
ಸಿನಿಮಾಗಳಿಗೆ ನೀಡಲಾಗುವ ಜಗತ್ತಿನ ಅತ್ಯುತ್ತಮ ಪ್ರಶಸ್ತಿ ಎನ್ನಲಾಗುವ ‘ಆಸ್ಕರ್ಸ್’ನ 2026ನೇ (Oscar 2026) ಸಾಲಿನ ಪ್ರಶಸ್ತಿಗೆ ನಾಮಿನೇಟ್ ಆಗಿರುವ ಸಿನಿಮಾಗಳ ಪಟ್ಟಿಯನ್ನು ಇಂದು (ಜನವರಿ 22) ಬಿಡುಗಡೆ ಮಾಡಲಾಗಿದೆ. ಭಾರತದ ‘ಹೋಮ್ಬೌಂಡ್’ ಸಿನಿಮಾ ವಿದೇಶಿ ಸಿನಿಮಾಗಳ ಪಟ್ಟಿಯಲ್ಲಿ ಅಂತಿಮ 15 ಸಿನಿಮಾಗಳಲ್ಲಿ ಸ್ಥಾನ ಪಡೆದುಕೊಂಡು, ನಾಮಿನೇಟ್ ಆಗುವ ಭರವಸೆ, ನಿರೀಕ್ಷೆಯನ್ನು ಮೂಡಿಸಿತ್ತು. ಆದರೆ ಅಂತಿಮ ಸುತ್ತಿಗೆ ಆಯ್ಕೆ ಆಗಲು ವಿಫಲವಾಗಿ ರೇಸಿನಿಂದ ಹೊರಬಿದ್ದಿದೆ.
ಕರಣ್ ಜೋಹರ್ ನಿರ್ಮಾಣ ಮಾಡಿ, ನೀರಜ್ ಗಯ್ವಾನ್ ನಿರ್ದೇಶನ ಮಾಡಿರುವ ‘ಹೋಮ್ಬೌಂಡ್’ ಸಿನಿಮಾ ಭಾರತದಲ್ಲಿರುವ ಜಾತಿ ಪದ್ಧತಿ, ಧರ್ಮ ವಿಭಜನೆ, ಮಹಿಳಾ ದೌರ್ಜನ್ಯ ಇನ್ನಿತರೆ ವಿಷಯಗಳ ಮೇಲೆ ಬೆಳಕು ಚೆಲ್ಲಿತ್ತು, ಸಿನಿಮಾನಲ್ಲಿ ಇಶಾನ್ ಕಟ್ಟರ್, ಜಾನ್ಹವಿ ಕಪೂರ್ ಮತ್ತು ವಿಶಾಲ್ ಜೇಟ್ವ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಸಿನಿಮಾ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣಲಿಲ್ಲ, ಆದರೆ ಆಸ್ಕರ್ಗೆ ರೇಸಿನಲ್ಲಿ ಈ ವರ್ಷ ಗಮನ ಸೆಳೆಯಿತು. ಅಂತಿಮ 15 ಪಟ್ಟಿಯಲ್ಲಿ ಸಹ ಆಯ್ಕೆ ಆಗಿತ್ತು. ಆದರೆ ನಾಮಿನೇಷನ್ಸ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ.
ಡಾಕ್ಯುಮೆಂಟರಿ ಮತ್ತು ಶಾರ್ಟ್ ಡಾಕ್ಯುಮೆಂಟರಿ ವಿಭಾಗಗಳಲ್ಲಿ ಭಾರತ ಕಳೆದ ಕೆಲ ವರ್ಷಗಳಿಂದ ಆಸ್ಕರ್ಸ್ನಲ್ಲಿ ಗಮನ ಸೆಳೆದಿತ್ತು. ಆದರೆ ಈ ಬಾರಿ ಅದೂ ಸಹ ಇಲ್ಲವಾಗಿದೆ. ಭಾರತದಲ್ಲಿ ನಿರ್ಮಾಣವಾದ ಯಾವ ಡಾಕ್ಯುಮೆಂಟರಿ ಅಥವಾ ಶಾರ್ಟ್ ಡಾಕ್ಯುಮೆಂಟರಿ ಈ ಬಾರಿ ಆಸ್ಕರ್ಸ್ ನಾಮಿನೇಷನ್ಸ್ನಲ್ಲಿ ಸ್ಥಾನ ಪಡೆದಿಲ್ಲ. ಆದರೆ ಭಾರತೀಯ ಮೂಲದ ಅಮೆರಿಕನ್ ಪ್ರಜೆ ಗೀತಾ ಗಂಭೀರ್ ನಿರ್ದೇಶನ ಮಾಡಿರುವ ‘ದಿ ಪರ್ಫೆಕ್ಟ್ ನೇಬರ್’ ಡಾಕ್ಯುಮೆಂಟರಿ ನಾಮಿನೇಷನ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ:ಆಸ್ಕರ್ ರೇಸಿನಲ್ಲಿರುವ ‘ಹೋಮ್ಬೌಂಡ್’ಗೆ ಕಾನೂನು ಸಂಕಷ್ಟ
ವಿದೇಶಿ ವಿಭಾಗದಲ್ಲಿ ಬ್ರಜಿಲ್, ಟುನೇಷಿಯಾ, ಫ್ಯಾನ್ಸ್, ನೋರ್ವೆ, ಸ್ಪೈನ್ ದೇಶದ ಸಿನಿಮಾಗಳು ಆಯ್ಕೆ ಆಗಿವೆ. ಇನ್ನು ಒಟ್ಟಾರೆಯಾಗಿ ‘ಸಿನ್ನರ್ಸ್’ ಸಿನಿಮಾ ಅತಿ ಹೆಚ್ಚು ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಸಿನ್ನರ್ಸ್ ಸಿನಿಮಾವು ಬರೋಬ್ಬರಿ 16 ನಾಮಿನೇಷನ್ಸ್ಗಳನ್ನು ಬಾಚಿಕೊಂಡು ದಾಖಲೆ ಬರೆದಿದೆ. ಕಳೆದ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದಾದ ಲಿಯಾನಾರ್ಡೊ ಡಿಕ್ಯಾಪ್ರಿಕೋವ್ ನಟನೆಯ ‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಸಿನಿಮಾ ಬರೋಬ್ಬರಿ 12 ನಾಮಿನೇಷನ್ಗಳನ್ನು ಪಡೆದುಕೊಂಡಿದೆ. ಮಾತ್ರವಲ್ಲದೆ, ಲಿಯೊನಾರ್ಡೊ ಅವರು ಅತ್ಯುತ್ತಮ ನಟ ವಿಭಾಗದಲ್ಲಿಯೂ ನಾಮಿನೇಟ್ ಆಗಿದ್ದು, ಮತ್ತೊಂದು ಆಸ್ಕರ್ ಅವರಿಗೆ ಲಭಿಸುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ