ಆಮಿರ್ ಖಾನ್ ದಿಟ್ಟ ಹೆಜ್ಜೆ, ಒಟಿಟಿ ಬದಲು ಯೂಟ್ಯೂಬ್​​ನಲ್ಲಿ ಸಿನಿಮಾ ಬಿಡುಗಡೆ

Sitare Zameen Par: ಆಮಿರ್ ಖಾನ್ ನಟನೆಯ ‘ಸಿತಾರೆ ಜಮೀನ್ ಪರ್’ ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆ ಆಗಿ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಮೊತ್ತವನ್ನು ಗಳಿಸಿದೆ. ಇದೀಗ ತಮ್ಮ ಸಿನಿಮಾವನ್ನು ಹೆಚ್ಚಿನ ಜನರಿಗೆ ತಲುಪಿಸುವ ಕಾರಣದಿಂದಾಗಿ ಆಮಿರ್ ಖಾನ್ ತಮ್ಮ ಸಿನಿಮಾವನ್ನು ಯಾವುದೇ ದೊಡ್ಡ ಒಟಿಟಿಗಳಿಗೆ ನೀಡದೆ ಯೂಟ್ಯೂಬ್​​ನಲ್ಲಿ ಬಿಡುಗಡೆ ಮಾಡಲಿದ್ದಾರೆ.

ಆಮಿರ್ ಖಾನ್ ದಿಟ್ಟ ಹೆಜ್ಜೆ, ಒಟಿಟಿ ಬದಲು ಯೂಟ್ಯೂಬ್​​ನಲ್ಲಿ ಸಿನಿಮಾ ಬಿಡುಗಡೆ
Sitare Zameen Par

Updated on: Jul 29, 2025 | 5:42 PM

ಬಾಲಿವುಡ್​ನ ಮೂವರು ಖಾನ್​ಗಳಲ್ಲಿ ಆಮಿರ್ ಖಾನ್ ಅವರ ಸಿನಿಮಾಗಳು ಭಾರಿ ದೊಡ್ಡ ಯಶಸ್ಸನ್ನು ಬಾಕ್ಸ್ ಆಫೀಸ್​ನಲ್ಲಿ ಗಳಿಸುವುದಿಲ್ಲ ಆದರೆ ಮೂವರು ಖಾನ್​ಗಳಲ್ಲಿ ನಿಜವಾಗಿಯೂ ಉತ್ತಮವಾಗಿ ‘ಒಳ್ಳೆಯ ಸಿನಿಮಾ’ ನೀಡುತ್ತಿರುವುದು ಆಮಿರ್ ಖಾನ್. ತಮ್ಮ ಸಿನಿಮಾನಲ್ಲಿ ಸಂದೇಶ, ಮನರಂಜನೆ, ಕಲಾತ್ಮಕತೆ ಇರಬೇಕೆಂಬ ಹಪಹಪಿ ಆಮಿರ್ ಖಾನ್​ ಅಷ್ಟು ಬಾಲಿವುಡ್​ನ ಇನ್ಯಾವ ಸ್ಟಾರ್ ನಟರಿಗೂ ಇದ್ದಂತಿಲ್ಲ. ಬರೀ ಸಿನಿಮಾದ ಕತೆ, ಮೇಕಿಂಗ್​ ಬಗ್ಗೆ ಮಾತ್ರವಲ್ಲ, ಒಳ್ಳೆಯ ಸಿನಿಮಾಗಳು ಜನರಿಗೆ ತಲುಪಿಸುವುದರ ಬಗ್ಗೆಯೂ ಆಮಿರ್ ಖಾನ್ ಅವರಿಗೆ ಬಹಳ ಆಸಕ್ತಿ ಇದೆ. ಸಿನಿಮಾ ಉದ್ಯಮದ ಮಾಡೆಲ್​ ಅನ್ನೇ ಬದಲಾಯಿಸಬೇಕು ಎಂದು ಅವರು ವೇದಿಕೆಗಳಲ್ಲಿ ಚರ್ಚೆ ಮಾಡುತ್ತಿರುತ್ತಾರೆ.

ಆಮಿರ್ ಖಾನ್ ಇತ್ತೀಚೆಗಷ್ಟೆ ‘ಸಿತಾರೆ ಜಮೀನ್ ಪರ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದಾರೆ. ವಿಶೇಷಚೇತನ ಬಾಲಕರ ಬಗೆಗಿನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭಾರಿ ಯಶಸ್ಸು ಗಳಿಸಿದೆ. ನೂರಾರು ಕೋಟಿ ಹಣ ಗಳಿಕೆ ಮಾಡಿದೆ. ಆದರೆ ಈ ಕಂಟೆಂಟ್ ಇರುವ ಸಿನಿಮಾ ಅನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕು ಎಂಬ ಉಮೇದಿನಲ್ಲಿ ಆಮಿರ್ ಖಾನ್ ಅವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಒಟಿಟಿಗಳ ಬದಲಿಗೆ ಯೂಟ್ಯೂಬ್​ನಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ.

ಆಮಿರ್ ಖಾನ್ ಅವರ ‘ಸಿತಾರೆ ಜಮೀನ್ ಪರ್’ ಸಿನಿಮಾದ ಡಿಜಿಟಲ್ ಹಕ್ಕು ಖರೀದಿಗೆ ದೊಡ್ಡ ದೊಡ್ಡ ಒಟಿಟಿ ಸಂಸ್ಥೆಗಳು ಕೋಟ್ಯಂತರ ರೂಪಾಯಿ ಆಫರ್ ಅನ್ನು ಆಮಿರ್ ಖಾನ್ ಅವರಿಗೆ ನೀಡಿದರು. ಆದರೆ ಆಮಿರ್ ಖಾನ್ ಅವುಗಳನ್ನೆಲ್ಲ ಪಕ್ಕಕ್ಕೆ ತಳ್ಳಿ, ಯೂಟ್ಯೂಬ್​​ನಲ್ಲಿ ಸಿನಿಮಾ ಅನ್ನು ಬಿಡುಗಡೆ ಮಾಡುತ್ತಿದ್ದಾರೆ. ಕೇವಲ ನೂರು ರೂಪಾಯಿ ಹಣ ನೀಡಿ ಯಾರು ಬೇಕಾದರೂ ಯೂಟ್ಯೂಬ್​​ನಲ್ಲಿ ಒಳ್ಳೆಯ ಗುಣಮಟ್ಟದಲ್ಲಿ ‘ಸಿತಾರೆ ಜಮೀನ್ ಪರ್’ ಸಿನಿಮಾ ವೀಕ್ಷಿಸಬಹುದಾಗಿದೆ. ಆಗಸ್ಟ್ 1 ರಂದು ಯೂಟ್ಯೂಬ್​​ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ:27 ವರ್ಷಗಳ ಬಳಿಕ ಮತ್ತೆ ಹಾಡಲು ಸಿದ್ಧವಾದ ಆಮಿರ್ ಖಾನ್

ಆಮಿರ್ ಖಾನ್ ಅವರ ಈ ನಿರ್ಣಯ ದಿಟ್ಟವಾದುದಾಗಿದೆ. ಯೂಟ್ಯೂಬ್​​ನಲ್ಲಿ ಸಿನಿಮಾ ಬಿಡುಗಡೆ ಆದರೆ ಪೈರೇಟ್ ಆಗುವ ಸಾಧ್ಯತೆ ಬಹಳ ಹೆಚ್ಚು. ಆದರೆ ಒಂದೊಮ್ಮೆ ಈ ಮಾಡೆಲ್ ಯಶಸ್ವಿಯಾದರೆ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಇದೇ ಹಾದಿ ಹಿಡಿಯಲಿವೆ. ತಮ್ಮ ಸಿನಿಮಾಗಳನ್ನು ನಿಗದಿತ ಬೆಲೆಗೆ ಯೂಟ್ಯೂಬ್​​ನಲ್ಲಿ ಮಾರಾಟಕ್ಕೆ ಇಡಲಿವೆ.

‘ಸಿತಾರೆ ಜಮೀನ್ ಪರ್’ ಸಿನಿಮಾ ಜೂನ್ 20 ರಂದು ಬಿಡುಗಡೆ ಆಯ್ತು. ಬಾಕ್ಸ್ ಆಫೀಸ್​ನಲ್ಲಿ ಸುಮಾರು 300 ಕೋಟಿ ರೂಪಾಯಿ ಹಣ ಗಳಿಸಿದೆ. ಸಿನಿಮಾನಲ್ಲಿ ಆಮಿರ್ ಖಾನ್ ಬಾಸ್ಕೆಟ್​ಬಾಲ್ ಕೋಚ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಜೆನಿಲಿಯಾ ಡಿಸೋಜಾ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾವನ್ನು ಆಮಿರ್ ಖಾನ್ ನಿರ್ಮಾಣ ಮಾಡಿದ್ದಾರೆ. ಆರ್​ಎಸ್ ಪ್ರಸನ್ನ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ