ಆಸ್ಕರ್ 2023 (Oscar 2023) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಕ್ತಾಯವಾಗಿದೆ. ತೆಲುಗಿನ ‘ಆರ್ಆರ್ಆರ್’ (RRR) ಸಿನಿಮಾದ ನಾಟು ನಾಟು (Natu Natu) ಹಾಡು ಅತ್ಯುತ್ತಮ ಒರಿಜಿನಲ್ ಹಾಡು ಪ್ರಶಸ್ತಿ ಬಾಚಿಕೊಂಡರೆ, ಭಾರತದ ‘ಎಲಿಫೆಂಟ್ ವಿಸ್ಪರರ್ಸ್’ ಅತ್ಯುತ್ತಮ ಕಿರು ಡಾಕ್ಯುಮೆಂಟರಿ ವಿಭಾಗದಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಇದರ ಜೊತೆಗೆ ಇನ್ನೂ ಹಲವು ಸಿನಿಮಾಗಳು, ಅನಿಮೇಟೆಡ್ ಸಿನಿಮಾಗಳು ಪ್ರಶಸ್ತಿ ಗೆದ್ದಿವೆ. ಆಸ್ಕರ್ ಗೆದ್ದ ಈ ಸಿನಿಮಾ, ಡಾಕ್ಯುಮೆಂಟ್, ಅನಿಮೇಟೆಡ್ ಸಿನಿಮಾಗಳನ್ನು ಸಿನಿಮಾ ಪ್ರೀಯರು ಎಲ್ಲಿ ನೋಡಬಹುದು? ಮಾಹಿತಿ ಇಲ್ಲಿದೆ.
ಆರ್ಆರ್ಆರ್
ಆರ್ಆರ್ಆರ್ ಸಿನಿಮಾವನ್ನು ಎಲ್ಲಿ ನೋಡಬಹುದು ಎಂದು ಬಹುತೇಕರಿಗೆ ಗೊತ್ತೇ ಇದೆ. ಸಿನಿಮಾದ ಹಿಂದಿ ಆವೃತ್ತಿ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ. ಇದೇ ಸಿನಿಮಾದ ತೆಲುಗು, ತಮಿಳು, ಕನ್ನಡ, ಮಲಯಾಳಂ ಆವೃತ್ತಿಗಳು ಜೀ 5 ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಡಿಸ್ನಿ ಹಾಟ್ಸ್ಟಾರ್ನಲ್ಲೂ ಸಿನಿಮಾ ಸ್ಟ್ರೀಂ ಆಗುತ್ತಿದೆ. ಜೊತೆಗೆ ಆಂಧ್ರ-ತೆಲಂಗಾಣಗಳಲ್ಲಿ ಸಿನಿಮಾದ ಮರು ಬಿಡುಗಡೆ ಸಹ ಆಗಿದೆ.
ಎಲಿಫೆಂಟ್ ವಿಸ್ಪರರ್ಸ್
ಭಾರತದ ಎಲಿಫೆಂಡ್ ವಿಸ್ಪರರ್ಸ್ ಡಾಕ್ಯುಮೆಂಟರಿಯು ಅತ್ಯುತ್ತಮ ಶಾರ್ಟ್ ಡಾಕ್ಯುಮೆಂಟರಿ ವಿಭಾಗದಲ್ಲಿ ಆಸ್ಪರ್ ಗೆದ್ದಿದ್ದು ಈ ಡಾಕ್ಯುಮೆಂಟರಿ ಪ್ರಸ್ತುತ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಂ ಆಗುತ್ತಿದೆ. ಅತ್ಯುತ್ತಮ ಡಾಕ್ಯುಮೆಂಟರಿ ನಾವೆಲಿ ಕೆಲವು ವೆಬ್ಸೈಟ್ಗಳಲ್ಲಿ ಮಾತ್ರವೇ ವೀಕ್ಷಣೆಗೆ ಲಭ್ಯವಿದೆ. ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಐರಿಶ್ ಗುಡ್ಬೈ ಬಿಬಿಸಿ ಐಪ್ಲೇಯರ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಅತ್ಯುತ್ತಮ ಸಿನಿಮಾ ‘ಎವರಿತಿಂಗ್ ಎವರಿವೇರ್ ಆಲ್ ಅಟ್ ಒನ್ಸ್’
ಈ ವರ್ಷದ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸೇರಿದಂತೆ ಏಳು ವಿಭಾಗದಲ್ಲಿ ಆಸ್ಕರ್ ಪಡೆದ ‘ಎವರಿತಿಂಗ್ ಎವರಿವೇರ್ ಆಲ್ ಅಟ್ ಒನ್ಸ್’ ಸಿನಿಮಾವು ಶೋಟೈಮ್ ಸಬ್ಸ್ಕ್ರಿಪ್ಷನ್ ಹೆಸರಿನ ಒಟಿಟಿಯಲ್ಲಿ ಲಭ್ಯವಿದೆ. ಈ ಒಟಿಟಿಯು ತಿಂಗಳಿಗೆ 11 ಡಾಲರ್ ಅಂದರೆ 900 ರುಪಾಯಿ ಚಾರ್ಜ್ ಮಾಡುತ್ತದೆ. ಆದರೆ ಹೊಸ ಬಳಕೆದಾರರು 30 ದಿನಗಳ ಕಾಲ ಉಚಿತವಾಗಿ ಸಿನಿಮಾ ನೋಡಬಹುದು. ಅದರ ಹೊರತಾಗಿ ಈ ಸಿನಿಮಾವು ಬೆಂಗಳೂರು ಸೇರಿದಂತೆ ಹಲವು ಕಡೆ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ.
ಆಲ್ ಕ್ವೈಟ್ ಅಟ್ ವೆಸ್ಟರ್ನ್ ಫ್ರಂಟ್
ಈ ಬಾರಿ ನಾಲ್ಕು ಆಸ್ಕರ್ಗಳನ್ನು ಬಾಚಿಕೊಂಡ ಆಲ್ ಕ್ವೈಟ್ ಅಟ್ ವೆಸ್ಟರ್ನ್ ಫ್ರಂಟ್ ಸಿನಿಮಾವು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್, ಅತ್ಯುತ್ತಮ ಸಿನಿಮಾಟೊಗ್ರಫಿ, ಅತ್ಯುತ್ತಮ ಅಂತರಾಷ್ಟ್ರೀಯ ಸಿನಿಮಾ, ಅತ್ಯುತ್ತಮ ಸಂಗೀತ ವಿಭಾಗದಲ್ಲಿ ಈ ಸಿನಿಮಾ ಆಸ್ಕರ್ ಪಡೆದಿದೆ.
ಪಿನಾಕಿಯೊ, ದಿ ಬಾಯ್ ದಿ ಮೋಲ್ ದಿ ಫಾಕ್ಸ್ ಆಂಡ್ ದಿ ಹಾರ್ಸ್
ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲಂ ವಿಭಾಗದಲ್ಲಿ ಪ್ರಶಸ್ತಿ ಪಡೆದ ಪಿನಾಕಿಯೊ ಸಿನಿಮಾವು ನೆಟ್ಫ್ಲಿಕ್ಸ್ನಲ್ಲಿ ಲಭ್ಯವಿದೆ. ಅತ್ಯುತ್ತಮ ಅನಿಮೇಟೆಡ್ ಕಿರು ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದ ದಿ ಬಾಯ್ ದಿ ಮೋಲ್ ದಿ ಫಾಕ್ಸ್ ಆಂಡ್ ದಿ ಹಾರ್ಸ್ ಕಿರು ಚಿತ್ರವು ಆಪಲ್ ಟಿವಿ ಒಟಿಟಿಯಲ್ಲಿ ಲಭ್ಯವಿದೆ.
ಟಾಪ್ಗನ್ ಮೇವರಿಕ್, ವಕಾಂಡಾ ಫಾರೆವರ್
ಅತ್ಯುತ್ತಮ ಸೌಂಡ್ ವಿಭಾಗದಲ್ಲಿ ಪ್ರಶಸ್ತಿ ಪಡೆದ ಟಾಮ್ ಕ್ರೂಸ್ ನಟನೆಯ ಟಾಪ್ಗನ್ ಮೇವರಿಕ್ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ. ಇನ್ನು ಅತ್ಯುತ್ತಮ ಪ್ರಸಾಧನ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ವಕಾಂಡಾ ಫಾರೆವರ್ ಸಿನಿಮಾ ಡಿಸ್ನಿ ಹಾಟ್ಸ್ಟಾರ್ನಲ್ಲಿ ಲಭ್ಯವಿದೆ. ಅವತಾರ್ 2 ಸಿನಿಮಾ ಅತ್ಯುತ್ತಮ ವಿಷ್ಯುಲ್ ಎಫೆಕ್ಟ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದು ಅದು ಒಟಿಟಿಯಲ್ಲಿ ಲಭ್ಯವಿಲ್ಲ. ವುಮೆನ್ ಟಾಕಿಂಗ್ ಸಿನಿಮಾ ಅತ್ಯುತ್ತಮ ಚಿತ್ರಕತೆ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ ಅದೂ ಸಹ ಒಟಿಟಿಯಲ್ಲಿ ಲಭ್ಯವಿಲ್ಲ. ದಿ ವೇಲ್ ಸಿನಿಮಾ ಸಹ ಎರಡು ವಿಭಾಗದಲ್ಲಿ ಆಸ್ಕರ್ ಗೆದ್ದಿದೆ ಅದೂ ಸಹ ಯಾವುದೇ ಒಟಿಟಿಯಲ್ಲಿ ಲಭ್ಯವಿಲ್ಲ.