
ಮಲಯಾಳಂ ಸಿನಿಮಾಗಳಿಗೆ ಕ್ಲಾಸ್ ಪ್ರೇಕ್ಷಕರು ಫಿದಾ ಆಗುತ್ತಾರೆ. ಎಲ್ಲ ಪ್ರದೇಶಕ್ಕೂ ಸೂಕ್ತ ಆಗುವಂತಹ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುವಲ್ಲಿ ಮಾಲಿವುಡ್ ನಿರ್ದೇಶಕರು ಸೈ ಎನಿಸಿಕೊಂಡಿದ್ದಾರೆ. ಈ ವರ್ಷ ಓಟಿಟಿಯಲ್ಲಿ ತೆರೆಕಂಡ ‘ಹೋಮ್’ ಚಿತ್ರ ಭಾರಿ ಪ್ರಶಂಸೆ ಪಡೆದುಕೊಂಡಿತ್ತು. ಅಮೇಜಾನ್ ಪ್ರೈಂ ವಿಡಿಯೋ ಮೂಲಕ ಬಿಡುಗಡೆ ಆದ ಆ ಚಿತ್ರವೀಗ ಹಿಂದಿಗೆ ರಿಮೇಕ್ ಆಗುತ್ತಿದೆ. ಆ ಮೂಲಕ ಒಂದು ಹೃದಯಸ್ಪರ್ಶಿ ಕಥೆಯನ್ನು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ತಲುಪಿಸಲು ನಿರ್ಮಾಪಕರು ಸಜ್ಜಾಗಿದ್ದಾರೆ. ಬಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಈ ಕಾರ್ಯಕ್ಕೆ ಕೈ ಜೋಡಿಸಿದೆ.
ರೋಜಿನ್ ಥಾಮಸ್ ನಿರ್ದೇಶನದ ‘ಹೋಮ್’ ಸಿನಿಮಾದಲ್ಲಿ ಒಂದು ಫ್ರೆಶ್ ಕಥೆ ಇದೆ. ಹಿರಿಯರು ಮತ್ತು ಹೊಸ ತಲೆಮಾರಿನವರ ನಡುವೆ ಮೊಬೈಲ್ ಎಂಬ ಮಾಯಾವಿ ಯಂತ್ರ ಅಡ್ಡ ಬಂದಾಗ ಏನೆಲ್ಲ ಎಡವಟ್ಟುಗಳು ಆಗುತ್ತವೆ ಎಂಬುದನ್ನು ಈ ಚಿತ್ರ ವಿವರಿಸುತ್ತದೆ. ಆ ಕಥೆಗೆ ಬಾಲಿವುಡ್ ನಿರ್ಮಾಪಕರು ಫಿದಾ ಆಗಿದ್ದಾರೆ. ಅಬಂಡನ್ಷಾ ಎಂಟರ್ಟೇನ್ಮೆಂಟ್ ಸಂಸ್ಥೆ ಮೂಲಕ ಈ ಸಿನಿಮಾ ಹಿಂದಿಗೆ ರಿಮೇಕ್ ಆಗಲಿದೆ. ಮೂಲ ಚಿತ್ರ ನಿರ್ಮಾಣ ಮಾಡಿದ್ದ ‘ಫ್ರೈಡೇ ಫಿಲ್ಮ್ ಹೌಸ್’ ಕೂಡ ರಿಮೇಕ್ಗೆ ಸಾಥ್ ನೀಡುತ್ತಿದೆ.
ಇಂದ್ರನ್ಸ್, ಶ್ರೀನಾಥ್ ಭಾಸಿ, ಶ್ರೀಕಂಠ್ ಮುರಳಿ, ಮುಂಜು ಪಿಳ್ಳೈ, ಜಾನಿ ಆಂಟೊನಿ ಮುಂತಾದವರು ಮುಖ್ಯಭೂಮಿಕೆ ನಿಭಾಯಿಸಿರುವ ‘ಹೋಮ್’ ಸಿನಿಮಾ ಆ.19ರಂದು ಬಿಡುಗಡೆ ಆಗಿತ್ತು. ಫ್ಯಾಮಿಲಿ ಪ್ರೇಕ್ಷಕರು ಈ ಚಿತ್ರವನ್ನು ಸಖತ್ ಇಷ್ಟಪಟ್ಟಿದ್ದರು. ಓಟಿಟಿಯಲ್ಲಿ ಯಶಸ್ಸು ಕಂಡು ಈ ಸಿನಿಮಾವನ್ನು ಈಗ ಹಿಂದಿ ಪ್ರೇಕ್ಷಕರಿಗಾಗಿ ರಿಮೇಕ್ ಮಾಡಲಾಗುತ್ತಿದೆ.
ದಕ್ಷಿಣ ಭಾರತದ ಅನೇಕ ಸಿನಿಮಾಗಳು ಹಿಂದಿಗೆ ರಿಮೇಕ್ ಆದಾಗ ಅಲ್ಲಿನ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈಗ ‘ಹೋಮ್’ ಕೂಡ ರಿಮೇಕ್ ಆಗುವ ಸುದ್ದಿ ಹೊರಬಿದ್ದಿದ್ದು, ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡುವಂತಾಗಿದೆ. ರಿಮೇಕ್ನಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎಂಬ ಮಾಹಿತಿ ಇನ್ನೂ ಬಹಿರಂಗ ಆಗಿಲ್ಲ.
ಇದನ್ನೂ ಓದಿ:
ಸೋತು ಸುಣ್ಣವಾದ ಶಾರುಖ್ಗೆ ಈಗ ಓಟಿಟಿ ಅನಿವಾರ್ಯ; ಸತ್ಯ ಒಪ್ಪಿಕೊಂಡು ವಿಡಿಯೋ ಶೇರ್ ಮಾಡಿದ ನಟ
ಓಟಿಟಿ ಮೇಲೆ ಹೆಚ್ಚಿತು ಸಿನಿ ಮಂದಿಯ ಪ್ರೀತಿ; ಬಹುನಿರೀಕ್ಷಿತ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್
Published On - 8:44 am, Fri, 8 October 21