ಕಿರುತೆರೆ ವೀಕ್ಷಕರಿಗೆ ಬಿಗ್ ಬಾಸ್ (Bigg Boss) ಶೋ ಬಗ್ಗೆ ಸಖತ್ ಆಸಕ್ತಿ. ಕಳೆದ ವರ್ಷದಿಂದ ಈ ಕಾರ್ಯಕ್ರಮ ಕೇವಲ ಟಿವಿಗೆ ಮಾತ್ರ ಸೀಮಿತವಾಗಿಲ್ಲ. ಒಟಿಟಿಯಲ್ಲೂ ಬಿಗ್ ಬಾಸ್ ಕಾರ್ಯಕ್ರಮವನ್ನು ಪರಿಚಯಿಸಲಾಯಿತು. ಈ ವರ್ಷ ಅದರ 2ನೇ ಸೀಸನ್ ಪ್ರಸಾರಕ್ಕೆ ಸಕಲ ಸಿದ್ಧತೆ ನಡೆದಿದೆ. ಜೂನ್ 17ರಿಂದ ‘ಬಿಗ್ ಬಾಸ್ ಒಟಿಟಿ 2’ (Bigg Boss OTT 2) ಆರಂಭ ಆಗಲಿದೆ. ಕಳೆದ ಬಾರಿ ಇದರ ನಿರೂಪಣೆಯನ್ನು ಕರಣ್ ಜೋಹರ್ ಮಾಡಿದ್ದರು. ಈ ಬಾರಿ ಸಲ್ಮಾನ್ ಖಾನ್ (Salman Khan) ಅವರಿಗೆ ನಿರೂಪಣೆಯ ಜವಾಬ್ದಾರಿ ನೀಡಲಾಗಿದೆ. ಇಂದು (ಜೂನ್ 7) ಈ ಕಾರ್ಯಕ್ರಮದ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಈ ಪ್ರೋಮೋದಲ್ಲಿ ಸ್ಪರ್ಧಿಗಳಿಗೆ ಸಲ್ಮಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ.
ಟಿವಿಯಲ್ಲಿ ಪ್ರಸಾರ ಆಗುವ ಬಿಗ್ ಬಾಸ್ ಕಾರ್ಯಕ್ರಮಕ್ಕಿಂತಲೂ ‘ಬಿಗ್ ಬಾಸ್ ಒಟಿಟಿ’ ಶೋ ತುಂಬ ಡಿಫರೆಂಟ್ ಆಗಿರುತ್ತದೆ. ತುಂಬ ಬೋಲ್ಡ್ ಆದಂತಹ ಟಾಸ್ಕ್ಗಳನ್ನು ನೀಡಲಾಗುತ್ತದೆ. ‘ಈ ಬಾರಿ ಇನ್ನಷ್ಟು ಕಷ್ಟ ಇರಲಿದೆ. ಅದಕ್ಕೆ ನಿಮ್ಮ ಸಹಾಯ ಬೇಕಾಗಬಹುದು’ ಎಂದು ಪ್ರೋಮೋದಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಸಲ್ಮಾನ್ ಖಾನ್ ಹೇಳಿದ್ದಾರೆ. ಅಂದರೆ, ಸ್ಪರ್ಧಿಗಳಿಗೆ ಈ ಬಾರಿಯ ಬಿಗ್ ಬಾಸ್ ಒಟಿಟಿ ಸಖತ್ ಟಫ್ ಆಗಿರುತ್ತದೆ ಎಂದು ಅವರು ಮುನ್ನೆಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಅನೇಕ ಸೆಲೆಬ್ರಿಟಿಗಳ ಹೆಸರು ಕೇಳಿಬರುತ್ತಿದೆ. ಆ ಪೈಕಿ ಯಾರೆಲ್ಲ ‘ಬಿಗ್ ಬಾಸ್ ಒಟಿಟಿ 2’ ಶೋನಲ್ಲಿ ಸ್ಪರ್ಧಿಸುವ ಚಾನ್ಸ್ ಪಡೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಈ ಕಾರ್ಯಕ್ರಮ ‘ಜಿಯೋ ಸಿನಿಮಾ’ ಮೂಲಕ ಪ್ರಸಾರ ಆಗಲಿದೆ. ದಿನದ 24 ಗಂಟೆಯೂ ಉಚಿತವಾಗಿ ನೋಡುವ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ‘ಬಿಗ್ ಬಾಸ್ ಒಟಿಟಿ 2’ ಕಾರ್ಯಕ್ರಮವು ಹೆಚ್ಚಿನ ಜನರನ್ನು ತಲುಪುವ ನಿರೀಕ್ಷೆ ಇದೆ.
ಇದನ್ನೂ ಓದಿ: Salman Khan: ಸಲ್ಮಾನ್ ಖಾನ್ಗೆ ಬಂತು ಮದುವೆ ಪ್ರಪೋಸಲ್; ಶಾರುಖ್ ಖಾನ್ ಹೆಸರು ಹೇಳಿ ತಪ್ಪಿಸಿಕೊಂಡ ನಟ
ಸಲ್ಮಾನ್ ಖಾನ್ ಅವರು ‘ಬಿಗ್ ಬಾಸ್ ಒಟಿಟಿ’ ನಿರೂಪಣೆ ಜೊತೆಗೆ ‘ಟೈಗರ್ 3’ ಚಿತ್ರದ ಮೇಲೂ ಗಮನ ಹರಿಸಿದ್ದಾರೆ. ಅಭಿಮಾನಿಗಳ ಪಾಲಿನ ಖುಷಿಯ ವಿಚಾರ ಏನೆಂದರೆ ಈ ಸಿನಿಮಾದ ಶೂಟಿಂಗ್ ಮುಕ್ತಾಯ ಆಗಿದೆ. ಈ ವಿಷಯವನ್ನು ಸ್ವತಃ ಸಲ್ಮಾನ್ ಖಾನ್ ಅವರು ಇತ್ತೀಚೆಗೆ ಖಚಿತ ಪಡಿಸಿದ್ದರು. ಮನೀಶ್ ಶರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಮೂಲಕ ನಿರ್ಮಾಣ ಆಗುತ್ತಿದೆ. ಸಲ್ಮಾನ್ ಖಾನ್ ಜೊತೆ ಕತ್ರಿನಾ ಕೈಫ್, ಇಮ್ರಾನ್ ಹಷ್ಮಿ ಕೂಡ ಪಾತ್ರವರ್ಗದಲ್ಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.