ಸುಶಾಂತ್​ ಸಾವಿನ ಘಟನೆ ಆಧಾರಿತ ಸಿನಿಮಾ ಟ್ರೇಲರ್ ರಿಲೀಸ್​​; ಅಭಿಮಾನಿಗಳಿಗೆ ಶಾಕ್​ ನೀಡಿದ ಡೈಲಾಗ್​​ಗಳು

|

Updated on: Jun 11, 2021 | 1:42 PM

Nyay The Justice trailer: ಇಲ್ಲಿ ಎಲ್ಲ ಪಾತ್ರಗಳ ಹೆಸರನ್ನು ಬದಲಿಸಲಾಗಿದೆ. ಸುಶಾಂತ್​ ಸಿಂಗ್​ ರಜಪೂತ್​ ಪಾತ್ರಕ್ಕೆ ಮಹೇಂದ್ರ ಸಿಂಗ್​ ಎಂದು ಹೆಸರಿಡಲಾಗಿದೆ. ಅವರ ಪ್ರೇಯಸಿ ರಿಯಾ ಚಕ್ರವರ್ತಿ ಪಾತ್ರವನ್ನು ಊರ್ವಶಿ ಎಂದು ಕರೆಯಲಾಗಿದೆ!

ಸುಶಾಂತ್​ ಸಾವಿನ ಘಟನೆ ಆಧಾರಿತ ಸಿನಿಮಾ ಟ್ರೇಲರ್ ರಿಲೀಸ್​​; ಅಭಿಮಾನಿಗಳಿಗೆ ಶಾಕ್​ ನೀಡಿದ ಡೈಲಾಗ್​​ಗಳು
ನ್ಯಾಯ್: ದಿ ಜಸ್ಟೀಸ್ ಸಿನಿಮಾದ ಟ್ರೇಲರ್​ ದೃಶ್ಯಗಳು
Follow us on

ನಟ ಸುಶಾಂತ್ ಸಿಂಗ್​ ರಜಪೂತ್​​ ಅವರ ಸಾವಿಗೆ ಕಾರಣ ಏನು ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಅವರು ನಿಧನರಾಗಿ ಒಂದು ವರ್ಷ ಕಳೆಯುತ್ತಿದ್ದರೂ ಕೂಡ ತನಿಖೆ ಪ್ರಗತಿಯಲ್ಲಿದೆ. ಸುಶಾಂತ್​ ಅನುಮಾನಾಸ್ಪದವಾಗಿ ಸಾವಿಗೀಡಾದ ಕೆಲವೇ ದಿನಗಳಲ್ಲಿ ಕೆಲವರು ಅವರ ಕುರಿತು ಸಿನಿಮಾ ಮಾಡಲು ಮುಂದೆ ಬಂದರು. ಅದಕ್ಕೆ ಸುಶಾಂತ್​ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ಆ ವಿರೋಧಗಳನ್ನೆಲ್ಲ ದಾಟಿಕೊಂಡು ‘ನ್ಯಾಯ್​: ದಿ ಜಸ್ಟೀಸ್​’ ಸಿನಿಮಾ ಸಿದ್ಧವಾಗಿದೆ. ಅಲ್ಲದೇ ಅದರ ಟ್ರೇಲರ್​ ಕೂಡ ರಿಲೀಸ್​ ಆಗಿದೆ.

ಈ ಸಿನಿಮಾದಲ್ಲಿ ನೇರವಾಗಿ ಇದು ಸುಶಾಂತ್​ ಸಾವಿಗೆ ಸಂಬಂಧಿಸಿದ ಕಥೆ ಎಂದು ಹೇಳಿಲ್ಲ. ಎಲ್ಲ ಪಾತ್ರಗಳ ಹೆಸರನ್ನು ಬದಲಿಸಲಾಗಿದೆ. ಸುಶಾಂತ್​ ಸಿಂಗ್​ ರಜಪೂತ್​ ಪಾತ್ರಕ್ಕೆ ಮಹೇಂದ್ರ ಸಿಂಗ್​ ಎಂದು ಹೆಸರಿಡಲಾಗಿದೆ. ಅವರ ಪ್ರೇಯಸಿ ರಿಯಾ ಚಕ್ರವರ್ತಿ ಪಾತ್ರವನ್ನು ಊರ್ವಶಿ ಎಂದು ಕರೆಯಲಾಗಿದೆ!

ರಿಯಾ ಚಕ್ರವರ್ತಿ ಜೊತೆ ಆಪ್ತವಾಗಿದ್ದ ಹಿರಿಯ ನಿರ್ದೇಶಕ/ನಿರ್ಮಾಪಕ ಮಹೇಶ್​ ಭಟ್​ ಸೇರಿದಂತೆ ಬಾಲಿವುಡ್​ನ ಅನೇಕರನ್ನು ಹೋಲುವಂತಹ ಪಾತ್ರಗಳನ್ನು ಈ ಟ್ರೇಲರ್​ನಲ್ಲಿ ತೋರಿಸಲಾಗಿದೆ. ‘ಅವನು ಅನೇಕ ಕನಸು ಕಟ್ಟಿಕೊಟ್ಟಿದ್ದ. ಪಾಸಿಟಿವ್​ ಆಲೋಚನೆಗಳನ್ನು ಹೊಂದಿದ್ದ. ಅಂಥ ವ್ಯಕ್ತಿ ಡಿಪ್ರೆಷನ್​ಗೆ ಹೋಗಲು ಹೇಗೆ ಸಾಧ್ಯ? ಇದೆಲ್ಲ ಆ ಊರ್ವಶಿಯ ಕೈವಾಡ. ನನ್ನ ಮಗನ ಬ್ಯಾಂಕ್​ ಖಾತೆಯಿಂದ ತುಂಬಾ ಹಣ ಬೇರೆ ಕಡೆಗೆ ಹೋಗಿದೆ’ ಎಂದು ಕಥಾನಾಯಕನ ತಂದೆ ಆರೋಪಿಸುವ ದೃಶ್ಯಗಳು ಟ್ರೇಲರ್​ನಲ್ಲಿ ಹೈಲೈಟ್​ ಆಗಿವೆ.

‘ಅವನು ಡ್ರಗ್ಸ್​ ಸೇವಿಸುತ್ತಿದ್ದ, ಡ್ರಗ್ಸ್​ ಖರೀದಿಸುತ್ತಿದ್ದ. ಪೆಡ್ಲರ್​ಗಳ ಜೊತೆ ಅವನಿಗೆ ಸಂಬಂಧ ಇತ್ತು. ದುಡ್ಡು ವಿನಿಮಯ ಮಾಡಿಕೊಳ್ಳುತ್ತಿದ್ದ. ಇಲ್ಲಿನ ಡ್ರಗ್ಸ್​ ಅನ್ನು ಬೇರೆ ಕಡೆಗೆ ಸಾಗಿಸುತ್ತಿದ್ದ’ ಎಂಬ ಡೈಲಾಗ್​ಗಳು ಕೂಡ ಟ್ರೇಲರ್​ನಲ್ಲಿವೆ. ಇದರಿಂದ ಸುಶಾಂತ್​ ಅಭಿಮಾನಿಗಳು ಸಿಟ್ಟಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಒಟ್ಟಾರೆ ಈ ಸಿನಿಮಾದಲ್ಲಿ ಸುಶಾಂತ್ ಅವರನ್ನು ಯಾವ ರೀತಿ ಬಿಂಬಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು ಎನ್ನುವ ಕೌತುಕವನ್ನು ಜನರ ಮನದಲ್ಲಿ ಮೂಡಿಸಲು ಟ್ರೇಲರ್ ಯಶಸ್ವಿ ಆಗಿದೆ.

ಜುಬೇರ್​ ಕೆ. ಖಾನ್​, ಶ್ರೇಯಾ ಶುಕ್ಲಾ ‘ನ್ಯಾಯ್​: ದಿ ಜಸ್ಟೀಸ್​’ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಕೋರಿ ಸುಶಾಂತ್​ ಸಿಂಗ್​ ರಜಪೂತ್​ ತಂದೆ ಕೆಕೆ ಸಿಂಗ್​ ಅವರು ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ಆದರೆ ಅವರ ಅರ್ಜಿಯನ್ನು ನ್ಯಾಯಾಲಯ ತಳ್ಳಿಹಾಕಿತ್ತು. ಸದ್ಯ ಈ ಟ್ರೇಲರ್ ಬಗ್ಗೆ ​ಬಿಟೌನ್​ ವಲಯದಲ್ಲಿ ಚರ್ಚೆ ಜೋರಾಗಿದೆ.

ಇದನ್ನೂ ಓದಿ:

ಸುಶಾಂತ್​ ಸಿಂಗ್​ ರಜಪೂತ್​ ಮನೆ ಕೆಲಸದವರಿಗೆ ಗೊತ್ತಿದೆಯಾ ಡ್ರಗ್ಸ್​ ಸತ್ಯ? ಎನ್​ಸಿಬಿಯಿಂದ ವಿಚಾರಣೆ

ಸುಶಾಂತ್​ ಸಾವಿನಲ್ಲಿ ದುಡ್ಡು ಮಾಡಿಕೊಳ್ಳುತ್ತಿರುವ ನೀಚರು; 3 ಮುಖ್ಯ ವಿಷಯ ತೆರೆದಿಟ್ಟ ಸಹೋದರಿ