ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ತೆಗೆದುಹಾಕಿದ ನೆಟ್​ಫ್ಲಿಕ್ಸ್

ಇಳೆಯರಾಜ ಅವರು ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಮೇಲೆ ಕಾಪಿರೈಟ್ ಉಲ್ಲಂಘನೆ ಕೇಸ್ ಹಾಕಿದ್ದಾರೆ. ಈ ಸಿನಿಮಾದ ಪ್ರಸಾರ ನಿಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿದೆ. ಹಾಗಾಗಿ ನೆಟ್​ಫ್ಕಿಕ್ಸ್ ಒಟಿಟಿಯಲ್ಲಿ ಈಗ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಸದ್ಯಕ್ಕೆ ಲಭ್ಯವಿಲ್ಲ.

ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ತೆಗೆದುಹಾಕಿದ ನೆಟ್​ಫ್ಲಿಕ್ಸ್
Ajith Kumar

Updated on: Sep 17, 2025 | 8:40 PM

ಕಾಲಿವುಡ್ ನಟ ಅಜಿತ್ ಕುಮಾರ್ (Ajith Kumar) ಅಭಿನಯದ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಈ ವರ್ಷ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಯಿತು. ಬಳಿಕ ಈ ಚಿತ್ರ ಒಟಿಟಿ ಅಂಗಳಕ್ಕೂ ಕಾಲಿಟ್ಟಿತು. ಇಷ್ಟು ದಿನಗಳ ಕಾಲ ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಿ ಪ್ರೇಕ್ಷಕರು ಎಂಜಾಯ್ ಮಾಡಿದ್ದಾರೆ. ಆದರೆ ಈಗ ಈ ಸಿನಿಮಾವನ್ನು ನೆಟ್​ಫ್ಲಿಕ್ಸ್ (Netflix) ತೆಗೆದುಹಾಕಿದೆ. ಇದರಿಂದ ಅಜಿತ್ ಕುಮಾರ್ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಅಷ್ಟಕ್ಕೂ ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly) ಸಿನಿಮಾವನ್ನು ಒಟಿಟಿಯಿಂದ ತೆಗೆದುಹಾಕಲು ಕಾರಣ ಏನು? ಕಾಪಿರೈಟ್ ಉಲ್ಲಂಘನೆ!

ಕಾಪಿರೈಟ್ ಉಲ್ಲಂಘನೆಯಿಂದ ಒಟಿಟಿ ಪ್ಲಾಟ್​ಫಾರ್ಮ್​​ಗಳಿಗೆ ತೊಂದರೆ ಆಗುತ್ತಿದೆ. ಒಂದು ವೇಳೆ ಕಾಪಿರೈಟ್ ಉಲ್ಲಂಘನೆ ಆಗಿರುವುದು ಕಂಡುಬಂದರೆ ಕಾನೂನಿನ ಪ್ರಕಾರ ಅಂತಹ ಸಿನಿಮಾಗಳ ಪ್ರಸಾರವನ್ನು ನಿಲ್ಲಿಸುವುದು ಅನಿವಾರ್ಯ ಆಗುತ್ತದೆ. ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದ ಪ್ರಸಾರ ಹಕ್ಕುಗಳನ್ನು ಹೊಂದಿರುವ ನೆಟ್​ಫ್ಲಿಕ್ಸ್ ಕೂಡ ಈಗ ಕಾನೂನಿಗೆ ತಲೆಬಾಗಿ ಈ ಚಿತ್ರದ ಪ್ರಸಾರವನ್ನು ನಿಲ್ಲಿಸಿದೆ.

‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆಯು ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾವನ್ನು ನಿರ್ಮಾಣ ಮಾಡಿದೆ. ಈ ಚಿತ್ರದಲ್ಲಿ ಇಳೆಯರಾಜ ಅವರ ಹಾಡುಗಳನ್ನು ಅನುಮತಿ ಇಲ್ಲದೇ ಬಳಸಿಕೊಳ್ಳಲಾಗಿದೆ ಎಂಬ ಆರೋಪ ಇದೆ. ಹಾಗಾಗಿ 5 ಕೋಟಿ ರೂಪಾಯಿ ಹಣ ನೀಡಬೇಕು ಮತ್ತು ಕ್ಷಮೆ ಕೇಳಬೇಕು ಎಂದು ಇಳೆಯರಾಜ ಒತ್ತಾಯಿಸಿದ್ದರು. ಬಳಿಕ ಈ ಸಿನಿಮಾ ಮೇಲೆ ಅವರು ಕೇಸ್ ಹಾಕಿದರು.

ಆ ಹಾಡುಗಳನ್ನು ಬಳಸಲು ತಮ್ಮ ಬಳಿ ಅನುಮತಿ ಇದೆ ಎಂದು ನಿರ್ಮಾಪಕರು ವಾದಿಸಿದರು. ಆದರೆ ಸೂಕ್ತ ದಾಖಲೆ ನೀಡಲಿಲ್ಲ. ಹಾಗಾಗಿ ಮದ್ರಾಸ್ ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿತು. ಈ ಸಿನಿಮಾದ ವಿತರಣೆ ಹಾಗೂ ಪ್ರಸಾರವನ್ನು ಕೂಡಲೇ ಎಲ್ಲ ಪ್ಲಾಟ್​ಫಾರ್ಮ್​​ಗಳಲ್ಲಿ ನಿಲ್ಲಿಸಬೇಕು ಎಂದು ಆದೇಶಿಸಲಾಯಿತು. ಅದರ ಅನ್ವಯ ನೆಟ್​ಫ್ಲಿಕ್ಸ್​ನಿಂದ ಈ ಸಿನಿಮಾವನ್ನು ತೆಗೆದುಹಾಕಲಾಗಿದೆ.

ಇದನ್ನೂ ಓದಿ: ಮತ್ತೊಂದು ಹೊಸ ಕಾರು ಖರೀದಿಸಿದ ನಟ ಅಜಿತ್ ಕುಮಾರ್, ಬೆಲೆ ಎಷ್ಟು?

ಅಧಿಕ್​ ರವಿಚಂದ್ರನ್ ಅವರು ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅಜಿತ್ ಕುಮಾರ್, ತ್ರಿಶಾ, ಅರ್ಜುನ್ ದಾಸ್, ಜಾಕಿ ಶ್ರಾಫ್, ಸುನಿಲ್, ಶೈನ್ ಟಾಮ್ ಚಾಕೋ, ಟಿನು ಆನಂದ್, ಪ್ರಿಯಾ ಪ್ರಕಾಶ್ ವಾರಿಯರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಈ ಸಿನಿಮಾ ನೆಟ್​ಫ್ಲಿಕ್ಸ್ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.