ರೊಮ್ಯಾಂಟಿಕ್ ಕಾಮಿಡಿ ‘ಬೆತ್ಲಹೆಮ್ ಕುಟುಂಬ ಯುನಿಟ್’ ಈಗ ಒಟಿಟಿಗೆ; ಕನ್ನಡದಲ್ಲೂ ಲಭ್ಯ
ಮಲಯಾಳಂ ಚಿತ್ರರಂಗದ ಸಾರ್ವಕಾಲಿಕ ಹಿಟ್ 'ಬೆತ್ಲಹೆಮ್ ಕುಟುಂಬ ಯುನಿಟ್' ಸಿನಿಮಾ ಈಗ ಒಟಿಟಿಗೆ ಕಾಲಿಡಲು ಸಜ್ಜಾಗಿದೆ. ನಿವಿನ್ ಪೌಳಿ ಹಾಗೂ ಮಮಿತಾ ಬೈಜು ನಟನೆಯ ಈ ಸೂಪರ್ ಹಿಟ್ ಚಿತ್ರವು ಕನ್ನಡ ಭಾಷೆಯಲ್ಲೂ ಲಭ್ಯವಿರಲಿದ್ದು, ಚಿತ್ರಪ್ರೇಮಿಗಳು ತಮ್ಮ ನೆಚ್ಚಿನ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದಾಗಿದೆ.

ಮುಖ್ಯಾಂಶಗಳು
- ಒಟಿಟಿಗೆ ಲಗ್ಗೆ ಇಡಲು ಸಜ್ಜಾದ 'ಬೆತ್ಲಹೆಮ್ ಕುಟುಂಬ ಯುನಿಟ್'
- ಸಾರ್ವಕಾಲಿಕ ದಾಖಲೆ ಬರೆದ ನಿವಿನ್ ಸಿನಿಮಾ
- ಬಾಕ್ಸ್ ಆಫೀಸ್‌ನಲ್ಲಿ ಸೃಷ್ಟಿಸಿತ್ತು ಹೊಸ ಇತಿಹಾಸ
ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ‘ಬೆತ್ಲಹೆಮ್ ಕುಟುಂಬ ಯುನಿಟ್‘ ಸಿನಿಮಾ ಈಗ ಒಟಿಟಿಗೆ ಬರಲು ಸಜ್ಜಾಗಿದೆ. ನಿವಿನ್ ಪೌಳಿ ಹಾಗೂ ಮಮಿತಾ ಬೈಜು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಚಿತ್ರಮಂದಿರಗಳಲ್ಲಿ ಪ್ರಚಂಡ ಯಶಸ್ಸು ಕಂಡಿತ್ತು. ಈಗ ಸಿನಿಮಾ ಜಿಯೋ ಹಾಟ್ಸ್ಟಾರ್ಗೆ ಬರಲಿದೆ. ಮಲಯಾಳಂ ಜೊತೆ ಕನ್ನಡ ಭಾಷೆಯಲ್ಲೂ ಈ ಸೂಪರ್ ಹಿಟ್ ಸಿನಿಮಾ ವೀಕ್ಷಣೆಗೆ ಲಭ್ಯವಾಗುತ್ತಿರುವುದು ವಿಶೇಷ.
ಈ ವರ್ಷದ ಆಗಸ್ಟ್ ತಿಂಗಳಲ್ಲಿ ತೆರೆಕಂಡ ‘ಬೆತ್ಲಹೆಮ್ ಕುಟುಂಬ ಯುನಿಟ್’ ರೊಮ್ಯಾಂಟಿಕ್ ಕಾಮಿಡಿ ಚಿತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗಿರೀಶ್ ಎಡಿ ನಿರ್ದೇಶನದ ಈ ಸಿನಿಮಾ ಮಲಯಾಳಂ ಚಿತ್ರರಂಗದ ಹಲವು ಪ್ರಮುಖ ದಾಖಲೆಗಳನ್ನು ಪುಡಿಪುಡಿ ಮಾಡಿದೆ. ‘ಲೋಕಃ: ಚಾಪ್ಟರ್ 1 ಚಂದ್ರ’ ಮುಂತಾದ ಬ್ಲಾಕ್‌ಬಸ್ಟರ್ ಸಿನಿಮಾಗಳ ದಾಖಲೆಯನ್ನು ಮುರಿದು ಸಾರ್ವಕಾಲಿಕ ದಾಖಲೆ ಬರೆದಿದೆ.
ಭಾವನಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ದಿಲೀಶ್ ಪೋತನ್, ಫಹಾದ್ ಫಾಸಿಲ್ ಮತ್ತು ಶ್ಯಾಮ್ ಪುಷ್ಕರನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗಿರೀಶ್ ಎಡಿ ಮತ್ತು ಕಿರಣ್ ಜೋಶೀ ಜೊತೆಯಾಗಿ ಈ ಸಿನಿಮಾಗೆ ಕಥೆ ಬರೆದಿದ್ದಾರೆ. ಪ್ರೇಮ, ಕುಟುಂಬದ ಭಾವನೆಗಳು ಹಾಗೂ ನೆನಪುಗಳ ಸಮ್ಮಿಶ್ರಣವಾಗಿ ಈ ಸಿನಿಮಾ ಮೂಡಿಬಂದಿದೆ.
The entertainer everyone’s been waiting for! ❤️ Bethlehem Kudumba Unit, streaming from October 2 on JioHotstar.@NivinOfficial @MamithaBaiju_ @BhavanaStudios @iDileeshPothan @BhavanaRelease @PharsFilm @PicturesPVR @MythriRelease @FutureRunup @PrimarkProd#BethlehemKudumbaUnit… pic.twitter.com/WcEqPKd61K
— JioHotstar Malayalam (@JioHotstarMal) September 27, 2026
ಚಿತ್ರದ ಕಥೆಯಲ್ಲಿ ಆಶ್ಲಿ (ಮಮಿತಾ ಬೈಜು) ಎಂಬ ಹುಡುಗಿ ತನ್ನ ಕುಟುಂಬದೊಂದಿಗೆ ಮುಂಡಕಾಯಂನಿಂದ ಕರುಕುಟ್ಟಿಗೆ ಸ್ಥಳಾಂತರಗೊಳ್ಳುತ್ತಾಳೆ. ಅಲ್ಲಿ ತನಗಿಂತ 12-13 ವರ್ಷ ಹಿರಿಯನಾದ ನೆರೆಯ ಜಸ್ಟಿನ್ (ನಿವಿನ್ ಪೌಳಿ) ಎಂಬುವವನ ಪರಿಚಯವಾಗುತ್ತದೆ. ಅವರಿಬ್ಬರ ನಡುವಿನ ಬಂಧ, ಪ್ರೀತಿ ಮತ್ತು ಹೊಸ ಜೀವನದ ಪಯಣವೇ ಈ ಚಿತ್ರದ ಮುಖ್ಯ ಕಥಾವಸ್ತು.
ಇದನ್ನೂ ಓದಿ: ಬೆತ್ಲಹೆಮ್ ಕುಟುಂಬ ಯೂನಿಟ್ ಹೊಸ ದಾಖಲೆ; ಮಲಯಾಳಂ ಸಿನಿಮಾ ರಂಗದಲ್ಲೇ ಅತಿ ಹೆಚ್ಚು ಗಳಿಸಿದ ಸಿನಿಮಾ
ಚಿತ್ರಮಂದಿರಗಳಲ್ಲಿ ರಿಲೀಸ್ ಆದಾಗ ಇದು ಮಲಯಾಳಂನಲ್ಲಿ ಮಾತ್ರ ಇತ್ತು. ಆ ಬಳಿಕ ತೆಲುಗಿನಲ್ಲಿ ಚಿತ್ರ ತೆರೆಗೆ ಬಂತು. ಈಗ ಒಟಿಟಿಯಲ್ಲಿ ಕನ್ನಡ ಆಡಿಯೋ ಜೊತೆ ಸಿನಿಮಾ ವೀಕ್ಷಿಸಬಹುದಾಗಿದೆ. ಈ ಮೂಲಕ ಚಿತ್ರವನ್ನು ಸಂಪೂರ್ಣವಾಗಿ ಎಂಜಾಯ್ ಮಾಡಬಹುದಾಗಿದೆ. ಈ ಚಿತ್ರಕ್ಕೆ ಒಟಿಟಿಯಲ್ಲಿ ಯಾವ ರೀತಿ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:29 am, Tue, 29 September 26




