
ರವಿಚಂದ್ರನ್ ಅಭಿನಯದ ‘ದೃಶ್ಯ’ ಸಿನಿಮಾ (Drishya Movie) 2014ರಲ್ಲಿ ತೆರೆಗೆ ಬಂದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ರಾಜೇಂದ್ರ ಪೊನ್ನಪ್ಪ ಆಗಿ ರವಿಚಂದ್ರನ್ (Ravichandran) ಕಾಣಿಸಿಕೊಂಡಿದ್ದರು. ಕಳೆದ ವರ್ಷ ರಿಲೀಸ್ ಆದ ಈ ಸಿನಿಮಾದ ಸೀಕ್ವೆಲ್ ಕೂಡ ಹಿಟ್ ಆಗಿತ್ತು. ‘ದೃಶ್ಯ’ ಸಿನಿಮಾದಲ್ಲಿ ಪೊಲೀಸ್ ರಾಣೆಯ ಒಳಗೆ ಹೆಣ ಹೂತಿಡುವ ಮೂಲಕ ರಾಜೇಂದ್ರ ಪೊನ್ನಪ್ಪ ತನ್ನ ಕುಟುಂಬವನ್ನು ಕಾಪಾಡಿದ್ದ. ಆದರೆ ‘ದೃಶ್ಯ 2’ (Drishya 2) ಸಿನಿಮಾದಲ್ಲಿ ಆ ಕೇಸ್ ರೀ-ಓಪನ್ ಆಗುತ್ತದೆ. ಈ ಬಾರಿ ರಾಜೇಂದ್ರ ಪೊನ್ನಪ್ಪನಿಗಿಂತಲೂ ಬುದ್ಧಿವಂತಿಕೆಯಿಂದ ಪೊಲೀಸರು ಕೆಲಸ ಮಾಡುತ್ತಾರೆ. ಅದಕ್ಕೆ ಎದುರಾಗಿ ರಾಜೇಂದ್ರ ಪೊನ್ನಪ್ಪ ಬೇರೆ ರೀತಿಯಲ್ಲಿ ಪ್ಲಾನ್ ಮಾಡುತ್ತಾನೆ. ಇದು ಪಾರ್ಟ್ 2ನ ಹೈಲೈಟ್ ವಿಷಯ. ಈಗ ಇದನ್ನು ಒಟಿಟಿಯಲ್ಲಿ ಕಣ್ತುಂಬಿಕೊಳ್ಳೋಕೆ ಸಮಯ ಕೂಡಿ ಬಂದಿದೆ.
ಕಳೆದ ವರ್ಷ ಡಿಸೆಂಬರ್ 10ರಂದು ‘ದೃಶ್ಯ 2’ ಸಿನಿಮಾ ದೊಡ್ಡ ಪರದೆಯಲ್ಲಿ ಬಿಡುಗಡೆ ಆಗಿತ್ತು. ಒಂದು ಮರ್ಡರ್ ಮಿಸ್ಟರಿ ಕಥೆಯನ್ನು ಬಹಳ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದರು ನಿರ್ದೇಶಕ ಪಿ. ವಾಸು. ರವಿಚಂದ್ರನ್, ನವ್ಯಾ ನಾಯರ್, ಆರೋಹಿ ನಾರಾಯಣ್ ಮುಂತಾದವರು ನಟಿಸಿದ್ದ ದೃಶ್ಯ 2’ ಸಿನಿಮಾದ ಕ್ಲೈಮ್ಯಾಕ್ಸ್ ಸಖತ್ ಥ್ರಿಲ್ ನೀಡಿತ್ತು. ಮಲಯಾಳಂ ‘ದೃಶ್ಯಂ 2’ ಸಿನಿಮಾವನ್ನು ಕನ್ನಡದ ಸೊಗಡಿಗೆ ತಕ್ಕಂತೆ ಹೊಂದಾಣಿಕೆ ಮಾಡಲಾಗಿತ್ತು. ಈ ಸಿನಿಮಾ ಈಗ ಜೀ5ಗೆ ಫೆಬ್ರವರಿ 25ರಂದು ಎಂಟ್ರಿ ಕೊಡುತ್ತಿದೆ.
‘ದೃಶ್ಯ 2’ನಲ್ಲಿ ಪ್ರಮೋದ್ ಶೆಟ್ಟಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆದಿದ್ದರು. ಅನಂತ್ ನಾಗ್ ಎಂದಿನಂತೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು. ಉಳಿದಂತೆ ಸುರೇಶ್ ಅರಸ್ ಸಂಕಲನ, ಜಿಎಸ್ವಿ ಸೀತಾರಾಮ್ ಛಾಯಾಗ್ರಹಣ, ಅಜನೀಶ್ ಬಿ. ಲೋಕನಾಥ್ ಹಿನ್ನೆಲೆ ಸಂಗೀತ ‘ದೃಶ್ಯ 2’ ಸಿನಿಮಾಕ್ಕಿದೆ.
ಜೀ5ನಲ್ಲಿ ಇತ್ತೀಚೆಗೆ ಕನ್ನಡದ ಹಲವು ಸಿನಿಮಾಗಳು ರಿಲೀಸ್ ಆಗಿ ಸದ್ದು ಮಾಡಿವೆ. ಶಿವರಾಜ್ಕುಮಾರ್ ನಟನೆಯ ‘ಭಜರಂಗಿ 2’ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ ‘ಗರುಡ ಗಮನ ವೃಷಭ ವಾಹನ’ ಚಿತ್ರಗಳು ಜೀ5ನಲ್ಲಿ ರಿಲೀಸ್ ಆಗಿದೆ. ಈಗ ‘ದೃಶ್ಯ 2’ ಕೂಡ ಜೀ5ನಲ್ಲೇ ತೆರೆಗೆ ಬರುತ್ತಿದೆ. ಚಿತ್ರಮಂದಿರದಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಮನೆಯಲ್ಲೇ ಕೂತು ಈ ಚಿತ್ರ ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ: ‘ಗರುಡ ಗಮನ..’ ಚಿತ್ರದ ಇನ್ನೊಂದು ಮೈಲಿಗಲ್ಲು; ‘ಸೋಜುಗಾದ ಸೂಜು ಮಲ್ಲಿಗೆ’ ಸಾಧನೆ ಏನು?
Drishya 2 Movie Review: ಕೊನೇ ದೃಶ್ಯದವರೆಗೂ ಕೊಲೆ ಕೌತುಕ; ಈ ಬಾರಿ ಕ್ಲೈಮ್ಯಾಕ್ಸ್ ಇನ್ನಷ್ಟು ರೋಚಕ
Published On - 3:34 pm, Fri, 18 February 22