ ಕಲ್ಯಾಣ್ ಹಾಗೂ ಪ್ರಕಾಶ್ ರೈ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 09ರಂದು ಸಿನಿಮಾ ತೆರೆಗೆ ಬರುತ್ತಿದೆ. ಸದ್ಯ ಟ್ರೇಲರ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ನಿವೇತಾ ಥಾಮಸ್, ಅಂಜಲಿ, ಅನನ್ಯಾ, ಪ್ರಕಾಶ್ ರೈ ಮುಂತಾದವರು ಮುಖ್ಯಪಾತ್ರಗಳನ್ನು ನಿಭಾಯಿಸಿದ್ದಾರೆ.
ಇದನ್ನೂ ಓದಿ: ಚಿತ್ರಮಂದಿರಕ್ಕೆ ಏಕಾಏಕಿ ಪ್ರವೇಶ ನಿರ್ಬಂಧಿಸಿದರೆ ನಾವೇನು ಮಾಡಬೇಕು?; ಸರ್ಕಾರದ ಕ್ರಮಕ್ಕೆ ಪುನೀತ್ ಬೇಸರ