ಒಟಿಟಿಯಲ್ಲಿ ಸದ್ಯಕ್ಕೆ ರಿಲೀಸ್ ಆಗಲ್ಲ ‘ಅನಿಮಲ್’? ನಿರ್ಮಾಣ ಸಂಸ್ಥೆಯಿಂದಲೇ ಚಿತ್ರದ ಮೇಲೆ ಬಿತ್ತು ಕೇಸ್
ಸಿನಿಮಾದಿಂದ ಬರುವ ಲಾಭ ಹಂಚಿಕೆಗೆ ಸಂಬಂಧಿಸಿ ಒಪ್ಪಂದ ಪತ್ರವೊಂದನ್ನು ಸಿದ್ಧಪಡಿಸಲಾಗಿತ್ತು. ಆದರೆ, ಟಿ-ಸೀರಿಸ್ ಇದನ್ನು ಪಾಲಿಸಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ‘ಸಿನಿ 1 ಸ್ಟುಡಿಯೋ’ ಮಾಲೀಕರು ಅಸಮಾಧಾನಗೊಂಡಿದ್ದಾರೆ.
ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಥಿಯೇಟರ್ನಲ್ಲಿ ಭರ್ಜರಿ ಗಳಿಕೆ ಮಾಡಿತ್ತು. ಈ ಸಿನಿಮಾ ಈಗ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಜನವರಿ 26ರಂದು ನೆಟ್ಫ್ಲಿಕ್ಸ್ ಮೂಲಕ ಸಿನಿಮಾ ರಿಲೀಸ್ ಆಗಲಿದೆ ಎಂದು ನಿರ್ದೇಶಕ ಸಂದೀಪ್ ರೆಡ್ಡಿ ವಂಗ ತಿಳಿಸಿದ್ದರು. ಆದರೆ, ಈ ಚಿತ್ರಕ್ಕೆ ತೊಂದರೆ ಒಂದು ಎದುರಾಗಿದೆ. ಈ ಚಿತ್ರವನ್ನು ಟಿ-ಸೀರಿಸ್ (T-Series) ನಿರ್ಮಾಣ ಮಾಡಿದೆ. ಇದರ ಜೊತೆಗೆ ಒಂದಷ್ಟು ಮಂದಿ ಹಣ ಹೂಡಿದ್ದಾರೆ. ಆ ಪೈಕಿ ‘ಸಿನಿ 1 ಸ್ಟುಡಿಯೋಸ್’ ಕೂಡ ಒಂದು. ಲಾಭದಲ್ಲಿ ಸರಿಯಾದ ಪಾಲು ಸಿಕ್ಕಿಲ್ಲ ಎಂದು ಈ ಸಂಸ್ಥೆ ಆರೋಪ ಮಾಡಿದೆ. ಜೊತೆಗೆ ಸಿನಿಮಾ ಒಟಿಟಿ ರಿಲೀಸ್ಗೆ ತಡೆ ನೀಡಬೇಕು ಎಂದು ಕೋರಿ ಈ ಸಂಸ್ಥೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.
‘ಅನಿಮಲ್’ ಸಿನಿಮಾ ನಿರ್ಮಾಣ ಮಾಡಲು ಹಣ ಹೂಡಿದವರಲ್ಲಿ ‘ಸಿನಿ 1 ಸ್ಟುಡಿಯೋಸ್’ ಕೂಡ ಒಂದು ಎನ್ನಲಾಗಿದೆ. ಸಿನಿಮಾದಿಂದ ಬರುವ ಲಾಭ ಹಂಚಿಕೆಗೆ ಸಂಬಂಧಿಸಿ ಒಪ್ಪಂದ ಪತ್ರವೊಂದನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಟಿ-ಸೀರಿಸ್ ಇದನ್ನು ಪಾಲಿಸಿಲ್ಲ ಎನ್ನಲಾಗಿದೆ. ಹೀಗಾಗಿ ‘ಸಿನಿ 1 ಸ್ಟುಡಿಯೋ’ ಮಾಲೀಕರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ, ಕೋರ್ಟ್ನಲ್ಲಿ ಕೇಸ್ ಹಾಕಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ರಿಲೀಸ್ ಆಗುವುದಕ್ಕೆ ತಡೆ ನೀಡಬೇಕು ಹಾಗೂ ‘ಅನಿಮಲ್’ ಸಿನಿಮಾ ಸೀಕ್ವೆಲ್ನಲ್ಲಿ ತಮಗೂ ಹಕ್ಕು ನೀಡಬೇಕು ಎಂದು ಸಂಸ್ಥೆ ಕೋರ್ಟ್ನಲ್ಲಿ ಹೇಳಿದೆ.
ನ್ಯಾಯಮೂರ್ತಿ ಸಂಜೀವ್ ನರುಲಾ ಅವರನ್ನೊಳಗೊಂಡ ಏಕಸದಸ್ಯ ಪೀಠ ಅರ್ಜಿ ವಿಚಾರಣೆ ಮಾಡಿದೆ. ‘ಅನಿಮಲ್ ಸಿನಿಮಾದಿಂದ ಬಂದ ಲಾಭ ಹಾಗೂ ಇತರ ಹಕ್ಕು ಮಾರಾಟದಿಂದ ಬಂದ ಹಣದಲ್ಲಿ ಒಂದೇ ಒಂದು ರೂಪಾಯಿ ಕೂಡ ಸಂಸ್ಥೆಗೆ ಸಿಕ್ಕಿಲ್ಲ. ಬಂದ ಲಾಭದಲ್ಲಿ ಶೇ.35 ನಮಗೆ ನೀಡಬೇಕಿತ್ತು’ ಎಂದು ‘ಸಿನಿ 1 ಸ್ಟುಡಿಯೋಸ್’ ವಕೀಲ ಸಂದೀಪ್ ಸೇಥಿ ಅವರು ಕೋರ್ಟ್ ಎದುರು ವಾದ ಮಂಡಿಸಿದ್ದಾರೆ. ಟಿ-ಸೀರಿಸ್ ವಕೀಲ ಅಮಿತ್ ಸಿಬಾ ಅವರು ತಮ್ಮ ವಾದ ಮುಂದಿಟ್ಟಿದ್ದಾರೆ. ‘ಸಿನಿ 1 ಯಾವುದೇ ಹೂಡಿಕೆ ಮಾಡಿಲ್ಲ’ ಎಂದು ಅವರು ವಾದಿಸಿದ್ದಾರೆ.
ಇದನ್ನೂ ಓದಿ: ‘ನಾನು ಕೆಟ್ಟ ವ್ಯಕ್ತಿಯ ಪಾತ್ರ ಮಾಡಿದರೆ…’; ‘ಅನಿಮಲ್’ ಚಿತ್ರಕ್ಕೆ ಕುಟುಕಿದ್ರಾ ಶಾರುಖ್ ಖಾನ್?
ಸದ್ಯ ಮುಂದಿನ ವಿಚಾರಣೆಯನ್ನು ಜನವರಿ 18ಕ್ಕೆ ಮುಂದೂಡಲಾಗಿದೆ. ಒಂದೊಮ್ಮೆ ಪ್ರಕರಣ ಇತ್ಯರ್ಥ ಆಗದೇ ಇದ್ದರೆ ಅದು ‘ಅನಿಮಲ್’ ಒಟಿಟಿ ರಿಲೀಸ್ ಮತ್ತಷ್ಟು ವಿಳಂಬ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:28 am, Tue, 16 January 24